twitter
    For Quick Alerts
    ALLOW NOTIFICATIONS  
    For Daily Alerts

    ಒಂದು ಚಿತ್ರಕ್ಕೆ ನಲವತ್ತು ಜನ ನಿರ್ಮಾಪಕರು..?!

    By * ಚಿನ್ಮಯರಾವ್, ಹೊನಗೋಡು
    |

    ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಎನ್ನುವ ಮಾತುಗಳು ಅತ್ತಿಂದಿತ್ತ ಹರಿದಾಡುತ್ತಿದ್ದರೂ ಬಿಡುಗಡೆಯಾಗುವ ಹೊಸ ಚಿತ್ರಗಳಿಗೇನು ಬರವಿಲ್ಲ. ಬರುತ್ತಿರುವ ಚಿತ್ರಗಳಿಗೆ ಥಿಯೇಟರ್ ಬರ ಅಷ್ಟೆ. ಒಂದೆರಡು ವಾರ ಓಡಿ ಸ್ಯಾಟಿಲೈಟ್ ರೈಟ್ಸ್‌ಗಳಿಂದ ಒಂದಷ್ಟು ಹಣ ಬಂದರೂ ಸಾಕು...ಸಣ್ಣ ಪುಟ್ಟ ಚಿತ್ರಗಳ ನಿರ್ಮಾಪಕರು ಸೇಫ್.

    ಪರಭಾಷಾ ಚಿತ್ರಗಳಿಗೆ ಹೋಲಿಸಿದರೆ ಕನ್ನಡದ್ದು ಸೀಮಿತ ಮಾರ್ಕೆಟ್ ಎನ್ನಬಹುದು. ಇಂತಹ ಪರಿಸ್ಥಿತಿಯಲ್ಲಿ ಮತಿಯಿಟ್ಟು ಇತಿಮಿತಿಯಿಂದ ಖರ್ಚು ಮಾಡಿದವನೇ ಇಲ್ಲಿ ಜಾಣ. ಇತಿಮಿತಿಯಿಂದ ಖರ್ಚು ಮಾಡುವುದೆಂದರೆ ಹೇಗೆ? ಗುಣಮಟ್ಟ ಕಳಪೆಯಾದರೆ?...ಅಗುವುದಿಲ್ಲ...ಅದಕ್ಕೊಂದು ಉಪಾಯ ಹುಡುಕಿದ್ದಾರೆ ಈ ಯುವ ನಿರ್ದೇಶಕ ಉಮೇಶ್. ಕನ್ನಡದ ಮಟ್ಟಿಗೆ ಇವರದ್ದು ಹೊಸ ಪ್ರಯೋಗ. ಯಾರೀತ ಉಮೇಶ್? ಯಾವ ಪ್ರಯೋಗ ಎನ್ನುವಿರಾ? ಬನ್ನಿ ಈ ಬಗ್ಗೆ ಒಂದಷ್ಟು ಮಾಹಿತಿ ಪಡೆಯೋಣ.

    ಉಮೇಶ್ ಕಿರುಪರಿಚಯ: ಅನಂತನಾಗ್-ಲಕ್ಷ್ಮಿ ಜೋಡಿಯ ಸೆಂಟಿಮೆಂಟಲ್ ಚಿತ್ರಗಳನ್ನು ನೋಡಿ ಭಾವುಕನಾಗುತ್ತಿದ್ದ ಉಮೇಶ್ ತಾನೂ ಒಬ್ಬ ನಟನಾಗಬೇಕೆಂದು ಹಟ ಹಿಡಿದಿದ್ದ. ಕಾಲೇಜ್ ಕ್ಯಾಂಪಸ್‌ನಲ್ಲಿ ಕಂಡ ಕನಸು ಟೈಮ್ ಪಾಸ್ ಆಯಿತೆ ವಿನಃ ಟೈಮ್ ಮುಂದೆ ಪಾಸ್ ಆದರೂ ಕಂಡ ಕನಸುಗಳು ಪಾಸ್ ಆಗದೆ ಫ಼ೇಲ್ ಆದವು.
    ಮೈಕ್ರೋ ಬಯಾಲಜಿ ಓದಿ ಕಂಪೆನಿಯೊಂದರಲ್ಲಿ ಏಳು ವರ್ಷ ಕೆಲಸ ಮಾಡಿದರು. ಆದರೂ ಅಲ್ಲೊಂದು ಇಲ್ಲೊಂದು ಚಿಕ್ಕಪುಟ್ಟ ಪಾತ್ರ ಮಾಡುತ್ತಾ ಆಸೆ ಪೂರೈಸಿಕೊಂಡಿದ್ದ ಉಮೇಶ್‌ಗೆ ಕ್ರಮೇಣ ನಿರ್ದೇಶಕನಾಗಬೇಕೆಂಬ ಹೊಸ ಆಸೆ ಚಿಗುರೊಡೆಯಿತು!

