ಸುಹಾಸಿನಿ ಎದೆಯಾಳದ ನೂರೊಂದು ನೆನಪುಗಳು

Written by: *ನಿಸ್ಮಿತಾ
 

ನಿಮ್ಮಲ್ಲಿ ಕೆಲವೊಂದು ವಿಷಯ ಚರ್ಚಿಸುವುದು ಇದೆ ಎಂದು ಸುವರ್ಣ ವಾಹಿನಿ ಕ್ಯಾಮೆರಾ ಮುಂದೆ ಕುಳಿತರು ನಟಿ ಸುಹಾಸಿನಿ. ಬೆಂಗಳೂರಿಗೆ ಬರುತ್ತಿದ್ದೇನೆ ಎಂದಾಗ ವಿಷ್ಣು ಅವರಿಗೆ ಹೇಳಿದಾಗ, ಕಾಲಿನ ಸಣ್ಣ ಶಸ್ತ್ರ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದೇನೆ. ಮೂರು ವಾರ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಡಾಕ್ಟರ್ ಹೇಳಿದ್ದಾರೆ. ನೀನು ಏನು ಹೇಳಬೇಕೆಂದು ಇದ್ದಿಯೋ ಅದನ್ನು ಪ್ರಿಂಟ್ ಔಟ್ ತೆಗೆದು ಬೆಂಗಳೂರಿಗೆ ಕೊರಿಯರ್ ಮಾಡು ಎಂದಿದ್ದರು. ಆದರೂ ನಾನು ಅವರನ್ನು ಭೇಟಿ ಮಾಡಿದೆ. ನಾನು, ವಿಷ್ಣು ಮತ್ತು ಭಾರತಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿದೆವು. ವೃತ್ತಿ ಜೀವನ, ವೈಯಕ್ತಿಕ ಜೀವನದ ಬಗ್ಗೆ ಅವರು ಹೆಚ್ಚು ಮಾತನಾಡದೆ ಸಾವಿನ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.

'ಬಂಧನ' ಚಿತ್ರದಲ್ಲಿ ನನಗೆ ಆಫರ್ ಬಂದಾಗ 'ನಾಗರಹಾವು' ರಾಮಾಚಾರಿ ವಿಷ್ಣು ಸರ್ ಅದರಲ್ಲಿ ಹೀರೋ ಎಂದು ತಿಳಿದು ತುಂಬಾ ಸಂತೋಷವಾಯಿತು. ಏಕೆಂದರೆ 'ನಾಗರಹಾವು' ಚಿತ್ರ ನಾನು ಮೂರು ಬಾರಿ ನೋಡಿದ್ದೆ. ಸೆಟ್ ನಲ್ಲಿ ಅವರು ಎಲ್ಲರ ಜೊತೆ ಮಿಂಗಲ್ ಆಗುತ್ತಿದ್ದದ್ದು ಒಂದೇ ಟೇಕ್ ತೆಗೆದು ಕೊಳ್ಳುತ್ತಿದ್ದದ್ದು ನನ್ನ ಸಿನಿಮಾ ಜೀವನಕ್ಕೊಂದು ಪಾಠ. 'ಬಂಧನ' ಶೂಟಿಂಗ್ ಸಮಯದಲ್ಲಿ ನಾನು ಮೊದಲು ಬಾರಿ ವಿಷ್ಣು ಅವರನ್ನು ನೋಡಿದಾಗ ಅವರ ಮುಖ ನನ್ನ ಚಿಕ್ಕಪ್ಪ (ಕಮಲ್ ಹಾಸನ್) ಅವರನ್ನು ಹೋಲುತ್ತಿತ್ತು. ಜೂನಿಯರ್ ಆರ್ಟಿಸ್ಟ್ ಗಳಿಗೆ ಅವರು ಬೆಂಬಲ ನೀಡುತ್ತಿದ್ದದ್ದು, ತಪ್ಪು ಸರಿ ಪಡಿಸುತ್ತಿದ್ದದ್ದು, ಪಾತ್ರಗಳ ಬಗ್ಗೆ ವಿವರಿಸುತ್ತಿದ್ದದ್ದು ಎಲ್ಲಾ ಅಚ್ಚಳಿಯದ ನೆನಪುಗಳು.

ನನ್ನ ಪತಿಗೆ (ಮಣಿರತ್ನಂ) ಕನ್ನಡದಲ್ಲಿ ಡಾ.ರಾಜ್, ವಿಷ್ಣು ಮತ್ತು ಅಂಬರೀಷ್ ಮೂವರು ಮಾತ್ರ ಪರಿಚಯ. ಒಂದು ಬಾರಿ ಮಣಿರತ್ನಂ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಗ ಚೆನ್ನೈಗೆ ಬಂದು ವಿಷ್ಣು ಸಾಂತ್ವನ ನೀಡಿದ್ದರು. ನಿನ್ನ ಪತಿಯನ್ನು ನೋಡಿಕೊಳ್ಳಲು ಡಾಕ್ಟರ್ ಇದ್ದಾರೆ ನೀನು ನಿನ್ನ ಆರೋಗ್ಯದ ಬಗ್ಗೆ ಗಮನ ಹರಿಸು ಎಂದಿದ್ದರು.

