twitter
    Celebs»Shiva rajkumar»Biography

    ಶಿವ ರಾಜ್‌ಕುಮಾರ್ ಜೀವನಚರಿತ್ರೆ

    ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಹೀಗೆ ಹಲವು ಬಿರುದುಗಳಿಂದ ಕರೆಸಿಕೊಳ್ಳುವ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ. ಸುಮಾರು ಮೂರು ದಶಕಗಳಿಂದ 125ದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಡಾ. ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದ ದಿಗ್ಗಜ, ವರನಟ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಹಿರಿಯ ಪುತ್ರ. ಇವರ ಕಿರಿಯ ಸಹೋದರರಾದ ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿ ಜನಪ್ರಿಯರಾಗಿದ್ದಾರೆ.


    ಬಾಲ್ಯ

    ಶಿವರಾಜ್‌ಕುಮಾರ್ 1961ರ ಜುಲೈ 12ರಂದು ಮದ್ರಾಸಿನ ಕಲ್ಯಾಣಿ ಆಸ್ಪತ್ರೆಯಲ್ಲಿ ಸಂಜೆ ೬ ಘಂಟೆಗೆ ಜನಿಸಿದರು. ಮದುವೆಯಾಗಿ 9 ವರ್ಷಗಳ ನಂತರ ಶಿವಣ್ಣ ಜನಿಸಿದ್ದರಿಂದ ಅಣ್ಣಾವ್ರು ಸಂಭ್ರಮದಿಂದ ಆ ದಿನ ಸಂಜೆಯಿಂದ ಮರುದಿನ ಬೆಳಿಗ್ಗೆ ಆರು ಗಂಟೆಯವರೆಗೆ ಸಿಹಿ ಹಂಚಿದ್ದರು. ಆಗ ಬೆಂಗಳೂರಿನಲ್ಲಿ ಸ್ಟುಡಿಯೋ ಇರದಿದ್ದ ಕಾರಣ ಚಿತ್ರಗಳ ಚಿತ್ರೀಕರಣಕ್ಕೆ ಅನುಕೂಲವಾಗಲೆಂದು ರಾಜ್‌ಕುಮಾರ್ ಅವರು ಮದ್ರಾಸ್‌ನಲ್ಲಿಯೇ ವಾಸಿಸುತ್ತಿದ್ದರು. ಆದ್ದರಿಂದ ಶಿವಣ್ಣರವರ ಬಹುತೇಕ ಬಾಲ್ಯ ಚೆನ್ನೈನ ಟ್ಟಸ್ಟ್‌ಪುರಂನಲ್ಲಿ ಕಳೆಯಿತು. ತಮ್ಮ ತಂದೆಯವರ ನೆನಪಿನಲ್ಲಿ ರಾಜ್ ಮಗುವಿಗೆ `ನಾಗರಾಜು ಶಿವಪುಟ್ಟಸ್ವಾಮಿ' ಎಂದು ಹೆಸರಿಟ್ಟಿದ್ದರು. ಆಗ ಅಣ್ಣಾವ್ರ ಮನೆಯಲ್ಲಿ ಅವರ ಸಹೋದರ, ಸಹೊದರಿ ಮತ್ತು ಅವರ ಮಕ್ಕಳು ಕೂಡ ವಾಸಿಸುತ್ತಿದ್ದರು. ಹೀಗಾಗಿ, ಶಿವಣ್ಣನವರು 25 ಮಕ್ಕಳು ತುಂಬಿರುವ ತುಂಬು ಕುಟುಂಬದಲ್ಲಿ ಬೆಳೆದರು.


