twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂದರ್ಶನ

    By ಶ್ರೀರಾಮ್ ಭಟ್
    |

    Manikanth Kadri
    ಕನ್ನಡದ ಜನಪ್ರಿಯ ಯುವ ಸಂಗೀತ ನಿರ್ದೇಶಕರಲ್ಲಿ ಮಣಿಕಾಂತ್ ಕದ್ರಿ ಒಬ್ಬರು. ಅವರ ಹೆಸರು ಬಹಳಷ್ಟು ಕನ್ನಡ ಸಿನಿಪ್ರೇಕ್ಷಕರಿಗೆ ಚಿರಪರಿಚಿತ. ಅಪರಿಚಿತವಾಗಿರುವ ಮಿಕ್ಕ ಕೆಲವೇ ಮಂದಿಗೆ 'ಸವಾರಿ' ಸಂಗೀತ ನಿರ್ದೇಶಕರು ಎಂದರೆ ಮುಂದೇನೂ ಹೇಳುವುದು ಬೇಡ. ಆ ಮಟ್ಟಿಗೆ ತಮ್ಮ ಸಂಗೀತದ ಛಾಪನ್ನು ಒತ್ತಿರುವ ಈ ಯುವ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಜಗದ್ವಿಖ್ಯಾತ 'ಸ್ಯಾಕ್ಸೋಫೋನ್' ವಾದಕರಾದ 'ಕದ್ರಿ ಗೋಪಾಲನಾಥ್' ಅವರ ಮಗ.

    ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹೀಗೆ ಸೌತ್ ಇಂಡಿಯಾ ಚಿತ್ರರಂಗದಲ್ಲಿ ಮಿಂಚುತ್ತಿರುವ ಇವರು ಹಿಂದಿ ಚಿತ್ರಗಳಿಗೂ ಸಂಗೀತ ನಿರ್ದೇಶಿಸಿದ್ದಾರೆ. ಇಂತಹ ಅಪರೂಪ ಪ್ರತಿಭೆ ಯುವ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಒನ್ ಇಂಡಿಯಾ ಕನ್ನಡದ ಶ್ರೀರಾಮ್ ಭಟ್ ಅವರೊಂದಿಗೆ ನಡೆಸಿದ ಸದರ್ಶನ ಇಲ್ಲಿದೆ, ಓದಿ...

    *ನಿಮ್ಮ ಹಾಗೂ ಸಂಗೀತದ ಹಿನ್ನೆಲೆ ಇರುವ ನಿಮ್ಮ ಕುಟುಂಬದ ಬಗ್ಗೆ ಹೇಳಿ...

    ನನ್ನೂರು ಪಾಣೆ ಮಂಗಳೂರು. ಓದಿದ್ದೆಲ್ಲಾ ಮಂಗಳೂರಿನಲ್ಲೇ. ಪದವಿ ಮುಗಿಸಿದ್ದೇನೆ. ಸಾಕಷ್ಟು ಜನರಿಗೆ ತಿಳಿದಿರುವಂತೆ ಕದ್ರಿ ಗೋಪಾಲನಾಥ್ ಅವರ ಮಗ ನಾನು. ನಮ್ಮದು ಸಂಗೀತ ಹಿನ್ನೆಲೆಯಿರುವ ಕುಟುಂಬ ಎಂಬುದಕ್ಕೆ ನಮ್ಮಪ್ಪನವರೇ ಸಾಕ್ಷಿ. ಆದರೆ ಅದಕ್ಕೂ ಮೊದಲೂ ನಮ್ಮ ಕುಟುಂಬಕ್ಕೆ ಸಂಗೀತದ ಹಿನ್ನಲೆಯಿದೆ. ಅದು ನನ್ನ ತಾತ 'ತನಿಯಪ್ಪ'ನವರು.

    ದೇವಸ್ಥಾನದಲ್ಲಿ ನಾದಸ್ವರ ನುಡಿಸುತ್ತಿದ್ದರು ನಮ್ಮ ತಾತ. ಯಾವುದೇ ಕೆಲಸವನ್ನು ಶೃದ್ಧೆಯಿಂದ ಮಾಡುತ್ತಿದ್ದ ನಮ್ಮ ತಾತ, ಅದನ್ನೇ ನಮ್ಮ ತಂದೆಯವರಿಗೂ ಹೇಳಿಕೊಟ್ಟಿದ್ದಾರೆ. ನಾನೂ ತಂದೆಯವರಂತೆ ಅದನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೀಗೆ ಶೃದ್ಧಾ ಭಕ್ತಿಯಿಂದ ಸಂಗೀತವನ್ನು ಸಂಗೀತವನ್ನು ಆರಾಧಿಸಿ, ಕಲಿತು, ಕಲಿಸುವ ಕುಟುಂಬದ ಹಿನ್ನೆಲೆ ನಮ್ಮದು.

