twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ನಿರ್ದೇಶಕ 'ವೀರ್ ಸಮರ್ಥ್' ಸಂದರ್ಶನ

    By ಶ್ರೀರಾಮ್ ಭಟ್
    |

    Veer Samarth
    ಇತ್ತೀಚಿನ ಕನ್ನಡದ ಜನಪ್ರಿಯ ಯುವ ಸಂಗೀತ ನಿರ್ದೇಶಕರಲ್ಲಿ ವೀರ್ ಸಮರ್ಥ್ ಹೆಸರು ಅತ್ಯಂತ ಪ್ರಮುಖವಾದುದು. ಬೀದರ್ ಜಿಲ್ಲೆಯ ಅಪ್ಪಟ ಕನ್ನಡದ ಈ ಸಂಗೀತ ಪ್ರತಿಭೆ ತಮ್ಮ ಸಿನಿಮಾ ಸಂಗೀತ ನಿರ್ದೇಶನದ ಮೂಲಕ ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರು. 'ಕಾರಂಜಿ' ಚಿತ್ರದ 'ಈ ದಿನ ಹೊಸದಾಗಿದೆ' ಗೀತೆಯೊಂದೇ ಸಾಕು ವೀರ್ ಸಮರ್ಥ್ ಥಟ್ಟನೆ ನೆನಪಾಗಲು. ಇನ್ನು ಇತ್ತೀಚಿನ ಅವರ ಸಂಗೀತ ನಿರ್ದೇಶನದ 'ಜರ್ನಿ' ಜೋರಾಗಿಯೇ ಇದೆ.

    ಹುಟ್ಟೂರು ಬೀದರಿನಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿರುವ ಇವರು ನಂತರ ಮುಂಬೈನತ್ತ ಪ್ರಯಾಣ ಬೆಳೆಸಿ ಅಲ್ಲಿ ಸತತ ಐದು ವರ್ಷಗಳಷ್ಟು ಕಾಲ ಸಂಗೀತದ ಅಭ್ಯಾಸ ಮಾಡಿ ಸಂಗೀತದಲ್ಲಿ 'ವಿದ್ವತ್' ಹಾಗೂ 'ಸಂಗೀತ ವಿಶಾರದ' ಪದವಿಯನ್ನು ಪಡೆದವರು. ಇಂತಹ ಅಪರೂಪದ ಪ್ರತಿಭೆ, ಯುವ ಸಂಗೀತ ನಿರ್ದೇಶಕ ವೀರ್ ಸಮರ್ಥ್, 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ನಡೆಸಿದ ಸಂದರ್ಶನ ಇಲ್ಲಿದೆ, ಓದಿ...

    *ನಿಮ್ಮ ಹುಟ್ಟೂರು, ಕೌಟುಂಬಿಕವಾಗಿ ಸಂಗೀತದ ಹಿನ್ನೆಲೆ ಇದ್ದರೆ ಈ ಬಗ್ಗೆ ಹೇಳಿ...

    ಬೀದರ್ ನನ್ನ ಹುಟ್ಟೂರು. ತಂದೆ ಶಂಕರಪ್ಪನವರು ಹಾಗೂ ತಾಯಿ ಬಸಮ್ಮನವರು.

    ನಮ್ಮ ಕುಟುಂಬದಲ್ಲಿ ಯಾರೂ ಸಂಗೀತಾಭ್ಯಾಸ ಮಾಡಿದವರಿರಲಿಲ್ಲ. ಆದರೆ ನನಗೆ ಚಿಕ್ಕಂದಿನಿಂದಲೂ ಸಂಗೀತದ ಮೋಹವಿತ್ತು, ಕಲಿಯುವ ಬಗ್ಗೆ ಒಲವಿತ್ತು. ಹುಟ್ಟೂರು ಬೀದರಿನಲ್ಲಿ ಬಳವಂತರಾವ್ ಅವರಲ್ಲಿ ಸಂಗೀತಾಭ್ಯಾಸವನ್ನು (ಗಾಯನ) ಪ್ರಾರಂಭಿಸಿದ ನಾನು ನಂತರ ಆಶಿತಾ ಘೋಷ್ ಅವರಲ್ಲೂ ಅಭ್ಯಾಸ ಮುಂದುವರಿಸಿದೆ. ಆನಂತರ ದತ್ತು ಮಹಾರಾಜ್ ಹಾಗೂ ಸುರೇಖಾ ಮಹಾರಾಜ್ ದಂಪತಿಗಳಿಂದ ನಾನು ಸಂಗೀತ ಕಲಿಕೆ ಮುಂದುವರಿಸಿ ಸಂಗೀತ ವಿದ್ವತ್ ಮತ್ತು ಸಂಗೀತ ವಿಶಾರದ ಪರೀಕ್ಷೆ ಪಾಸು ಮಾಡಿದೆ.

