twitter

    ಸಿದ್ಧಾರ್ಥ ಕಥೆ

    ಸಿದ್ಧಾರ್ಥ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿ ಮತ್ತು ಅಪೂರ್ವ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಶೀಶ್ ವಿದ್ಯಾರ್ತಿ, ರಕ್ಷಾ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಅಶೋಕ್, ಸುಧಾ ರಾಣಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

    ಚಿತ್ರದ ನಿರ್ದೇಶಕರಾಗಿ ಮಿಲನ ಪ್ರಕಾಶ್ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

    ಚಿತ್ರಕಥೆ:

    ಚಿತ್ರದ ಕಥಾನಾಯಕ ಸಿದ್ದಾರ್ಥ (ವಿನಯ್ ರಾಜ್ ಕುಮಾರ್). ಹೆಸರಿಗೆ 'ಸಿದ್ದಾರ್ಥ' ಆದರೂ, ಇವನು ಕೊಡೋ ಪಂಚ್ ನೋಡಿದ್ರೆ ಯಾರೂ ಇವನನ್ನ 'ಬುದ್ಧ' ಅಂತ ಕರೆಯೋಲ್ಲ. ಹುಟ್ಟು ಪೋಲಿ ಹುಡುಗ. ಸ್ನೇಹಜೀವಿ. ದುಡ್ಡು ಸಿಗುತ್ತೆ ಅಂದ್ರೆ ಯಾವುದೇ ಸವಾಲು ಸ್ವೀಕರಿಸುವುದಕ್ಕೂ 'ಸಿದ್ದಾರ್ಥ' ಸಿದ್ಧ. ಅದು ಅಪ್ಪನನ್ನ ಆಟದಲ್ಲಿ ಸೋಲಿಸುವುದರಿಂದ ಹಿಡಿದು ನಾಯಕಿಯ ಮುಂದೆ ಬೆತ್ತಲಾಗುವವರೆಗೂ 'ಸಿದ್ದಾರ್ಥ'ನಿಗೆ ನಥಿಂಗ್ ಈಸ್ ಇಂಬಾಸಿಬಲ್.

    ಇಂತಹ 'ಸಿದ್ದಾರ್ಥ'ನಿಗೆ 'ಖುಷಿ' (ಅಪೂರ್ವ ಅರೋರಾ) ಅನ್ನುವ ಹುಡುಗಿ ಪರಿಚಯವಾಗುತ್ತಾಳೆ. ಎಲ್ಲರಂತೆ 'ಸಿದ್ದಾರ್ಥ'ನಿಗೂ ಲವ್ @ ಫಸ್ಟ್ ಸೈಟ್ ಆಗುತ್ತೆ. ಖುಷಿಯನ್ನ ಮೆಚ್ಚಿಸುವುದಕ್ಕೆ ಗಿಟಾರ್ ಹಿಡಿಯುವ ಸಿದ್ದಾರ್ಥ ಕೊನೆಗೆ ಕುಟುಂಬದ ಸಮ್ಮತಿಯನ್ನೂ ಪಡೆಯುತ್ತಾನೆ. ಅಲ್ಲಿಗೆ ಕಥೆ ಶುಭಂ ಅಂದುಕೊಳ್ಳುವಷ್ಟರಲ್ಲಿ, ಪ್ರೀತಿಸಿದ ಹುಡುಗಿ ಮುಖ್ಯನೋ ಇಲ್ಲಾ ಚಿಕ್ಕವಯಸ್ಸಿಂದ ಜೊತೆಯಾಗಿರುವ ಸ್ನೇಹಿತರು ಮುಖ್ಯನೋ ಅನ್ನುವ ಪ್ರಶ್ನೆ 'ಸಿದ್ದಾರ್ಥ'ನಿಗೆ ಕಾಡುತ್ತೆ. ಅಲ್ಲಿಂದ ಶುರುವಾಗುವುದೇ ಅಸಲಿ ಕಥೆ.