    ತಂದೆಯವರಂತೂ ಈಗಲೂ ಬಹಳಷ್ಟು ಕಡೆ ಸ್ಯಾಕ್ಸೋಫೋನ್ ಕಚೇರಿ ನಡೆಸಿಕೊಡುತ್ತಿದ್ದಾರೆ. ಸಂಗೀತ ಸಾಧನೆ, ಆರಾಧನೆ ಹಾಗೂ ಸೇವೆಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಿಂದ ಬಂದ ನಾನು ಚಿತ್ರಗಳಿಗೆ ಸಂಗೀತ ನಿರ್ದೇಶನದ ವೃತ್ತಿ ಆರಿಸಿಕೊಂಡಿದ್ದೇನೆ.

    *ನಿಮ್ಮ ಸಂಗೀತದ ಪ್ರಯಾಣ ಆರಂಭವಾಗಿದ್ದು ಹೇಗೆ?

    ನಮ್ಮಪ್ಪನವರೇ ಸ್ವತಃ ಸಂಗೀತ ಬಲ್ಲವರಾಗಿದ್ದರೂ ನಾನು ಭಯ-ಭಕ್ತ್ತಿಯಿಂದ ಸಂಗೀತ ಕಲಿಯಲಿ ಎಂದು ಮನೆ ಪಕ್ಕದಲ್ಲಿ ಸಂಗೀತ ಪಾಠ ಮಾಡುತ್ತಿದ್ದ 'ಶ್ರೀನಾಥ್ ಮರಾಠೆ' ಎಂಬವರಲ್ಲಿ ನನಗೆ ಚಿಕ್ಕಂದಿನಲ್ಲೇ ಸಂಗೀತಾಭ್ಯಾಸ ಮಾಡಿಸಿದ್ದಾರೆ. ಅವರಲ್ಲಿ ನಾನು ಕಲಿತಿದ್ದು ಹಾಡುಗಾರಿಕೆ (ವೋಕಲ್). ನನ್ನ ತಂದೆಯವರಿಂದ ಸ್ಯಾಕ್ಸೋಫೊನ್ ವಾದನವನ್ನೂ ಕಲಿತೆನಾದರೂ ನನಗೆ ಅದಕ್ಕಿಂತ ಹೆಚ್ಚಾಗಿ ಕೀ ಬೋರ್ಡ್ ಆಕರ್ಷಣೆ ಹೆಚ್ಚಾಗಿತ್ತು. ಹೀಗಾಗಿ ನಾನು ಕೀ ಬೋರ್ಡ್ ನಲ್ಲಿ ನನ್ನ ಸಂಗೀತದ ಪ್ರಯಾಣ ಪ್ರಾರಂಭಿಸಿದೆ.

    *ಸಂಗೀತ ನಿರ್ದೇಶನಕ್ಕೆ ಸಂಬಂಧಿಸಿ ನಿಮ್ಮ ಮೊಟ್ಟಮೊದಲ ಪ್ರಾಜೆಕ್ಟ್?

    ನಾನು ತಂದೆಯವರೊಂದಿಗೆ ಸೇರಿ ಮಾಡಿದ 'ಡ್ರೀಮ್ ಜರ್ನಿ' ನನ್ನ ಮೊಟ್ಟ ಮೊದಲ ಪ್ರಾಜೆಕ್ಟ್. ಡ್ರೀಮ್ ಜರ್ನಿ ಎಂಬ ಆಲ್ಬಾಮ್, 4 ಭಾಗಗಳಲ್ಲಿ ನಿರ್ಮಾಣವಾಯ್ತು. ಸ್ವತಂತ್ರವಾಗಿ ನನಗೆ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟವರು ಆರ್ಕಾಟ್ ನವಾಬ್ ಆಸಿಫ್ ಅಲಿ ಅವರು. ಆಗ ನನ್ನ ವಯಸ್ಸು 21. ಅವರ ನಿರ್ಮಾಣದಲ್ಲಿ 'ತಾಂತ್ರಿಕ್ ಜರ್ನಲ್' ಎಂಬ ಮ್ಯಾಗಝಿನ್ ವಿಡಿಯೋ ಆಲ್ಬಾಂಗೆ ನಾನು ಸಂಗೀತ ನೀಡಿದ್ದು ನಾನು ಮಾಡಿದ ಮೊಟ್ಟ ಮೊದಲು ಪ್ರಾಜೆಕ್ಟ್. ಅದಕ್ಕೆ 8 ಅಂತಾರಾಷ್ಟ್ರೀಯ ಪುರಸ್ಕಾತ ಲಭಿಸಿದೆ. ಮಾಡಿದ ಮೊದಲನೆ ಕೆಲಸಕ್ಕೆ ಸಿಕ್ಕ ಪ್ರಶಸ್ತಿ ನನ್ನ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಯ್ತು.