    ಆಮೇಲೆ, ಹೆಚ್ಚಿನ ಸಂಗೀತಾಭ್ಯಾಸಕ್ಕಾಗಿ ಮುಂಬೈನತ್ತ ಮುಖ ಮಾಡಿದ ನಾನು ಅಲ್ಲಿ ಪ್ರಸಿದ್ಧ ಸಂಗೀತಗಾರ ಸುರೇಶ್ ವಾಡಕರ್ ಅವರಲ್ಲಿ (1998) ಸಂಗೀತಾಭ್ಯಾಸ ಮುಂದುವರಿಸಿದೆ. ತದನಂತರ ನಾನು ರವೀಂದ್ರ ಜೈನ್ ಅವರಲ್ಲೂ ಸಂಗೀತ ಕಲಿಕೆ ಮಾಡಿದ್ದೇನೆ. ಹೀಗೆ ಸತತ ಐದು ವರ್ಷಗಳನ್ನು ನಾನು ಮುಂಬೈನಲ್ಲಿ ನನ್ನ ಸಂಗೀತ ಕಲಿಕೆಗಾಗಿ ವಿನಿಯೋಗಿಸಿದ್ದೇನೆ.

    *ನೀವು ಸಿನಿಮಾಕ್ಕೆ ಸಂಗೀತ ನಿರ್ದೇಶನ ಪ್ರಾರಂಭಿಸಿದ್ದು ಯಾವಾಗ, ಹೇಗೆ?

    ಮುಂಬೈನಲ್ಲಿ ಸಂಗೀತಾಭ್ಯಾಸ ಮಾಡುತ್ತಿರುವ ವೇಳೆಯಲ್ಲಿ ನನ್ನ ಮಿತ್ರರಾದ ಅಮರನಾಥ್ ಅವರು ಕನ್ನಡ ಚಿತ್ರ 'ಶಿವಮಣಿ'ಯಲ್ಲಿ ಆಫರ್ ನೀಡಿದರು. ಅಲ್ಲಿಂದ ನನ್ನ ಸಿನಿಮಾ ಸಂಗೀತದ ಪ್ರಯಾಣ ಪ್ರಾರಂಭವಾಯ್ತು. ಆನಂತರ 'ಕಾರಂಜಿ', 'ಪರಿ', 'ಒಲವೇ ವಿಸ್ಮಯ', 'ಮಂದಹಾಸ (ಬಿಡುಗಡೆಯಾಗಿಲ್ಲ)' ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಇತ್ತೀಚಿಗಷ್ಟೇ 'ಅಜಯ್ ರಾವ್ ನಾಯಕತ್ವದ 'ಅದ್ವೈತ' ಹಾಗೂ ಹೇಮಂತ್ ಹೆಗಡೆ ಅವರ ನಟನೆ ಮತ್ತು ನಿರ್ದೆಶನದ 'ನಿಂಬೆಹುಳಿ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದೇನೆ.

    ಇತ್ತೀಚಿಗಷ್ಟೇ ಕಿರುತೆರೆಯಲ್ಲಿ ಪ್ರಾರಂಭವಾಗಿರುವ 'ಮಹಾ ಭಾರತ' ಧಾರಾವಾಹಿಗೆ ಇದೀಗ ಸಂಗೀತ ನಿರ್ದೇಶನ ಮಾಡುತ್ತಿದ್ದೇನೆ.

    *ನಿಮ್ಮ ಸಂಗೀತ ನಿರ್ದೇಶನದಲ್ಲಿ ನಿಮಗಿಷ್ಟವಾದ 'ಟಾಪ್ ಟೆನ್' ಹಾಡುಗಳ ಪಟ್ಟಿ ನೀಡುವಿರಾ?

