»   » ಶಿವಣ್ಣ ಅಭಿನಯದ ವಜ್ರಕಾಯ ಧ್ವನಿಸುರುಳಿ ವಿಮರ್ಶೆ

ಶಿವಣ್ಣ ಅಭಿನಯದ ವಜ್ರಕಾಯ ಧ್ವನಿಸುರುಳಿ ವಿಮರ್ಶೆ

Written by: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

Rating:
3.5/5
'ಭಜರಂಗಿ'ಯ ಭರ್ಜರಿ ಜೋಡಿ ಮತ್ತೆ ಒಂದಾಗಿ ಬರುತ್ತಿದೆ. ಭಜರಂಗಿ ಚಿತ್ರದಲ್ಲಿ ಶಿವಣ್ಣನ ಪ್ರತಿಭೆ, ಹುರಿಗೊಳಿಸಿದ ದೇಹ ಎಲ್ಲವನ್ನು ಭರ್ಜರಿಯಾಗಿ ತೆರೆಯ ಮೇಲೆ ಅನಾವರಣಗೊಳಿಸಿದ್ದ ನಿರ್ದೇಶಕ ಹರ್ಷ, ವಜ್ರಕಾಯದಲ್ಲೂ ಅದೇ ಜಾದೂ ಮುಂದುವರಿಸುತ್ತಾರೆಯೇ ಎಂದು ಕಾತುರದಲ್ಲಿದ್ದಾರೆ ಪ್ರೇಕ್ಷಕರು.

ಚಿತ್ರದ ಟ್ರೈಲರ್ ಹಾಗೂ ಸ್ಥಿರ ಚಿತ್ರಗಳು ಸಕ್ಕತ್ತಾಗಿಯೇ ಮೂಡಿ ಬಂದಿದೆ. ನಿರ್ದೇಶಕನೇ ನೃತ್ಯ ಸಂಯೋಜಕನಾದಾಗ ಅಥವಾ ನೃತ್ಯ ಸಂಯೋಜಕನೇ ಚಿತ್ರದ ನಿರ್ದೇಶಕನಾಗಿರುವಾಗ ಚಿತ್ರದ ಹಾಡುಗಳಿಗೆ ವಿಶೇಷವಾದ ಮೆರಗು ಒದಗಿ ಬರುತ್ತದೆ. (ವಜ್ರಕಾಯ ಚಿತ್ರದಲ್ಲಿ ಶಿವಣ್ಣನ ಕಮಾಲ್)

ಅಲ್ಲದೆ ಹಾಡುಗಳಲ್ಲಿಯೂ ವಿಶೇಷತೆ ಇರುತ್ತದೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಕನ್ನಡದ ಅಗ್ರಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯರ ನಿರ್ದೇಶನದ ಹಾಡುಗಳು ಹೇಗಿವೆ ಮುಂದೆ ಓದಿ..

ವಜ್ರಕಾಯ

ಗಾಯಕರು: ಶಂಕರ್ ಮಹಾದೇವನ್
ಸಾಹಿತ್ಯ: ಡಾ. ವಿ ನಾಗೇಂದ್ರ ಪ್ರಸಾದ್

ಶಂಕರ್ ಮಹಾದೇವನ್ ಹಾಗೂ ನಾಗೇಂದ್ರ ಪ್ರಸಾದ್ ಒಟ್ಟಾಗಿ ಸೇರಿದರೆ ಒಂದು ಶಕ್ತಿಶಾಲಿ ಹಾಡು ಸಿದ್ಧವಾದಂತೆಯೇ. ಅರ್ಜುನ್ ಜನ್ಯರ ಭರ್ಜರಿ ಸಂಗೀತಕ್ಕೆ, ಸಾಹಿತ್ಯ ಗಾಯನವೆಲ್ಲವೂ ರಭಸದಿಂದಲೇ ಕೂಡಿಕೊಂಡು ಬಂದಿದೆ. ತೆರೆಯ ಮೇಲೆ ನೃತ್ಯವೂ ಅದೇ ರೀತಿಯಲ್ಲಿ ಇರುವುದರಲ್ಲಿ ಸಂಶಯವಿಲ್ಲ. ಅಬ್ಬರದ ನಡುವೆ ಕೇಳಿಸಿಕೊಂಡು ಹೋಗುವ ಗೀತೆ.