    ಅದೇ ಹೊತ್ತಿಗೆ ಸರಿಯಾಗಿ ಬೇರೊಂದು ಕಂಪೆನಿಗೆ ಸೇರೋಣವೆಂದು ಹಳೆ ಆಫೀಸ್ ಗೆ ಗುಡ್ ಬೈ ಹೇಳಿ ಬಂದ ಉಮೇಶ ಕೆಲಸಕ್ಕೆ ಅರ್ಜಿ ಹಾಕುವುದರ ಬದಲು ನಿರ್ದೇಶಕನಾಗಲು ಮುತುವರ್ಜಿ ವಹಿಸಿದರು. ಆನಿಮೇಶನ್,ಎಡಿಟಿಂಗ್ ಕೋರ್ಸ್‌ಗಳನ್ನು ಮಾಡಿಕೊಂಡರು.

    ಜೊಸೆಮನ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಚಲನ ಚಿತ್ರ ನಿರ್ದೇಶನವನ್ನು ಕಲಿತರು. ಜೊಸೆಮನ್ ನಿರ್ದೇಶನದ "ದಾದಾಗಿರಿಯ ದಿನಗಳು" ಚಿತ್ರದಲ್ಲಿ ಅವರ ಜೊತೆಯಿದ್ದು ಮೇಕಿಂಗ್‌ನ ಎಲ್ಲಾ ಮಜಲುಗಳನ್ನು ಗಮನಿಸಿದರು. 'ಪಯಣ' ಮುಂತಾದ ಚಿತ್ರಗಳಲ್ಲಿ ಸಹಾಯಕರಾಗಿ ಅನುಭವ ಪಡೆಯುತ್ತಾ ಪಯಣ ಮುಂದುವರಿಸಿದರು.

    ನಿರ್ದೇಶಕನಾಗಬೇಕೆಂದು ಗಾಂಧಿನಗರದಲ್ಲಿ ಅಡ್ಡಾಡ್ಡುತ್ತಾ ಕಥೆ ಹೇಳುವ ಕಾರ್ಯಕ್ರಮಕ್ಕೆ ಚಾಲನೆಕೊಟ್ಟರು! ಒಳ್ಳೆಯ ಚಿತ್ರಮಾಡುವ ತಮ್ಮ ಉದ್ದೇಶವನ್ನು ಕವನದಲ್ಲಿ ಬರೆದು ಮುದ್ರಿಸಿ ಅದರ ಸಾವಿರಾರು ಪ್ರತಿಗಳನ್ನು ಗಾಂಧಿನಗರದ ತುಂಬಾ ಹಂಚಿದರು. ನಿರ್ಮಾಪಕರಿಂದ ಬರೀ ಭರವಸೆ...ಈಡೇರಲಿಲ್ಲ ಇವರ ಆಸೆ. ಆಗ..

    ಹೊಸ ಪ್ರಯೋಗ-ಉಮೆಶ್‌ಗೆ ಕೂಡಿ ಬಂತು 'ಯೋಗ'
    ಅದೊಂದು ದಿನ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುತ್ತಿದ್ದ ಉಮೇಶ್ ಒಂದೆಡೆ ನಿಲ್ಲಿಸಿದರು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ 'ದೊಂಗಲ ಮುತ್ತಾ' ಎಂಬ ತೆಲುಗು ಚಿತ್ರವೊಂದನ್ನು ಕೆನಾನ್-5ಡಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದ ವಿಚಾರ ಅಲ್ಲಿ ಚರ್ಚೆಯಾಗುತ್ತಿತ್ತು.

    ಹೊಸ ಪ್ರಯೋಗ ಸ್ಪೂರ್ತಿ: ಕೂಡಲೆ ಅಲರ್ಟ್ ಆದ ಉಮೇಶ್ ಅಂತರ್ಜಾಲದಲ್ಲಿ ಈ ಬಗ್ಗೆ ಜಾಲಾಡಿದರು. ಇದೇ ಕ್ಯಾಮೆರಾದಲ್ಲಿ ಕೆಲವು ಹಾಲಿವುಡ್ ಚಿತ್ರಗಳನ್ನು ಚಿತ್ರೀಕರಿಸಿ ಯಶಸ್ವಿಯಾಗಿರುವುದು ಗೊತ್ತಾಯಿತು. ಬಿ.ಎಮ್.ಡಬ್ಲ್ಯು ಕಾರ್‌ನ ಜಾಹಿರಾತನ್ನು ಇದೇ ಕ್ಯಾಮೆರಾ ಬಳಸಿ ಶ್ಯೂಟ್ ಮಾಡಿದ್ದಾರೆ ಹಾಗು ಡ್ಯಾನಿ ಬೋಯೆಲ್ ನಿರ್ದೇಶನದ 'ಸ್ಲಮ್ ಡಾಗ್ ಮಿಲೇನಿಯರ್' ಚಿತ್ರತಂಡದ ಎರಡನೇ ಚಿತ್ರ '127 ಹವರ್ಸ್'ನ ಶೇಕಡಾ 80 ಭಾಗವನ್ನು ಇದರಲ್ಲೇ ಚಿತ್ರೀಕರಿಸಿದ್ದಾರೆಂದು ತಿಳಿದುಬಂತು. ಒಂದು ವಾರದೊಳಗೆ ಅದರ ಬಗ್ಗೆ ಸಂಪೂರ್ಣ ಸಂಶೋಧನೆ ಮಾಡಿ ಕಿರು ಪ್ರಯೋಗ ಮಾಡಿ ಚಿತ್ರದ ಗುಣಮಟ್ಟವನ್ನು ಉಮೇಶ್ ಪರೀಕ್ಷಿಸಿದರು.