    *ನಿಮ್ಮ ಸಿನಿಮಾ ಸಂಗೀತ ಶುರುವಾಗಿದ್ದು ಹೇಗೆ?

    'ಅನ್ನುಂ ಮಳೆಯಾಯಿರಂ' ಎಂಬ ಮಲಯಾಳಂ ಚಿತ್ರಕ್ಕೆ ನಾನು ಮೊಟ್ಟಮೊದಲು ಸಂಗೀತ ನೀಡಿದ್ದು. ಆ ಚಿತ್ರಕ್ಕೆ ಕೇರಳ 'ಸ್ಟೇಟ್ ಅವಾರ್ಡ್' ಲಭಿಸಿದೆ. ನಂತರ ಸ್ಮಾರ್ಟ್ ಸಿಟಿ ಎಂಬ ಇನ್ನೊಂದು ಮಲಯಾಳಂ ಚಿತ್ರಕ್ಕೂ ಸಂಗೀತ ನೀಡಿದ್ದೇನೆ.

    *ಕನ್ನಡದಲ್ಲಿ ನಮ್ಮ ಜರ್ನಿ ಬಗ್ಗೆ ಹೇಳಿ...

    ಕೆವಿಆರ್ ಕೃಷ್ಣ ನಿರ್ದೇಶನದ 'ಗಣೇಶ', ಕನ್ನಡದಲ್ಲಿ ನನ್ನ ಮೊಟ್ಟಮೊದಲ ಚಿತ್ರ. ನಂತರ 'ಮಳೆಬಿಲ್ಲು' ಚಿತ್ರಕ್ಕೆ ಸಂಗೀತ ನೀಡಿದೆ. ಮೂರನೆಯದಾಗಿ ನಾನು ಸಂಗೀತ ನೀಡಿದ ಕನ್ನಡ ಚಿತ್ರವೇ 'ಸವಾರಿ'. ಆದರೆ ಎಲ್ಲಕ್ಕಿಂತ 'ಸವಾರಿ'ಯೇ ಮೊದಲು ಬಿಡುಗಡೆಯಾಗಿ ನನ್ನ ಸಂಗೀತ ಹಾಗೂ ಹಾಡುಗಳು ಕನ್ನಡಿಗರ ಮನೆ,ಮನಗಳಲ್ಲಿ ಸ್ಥಾನ ಪಡೆಯಿತು. ನಂತರ ಪುನೀತ್ ರಾಜ್ ಕುಮಾರ್ ಚಿತ್ರ 'ಪೃಥ್ವಿ', ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ 'ಮದುವೆಮನೆ', 'ಮಿ ಗರಗಸ', 'ಇಜ್ಜೋಡು', ಸಹ ನನಗೆ ಕನ್ನಡದಲ್ಲಿ ಜನಪ್ರಿಯತೆ ಮುಂದುವರಿಕೆಗೆ ಸಹಾಯವಾಯ್ತು. ಅಲ್ಲಿಂದ ಮುಂದೆ ಕ್ರೇಜಿಲೋಕ ಸೇರಿದಂತೆ ಒಂದಾದ ಮೇಲೊಂದು ಕನ್ನಡ ಚಿತ್ರಗಳಿಗೆ ಸಂಗೀತ ನೀಡುವ ಅವಕಾಶ ನನ್ನದಾಗಿದೆ.

    *ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳ ವಿವರಗಳನ್ನು ನೀಡುವಿರಾ?