ನೋ ಪ್ರಾಬ್ಲಮ್

ಗಾಯಕರು: ಧನುಷ್
ಸಾಹಿತ್ಯ: ಮೋಹನ್ ಕುಮಾರ್

ಕೊಲವೆರಿ ಹಾಡಿನಿಂದ ಗಾಯಕನಾಗಿಯೂ ಹೆಸರು ಮಾಡಿದ ತಮಿಳಿನ ಧನುಷ್ ಹಾಡಿರುವ ಗೀತೆ. ಅವರ ಕಂಚಿನ ಕಂಠಕ್ಕೆ ತಕ್ಕುದ್ದಾದ ಸಂಗೀತ ಒದಗಿ ಬಂದಿದ್ದೂ, ಸಾಹಿತ್ಯವೂ ಲವಲವಿಕೆಯಿಂದ ಇರುವುದರಿಂದ ಇಷ್ಟವಾಗುವ ಗೀತೆ. ಸರಳವಾದ ವಾದ್ಯ ಸಂಯೋಜನೆ ಇಷ್ಟವಾಗುತ್ತದೆ. ಮೋಹನ್ ಕುಮಾರರ ಸಾಹಿತ್ಯ ಯುವ ರಸಿಕರನ್ನು ಮೆಚ್ಚಿಸುವಂತಿದೆ. ಎಲ್ಲಕ್ಕಿಂತ ಮಿಗಿಲಾಗಿ ಧನುಷ್ ರ ಕನ್ನಡ ಉಚ್ಛರಣೆ ಹಾಗೂ ಸ್ಪಷ್ಟತೆ ಈಗಿನ ಎಷ್ಟೋ ಪರಭಾಷಾ ಗಾಯಕರಿಗಿಂತ ಚೆನ್ನಾಗಿದೆ. ಕೇಳುತ್ತಾ ಕೇಳುತ್ತಾ ಇಷ್ಟವಾಗುವಂತ ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದಾರೆ.

 

ಕಂದಮ್ಮ ಮುದ್ದಮ್ಮ

ಗಾಯಕರು: ಕಾರ್ತಿಕ್
ಸಾಹಿತ್ಯ: ಕೆ. ಕಲ್ಯಾಣ್

ಕಲ್ಯಾಣ್ ಅವರ ಸಾಹಿತ್ಯ ಎಂದೆಡೊನೇ ಒಂದು ನಿರೀಕ್ಷೆ ಕನ್ನಡ ಚಿತ್ರ ರಸಿಕರಲ್ಲಿ ಇದ್ದೇ ಇದೆ. ಇಲ್ಲೂ ಅಷ್ಟೇ ಕಲ್ಯಾಣ್ ನಿರಾಸೆ ಮೂಡಿಸುವುದಿಲ್ಲ. ಸಂಗೀತ ಕೂಡ ಮಾಧುರ್ಯದ ಗಡಿ ದಾಟದೆ ಇಷ್ಟವಾಗುತ್ತದೆ. ನಡುವೆ ಬರುವ ಕೋರಸ್ ವಿಭಿನ್ನವಾಗಿದೆ. ಕೊಳಲಿನ ಧ್ವನಿ ನೆನಪನಲ್ಲಿಯುಳಿಯುತ್ತದೆ. ಕಾರ್ತಿಕರ ಗಾಯನ ಎಂದಿನಂತೆ, ಉತ್ತಮವಾದ ಗೀತೆ.

