twitter
    For Quick Alerts
    ALLOW NOTIFICATIONS  
    For Daily Alerts

    ಬೆಂಕಿಪಟ್ಣ ಆಡಿಯೋ ವಿಮರ್ಶೆ: ತಪ್ಪದೇ ಕೇಳಿ ಆನಂದಿಸಿ

    By ಬಾಲರಾಜ್ ತಂತ್ರಿ
    |

    ಬೆಂಕಿಪಟ್ಣ ಚಿತ್ರದ ಹಾಡನ್ನು ಕೇಳಿದ ಮೇಲೆ ಒಂದಂತೂ ಅನಿಸುವುದು ನಿಶ್ಚಿತ. ಎಷ್ಟು ದಿನವಾಯ್ತು ಇಂಥಹಾ ವಿಭಿನ್ನತೆಯಿಂದ ಕೂಡಿರುವ ಹಾಡಗಳನ್ನು ಕೇಳದೇ ಎಂದು. ನಮ್ಮ ನೆಲದ ಸೊಗಡಿನ ಮತ್ತು ಅದಕ್ಕಿಂತ ಹೆಚ್ಚಾಗಿ ಕಲಬೆರಕೆ ಇಲ್ಲದ ಹಾಡುಗಳನ್ನು ಬೆಂಕಿಪಟ್ಣ ಚಿತ್ರತಂಡ ಚಿತ್ರಪ್ರೇಮಿಗಳ ಮುಂದಿಟ್ಟಿದೆ.

    ಆಲ್ಬಂನಲ್ಲಿರುವ ಐದು ಹಾಡುಗಳೂ ವಿಭಿನ್ನತೆಯ ಜೊತೆಗೆ ಮಾಧುರ್ಯದಿಂದ ಕೂಡಿದ್ದು ಒಂದೆಡೆಯಾದರೆ ಇನ್ನೊಂದೆಡೆ ಹಾಡಿನ ಸಾಹಿತ್ಯ. ಪ್ರತೀ ಹಾಡು ಅರ್ಥಪೂರ್ಣವಾಗಿವೆ, ಮತ್ತೆ ಮಗುದೊಮ್ಮೆ ಕೇಳೋಣ ಎನ್ನುವಂತಿದೆ. (ಬೆಂಕಿಪಟ್ಣಕ್ಕೆ ಬಂದ ರಿಯಾಲಿಟಿ ಬೆಡಗಿ ಅನುಶ್ರೀ)

    ಕಲಬೆರಕೆ ಎನ್ನುವ ಪದವನ್ನು ಮೊದಲ ಸಾಲಿನಲ್ಲಿ ಬಳಸಿದ್ದು ಕನ್ನಡ ಚಿತ್ರಗಳಲ್ಲಿ ನಮ್ಮತನ ಕಮ್ಮಿಯಾಗುತ್ತಿರುವುದಕ್ಕೆ. ಹಾಡು, ಸಾಹಿತ್ಯ, ಕಥೆ, ಚಿತ್ರಕಥೆಯಿಂದ ಹಿಡಿದು ಎಲ್ಲಾ ವಿಭಾಗದಲ್ಲೂ ನಮ್ಮ ಸೊಗಡನ್ನು ಮರೆತಿರುವುದಕ್ಕೆ, ಮಾಧುರ್ಯಕ್ಕೆ ಪ್ರಾತಿನಿಧ್ಯ ನೀಡದೇ ಇರುವುದಕ್ಕೆ.

    ಈ ಎಲ್ಲಾ ಅಪವಾದಗಳನ್ನು ಮೆಟ್ಟಿ ನಿಲ್ಲುತ್ತೆ ಬೆಂಕಿಪಟ್ಣ ಚಿತ್ರದ ಹಾಡುಗಳು. ಆಲ್ಬಂನಲ್ಲಿ ಐದು ಹಾಡುಗಳಿವೆ, ಎಲ್ಲವೂ ಬೇರೆ ಬೇರೆ ದಾಟಿಯಲ್ಲಿದೆ, ಅರ್ಥಪೂರ್ಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ಹಾಡುಗಳನ್ನು ಚಿತ್ರತಂಡ 'ನಮ್ಮವರಿಂದಲೇ' ಹಾಡಿಸಿದೆ. ಚಿತ್ರಕ್ಕೆ ಸಂಗೀತ ನೀಡಿದವರು ಸ್ಟೀವ್ - ಕೌಶಿಕ್ ಯುವಕರ ತಂಡ.