    ಶಿಕ್ಷಣ ಮತ್ತು ವೈಯಕ್ತಿಕ ಜೀವನ

    ಚೈನ್ನೈನ ಟಿ.ನಗರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಶಿವರಾಜ್‌ಕುಮಾರ್, ಮದ್ರಾಸ್ ವಿಶ್ವವಿದ್ಯಾಲಯದ ನ್ಯೂ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಬಿ.ಎಸ್ಸಿ ಮುಗಿಸಿದರು. ಶಿಕ್ಷಣದ ನಂತರ ತಮಿಳಿನ ನಿರ್ದೇಶಕ ಕೆ.ಬಾಲಚಂದರ್ ಸಲಹೆಯಂತೆ ಅಡ್ಯಾರ್ ಚಿತ್ರ ತರಬೇತಿ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದರು. ನಂತರದ ದಿನಗಳಲ್ಲಿ ವೆಂಪಟ್ಟಿ ಚಿನ್ನಿ ಸತ್ಯಂರಿಂದ ಕುಚ್ಚುಪುಡಿ ನೃತ್ಯ ಕಲಿತರು. ಬಾಹುಬಲಿ ಖ್ಯಾತಿ ನಟಿ ರಮ್ಯಾ ಕೃಷ್ಣನ್ ಇವರ ನೃತ್ಯಶಾಲೆಯ ಸಹಪಾಠಿಯಾಗಿದ್ದರು. ಕಾಲೇಜು ದಿನಗಳಲ್ಲಿ `ಯಾರ್ಕ ಶೈರ್ ಕ್ರಿಕೆಟ್'ತಂಡ ಕಟ್ಟಿಕೊಂಡು ಕ್ರಿಕೆಟ್ ಮುಂತಾದ ಕ್ರೀಡಾ ಚಟುವಟಿಕಗಲ್ಲಿ ಭಾಗವಹಿಸುತ್ತಿದ್ದರು. ತಮ್ಮ ಬೇಸಿಗೆಯ ರಜಾ ದಿನಗಳನ್ನು ಕುಟುಂಬದೊಂದಿಗೆ ಗಾಜನೂರಿನಲ್ಲಿ ಕಳೆಯುತ್ತಿದ್ದರು. 1986ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಪುತ್ರಿ ಗೀತಾರವರನ್ನು ಕೈಹಿಡಿದರು. ಮದುವೆ ಅದ್ಧೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿತು.


    ಸಿನಿಪ್ರವೇಶ

    ಶಿವರಾಜ್‌ಕುಮಾರ್ ಕಾಲೇಜು ದಿನಗಳಲ್ಲಿ ಇರುವಾಗಲೇ ಮಲಯಾಳಂ ಚಿತ್ರದಲ್ಲಿ ನಟಿಸಲು ಆಫರ್ ಬಂದಿತ್ತು. ಆಗ ಪಾರ್ವತಮ್ಮನವರು ಡಿಗ್ರಿ ಮುಗಿಸದ ನಂತರವೇ ನಟನೆಗೆ ಹೋಗಲಿ ಎಂದು ಹೇಳಿದ್ದರು. ಆಗ ನಟನೆಯನ್ನು ಪರಿಗಣಿಸಿದ ಶಿವಣ್ಣ, ಬೇರೆ-ಬೇರೆ ಮಾರ್ಗದರ್ಶಕರಿಂದ ನಟನೆ, ಸ್ಟಂಟ್ಸ್ ಮತ್ತು ನೃತ್ಯ ತರಬೇತಿ ಪಡೆದರು.


    ಹ್ಯಾಟ್ರಿಕ್ ಹೀರೋ

    ಶಿವಣ್ಣ 1986ರಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ ಮೂಡಿಬಂದ `ಆನಂದ್' ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪ್ರವೇಶಿಸಿದರು. ಇದೇ ಚಿತ್ರದ ಮೂಲಕ ಚಿ.ಉದಯಶಂಕರ್‌ವರ ಪುತ್ರ ಗುರುದತ್ತ್ ಮತ್ತು ಸುಧಾರಾಣಿ ಕೂಡ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರ 250 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು ಕನ್ನಡ ಚಿತ್ರರಂಗದಲ್ಲಿ ಅದ್ಭುತ ದಾಖಲೆ ಬರೆಯಿತು. ಈ ಚಿತ್ರದ `ಟುವ್ವಿ ಟುವ್ವಿ' ಹಾಡು ಆಗಿನ ಯುವಜನತೆಯ ಹಾಟ್ ಫೇವರೇಟ್ ಆಗಿತ್ತು. ವಿಶೇಷವೆಂದರೆ ಈ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು ನಟಿ ರಕ್ಷಿತಾ ಪ್ರೇಮ್‌ರವರ ತಂದೆ ಖ್ಯಾತ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್.


