twitter
    For Quick Alerts
    ALLOW NOTIFICATIONS  
    For Daily Alerts

    ಉಗಿಬಂಡಿಯ ಹಿಂದೆ ಹಾಡುಗಳ ನೆನಪಿನ ಬಂಡಿ

    By * ವಾಣಿ ರಾಮದಾಸ್, ಸಿಂಗಪುರ
    |

    ನನ್ನೊಡನೆ ಕೆಲಸ ಮಾಡುವ 55 ವರುಷದ ಮಲೇಷಿಯನ್ ಫಹೀದಳಿಗೆ ಬಾಲಿವುಡ್ ಡಾನ್ಸ್ ಹುಚ್ಚು. ಇಂದಿನ ಚಿತ್ರಗಳಲಿ ತೋರಿಸುವ ಮದುವೆ, ವಸ್ತ್ರ, ಬಾರಾತ್, ಕುಣಿತ ಭಾರತದಲ್ಲಿ ಎಲ್ಲ ಮದುವೆಗಳಲೂ ಹಾಗೆಯೇ ನಡೆಯುತ್ತದೆ ಎಂದು ಅವಳ ಅನಿಸಿಕೆ. ಯಾವಾಗಲೂ ಛಯ್ಯ, ಛಯ್ಯ ಟ್ರೈನ್ ಸಾಂಗ್ ಸೋ ನೈಸ್ ಎಂದು ಬರುವ ಒಂದು ಸಾಲು ಗುನುಗುತ್ತಲೇ ಇರುತ್ತಾಳೆ. ಇಂಡಿಯನ್ ವೆಡ್ಡಿಂಗ್ ನೈಸ್, ಡ್ರೆಸ್ ಸೋ ನೈಸ್, ಟ್ರೈನ್ ಸೋ ಬ್ಯೋಟಿಪುಲ್. ಯು ಕ್ಯಾನ್ ಡಾನ್ಸ್ ಆನ್ ದಿ ಟಾಪ್ ಅಂದಳು. ಮೇಲೆ ಕೂರುವವರು ಟಿಕೆಟ್‌ಲೆಸ್ ಪ್ರಯಾಣಿಕರು ಎಂದು ಪಾಪ ಅವಳಿಗೇನು ಗೊತ್ತು. ಅವಳ ನೈಸ್, ನೈಸ್ ಹುಮ್ಮಸ್ಸಿಗೆ ತಣ್ಣಿರೆರಚುವ ಪ್ರಯತ್ನ ನಾನು ಮಾಡಲು ಹೋಗಿಲ್ಲ.

    ಟ್ರೈನ್ ವೆರಿ ನೈಸ್ ಇದು ಅಕ್ಷರಶಃ ನಿಜ. ದೇಶದ ಉದ್ದಗಲಕ್ಕೂ 156 ವರುಷಗಳಿಂದ ಅರವತ್ತು ಸಾವಿರ ಕಿ.ಮಿ ಲಕ್ಷಾಂತರ ಜನರನು, ಸರಕು-ಸಾಮಾಗ್ರಿಗಳನು ಹೊತ್ತೊಯ್ಯುವ ಭಾರತೀಯ ರೈಲು ವೆರಿ, ವೆರಿನೈಸ್ ಹಾಗೂ ವೆರಿ ಎಫಿಷಿಯಂಟ್. ಟ್ರೈನ್ ಡಾನ್ಸ್ ನೈಸ್ ಏನೋ ಸರಿ. ಆದರೆ, ಮುಂಬೈ ಲೋಕಲ್ ಅಥವಾ ಅನ್-ರಿಸರ್ವ್ಡ್ ಬೋಗಿ ಹತ್ತಿದವರು ದಿನ ನಿತ್ಯ ಮಾಡುವ ನಿಜ ಜೀವನದ ಕಠಿಣ ಡ್ಯಾನ್ಸ್ ಅಲ್ಲಿನ ದಿನ ರೈಲು ಯಾತ್ರಿಕರಿಗೆ ಮಾತ್ರ ಗೊತ್ತುಂಟು. ಅವರ ದಿನ ನಿತ್ಯದ ರೈಲೋಡುವ, ರೈಲೇರುವ ಸ್ಟೆಪ್‌ಗಳು ಕೆಲವೊಮ್ಮೆ ಪ್ರಾಣ ತೆಗೆಯುವ ಸ್ಟೀಪ್ ಸ್ಟೆಫ್. ತೆರೆಯ ಮೇಲೆ ಕುಣಿವ ಬಾಲಿ-ಹಾಲಿ-ಕಾಲಿ ಹಾಗೂ ಸ್ಯಾಂಡಲ್ ಎಂಬ "ವುಡ್" ಡ್ಯಾನ್ಸ್‌ಗಳಷ್ಟು ಸಲೀಸಲ್ಲ.