    ಸಿದ್ದಾರ್ಥ' ಚಿತ್ರದ ಅಡಿಬರಹ 'ಗಿವ್ ಮೀ ಎ ಬ್ರೇಕ್'. ಇದು ವಿನಯ್ ವೃತ್ತಿ ಜೀವನಕ್ಕೆ ಅವಶ್ಯಕವಾಗಿದ್ದರೂ, ಇದು ಕಥೆಗೆ ಹೇಳಿಮಾಡಿಸಿದೆ. ಸ್ನೇಹಿತರಿಗೆ ಸಮಯ ಕೊಡಬೇಕು ಅಂತ ಪ್ರೇಯಸಿಯಿಂದ ಬ್ರೇಕ್ ತೆಗೆದುಕೊಳ್ಳವ 'ಸಿದ್ದಾರ್ಥ'ನಿಗೆ ಮುಂದೆ ಖುಷಿ ಸಿಗುತ್ತಾಳಾ. ಇದೇ ಗ್ಯಾಪಲ್ಲಿ ಎಂಟ್ರಿಕೊಡುವ ನಿಕ್ಕಿ ಗಲ್ರಾನಿ, ಐಶ್ವರ್ಯ, ದೀಪಿಕಾ ದಾಸ್ ಪಾತ್ರಗಳೇನು? ಈ ಪ್ರಶ್ನೆಗಳಿಗೆ ನೀವು ಚಿತ್ರಮಂದಿರದಲ್ಲಿ 'ಸಿದ್ದಾರ್ಥ'ನನ್ನ ನೋಡಿ ಉತ್ತರ ಕಂಡುಕೊಳ್ಳಬೇಕು.

    ಸಿದ್ದಾರ್ಥ' ಪಾತ್ರ ವಿನಯ್ ರಾಜ್ ಕುಮಾರ್ ಗೆ ಹೇಳಿಮಾಡಿಸಿದಂತಿದೆ. ಕಾಲೇಜಿನಲ್ಲಿ ಓದುತ್ತಿರುವ ತುಂಟ ಹುಡುಗ 'ಸಿದ್ದಾರ್ಥ' ವಿನಯ್ ಅಭಿನಯದಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ. ವಿನಯ್ ಗಿದು ಮೊದಲ ಪ್ರಯತ್ನವಾಗಿರುವುದರಿಂದ ನಟನೆಯಲ್ಲಿ ಫುಲ್ ಮಾರ್ಕ್ಸ್ ಕೊಡುವುದು ಕಷ್ಟ. ಆದ್ರೆ, ವಿನಯ್ ಪಟ್ಟಿರುವ ಪರಿಶ್ರಮಕ್ಕೆ ಧಾರಾಳವಾಗಿ ಪಾಸ್ ಮಾಡಬಹುದು. ಸಾಹಸ ದೃಶ್ಯಗಳಲ್ಲಿ ಲೀಲಾಜಾಲವಾಗಿ ಫೈಟ್ ಮಾಡಿರುವ ವಿನಯ್, ರಾಜ್ ಕುಟುಂಬದ 'ಆಕ್ಷನ್ ಹೀರೋ' ಅಂದ್ರೆ ತಪ್ಪಾಗಲ್ಲ. ಡ್ಯಾನ್ಸ್ ಮತ್ತು ಡೈಲಾಗ್ ಡೆಲಿವರಿಯಲ್ಲಿ ವಿನಯ್ ಇನ್ನೂ ಪಳಗಬೇಕು. ಆಂಗಿಕ ಅಭಿನಯ ಮತ್ತು ಮುಖ ಭಾವಗಳನ್ನ ಕೊಂಚ ಸುಧಾರಿಸಿಕೊಂಡರೆ ವಿನಯ್ ರಾಜ್ ಕುಮಾರ್, ದೊಡ್ಮನೆ ಕುಟುಂಬದ ಮುಂದಿನ 'ಸೂಪರ್ ಸ್ಟಾರ್' ಆಗುವುದರಲ್ಲಿ ಡೌಟೇ ಇಲ್ಲ.