    ಟಿ ಕೆ ದಯಾನಂದ್ ನಿರ್ದೇಶನದ ಬೆಂಕಿಪಟ್ಣ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರತಾಪ್ ನಾರಾಯಣ್, ಅನುಶ್ರೀ, ಅರುಣ್ ಸಾಗರ್, ಪ್ರಕಾಶ್ ಬೆಳವಾಡಿ, ಶ್ವೇತಾ ಬಡಿಗೇರ್ ಮುಂತಾದವರಿದ್ದಾರೆ. ಮಾಸ್ತಿ ಜಾಕೀರ್ ಆಲಂಖಾನ್ ಚಿತ್ರದ ನಿರ್ಮಾಪಕರು ಮತ್ತು ದಿನೇಶ್ ಕುಮಾರ್ ಅವರು ಕಾರ್ಯಕಾರಿ ನಿರ್ಮಾಪಕರು.

    ಬೊಗಸೆಯಲ್ಲಿ ಮಳೆ ಹಿಡಿದಂತೆ

    ಬೊಗಸೆಯಲ್ಲಿ ಮಳೆ ಹಿಡಿದಂತೆ

    ಸಾಹಿತ್ಯ : ಜಯಂತ್ ಕಾಯ್ಕಿಣಿ
    ಹಾಡಿರುವವರು: ರಾಜೇಶ್ ಕೃಷ್ಣನ್, ಅನುರಾಧಾ ಭಟ್

    ಬೊಗಸೆಯಲ್ಲಿ ಮಳೆ ಹಿಡಿದಂತೆ, ಈ ಜೀವಕೆ ಹೊಸ ಬಾಯಾರಿಕೆ. ಈ ಕಣ್ಣಿನ ಕೋಲ್ಮಿಂಚ್ ತಾಗಿ, ಸಾವಿದ ನಗೆ ಹೂವೊಂದನ್ನು ಮೊಗವೇ ಮುಡಿದಿರಲು, ಹೀಗೆ ಹಾಡಿನ ಪ್ರತೀ ಸಾಲುಗಳು ಅರ್ಥಪೂರ್ಣವಾಗಿವೆ, ಮಧುರವಾಗಿವೆ. ಸಾಹಿತ್ಯಕ್ಕೆ ಪೂರಕವಾಗಿದೆ ರಾಜೇಶ್ ಮತ್ತು ಅನುರಾಧಾ ಭಟ್ ಕಂಠಸಿರಿ.

    ವೀರ ಹುನುಮಂತ ದೂರಿ..ದೂರಿ.

    ವೀರ ಹುನುಮಂತ ದೂರಿ..ದೂರಿ.

    ಸಾಹಿತ್ಯ : ದಿನೇಶ್ ಕುಮಾರ್ ಎಸ್ ಸಿ
    ಹಾಡಿರುವವರು: ವಿಜಯ್ ಪ್ರಕಾಶ್

    ಜೀವವ ಕೊಟ್ಟೋಳೇ ದೂರಿ ದೂರಿ, ಜೋಗುಳ ಹಾಡೋಳೇ ದೂರಿ ದೂರಿ.. ಇದೊಂದು ಅಪರೂಪದ ಸಾಹಿತ್ಯವಿರುವ ಹಾಡು. ಹಾಡಿಗೆ ಬಳಸಿಕೊಂಡಿರುವ ಹಿನ್ನಲೆ ಸಂಗೀತ ವಿಶಿಷ್ಟ ಅನುಭವ ನೀಡುತ್ತದೆ. ವಿಜಯ್ ಪ್ರಕಾಶ್ ಸಾಹಿತ್ಯ ಮತ್ತು ಸಂಗೀತಕ್ಕೆ ಚೆನ್ನಾಗಿ ಧ್ವನಿಗೂಡಿಸಿದ್ದಾರೆ. ಸಾಹಿತ್ಯಕ್ಕಾಗಿಯೇನೋ ಹಾಡನ್ನು ಮತ್ತೆ ಮತ್ತೆ ಕೇಳೋಣ ಅನಿಸುತ್ತದೆ.