    ಭಾರತೀಯ ರೈಲು ಸಂಚಾರ ಪ್ರಾರಂಭಗೊಂಡಿದ್ದು 16 ಏಪ್ರಿಲ್ 1853. ಸಾಹೇಬ್, ಸಿಂಧ್ ಹಾಗೂ ಸುಲ್ತಾನ್ ಎಂಬ ಮೂರು ಎಂಜಿನ್‌ಗಳ ಜನ ಸಂಚಾರಿ ರೈಲು ಮೊಟ್ಟ ಮೊದಲ ಬಾರಿ ಬೋರಿ ಬಂದರ್(ಮುಂಬೈ) ನಿಂದ 34 ಕಿ.ಮೀ. ದೂರದ ಠಾಣೆಯ ತನಕ. ಅಂದಿನಿಂದ ಇಂದಿನವರೆಗೂ ಪ್ರಾಂತ್ಯ, ವರ್ಗ, ಭಾಷೆ, ಬಡವ-ಬಲ್ಲಿದ, ಸಿರಿವಂತ-ಭಿಕ್ಷುಕರನು ಹೊತ್ತೊಯ್ಯುವ ಸಂಚಾರಿ ರೈಲು ಜನ ಸಾಮಾನ್ಯರ ದಿನ ನಿತ್ಯದ ಅವಿಭಾಜ್ಯ ಅಂಗವಾಗಿದೆ. ನಮ್ಮಲ್ಲಿ ಆಸಕ್ತಿ, ಸಹನೆ, ಕುತೂಹಲ ಇದ್ದಲ್ಲಿ ನಾವು ರೈಲುಗಳಲಿ ವೈವಿಧ್ಯಮಯ ಸಂಸ್ಕೃತಿಯನ್ನೊಳಗೊಂಡಿರುವ ಒಂದು ಪುಟ್ಟ ಭಾರತವನೇ ನಾವು ರೈಲಿನಲಿ ಕಾಣಬಲ್ಲೆವು.

    ಬಾಲಿವುಡ್-ಭಾರತೀಯ ರೈಲು ಇವೆರಡಕ್ಕೂ ಬಿಡಿಸಲಾಗದ ನಂಟು. ಎತ್ತಣಿಂದೆತ್ತ ಸಂಬಂಧವಯ್ಯಾ? ವಿಶ್ವದ ಸಿನಿಮಾ ಪ್ರಪಂಚದಲಿ ಅತೀ ಹೆಚ್ಚು ಸಿನೆಮಾಗಳನ್ನು ಮಾಡುವುದು ಬಾಲಿವುಡ್. ಸಂಚಾರಿ ಪ್ರಪಂಚದಲಿ ವಿಶ್ವದಲ್ಲೇ ಅತೀ ದೊಡ್ಡ ಸಂಚಾರಿ ಇಂಡಿಯನ್ ರೈಲ್ವೇಸ್. ಎರಡೂ ಜನಸಾಮಾನ್ಯ ಜೀವನವನು ಪ್ರತಿಬಿಂಬಿಸುತ್ತವೆ. ಕನ್ನಡದಲ್ಲಿ ಬೆಂಗಳೂರು ಮೈಲ್ ಪ್ರಪ್ರಥಮ ರೈಲು ಚಿತ್ರ. ಪ್ರೇಮದ ಕಾಣಿಕೆಯ ಮೊದಲ ದೃಶ್ಯ ರೈಲಿನಲ್ಲಿ ಜರುಗುತ್ತದೆ. ವಿಷ್ಣು ಮತ್ತು ಮಂಜುಳಾ ರೈಲಿನ ಮೇಲೆ ಹಾಡುವ 'ಕಾಲವನ್ನು ತಡೆಯೋರು ಯಾರೂ ಇಲ್ಲಾ'... ಹಾಡನ್ನು ಮರೆಯಲು ಸಾಧ್ಯವೆ? ಲಗ್ನಪತ್ರಿಕೆ ಚಿತ್ರದಲ್ಲಿ ಚಿ. ಉದಯಶಂಕರ್ ಮತ್ತು ಶಿವರಾಮ್ ಅಭಿನಯದಲ್ಲಿ ರೈಲಿನಲ್ಲಿ ಚಿತ್ರೀಕರಿಸಿದ 'ಬಲು ಅಪರೂಪ ನಮ್ ಜೋಡಿ, ಎಂಥ ಕಚೇರಿಗು ನಾವ್ ರೆಡಿ' ಇಂದಿಗೂ ಅಜರಾಮರ.