 

ತುಕತು ಗಡಬಡ

ಗಾಯಕರು: ಶರಣ್ ಹಾಗೂ ಸುನಿತಾ
ಸಾಹಿತ್ಯ: ಯೋಗಾನಂದ ಮುದ್ದನ್

ಶರಣ್ ಗಾಯನದ ಹಾಡೆಂಬ ಉತ್ಸಾಹಕ್ಕೆ ಭರಪೂರವಾದ ಹಿಂದಿಯ ಸಾಹಿತ್ಯ ತಣ್ಣೀರೆರೆಚುತ್ತದೆ. ಯೋಗಾನಂದರವರ ಸಾಹಿತ್ಯದಲ್ಲಿ ಕನ್ನಡ ಪದಗಳು ಸಮಾಧಾನಕರ ಬಹುಮಾನದಂತೆ ಅಲ್ಲಲ್ಲಿ ಕೇಳ ಸಿಗುತ್ತದೆ. ಕನ್ನಡ ಹಾಡೊಂದರಲ್ಲಿ ಅಷ್ಟು ಪರಭಾಷಾ ಸಾಹಿತ್ಯದ ಅವಶ್ಯಕತೆ ಚಿತ್ರದ ಸನ್ನಿವೇಶದಲ್ಲಿ ನಿಜಕ್ಕೂ ಇದೆಯೇ ಎಂಬುದನ್ನು ಪರದೆ ಮೇಲೆಯೇ ನೋಡಬೇಕು. ಹರ್ಷರವರ ನೃತ್ಯ ಸಂಯೋಜನೆಗೆ ಒಳ್ಳೆಯ ಅವಕಾಶವಿರುವ ಸಂಗೀತ, ವಾದ್ಯ ಸಂಯೋಜನೆಯೂ ಇದೆ.

 

ಉಸಿರೆ

ಗಾಯಕರು: ಸಂತೋಷ್
ಸಾಹಿತ್ಯ: ಕೆ ಕಲ್ಯಾಣ್

ಬಹುಷ: ಆಲ್ಬಂನ ಅತ್ಯುತ್ತಮ ಗೀತೆ. ಒಳ್ಳೆಯ ಸಾಹಿತ್ಯಕ್ಕೆ, ಉತ್ತಮವಾದ ಸಂಗೀತ, ಗಾಯನ ಎಲ್ಲವೂ ಮಿಳಿತಗೊಂಡು ಉತ್ತಮವಾಗಿ ಕೇಳಿಸಿಕೊಂಡು ಹೋಗುವ ಗೀತೆ. ತಾಯಿಯನ್ನು ಕಾಣುವ ಕಾತುರದಲ್ಲಿ ಹೊರಟ ನಾಯಕನ ಸದಾಶಯ ಸಾಹಿತ್ಯದಲ್ಲಿದ್ದರೆ, ಅದರ ಉತ್ಸಾಹ ಗಾಯನದಲ್ಲೂ ಇದೆ. ಈ ಹಾಡಿನಲ್ಲೂ ಅರ್ಜುನ್ ಜನ್ಯ ಸಂಗೀತ ಮಾಧುರ್ಯ ಮತ್ತು ಸಂಯಮದಿಂದ ಗಮನ ಸೆಳೆಯುತ್ತದೆ.

 

ವಜ್ರಕಾಯ ಥೀಮ್

ಮೆಲುದನಿಯ ಕೋರಸ್ ನಿಂದ ಆರಂಭವಾಗಿ ಅಬ್ಬರದಿಂದ ಕೊನೆಗೊಳ್ಳುವ ಥೀಮ್ ಸಾಂಗ್ ಎಂದಿನ ಥೀಮ್ ಗೀತೆಗಳಂತೆಯೇ ಇದ್ದು, ಅದಕ್ಕೆ ಬೇಕಾದ ರಭಸವೂ ಸಂಗೀತದಲ್ಲಿದೆ.

English summary
Audio review of Shivaraj Kumar starer, Harsha directed Vajrakaya movie. Album has six songs and Arjun Janya composed the songs.
Please Wait while comments are loading...

Kannada Photos

Go to : More Photos