    ಹುಟ್ಟಿದ್ಯಾಕೆ, ಸಾಯೋದ್ಯಾಕೆ

    ಹುಟ್ಟಿದ್ಯಾಕೆ, ಸಾಯೋದ್ಯಾಕೆ

    ಸಾಹಿತ್ಯ : ಹೃದಯ ಶಿವ
    ಹಾಡಿರುವವರು: ವಿಜಯ್ ಪ್ರಕಾಶ್

    ಹುಟ್ಟಿದ್ಯಾಕೆ ಸಾಯೋದ್ಯಾಕೆ ಗೊತ್ತಾಗಲ್ಲ, ಬದುಕ್ಕಿದ್ದಾಗ ನಗದವನು ಮನುಷ್ಯಲ್ಲಾ..ನೀಬರುವುದು ಬರೀ ಮೈಯಲಿ, ಹೋಗುವುದು ಬರೀ ಮೈಯಲಿ ಹೀಗೆ ಜೀವನದ ನೈಜತೆಯನ್ನು ಸಾರುವ ಸಾಹಿತ್ಯವಿರುವ ಹಾಡು. ಹದವಾಗಿ ಸಂಗೀತ ಬಳಸಿ, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಬಂದಿರುವ ಆಲ್ಬಂನ ಮತ್ತೊಂದು ಉತ್ತಮ ಹಾಡು.

    ಇರಲಿ ಹೀಗೆ, ನೀ ಇರದೇನೇ

    ಇರಲಿ ಹೀಗೆ, ನೀ ಇರದೇನೇ

    ಸಾಹಿತ್ಯ : ಹೃದಯ ಶಿವ
    ಹಾಡಿರುವವರು: ಅನುರಾಧಾ ಭಟ್

    ಆಲ್ಬಂನ ಶೋಕ, ವಿರಹ ಗೀತೆ. ಮೊದಲ ಮಾತು ನುಡಿಯುವ ಮುನ್ನ ನಾಲಿಗೆ ಸೋತಿದೆ ಎಂದು ಸಾಗುವ ಹೃದಯ ಶಿವ ಸಾಹಿತ್ಯಕ್ಕೆ ಅನುರಾಧ ಭಟ್ ಅದ್ಭುತವಾಗಿ ಧ್ವನಿ ನೀಡಿದ್ದಾರೆ. ಎಲ್ಲಾ ಓಕೆ.. ಶ್ರೇಯಾ ಘೋಷಾಲ್ ಯಾಕೆ ಎನ್ನುವಂತಿದೆ ಅನುರಾಧ ಭಟ್ ಅವರ ಸ್ವರ ಉಚ್ಚಾರಣೆ, ಕಂಠಸಿರಿ.

    ನೋ..ಚಿಂತೆ ನೋ..

    ನೋ..ಚಿಂತೆ ನೋ..

    ಸಾಹಿತ್ಯ : ಕೌಶಿಕ್
    ಹಾಡಿರುವವರು: ಚೇತನ್ ಸದಾನಂದ್

    ಆಲ್ಬಂನ ಟಪ್ಪಾಗೋಂಚಿ ಹಾಡು. ಚಿಂತೇನೋ. . . ಚಿಂತೇನೋ ಒಂದು ಕುತೂಹಲಕಾರಿಯಾಗಿ, ಸ್ವಾರಸ್ಯಕರವಾಗಿ ಸಾಹಿತ್ಯವಿರುವ ಹಾಡು. ಚೇತನ್ ಸದಾನಂದ್ ಹಾಡಿಗೆ ಉತ್ತಮವಾಗಿ ಜೀವ ತುಂಬಿದ್ದಾರೆ.

    English summary
    Kannada move Benkipatna audio review, movie directed by T K Dayanand and music composed by Steve and Kowshik.
    Thursday, October 9, 2014, 14:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X