    80ರ ದಶಕದ ವರೆಗೂ ಬಹಳಷ್ಟು ಚಿತ್ರಗಳಲ್ಲಿ ರೈಲು ದೃಶ್ಯಗಳು ಸಾಮಾನ್ಯ. ರೈಲುಗಳಲಿ ಹಾಡು, ಮೀಟಿಂಗ್, ಫೈಟಿಂಗ್, ಪ್ರೇಮಿಗಳ-ಕಣ್ಣುಮುಚ್ಚಾಲೆಯಾಟ, ಗಂಡ-ಹೆಂಡತಿ, ಒಡಹುಟ್ಟಿದವರು, ನಾಯಕ-ನಾಯಕಿಯರು ದೂರವಾಗುವುದು ಇವೆಲ್ಲವಕ್ಕೂ ಪ್ರಶಸ್ತ ಸ್ಥಳ ರೈಲು ನಿಲ್ದಾಣ ಆಗಿತ್ತು. ಬಡತನ, ಸಾಮಾಜಿಕ, ಮಧ್ಯಮ ವರ್ಗಗಳ ಚಿತ್ರಗಳು ತಟಸ್ಥವಾಗಿರುವ ಕಾಲವಿದು. ಶ್ರೀಮಂತಿಕೆ, ವೈಭವೋಪೇತ ಸೆಟ್‌ಗಳ ಯುಗವಿದು. ಸುಯ್ಯನೆ, ರೊಯ್ಯನೆ ಓಡುವ ಕಾರು, ಜೀಪು ಅಥವಾ ನೆನೆದೊಡನೆ ವಿದೇಶಕ್ಕೆ ಏರುವ ಏರು-ಪ್ಲೇನು.