    ನಂತರ ಎಂ.ಎಸ್.ರಾಜಶೇಖರ್ ನಿರ್ದೇಶನದಲ್ಲಿ ನಟಿಸಿದ `ರಥ-ಸಪ್ತಮಿ' ಮತ್ತು `ಮನಮೆಚ್ಚಿದ ಹುಡುಗಿ' ಚಿತ್ರಗಳು ಕೂಡ ಶತದಿನ ಪೂರೈಸಿದವು. ನಟಿಸಿದ ಮೊದಲ ಮೂರು ಚಿತ್ರಗಳು ಶತದಿನ ಪೂರೈಸಿದ್ದರಿಂದ ಶಿವಣ್ಣನಿಗೆ `ಹ್ಯಾಟ್ರಿಕ್ ಹೀರೋ' ಬಿರುದು ಬಂತು. ನಂತರ ಬಂದ `ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಡಾ.ರಾಜ್ ಮತ್ತು ಪುನೀತ್ ಅತಿಥಿ ಪಾತ್ರದಲ್ಲಿ ನಟಿಸಿದರು.1995 ರಲ್ಲಿ ಉಪೇಂದ್ರರವರು ನಿರ್ದೇಶಿಸಿದ `ಓಂ' ಚಿತ್ರ ಭೂಗತ ಲೋಕದಲ್ಲಿ ಅರಳುವ ಪ್ರೇಮ ಕಥಾನಕವನ್ನು ಮನೋಘ್ನವಾಗಿ ಬಿಂಬಿಸಿತು. ಈ ಚಿತ್ರ ಹಲವಾರು ಬಾರಿ ಮರು ಪ್ರದರ್ಶನ ಕಂಡು ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿದೆ. 1996 ರಲ್ಲಿ ತೆರೆಕಂಡ `ಜನುಮದ ಜೋಡಿ' ಚಿತ್ರ ಆಗಿನ ಕಾಲದಲ್ಲಿ 10 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರವಾಗಿ ದಾಖಲೆ ಬರೆಯಿತು. ಈ ಚಿತ್ರ ಅಮೇರಿಕಾ ವಿಶ್ವವಿದ್ಯಾಲಯವೊಂದರ ಮಾನವಶಾಸ್ತ್ರ ವಿಭಾಗದ ಆಧ್ಯಯನ ವಿಷಯವಾಗಿದೆ.


    1998ರಲ್ಲಿ ತೆರೆಕಂಡ `ಅಂಡಮಾನ್' ಚಿತ್ರದಲ್ಲಿ ಶಿವಣ್ಣರವರ ಪುತ್ರಿ ನಿವೇದಿತಾ ಚಿತ್ರದಲ್ಲಿ ಕೂಡ ಪುತ್ರಿಯಾಗಿ ನಟಿಸಿದರು. 1999 ರಲ್ಲಿ ತೆರೆಕಂಡ ಶಿವಣ್ಣನ 50ನೇ ಚಿತ್ರ `ಎ.ಕೆ.47' ನೂರೆಪ್ಪತ್ತೈದು ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು ದಾಖಲೆ ಬರೆಯಿತು. 2005ರಲ್ಲಿ ತೆರೆಕಂಡ`ಜೋಗಿ' ಚಿತ್ರ ಅರವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು. ಈ ಚಿತ್ರದಲ್ಲಿ `ರಾಜ್-ಪಾರ್ವತಮ್ಮನವರು' ಆರಂಭದ ದೃಶ್ಯದಲ್ಲಿ ಕಾಣಿಸಿಕೊಂಡು ಪುತ್ರನನ್ನು ಹರಿಸಿದ್ದರು. 2014 ರಲ್ಲಿ ತೆರೆಕಂಡ `ಭಜರಂಗಿ' ಮತ್ತು 2018ರಲ್ಲಿ ತೆರೆಗೆಬಂದ`ಟಗರು' ಚಿತ್ರಗಳು ಕನ್ನಡ ಸಿನಿಮಾ ಬಾಕ್ಸಾಫೀಸಿನಲ್ಲಿ ದಾಖಲೆ ಬರೆದವು. ಐವತ್ತು ದಾಟಿದರೂ ಈಗಲೂ ಚೈತನ್ಯದ ಚಿಲುಮೆಯಂತಿರುವ ಶಿವರಾಜ್‌ಕುಮಾರ್ ಈಗಿನ ಯುವ ನಟರಿಗೆ ಮಾದರಿ....


    ಗೌರವ ಡಾಕ್ಟರೇಟ್

    ಸಿನಿಮಾರಂಗಕ್ಕೆ ಇವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. 


    ಡಾ.ರಾಜಕುಮಾರ್                     ಪಾರ್ವತಮ್ಮ ರಾಜಕುಮಾರ್

    ರಾಘವೇಂದ್ರ ರಾಜಕುಮಾರ್       ಪುನೀತ್ ರಾಜಕುಮಾರ್ 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X