ಸ್ಫುರದ್ರೂಪಿ ನಟ ನವೀನ್ ಮಯೂರ್ ಹಠಾತ್ ನಿಧನ

Posted by:

ಕನ್ನಡ ನಟ ನವೀನ್ ಮಯೂರ್ ಹಠಾತ್ ಸಾವು
ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಟ, ಚಾಕೋಲೇಟ್ ಹೀರೋ 'ಸ್ಪರ್ಶ' ಖ್ಯಾತಿಯ ನವೀನ್ ಮಯೂರ್ ಭಾನುವಾರ(ಅ.3) ಸಂಜೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಹಠಾತ್ ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ನವೀನ್ ಅವರು ಜಾಂಡೀಸ್‌ನಿಂದ (ಕಾಮಾಲೆ) ಬಳಲುತ್ತಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ.

ಇತ್ತೀಚೆಗಷ್ಟೆ ಅವರು ಪುಣ್ಯಕ್ಷೇತ್ರಗಳಾದ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಶನಿವಾರವಷ್ಟೆ ಅವರು ಸುಬ್ರಹ್ಮಣ್ಯ, ಧರ್ಮಸ್ಥಳದಿಂದ ಬೆಂಗಳೂರಿಗೆ ಹಿಂತಿರುಗಿದ್ದರು. ಅವರ ಆರೋಗ್ಯ ಸಾಕಷ್ಟು ಕ್ಷೀಣಿಸಿತ್ತು ಎನ್ನುತ್ತಾರೆ ಅವರ ತಂದೆ ರಘುರಾಂ. ವೈದ್ಯರು ಚಿಕಿತ್ಸೆಯನ್ನೂ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಸುಮಾರು 5.30ಕ್ಕೆ ನವೀನ್ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ನವೀನ್ ಮಯೂರ್ ಅವರಿಗೆ ವಯಸ್ಸು ಕೇವಲ ಇನ್ನೂ 32. ಸುನಿಕುಮಾರ್ ದೇಸಾಯಿ ಅವರ 'ಸ್ಪರ್ಶ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ನವೀನ್ ಪದಾರ್ಪಣೆ ಮಾಡಿದ್ದರು. ನವೀನ್ ಅವರ ಸಹೋದರ ಶ್ರೇಯಸ್ ಅವರು ಯುಎಸ್‌ಎಗೆ ಆಹ್ವಾನಿಸಿದ್ದರು. ಅಮೆರಿಕಾಗೆ ಟಿಕೆಟನ್ನು ಬುಕ್ ಮಾಡಿದ್ದರು ಆದರೆ ವಿಧಿ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ.

ಲವ್ ಲವಿಕೆ, ಉಪ್ಪಿ ದಾದಾ ಎಂಬಿಬಿಎಸ್, ಪೂರ್ವಾಪರ, ನಿನಗೋಸ್ಕರ, ಪ್ರೀತಿ ಮಾಡೋ ಹುಡುಗರಿಗೆಲ್ಲಾ, ನನ್ನ ಹೆಂಡ್ತಿ ಕೊಲೆ, ಅವನಂದ್ರೆ ಅವನೆ, ನೀಲಾ, ಹಲೋ, ರಣಚಂಡಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನವೀನ್ ಮಯೂರ್ ಅಭಿನಯಿಸಿದ್ದಾರೆ. ನವೀನ್ ಅವರ ದಿಢೀರ್ ಸಾವು ಕನ್ನಡ ಚಿತ್ರರಂಗಕ್ಕೆ ಅತೀವ ಆಘಾತ ತಂದಿದೆ.

Read more about: ನವೀನ್ ಮಯೂರ್, ನಿಧನ ವಾರ್ತೆ, ಜಾಂಡೀಸ್, ಸ್ಪರ್ಶ, ಲವ್ ಲವಿಕೆ, ಉಪ್ಪಿ ದಾದಾ ಎಂಬಿಬಿಎಸ್, ಪೂರ್ವಾಪರ, naveen mayur, obituary, jaundice, sparsha, love lavike, uppi dada mbbs, poorvapara

Kannada Photos

Go to : More Photos