»   » ಸುದೀಪ್‌ ಕಲ್ಯಾಣ, ಕೈ ಹಿಡಿವಾಕೆ ಪ್ರಿಯಾ

ಸುದೀಪ್‌ ಕಲ್ಯಾಣ, ಕೈ ಹಿಡಿವಾಕೆ ಪ್ರಿಯಾ

Subscribe to Filmibeat Kannada

actor sudeep
ಕನ್ನಡ ಚಿತ್ರೋದ್ಯಮಕ್ಕೀಗ ಕಲ್ಯಾಣಯೋಗ. ಅಂದರೆ, ಚಿತ್ರೋದ್ಯಮದ ಪಥ ಲಾಭದಾಯಕವಾಗಿದೆ, ಸಿನಿಮಾಗಳು ಯಶಸ್ಸು ಕಾಣುತ್ತಿವೆ ಎಂದೇನಲ್ಲ . ಕಲ್ಯಾಣವೆಂಬುದು ನಮ್ಮ ನಾಯಕ ನಾಯಕಿಯರಿಗೆ ಸಂಬಂಧಿಸಿದ್ದು . ಕಂಕಣಭಾಗ್ಯದ ಸಾಲು ಶುರುವಾದದ್ದು ಸುಧಾ ಮದುವೆಯಿಂದ. ಆನಂತರ ಆ ಸಾಲಿನಲ್ಲಿ ಸುಮನ್‌ ನಗರ್‌ಕರ್‌, ಅವಿನಾಶ್‌, ಮಾಳವಿಕ ಸಂದು ಹೋದರು. ಈಗ ಹೊಸ ಎಂಟ್ರಿ ಸ್ಪರ್ಶದ ಸುದೀಪ್‌ ಸಂಜೀವ್‌.

ಶುಕ್ರವಾರ (ಜ.19) ಸುದೀಪ್‌ ನಿಶ್ಚಿತಾರ್ಥ ಶಾಸ್ತ್ರ ಕ್ಕೆ ತಮ್ಮನ್ನೊಪ್ಪಿಸಿಕೊಂಡರು. ಬಾಳಿಗೆ ಜೊತೆಯಾಗುತ್ತೇನೆಂದು ಸುದೀಪ್‌ಗೆ ಮಾತು ಕೊಟ್ಟಿರುವ ಹುಡುಗಿಯ ಹೆಸರು ಪ್ರಿಯಾ. ಆಕೆ ಸುದೀಪ್‌ನ ಅಕ್ಕನ ಗೆಳತಿ. ಬ್ಯಾಂಕೊಂದರಲ್ಲಿ ಉದ್ಯೋಗಿ. ಇವಿಷ್ಟೂ ಸುದೀಪ್‌ ಮದುವೆ ಸಂಬಂಧದ ಈ ದಿನದವರೆಗಿನ ಪ್ರಗತಿ.

ಕಳೆದ ತಿಂಗಳು ಬೆಂಗಳೂರಿನಲ್ಲಿ ಬಾಲಿವುಡ್‌ನ ಸೂಪರ್‌ಸ್ಟಾರ್‌ ಹೃತಿಕ್‌ನ ಮದುವೆ ಸುದ್ದಿ ಮಾಡಿತ್ತು . ಹೃತಿಕ್‌ಗೂ ಸುದೀಪ್‌ನದೇ ಪ್ರಾಯ. ಹೃತಿಕ್‌ ಕೂಡ ಸಿನಿಮಾ ರಂಗ ಪ್ರವೇಶಿಸಿದ್ದು ಇತ್ತೀಚೆಗಷ್ಟೇ. ಯಶಸ್ಸಿನ ತುತ್ತ ತುದಿಯಲ್ಲಿರುವ ಯುವ ನಾಯಕ, ಅದರಲ್ಲೂ ರಂಗ ಪ್ರವೇಶಿಸಿದ ಒಂದೆರಡೇ ವರ್ಷದಲ್ಲಿ ಮದುವೆಗೆ ಹ್ಞೂಂ ಅನ್ನುವುದು ಸಿನಿಮಾರಂಗದ ಪ್ರಕಾರ ಭಂಡತನ. ಅಂಥಾ ಧೈರ್ಯವನ್ನು ಹೃತಿಕ್‌ ಮಾಡಿದ್ದರು. ಅಂದಹಾಗೆ, ಸುದೀಪ್‌ ಹೃತಿಕ್‌ನನ್ನು ಅನುಸರಿಸಹೊರಟಿದ್ದಾರೆಯೆ?

ಆದರೆ, ಹೃತಿಕ್‌ನಷ್ಟು ಅದೃಷ್ಟ ಸುದೀಪ್‌ನದಲ್ಲ . ನಾಯಕನಾಗಿ ತೆರೆ ಕಂಡಿರುವುದು ಒಂದೇ ಸಿನಿಮಾ. ಪ್ರೇಕ್ಷಕ ಮೆಚ್ಚಿದರೂ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಕಾಸು ಗಿಟ್ಟಿಸಲಿಲ್ಲ . ಹೊಸ ಅವಕಾಶಗಳೂ ಕೈ ಬೀಸಿ ಕರೆದಿಲ್ಲ . ತಮಿಳಿಗೆ ವಲಸೆ ಹೋಗುತ್ತಾರೆ ಅನ್ನುವ ಪುಕಾರು ಹುಟ್ಟಿಕೊಂಡಿದೆಯಾದರೂ ಅಲ್ಲಿ ಅವಕಾಶ ಸಿಕ್ಕ ಯಾವ ಪಕ್ಕಾ ಸುದ್ದಿಗಳೂ ಇಲ್ಲ . ಕನ್ನಡದಲ್ಲಿ ಸದ್ಯಕ್ಕೆ ಕೈಯ್ಯಲ್ಲಿರುವ ಏಕೈಕ ಚಿತ್ರ ಹುಚ್ಚ ಅನೇಕ ಅಡ್ಡಿ ಆತಂಕಗಳ ನಡುವೆ ಕುಂಟುತ್ತಿದೆ. ಸ್ಪರ್ಶ ಸಿನಿಮಾದ ನಾಯಕಿ ರೇಖಾಗೆ ಸಂಭಾವನೆ ಕೊಡದೆ ಕಾಡಿಸುತ್ತಿದ್ದಾರೆ, ಹೊಸ ಅವಕಾಶಗಳಿಗೆ ಕಲ್ಲು ಹಾಕುತ್ತಿದ್ದಾರೆ ಅನ್ನುವ ಹೊಸ ಆಪಾದನೆಯೂ ಅವರ ತಲೆಗಂಟಿದೆ. ಈ ಎಲ್ಲದರಿಂದ ಬೇಸತ್ತು ಸುದೀಪ್‌ ಮದುವೆಗೆ ಮೊರೆ ಹೋದರೆ? ಉತ್ತರ ಸಿಕ್ಕುತ್ತಿಲ್ಲ . ಅದೇನಾದರೂ ಇರಲಿ, ಹೊಸ ಬದುಕಿಗೆ ಅಡಿಯಿಡುತ್ತಿರುವ ಸುದೀಪ್‌ಗೆ ದಾಂಪತ್ಯದಲ್ಲಿ ತಪ್ಪದೆ ಯಶಸ್ಸು ಸಿಗಲಿ. ಸುದೀಪ್‌ಗೆ ಶುಭಾಶಯ.

English summary
kannada actor sudeep has been engaged with priyaa
Please Wait while comments are loading...

Kannada Photos

Go to : More Photos