twitter
    Celebs»Dattanna»Biography

    ದತ್ತಣ್ಣ ಜೀವನಚರಿತ್ರೆ

    ಜೀವನ: ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೆಯನವರು ಏಪ್ರಿಲ್ 20, 1942 ರಂದು ಚಿತ್ರದುರ್ಗದಲ್ಲಿ ಜನಿಸಿದರು. ಇವರ ತಂದೆ ಹರಿಹರ ಗುಂಡೂರಾಯರು, ತಾಯಿ ವೆಂಕಮ್ಮ. ಇವರು  ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಎಂ.ಇ.ಪದವಿ ಪಡೆದಿದ್ದಾರೆ. ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್ ಆಗಿ, ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ, ಅಲ್ಲಿನ ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಇವರು ಸೇವೆ ಸಲ್ಲಿಸಿದ್ದಾರೆ.

    ಬಾಲ್ಯದಲ್ಲಿ ನಾಟಕ ಹವ್ಯಾಸ: ಮಾಧ್ಯಮಿಕ ಶಾಲೆಯಿಂದಲೇ ದತ್ತಣ್ಣನವರಿಗೆ ನಾಟಕದ ಗೀಳು. ಅಕ್ಕಪಕ್ಕದ ಹುಡುಗರನ್ನು ಸೇರಿಸಿ ಮಾಡಿದ ಸೊಹ್ರಾಬ್-ರುಸ್ತುಂ ನಾಟಕ ಇವರಿಗೆ ಪ್ರಖ್ಯಾತಿ ತಂದಿತ್ತು. ತುಮಕೂರಿನ ಪ್ರೌಢಶಾಲೆಯ ನಾಟಕದಲ್ಲಿ ಅವರದ್ದು ಮದಕರಿ ನಾಯಕನ ಪಾತ್ರ. ಚಿತ್ರದುರ್ಗಕ್ಕೆ ಬರುತ್ತಿದ್ದ ಜಮಖಂಡಿ ಕಂಪನಿ, ಗುಬ್ಬಿ ಕಂಪನಿ ನಾಟಕಗಳ ಪ್ರಭಾವ ಅವರ ಮೇಲಿತ್ತು. ಚಿತ್ರದುರ್ಗದ ಪ್ರೌಢ ಶಾಲೆಯಲ್ಲಿ ಅಳಿಯ ದೇವರು ನಾಟಕದಲ್ಲಿ ರುಕ್ಕುಪಾತ್ರ, ದುರ್ಗದ ಹವ್ಯಾಸಿ ತಂಡ ಅಭಿನಯಿಸಿದ ದೇವದಾಸಿ ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ, ಬೆಂಗಳೂರಿನ ಅಂತರ ಕಾಲೇಜು ನಾಟಕ ಸ್ಪರ್ಧೆಗಾಗಿ ‘ಡನ್ ಲಪ್ ಗರ್ಲ್’ನಲ್ಲೂ ಅವರದು ಹೆಣ್ಣು ಪಾತ್ರ. ಹೀಗೆ ಮೊದ ಮೊದಲು ಅವರಿಗೆ ಸಿಕ್ಕಿದ್ದು ಹೆಣ್ಣು ಪಾತ್ರಗಳೇ! ಏರ್‌ ಫೋರ್ಸ್ ಅಡ್ಮಿನಿಸ್ಟ್ರೇಟಿವ್ ಕಾಲೇಜಿನಲ್ಲಿ ಸಹಾ ಅಂಬಾಸಿಡರ್ ಪಾತ್ರದಲ್ಲಿ ಅಭಿನಯಿಸಿ ಪ್ರಶಂಸೆ ಪಡೆದರು.

    ಸಿನಿಮಾರಂಗಕ್ಕೆ ಆಗಮನ: ದತ್ತಣ್ಣನವರು ಸಿನಿಮಾ ರಂಗಕ್ಕೆ ಬಂದದ್ದು ಬಹಳ ತಡವಾಗಿ, ಅಂದರೆ 45 ವರ್ಷ ತುಂಬಿದ ಮೇಲೆ. ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್‌ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಹೆಚ್ಚಾಗಿ ಬೆಂಗಳೂರಿನಲ್ಲಿರಲ್ಲಿಲ್ಲ. ಚಂಡೀಗಢ, ದೆಹಲಿ, ಅಂಡಮಾನ್‌ ಮುಂತಾದೆಡೆ ಇದ್ದರು. 1987ರಲ್ಲಿ ಅವರು ಬೆಂಗಳೂರಿನ ಎಚ್.ಎ.ಎಲ್‌ಗೆ ವರ್ಗವಾಗಿ ಬಂದರು. ಟಿ.ಎಸ್‌. ರಂಗ ಅವರು ಮೊದಲ ಬಾರಿಗೆ 1 ಘಂಟೆ ಅವಧಿಯ ‘ಉದ್ಭವ್' ಎಂಬ ಸಿನಿಮಾದಲ್ಲಿ ‘ದತ್ತಣ್ಣ’ನವರನ್ನು ಪರಿಚಯಿಸಿದರು. ಅದಾದ ನಂತರ ನಾಗಾಭರಣರ ‘ಆಸ್ಫೋಟ’ ಚಿತ್ರ ಬಂತು. ಆ ಚಿತ್ರದಲ್ಲಿನ ಖಳನಟನ ಪಾತ್ರಕ್ಕೆ ರಾಷ್ಟ್ರಮಟ್ಟದ ಶ್ರೇಷ್ಠ ಪೋಷಕನಟ ಪ್ರಶಸ್ತಿ ದೊರಕಿತು. ನಂತರ ‘ಶರವೇಗದ ಸರದಾರ’, ‘ಮಾಧುರಿ’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದರು. ಆಮೇಲೆ ‘ವೈದ್ಯೋ ನಾರಾಯಣೋ ಹರಿ’ ಎಂಬ ಧಾರವಾಹಿ ಮೂಲಕ ದೂರದರ್ಶನಕ್ಕೂ ಕಾಲಿಟ್ಟರು. ಆಗ ಕೆಲಸದಲ್ಲಿದ್ದುದರಿಂದ ಹೆಚ್ಚಾಗಿ ನಟಿಸಲಾಗುತ್ತಿರಲ್ಲಿಲ್ಲ. ಅಲ್ಲಲ್ಲಿ ಒಂದೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದರು. 1994ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿದ ನಂತರದಲ್ಲಿ ನಿರಂತರವಾಗಿ ಸಿನಿಮಾ, ನಾಟಕ, ಟಿವಿ ಮತ್ತು ರೇಡಿಯೋಗಳಲ್ಲಿ ನಟಿಸುತ್ತಾ ಸಾಗಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X