    ಕನ್ನಡತಿ ಅಲ್ಲದೇ ಇದ್ದರೂ 'ಅಪೂರ್ವ' ನೀಡಿರುವ ಅಭಿನಯ ಅಮೋಘ. ಡೈಲಾಗ್ ಗಳನ್ನ ಸ್ಪಷ್ಟವಾಗಿ ಹೇಳಿರುವ ಅಪೂರ್ವಗೆ ಕನ್ನಡ ಬರಲ್ಲ ಅಂತ ಎಲ್ಲೂ ಭಾಸವಾಗುವುದಿಲ್ಲ. ತೆರೆಮೇಲೆ ಪುಟ್ಟ ಹುಡುಗಿಯಾಗಿ ಕಾಣುತ್ತಾರೆ ಅನ್ನುವುದನ್ನ ಬಿಟ್ಟರೆ ಅಪೂರ್ವ, ಕನ್ನಡ ಚಿತ್ರರಂಗಕ್ಕೆ ಉತ್ತಮ ಪರಿಚಯ.
    ಉಳಿದಂತೆ ಆಶೀಶ್ ವಿದ್ಯಾರ್ಥಿ, ಸುಧಾರಾಣಿ, ನಯನ ಪುಟ್ಟಸ್ವಾಮಿ, ಸಾಧು ಕೋಕಿಲ, ಐಶ್ವರ್ಯ, ದೀಪಿಕಾ ದಾಸ್, ನಿಕ್ಕಿ ಗಲ್ರಾನಿ ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

    ಹೇಳಿ ಕೇಳಿ 'ಸಿದ್ದಾರ್ಥ' ರಾಜ್ ಕುಟುಂಬದ ನೂತನ ಕುಡಿಯ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ಎಲ್ಲಾದರೂ ಒಂದು ಕಡೆ ಅಣ್ಣಾವ್ರ ಕುಟುಂಬದ ಚಹರೆ ಕಾಣಲೇಬೇಕು. ಅದನ್ನ ಬಹಳ ಜಾಣತನದಿಂದ ನಿರ್ದೇಶಕ ಪ್ರಕಾಶ್ ತೆರೆಮೇಲೆ ಬಳಸಿಕೊಂಡಿದ್ದಾರೆ. ಹಾಗಂತ ಅಪ್ಪು, ಶಿವಣ್ಣ ಇಲ್ಲಿ ಅತಿಥಿ ಪಾತ್ರ ನಿರ್ವಹಿಸಿಲ್ಲ. ಬದಲಾಗಿ ಅವರ ಹಾಡುಗಳು ಎಲ್ಲರನ್ನ ಹುಚ್ಚೆಬಿಸುತ್ತೆ. ಅದ್ಹೇಗೆ ಅಂತ ನಾವು ಹೇಳಲ್ಲ. ಅದನ್ನ ತೆರೆಮೇಲೆ ನೋಡಿದ್ರೆ, ನಿಮಗೆ ಸಿಗುವ ಮಜಾನೇ ಬೇರೆ.