    ತೆಲುಗು ಚಿತ್ರಗಳ ಪ್ರಸಿದ್ಧ ನಿರ್ಮಾಪಕರಾದ 'ಶೇಖರ್ ಕಮ್ಲಾಲ್' ನಿರ್ಮಾಣದ 'ಅವಕೈ ಬಿರ್ಯಾನಿ' ಚಿತ್ರದ ಸಂಗೀತ ನಿರ್ದೇಶನದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ನಾನು, 'ವಿಲೇಜ್ ಟು ವಿನಾಯಕುಡು', 'ಗುಂಡಾಯ್ಜಿಮ್', 'ಅಮಾಯಕಡು' ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ಇನ್ನು ತಮಿಳಿನಲ್ಲಿ ಜಿ ಸುಂದರನ್ ನಿರ್ದೇಶನದ 'ಉದಯನ್' ಚಿತ್ರಕ್ಕೆ ಕೆಲಸ ಮಾಡಿದ್ದೇನೆ. ಇದೀಗ 'ತಸಿಇನೈ ತೀ ಚುಡಿನಂ' ಚಿತ್ರಕ್ಕೆ ಸಂಗೀತ ನೀಡುತ್ತಿದ್ದೇನೆ.

    ಹಿಂದಿಯಲ್ಲಿ ಗುಲ್ಜಾರ್ ಹಾಗೂ ರಸೂಲ್ ಪೂಕುಟ್ಟಿ ಸಂಗಮದ 'ಚೌರಾಹೇ' ಚರೆಹೇ (ದಿ ಕ್ರಾಸ್ ರೋಡ್) ಚಿತ್ರಕ್ಕೆ ಕೆಲಸ ಮಾಡಿದ್ದೇನೆ.

    *ನೀವು ಚೆನ್ನೈನಲ್ಲಿ ಇರುತ್ತೀರಿ. ಕನ್ನಡಿಗರ ಕೈಗೇ ಸಿಗುವುದಿಲ್ಲ ಎಂಬ ಆರೋಪವಿದೆಯಲ್ಲ!

    (ನಗು...) ಹೌದೇ, ಆ ಆರೋಪವಿದೆಯೇ? ಅದು ನನ್ನ ಕಿವಿಗೆ ಬಿದ್ದಿಲ್ಲ. ನಾನು ಯಾವಾಗಲೂ ಚೆನ್ನೈನಲ್ಲೇ ಇರುವುದಿಲ್ಲ. ಐದು ಭಾಷೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಎಲ್ಲಾ ಕಡೆ ಓಡಾಡಿಕೊಂಡಿರುವುದು ನಿಜವಾದರೂ ನಾನು ಕನ್ನಡಿಗರಿಗೂ ಲಭ್ಯವಿದ್ದೇನೆ. ಇಲ್ಲೇ ಬೆಂಗಳೂರಿನ ನನ್ನ ಸ್ಟುಡಿಯೋದಲ್ಲಿ ಕುಳಿತೇ ಬೇರೆ ಭಾಷೆಯ ಚಿತ್ರಗಳಿಗೂ ಕೆಲಸ ಮಾಡಿದ್ದೇನೆ. ಈಗ ಬೆಂಗಳೂರಿನಲ್ಲೇ ಕುಳಿತು ಕನ್ನಡ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದೇನೆ.

    ನನ್ನ ಕಮಿಟ್ ಮೆಂಟ್ ಗೆ ಬೆಲೆಕೊಟ್ಟು ನನಗೆ ಕಂಫರ್ಟ್ ಆಗುವಂತೆ ಕೆಲಸ ಮಾಡುವ ಪ್ರವೃತ್ತಿ ನನ್ನದು. ಎಲ್ಲಕ್ಕಿಂತ ಹೆಚ್ಚಾಗಿ ಕೊನೆಗೆ ಎಲ್ಲರೂ ಬಯಸುವುದು ಅತ್ಯುತ್ತಮ ಔಟ್ ಫುಟ್ ತಾನೇ? ಅದನ್ನು ಕೊಡುವುದರತ್ತಲೇ ನನ್ನ ಗಮನ. ಮಿಕ್ಕಂತೆ ಬೇರೆ ಬೇರೆ ಭಾಷೆಗಳಿಗೆ ಸಂಗೀತ ನೀಡುತ್ತಿರುವ ಕಾರಣಕ್ಕೆ ಸ್ವಲ್ಪ ಓಡಾಟ ಹೆಚ್ಚಾಗಿರುತ್ತದೆ ಅಷ್ಟೇ. ಆದರೆ ಅದು ಕೆಲಸಕ್ಕೆ ಪೂರಕವಾಗಿಯೇ ಹೊರತೂ ಮಾರಕವಾಗುವಂತಲ್ಲ.

    *ನೀವು ಸಿಕ್ಕಾಪಟ್ಟೆ 'ಆಪ್ಷನ್' ಕೊಡುತ್ತೀರಂತೆ ಹೌದೇ, ಅದು ಯಾಕೆ?