ವಿಷ್ಣು ಅವರ ಒತ್ತಾಯಕ್ಕೆ 'ಸ್ಕೂಲ್ ಮಾಸ್ಟರ್' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಆ ಚಿತ್ರದಲ್ಲಿ ವಿಷ್ಣು ಅಭಿನಯದ ಬಗ್ಗೆ ನಾನೇನೂ ಹೇಳಬೇಕಾಗಿಲ್ಲ. ಆ ಚಿತ್ರದ ದೃಶ್ಯವೊಂದರ ಶೂಟಿಂಗ್ ನಡೆಯುತ್ತಿತ್ತು. ಅವಿನಾಶ್ ಅವರಿಗೆ ವಿಷ್ಣು ಹೇಳುವ ದೃಶ್ಯ, ''ದಯವಿಟ್ಟು ಬಾಡಿ ಅನ್ನಬೇಡಿ, ಆಕೆ ನನ್ನ ಮಗಳು, ಮನಸ್ಸಿಗೆ ಬಹಳ ನೋವಾಗುತ್ತೆ'' ಎಂದು ಹೇಳುವ ದೃಶ್ಯದಲ್ಲಿ ವಿಷ್ಣು ಅಭಿನಯ ಸೆಟ್ ನಲ್ಲಿದ್ದ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಎಲ್ಲರ ಕಣ್ಣಲ್ಲೂ ನೀರು. ನಿರ್ದೇಶಕರಿಂದ ಹಿಡಿದು ಎಲ್ಲರೂ ಅಭಿನಯ ಭಾರ್ಗವನ ನಟನೆಗೆ ಬೆಚ್ಚಿ ಬಿದ್ದ್ದರು. ಆ ದೃಶ್ಯ ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ ಎಂದು ಸುಹಾಸಿನಿ ಹೇಳುವಾಗ ಅವರ ಕಣ್ಣಂಚಿನಲ್ಲೂ ನೀರು.

ಒಬ್ಬ ಆರ್ಟಿಸ್ಟ್ ಗೆ ಮುಖ್ಯವಾಗಿ ಬೇಕಾಗಿರುವುದು ಏಕಾಗ್ರತೆ ಮತ್ತು ಪರಿಶ್ರಮ. ಈ ವಿಷಯದಲ್ಲಿ ಹೆಚ್ಚಾಗಿ ವಿಷ್ಣು ಡಾ. ರಾಜ್ ಅವರನ್ನು ಉದಾಹರಿಸುತ್ತಿದ್ದರು. ನನಗೆ ಅನಿಸಿದಂತೆ ಡಾ.ರಾಜ್ ಅವರ ಸಾವು ಅವರನ್ನು ತುಂಬಾ ಕಾಡುತ್ತಿತ್ತು. ರಾಜ್ ನಿಧನದ ನಂತರ ಕನ್ನಡ ಚಿತ್ರರಗದಲ್ಲಿ ನಾನೇ ಹಿರಿಯ ಅದನ್ನು ಹೇಗೆ ನಿಭಾಯಿಸ ಬಲ್ಲೆ ಎನ್ನುವ ಒಂದು ಮಟ್ಟಿನ ಭಯ ಅವರನ್ನು ಆವರಿಸಿದಂತಿತ್ತು. ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರನ್ನು ಸೇರಿಸಿದರೆ ಅದು ವಿಷ್ಣು ಸರ್ ಗೆ ಸಮ ಎಂದು ಸಿನಿಮಾ ವೃತಿ ಜೀವನದಲ್ಲಿನ ನನ್ನ ಅಭಿಪ್ರಾಯ.

ಅದೇಕೋ ಕೆಲವು ವರ್ಷಗಳಿಂದ ವಿಷ್ಣು ಯಾರ ಬಳಿಯೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಅಧ್ಯಾತ್ಮಿಕವಾಗಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು. ಹೋಮ ಹವನಗಳನ್ನು ಹೆಚ್ಚಾಗಿ ನಡೆಸುತ್ತಿದ್ದರು. ಅವರ ಪಾಲಿಗೆ ಪತ್ನಿ ಭಾರತಿ ಸರ್ವಸ್ವವಾಗಿದ್ದರು. ಮೊಮ್ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಒಟ್ಟಿಗೆ ನನ್ನ ಪಾಲಿಗೆ ವಿಷ್ಣು ಸಾವನ್ನುಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಸುಹಾಸಿನಿ ಸುವರ್ಣ ವಾಹಿನಿಯಲ್ಲಿ ಹೇಳಿಕೊಂಡಿದ್ದಾರೆ.

Read more about: vishnuvardhan, ಬಂಧನ, ನಾಗರಹಾವು, ಸುವರ್ಣ ವಾಹಿನಿ, suvarna channel, dr vishnuvardhan, suhasini mani ratnam, ಸುಹಾಸಿನಿ ಮಣಿರತ್ನಂ, ಸ್ಕೂಲ್ ಮಾಸ್ಟರ್, naagarahaavu, bandhana, ಡಾ ವಿಷ್ಣುವರ್ಧನ್, mani ratnam

Please Wait while comments are loading...
Your Fashion Voice

Kannada Photos

Go to : More Photos