    ಜ ಹೇಳ್ಬೇಕಂದ್ರೆ, 'ಸಿದ್ದಾರ್ಥ' ಚಿತ್ರದಲ್ಲಿ ಭೇಷ್ ಅನ್ನುವಂತಹ ಕಥೆ ಇಲ್ಲ. 'ಸಿದ್ದಾರ್ಥ' ಸಿಂಪಲ್ ಸ್ಟೋರಿ ಆದರೂ, ಎಲ್ಲೂ ಬೋರ್ ಅನಿಸುವುದಿಲ್ಲ. ಅನಾವಶ್ಯಕ ಸನ್ನಿವೇಶಗಳಿಂದ ಕಿರಿಕಿರಿ ತರಿಸುವುದಿಲ್ಲ. ಎಲ್ಲೂ ಗಿಮಿಕ್ ಮಾಡಿಲ್ಲ. ನಿದ್ದೆ ಅಂತೂ ಹತ್ತಿರವೇ ಸುಳಿಯಲ್ಲ. ಮನರಂಜನೆಗೆ ಬೇಕಾದ ಎಲ್ಲಾ ಸರಕುಗಳು ಚಿತ್ರದಲ್ಲಿವೆ. ಪ್ರೇಕ್ಷಕರು ಕಿಸಕ್ ಅಂತ ನಗುವ ಅದೆಷ್ಟೋ ಚಟಾಕಿಗಳನ್ನ ವಿನಯ್ ಉಡಾಯಿಸಿದ್ದಾರೆ. ಕಥೆಗೆ ಪೂರಕವಾಗಿ ಹಾಡುಗಳು, ಫೈಟ್ಸ್ ಇವೆ. ಹೀಗೆ ಆಗುತ್ತೆ ಅಂದುಕೊಳ್ಳುವಷ್ಟರಲ್ಲಿ, ಇನ್ನೊಂದು ಟ್ವಿಸ್ಟ್ ಕೊಟ್ಟು ಕೊನೆಗೆ ನಗು ಮೊಗದಿಂದ ಪ್ರೇಕ್ಷಕರನ್ನ ಕಳುಹಿಸಿಕೊಟ್ಟಿದ್ದಾರೆ ನಿರ್ದೇಶಕ ಪ್ರಕಾಶ್.

    ವಿನಯ್ ಗೆ ಬಿಲ್ಡಪ್ ಕೊಡಬೇಕು ಅಂತ ಎಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳು ಚಿತ್ರದಲ್ಲಿಲ್ಲ. ವಾಸ್ತವಕ್ಕೆ ತೀರಾ ಹತ್ತಿರವಾಗುವ, ಸನ್ನಿವೇಶಕ್ಕೆ ಪೂರಕವಾಗಿರುವ, ಎಲ್ಲೂ ಅತಿಯಾಯ್ತು ಅನ್ನಿಸುವ ಫೈಟ್ಸ್ ಇಲ್ಲ. ಇರುವ ಎರಡ್ಮೂರು ಸಾಹಸ ಸನ್ನಿವೇಶಗಳಲ್ಲಿ ವಿನಯ್ ರಾಜ್ ಕುಮಾರ್ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸುತ್ತಾರೆ.

    'ಸಿದ್ದಾರ್ಥ' ಆಡಿಯೋ ಕೇಳಿ ಅಂಥದ್ದೇನಿಲ್ಲ ಅಂದುಕೊಂಡವರು, ಚಿತ್ರವನ್ನ ನೋಡಿ ಹೊರಬಂದಾಗ 'ಸಿದ್ದಾರ್ಥ' ಹಾಡುಗಳನ್ನ ಗುನುಗದೇ ಇರುವುದಿಲ್ಲ. ವಿ.ಹರಿಕೃಷ್ಣ ಸಂಯೋಜಿಸಿರುವ ಹಾಡುಗಳು 'ಸಿದ್ದಾರ್ಥ'ನಿಗೆ ನಿಜಕ್ಕೂ ಪ್ಲಸ್ ಪಾಯಿಂಟ್. ಇನ್ನೂ ಫಾರಿನ್ ಲೋಕೇಷನ್ಸ್ ನಲ್ಲಿ ಕೃಷ್ಣ ಕುಮಾರ್ ಛಾಯಾಗ್ರಹಣ ಕಣ್ಣಿಗೆ ಹಬ್ಬ ನೀಡುತ್ತದೆ.

    **Note:Hey! Would you like to share the story of the movie ಸಿದ್ಧಾರ್ಥ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X