    ತಾನೂ ಇದರಲ್ಲೇ ಚಿತ್ರ ಮಾಡುತ್ತೇನೆಂದು ನಾಲ್ಕಾರು ಸ್ನೇಹಿತರಿಗೆ ಹಂಚಿಕೊಂಡರು. ಅವರು ಹತ್ತಾರು ಸ್ನೇಹಿತರಿಗೆ ಹಂಚಿಕೊಂಡ ಪರಿಣಾಮ ನಲವತ್ತು ಜನರ ಒಂದು ತಂಡವಾಯಿತು.

    ಎರಡು ವರ್ಷಗಳ ಹಿಂದೆಯೇ ಉಮೇಶ್ ಮಾಡಿಟ್ಟಿದ್ದ ಚಿತ್ರಕಥೆಗೆ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಚಿತ್ರೀಕರಿಸಲು ನವೀಕರಣಗೊಳಿಸಲಾಯಿತು. ಅದರ ಪರಿಣಾಮವಾಗಿ ಸಸ್ಪೆನ್ಸ್ ಕಮ್ ಹಾರರ್ ಚಿತ್ರಕ್ಕೆ ಕಳೆದ ನಾಲ್ಕು ತಿಂಗಳಿಂದ ಕಷ್ಟಪಟ್ಟು ಅದ್ಭುತವಾದ ಸ್ಕ್ರಿಪ್ಟ್ ಒಂದನ್ನು ಫ಼ೈನಲ್ ಮಾಡಿದರು.

    ಒಂದೇ ಹಂತದಲ್ಲಿ ಕೇವಲ 9 ದಿನಗಳಲ್ಲಿ ಶ್ಯೂಟಿಂಗ್ ಮುಗಿಸುವ ಈ ಚಿತ್ರಕ್ಕೆ ಮಲೆನಾಡ ಕಾಡ ನಡುವೆ ಬಂಗಲೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀರೋ-ಹೀರೊಯಿನ್ ಸಮೇತ ಎಲ್ಲಾ 12 ಪಾತ್ರಧಾರಿಗಳು ಹಾಗು ತಂತ್ರಜ್ಞರು ಈ ಹೊಸತಂಡದ ಉತ್ಸಾಹವನ್ನು ನೋಡಿ ಉಚಿತವಾಗಿ ಕೆಲಸ ಮಾಡಲು ಒಪ್ಪಿದ್ದಾರೆ! ಚಿತ್ರ ಬಿಡುಗಡೆಯಾದ ನಂತರ ಲಾಭ ಅಥವಾ ನಷ್ಟದಲ್ಲಿ ಎಲ್ಲರದ್ದೂ ಸಮಪಾಲು.

    ಇಂದು ಎರಡು ಜನ ನಿರ್ಮಾಪಕರು ಸೇರುವುದೇ ಕಷ್ಟ. ಅಂತದರಲ್ಲಿ 40 ಜನ...ಹನಿಹನಿಗೂಡಿದರೆ ಹಳ್ಳ ಎಂಬಂತೆ ಸಣ್ಣ ಸಣ್ಣ ಮೊತ್ತ ಸೇರಿಸಿ ಉದಾತ್ತವಾದ ಕಲ್ಪನೆಯೊಂದಕ್ಕೆ ಜೀವ ಕೊಡುತ್ತಿದ್ದಾರೆ ಎಂದರೆ ಇದೇ ಒಂದು ಸಾಧನೆ ಅಲ್ಲವೆ? ಇನ್ನೂ ಹೆಸರಿಡದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದರೆ ಆಶ್ಚರ್ಯವಿಲ್ಲ.

    English summary
    Kannada Director Umesh making a new venture in Kannada Film Industry by bringing 40 producers together. Young director Umesh is shooting his entire debut movie in Canon 5D camera.
    Monday, August 8, 2011, 12:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X