ರಿಮೇಕ್ ಡಾರ್ಲಿಂಗ್ಸ್ ಆಫ್ ಕಸ್ತೂರಿ ಕನ್ನಡ

Posted by:

ಇವರಿಬ್ಬರು ಕನ್ನಡ ಚಿತ್ರರಂಗದ ಭರವಸೆಯ ನಾಯಕರುಗಳು. ಒಬ್ಬ ಚಾಲೆಂಜಿಂಗ್ ಸ್ಟಾರ್ ಇನ್ನೊಬ್ಬ ಕಿಚ್ಚ. ಇವರಿಬ್ಬರ ಏಳಿಗೆ ಕಂಡು ಮತ್ತೆ ಯಾರಿಗೋ ಹೊಟ್ಟೆಕಿಚ್ಚು. ಇವರಿಬ್ಬರ ನಡುವೆ ಆಗಾಗ ಶೀಥಲ ಸಮರ, ಮುಸುಕಿನೊಳಗಿನ ಗುದ್ದಾಟ ನಿರಂತರ. ಆದರೆ, ಇತ್ತೀಚೆಗೆ ಎಲ್ಲ ಸರಿ ಹೋಗಿದೆ ಎನ್ನುವಷ್ಟರಲ್ಲಿ ಮತ್ತೆ ಕಿಡಿ ಹಾರಿದೆ.

ಆದರೆ, ರಿಮೇಕ್ ಚಿತ್ರದ ಹಕ್ಕು ಪಡೆಯಲು ಈ ಇಬ್ಬರು ಅಥವಾ ಈ ಇಬ್ಬರಪರ ನಿರ್ಮಾಪಕರು ಹೋರಾಟ ನಡೆಸಿರುವುದು ಮಾತ್ರ ಚಿತ್ರರಂಗದ ದುರ್ವಿಧಿ ಎನ್ನಬಹುದು. ಡಾರ್ಲಿಂಗ್ ಚಿತ್ರ ನೋಡಿ ಖುಷಿಯಿಂದ ನಾನೇ ಮಾಡುತ್ತೀನಿ ಎಂದು ದರ್ಶನ್ ಓಡಾಡುತ್ತಿದ್ದರು. ಇತ್ತೀಚಿನ ಸೂರ್ಯ ಅಭಿನಯದ ಸಿಂಗಂ ನೋಡಿ ಅದು ಕೂಡಾ ನನಗೆ ಇರಲಿ ಅಂದರು.

ಆದರೆ ಈಗ ಇದು ಸುದೀಪ್ ರ ಪಾಲಾಗುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ಸಾಹಸಮಯ ಮಸಾಲೆಭರಿತ ಜನಪ್ರಿಯ ಚಿತ್ರಗಳನ್ನಷ್ಟೇ ಮಾಡುವುದಾಗಿ ಅಲಿಖಿತ ಘೋಷಣೆ ಹೊರಡಿಸಿರುವ ದರ್ಶನ್ ಗೆ ಸಿಂಗಂ ಕೈತಪ್ಪುತ್ತಿರುವುದು ಭಾರಿ ಆಘಾತವಾಗಿದೆ.

ರಾಮ್ ಗೋಪಾಲ್ ವರ್ಮಾರ ರಕ್ತ ಚರಿತಂ ನಲ್ಲಿ ಸೂರ್ಯ ಜೊತೆಗೆ ಸುದೀಪ್ ನಟಿಸಿರುವ ಕಾರಣ, ಸಿಂಗಂ ಚಿತ್ರದ ಹಕ್ಕು ಪಡೆಯುವ ಮಾರ್ಗ ಸುದೀಪ್ ಗೆ ಸುಲಭ. ಸಿಂಗಂ ಹಕ್ಕು ಕೂಡಾ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ನಮ್ಮ ಗಿರೀಶ್ ಕಾಸರವಳ್ಳಿ ಅವರ ಚಿತ್ರದ ಬಜೆಟ್ ಎಷ್ಟಿರುತ್ತದೋ ಅಷ್ಟು ದುಡ್ಡು ತೆರಬೇಕಾಗುತ್ತದೆ. ಅಯ್ಯೋ 50 ಲಕ್ಷನಾ ಎಂದು ದರ್ಶನ್ ಪರ ನಿರ್ಮಾಪಕರು ಕೊಂಚ ಹಿಂದೇಟಾಗಿರುವುದಂತೂ ನಿಜ.

ಚಿತ್ರ ಗೆಲ್ಲುತ್ತದೆ, ಜನರಿಗೆ ಮೆಚ್ಚುಗೆ ಆಗುತ್ತದೆ ಎಂದರೆ ಬರೀ ಕಾಚದಲ್ಲಿ ಕಾಣಿಸಿಕೊಳ್ಳುವುದಕ್ಕೂ ರೆಡಿ ಎಂದು ದರ್ಶನ್ ಹೇಳಿದ್ದರು. ಆಗಿನ್ನೂ ಅವರ ನಮ್ಮ ಪ್ರೀತಿಯ ರಾಮು ಚಿತ್ರ ಹೀನಾಯ ಸೋಲು ಕಂಡಿತ್ತು. ಅಂದು ದರ್ಶನ್ ಎತ್ತಿದ ಲಾಂಗ್ ಇನ್ನೂ ಕೆಳಗಿಳಿಸಿಲ್ಲ. ಪ್ರೇಕ್ಷಕರೂ ಕೂಡಾ ಅವರ ಮಸಾಲೆ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿಲ್ಲ. ಹಾಗಾಗಿ ಸಹಜವಾಗಿ ಸಿಂಗಂ ನಂತಹ ಸಾಹಸಭರಿತ ಚಿತ್ರದತ್ತ ದರ್ಶನ್ ಒಲವು ತೋರಿದ್ದರು.

ಸ್ವಾತಿಮುತ್ತು, ಜಸ್ಟ್ ಮಾತ್ ಮಾತ್ ಮಾತಲ್ಲಿ, ಶಾಂತಿನಿವಾಸ ಮುಂತಾದ ಸದಭಿರುಚಿಯ ಚಿತ್ರಗಳನ್ನು ಮಾಡುವತ್ತ ವಾಲಿದ್ದ ಸುದೀಪ್ , ತನ್ನ ಟ್ರಾಕ್ ಬದಲಿಸಿ ಮಸಾಲೆ ಚಿತ್ರಗಳತ್ತ ಗಮನ ಹರಿಸಿರುವುದು ದರ್ಶನ್ ಗೆ ಕಿರಿಕಿರಿ ಉಂಟು ಮಾಡಿದೆ.

ಆದರೆ, ಈ ಇಬ್ಬರು ಕನ್ನಡ ಕುಲಪುತ್ರರು ರಿಮೇಕ್ ಹಕ್ಕಿಗೆ ಕಿತ್ತಾಡುವುದನ್ನು ನೋಡುತ್ತ್ತಾ ಗಾಂಧಿನಗರದ ಮಂದಿ ಮಾತ್ರ ಮುಸಿ ಮುಸಿ ನಗುತ್ತಿದ್ದಾರಂತೆ.

Read more about: ಸುದೀಪ್, ದರ್ಶನ್, ರಿಮೇಕ್, ಡಾರ್ಲಿಂಗ್, ಸಿಂಗಂ, ಸೂರ್ಯ, ಕನ್ನಡ ಚಿತ್ರರಂಗ, sudeep, darshan, singam, darling, girish kasaravalli, kfi

Kannada Photos

Go to : More Photos