    ರೈಲು ಹಾಡು ಎಂದಾಕ್ಷಣ ಛಟ್ಟನೆ ನೆನಪಿಗೆ ಬರುವುದು ಕಮಲ್ ಅಮ್ರೋಹಿಯ ಪಾಕೀಜಾ ಡೈಲಾಗ್ "ಯೇ ಪಾಂವ್ ಜಮೀನ್ ಪರ್ ಮತ್ ಉತಾರಿಯೇಗಾ, ಮೈಲೆ ಹೋಜಾಯೇಂಗೆ". 1954ರಲ್ಲಿ ಬಂದ ಜಾಗೃತಿ ಚಿತ್ರದ ಪ್ರದೀಪ್ ಬರೆದ ರೈಲಿನಲಿ ಹಾಡುವ 'ಆವೋ ಬಚ್ಚೋ ತುಮ್ಹೆ ದಿಖಾಯೆ ಧರತಿ ಹಿಂದೂಸ್ತಾನ್‌ಕೀ ವಂದೇ ಮಾತರಂ, ವಂದೇ ಮಾತರಂ' ವಯಸ್ಸಿನ ಅಂತರವಿಲ್ಲದೆ ಎಲ್ಲರ ಬಾಯಲ್ಲಿ ಜನಜನಿತವಾಗಿತ್ತು. 1960ರ ದಶಕದಲಿ ತೆರೆಕಂಡ ಅಶೋಕ್‌ಕುಮಾರ್ ನೂತನ್‌ಳ ಮನಮುಟ್ಟುವ, ಉನ್ನತ ಅಭಿನಯದ, ಎಸ್.ಡಿ.ಬರ್ಮನ್ ಅವರು ಸಂಗೀತ ನೀಡಿರುವ ಬಂಧಿನಿ ಚಿತ್ರದ 'ಓ ರೆ ಮಾಜೀ, ತೆರೆ ಸಾಜನ್ ಹೆ ಉಸ್ ಪಾರ್', 60ರ ದಶಕದ ದೇವಾನಂದ್-ವಹೀದಾ ರ ಕಾಲಾ ಬಜಾರಿನ 'ಅಪ್ನೆ ತೊ ಆಹ್ ಇಕ್ ತೂಫಾನ್ ಹೈ, ಊಪರ್ ವಾಲಾ ಜಾನ್‌ಕರ್ ಅಂಜಾನ್ ಹೈ' ಎಂದು ಊಪರ್ ಕುಳಿತ ವಹೀದಾಳಿಗಾಗಿ ಹಾಡಿದ ಸುಮಧುರ ಹಾಡು. ಕಾರಿನ ಮೇಲೆ ಕೂತ ದೇವ್, ರೈಲಿನ ಕಿಟಕಿಯ ಬಳಿ ಕುಳಿತ ಆಶಾಪರೇಖಳಿಗಾಗಿ ಹಾಡುವ 'ಜಿಯಾ ಹೋ..ಜೀಯ ಕುಚ್ ಬೋಲ್ ದೋ, ಜಬ್ ಪ್ಯಾರ್ ಕಿಸಿಸೆ ಹೋತಾ ಹೈ'..ಇದು ಪ್ಯಾರ್ ಆದವರಿಗೆ ಗೊತ್ತು ಅದರ ಗಮ್ಮತ್ತು. ಫೌಜಿ ಜಿತ್ರದ 'ಫೌಜಿ ಮೆರಾ ನಾಮ್, ವರ್ಧಿ ಹೆ ಭಗ್‌ವಾನ್' ..ಹುಮ್ಮಸ್ಸು ತಂದರೆ ಆನಂದ್‌ಭಕ್ಷಿಯವರ, ಧರ್ಮೇಂದ್ರ-ಶತ್ರುಘ್ನಸಿನ್ಹಾ ಅಭಿನಯದ ದೋಸ್ತ್ ಚಿತ್ರದ ಅರ್ಥವತ್ತಾದ 'ಗಾಡಿ ಬುಲಾರ ಹೀಹೈ' ರೈಲಿನಂತೆಯೇ ಸಾಗುವ ಜನಸಾಮಾನ್ಯ ಜೀವನವನು ಪ್ರತಿಬಿಂಬಿಸಿದರೆ, ಮೆರೆ ಸಪನೋಂಕಿ ರಾನಿ ಅಂದು ಯುವಕರನು ಹುಚ್ಚೆಬ್ಬಿಸಿತ್ತು.