    ನನ್ನ ವೃತ್ತಿಗೆ ನನ್ನಿಂದ ನ್ಯಾಯ ಸಿಗಬೇಕು ಎಂಬುದು ನನ್ನ ಮೊದಲ ಆದ್ಯತೆ. ನಿರ್ಮಾಪಕರು, ನಿರ್ದೇಶಕರು ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಕೆಲಸ ಮೆಚ್ಚಿಗೆಯಾಗುವುದರ ಜೊತೆಗೆ ಪ್ರೇಕ್ಷಕರಿಗೂ ಇಷ್ಟವಾಗುವಂತಿರಬೇಕು. ವಿಭಿನ್ನವಾದ ಹಲವು ಟ್ಯೂನ್ ಕೊಟ್ಟು ಬೇರೆಯವರ ಅಭಿಪ್ರಾಯಕ್ಕೆ ಬೆಲೆಕೊಟ್ಟಾಗ ಬರುವ ಸಲಹೆ ಒಬ್ಬ ತಂತ್ರಜ್ಞರಿಗೆ ತೀರಾ ಮುಖ್ಯ. ಆಗಲೇ ನಾವು ಹಾಗೂ ನಮ್ಮನ್ನು ನಂಬಿ ಬಂದವರು ಇಬ್ಬರಿಗೂ ಕೆಲಸದಲ್ಲಿ ಸಲೀಸು. ಹೀಗಾಗಿ ಸಂಗೀತ ಹಾಗೂ ಹೆಚ್ಚು ಟ್ಯೂನ್ಸ್ ಗಳ 'ಆಪ್ಷನ್' ಕೊಡುತ್ತೇನೆ. ಈ ಬಗ್ಗೆ ಈಗಾಗಲೇ ನಾನು ಕೆಲಸ ಮಾಡಿರುವ ಚಿತ್ರತಂಡಗಳಿಂದಲೂ ನನಗೆ ಸಾಕಷ್ಟು ಪ್ರಶಂಸೆ ಸಿಕ್ಕಿದೆ. ಹೀಗಾಗಿ ಅದನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದೇನೆ.

    *ನಿಮ್ಮ ಡ್ರೀಮ್ ಏನು? ಅದಕ್ಕೆ ಏನಾದರೂ ಕೆಲಸ ನಡೆಯುತ್ತಿದೆಯಾ ಹೇಗೆ?

    ಸದ್ಯಕ್ಕೆ 'ಆಡಿಯೋ ಲೇಬಲ್' ತಯಾರಿಕೆ ಗುರಿ ಹೊಂದಿದ್ದೇನೆ. ಆ ಬಗ್ಗೆ ತಯಾರಿ ಕೂಡ ಆರಂಭಿಸಿದ್ದೇನೆ. ನನ್ನ ಹಾಗೂ ಹಾಗೂ ಅಪ್ಪಾಜಿ ಇಬ್ಬರಿಗೂ ಸೇರಿದ ಕನಸೊಂದಿದೆ. ಅದು ಮಂಗಳುರಿನಲ್ಲಿ 'ಆರ್ಟಿಸ್ಟ್ ವಿಲೇಜ್' ಮಾಡಬೇಕು ಎಂಬುದು. ನಮ್ಮ ಕನಸಿನ ಆ 'ಆರ್ಟಿಸ್ಟ್ ವಿಲೇಜಿ'ನಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ಎಲ್ಲಾ ಸೌಕರ್ಯಗಳೂ ಲಭ್ಯವಿರುವಂತೆ ನೋಡಿಕೊಳ್ಳುವುದರ ಜೊತೆಗೆ ಎಲ್ಲಾ ಕಲೆಗಳ ಕುರಿತಾಗಿಯೂ ಅಲ್ಲಿ ಎಲ್ಲವೂ ಸಿಗುವಂತಾಗಬೇಕು. ಎಲ್ಲಾ ಭಾಷೆಗಳ, ಚಿತ್ರಗಳ ಸಂಗೀತ ತಜ್ಞರೂ ಅಲ್ಲಿ ಬಂದು ಕೆಲಸ ಮಾಡುವಂತಿರಬೇಕು. ಆ ಕನಸನ್ನು ಈಗಿನಿಂದಲೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.

    English summary
    Music Director Manikanth Kadri, Son of world famous Saxophonist Kadri Gopalnath is the one of popular Kannada Music Director. He composed music for many Kannada movie including Musical Super Hit 'Sawari'. He also worked for Tamil, Telugu, Malayalam and even Bollywood also. Read for the more in this Interview...
 
    Tuesday, September 11, 2012, 11:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X