    ಖಂಡಿತವಾಗಿ. ನಾನು ಸಂಗೀತ ನೀಡಿರುವ ಎಲ್ಲಾ ಹಾಡುಗಳೂ ನನಗಿಷ್ಟವೇ. ಅದರಲ್ಲೂ 'ಕಾರಂಜಿ' ಚಿತ್ರದ ಎಲ್ಲಾ ಹಾಡುಗಳೂ ನನಗೆ ಅಚ್ಚುಮೆಚ್ಚು. ಅವುಗಳಲ್ಲಿ ಸ್ಯಾಂಡಲ್ ವುಡ್ ಸಿನಿಪ್ರೇಕ್ಷಕರ ಗಮನಸೆಳೆದು ನನ್ನ ಮನಸ್ಸಿಗೆ ಸಾರ್ಥಕ ಭಾವ ಮೂಡಿಸಿದ ಹಾಡುಗಳಲ್ಲಿಯ 'ಹತ್ತು ಹಾಡು'ಗಳ ಪಟ್ಟಿ...

    * ಸರಿಯೇನು ನಿನ್ನಾ ಶೋಧನೆ... (ಮಂದಹಾಸ)
    * ಈ ದಿನ ಹೊಸದಾಗಿದೆ... (ಕಾರಂಜಿ)
    * ಕುಂಬಾರಕಿ ಈಕಿ ಕುಂಬಾರಕಿ... (ಮಂದಹಾಸ)
    * ಮೊದಮೊದಲಾ ಮಾತು ಚೆಂದ... (ಶಿವಮಣಿ)
    * ಕೊಂಚ ರೇಶಿಮೆ ಕೊಂಚ ಹುಣ್ಣಿಮೆ... (ಒಲವೇ ವಿಸ್ಮಯ)
    * ಮುಗಿಲಿನ ಮಾತು ಮುಸಲಧಾರೆ... (ಪರಿ)
    * ಬಿಸಿಲಿನಾ ಬೆಸುಗೆಯಾ... (ಅದ್ವೈತ)
    * ಪ್ರಳಯಾಗ್ನಿ ರುದ್ರಹರ... (ಶಿವಮಣಿ)
    * ಯಾರೂ ಹಾಡದ... (ಕಾರಂಜಿ)
    * ಬೆವರಿನ ಕವನ... (ಅದ್ವೈತ)

    * ಭವಿಷ್ಯದ ನಿಮ್ಮ ಕನಸು?

    ಸಂಗೀತವೇ ನನ್ನ ಉಸಿರು, ಜೀವಾಳ ಎಲ್ಲವೂ. ಸಂಗೀತದಲ್ಲಿ ಸಾಧಿಸುವಂತದ್ದು ತುಂಬಾ ಇದೆ ಎಂಬ ಅರಿವೂ ನನಗಿದೆ. ಸದ್ಯಕ್ಕೆ ನನಗೆ ಸಿಕ್ಕ ಅವಕಾಶದಲ್ಲಿ 'ದಿ ಬೆಸ್ಟ್' ನೀಡುತ್ತಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚುಹೆಚ್ಚಾಗಿ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ.

    ಜೊತೆಗೆ ನನ್ನದೊಂದು ಕನಸಿದೆ. ಅದೆಂದರೆ, ಚಿತ್ರವೊಂದರ ಎಲ್ಲಾ ಹಾಡುಗಳು 'ಕ್ಲಾಸಿಕಲ್' ಆಗಿರಬೇಕು. ಅಂತಹದ್ದೊಂದು ಚಿತ್ರಕ್ಕೆ ನಾನು ಸಂಗೀತ ನೀಡಬೇಕು. 'ಫ್ಯೂರ್ ಕ್ಲಾಸಿಕಲ್' ಅಂತಾರಲ್ಲ ಹಾಗಿರಬೇಕು ಆ ಚಿತ್ರದ ಎಲ್ಲಾ ಹಾಡುಗಳು. ಅದು ಬಿಟ್ಟರೆ ಸಂಗೀತ... ಸಂಗೀತ... ಹಾಗೂ ಸಂಗೀತ ನಿರ್ದೇಶನ ವೃತ್ತಿಯೇ ನನ್ನ ಕನಸು. ಅದನ್ನು ನನಸಾಗಿಸುವುದಕ್ಕೆ ನಾನು ಮಾಡಬೇಕಾಗಿರುವ ಪ್ರಯತ್ನಕ್ಕಷ್ಟೇ ಯಾವತ್ತೂ ನನ್ನ ಆದ್ಯತೆ.

    English summary
    Music Director Veer Samarth is the one of popular Kannada Music Director now. He composed music for many Kannada movie including 'Shivamani' and 'Karanji'. Recently he composed music for Ajay Rao movie 'Adwaitha' and Hemanth Hegde's upcoming 'Nimbehuli'. Read for the more in this Interview... 
 
    Friday, September 28, 2012, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X