    ಶಶಿಕಪೂರ್ ಅಭಿನಯದಲ್ಲಿನ 'ಹಮ್ ದೋ ನೋ ದೋ ಪ್ರೇಮಿ' , ರಿಷಿಕಪೂರ್ ಬೋಗಿಯ ಮೇಲೆ ನಿಂತು ಪದ್ಮಿನಿ ಕೊಲ್ಹಾಪುರಿಗಾಗಿ ಹಾಡಿದ 'ಹೋಗಾ ತುಮ್ ಸೆ ಪ್ಯಾರಾ ಕೌನ್, ಹಮ್ ಕೋ ತೊ', ರೈಲಿನ ಚಿತ್ರ ಬರ್ನಿಂಗ್ ಟ್ರೈನ್ 'ಪಲ್ ದೋ ಪಲ್ ಕಾ ಸಾಥ್' ಪ್ರೇಮಿಗಳನು ಒಂದು ಗೂಡಿಸಿದರೆ, ಮತ್ತದೇ ಬರ್ನಿಂಗ್ ಟ್ರೈನ್ ಚಿತ್ರದ 'ತೆರಿ ಹೈ ಜಮೀನ್ ತೆರ ಆಸಮಾ, ಸಭೀ ಕಾ ಹೈ ತು'...ಸಂಕಟದಲಿ-ವೆಂಕಟರಮಣ ಬಿಂಬಿಸಿತ್ತು. ನಟಿ ಲಕ್ಷ್ಮಿಗೆ ಹೆಸರು ತಂದ ಜೂಲಿ ಎಂಜಿನ್ ಡ್ರೈವರ್ ಹಾಗೂ ಅವನ ಪರಿವಾರದ ಕಥೆಯಾದರೆ, ಬೆಂಗಳೂರಿನ ರೈಲು ನಿಲ್ದಾಣದಲಿ ಚಿತ್ರಿತಗೊಂಡ "ಕೂಲಿ" ಚಿತ್ರೀಕರಣ ಸಮಯ ಅಮಿತಾಭ್‌ನನ್ನು ಆಸ್ಪತ್ರೆಗೆ ಅಟ್ಟಿತು. ಎ.ಆರ್.ರೆಹಮಾನ್‌ಗೆ ಆಸ್ಕರ್ ತಂದುಕೊಟ್ಟ ಸ್ಲಂಡಾಗ್ ಚಿತ್ರದ ಜೈ ಹೊ ಹಾಡು ಕೂಡ ಮುಂಬಯಿಯ ವಿಕ್ಟೋರಿಯಾ ಟರ್ಮಿನಸ್‌ನಲಿ ಚಿತ್ರೀಕರಣಗೊಂಡದ್ದು. ಶೋಲೆ ಚಿತ್ರದ ರೈಲಿನ ಸನ್ನಿವೇಶವನು ಮರೆಯುವರಾರು. ಇನ್ನು ಡಾಕುಗಳು ಲಗ್ಗೆ ಇಟ್ಟದ್ದು ಕೂಡ ಚಲಿಸುವ ರೈಲಿಗೆ ತಾನೆ.

    ರೈಲಿನಿಂದ ನಾಯಕ-ನಾಯಕಿ ಇಳಿವ ದೃಶ್ಯ, ರೈಲಿನ ಕಂಬಿಗೆ ನಾಯಕನನ್ನು ಬಿಗಿಯುವ ದೃಶ್ಯ, ಬ್ರಿಡ್ಜ್ ಕೆಳಗೆ ರೈಲಿನ ಕಂಬಿ ಹಿಡಿದು ಜೋತಾಡುವ ದೃಶ್ಯ, ರೈಲು ನಿಲ್ದಾಣದಲಿ ಎಲ್ಲವೂ ಸುಖಾಂತಗೊಳ್ಳುವ ಸಿನೀಮಯ ದೃಶ್ಯಗಳು ಲೆಕ್ಕ ಸಿಗದಷ್ಟಿವೆ. ರೈಲಿನ ಬಗ್ಗೆ ಬರೆಯುತ್ತಾ ಕೂತಲ್ಲಿ ಉದ್ದನೆಯ ರೈಲು ಪಟ್ಟಿಯೇ ಬೆಳೆದೀತು. ಬಾಲಿವುಡ್-ರೈಲು ಇವೆರಡೂ ಪರದೆಯ ಮೇಲೂ, ಬದುಕಿನ ಮೇಲೂ ಜನರಿಗೆ ಹತ್ತಿರವಾಗಿರುವುದರಿಂದಲೇ ಸಿನೀಮ ರೀಲಿನಲ್ಲೋ ರೈಲಿಗೆ ಪ್ರಾಮುಖ್ಯ. ಚಲ್ ನಾ ಹಿ ಜಿಂದಗೀ ಹೈ, ಚಲ್ ತೀ ಹಿ ಜಾರ ಹೀ ಹೈ ಎನ್ನುತ್ತಲೇ ನಡೆಯುತ್ತದೆ ಅಲ್ಲವೇ ನಮ್ಮೀ ಜೀವನ ರೈಲು ಯಾತ್ರೆ.

    Tuesday, September 15, 2009, 19:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X