ಶೇಕಡಾವಾರು ಪದ್ಧತಿಯಲ್ಲಿ ಪೊಲೀಸ್ ಕ್ವಾಟ್ರಸ್

 

ರಾಜ್ಯದಲ್ಲಿ ಜನವರಿ 1, 2010ರಿಂದ ಬಿಡುಗಡೆಯಾಗಲಿರುವ ಎಲ್ಲಾ ಭಾಷೆಯ ಚಿತ್ರಗಳಿಗೂ ಶೇಕಡಾವಾರು ಪದ್ಧತಿ ಅನ್ವಯವಾಗಲಿದೆ. ಕನ್ನಡ ಚಿತ್ರೋದ್ಯಮದ ಹಿರಿಯ ವಿತರಕ ಹಾಗೂ ವಾಣಿಜ್ಯೋದ್ಯಮಿ ತಲ್ಲಂ ನಂಜುಂಡಶೆಟ್ಟ ಈ ಹೊಸ ಪದ್ಧತಿಗೆ ಮುದ್ರೆ ಒತ್ತುವ ಮೂಲಕ ನಾಂದಿ ಹಾಡುತ್ತಿದ್ದಾರೆ. ಈ ಮೂಲಕ ಶೇಕಡಾವಾರು ಪದ್ಧತಿಗೆ ನಾಂದಿ ಹಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ತಲ್ಲಂ ನಂಜುಂಡ ಶೆಟ್ಟಿ ಪಾತ್ರರಾಗಲಿದ್ದಾರೆ.

ಎ ಎಂ ಆರ್ ರಮೇಶ್ ನಿರ್ಮಿಸಿ ನಿರ್ದೇಶಿಸಿರುವ 'ಪೊಲೀಸ್ ಕ್ವಾಟ್ರಸ್' ಚಿತ್ರದೊಂದಿಗೆ ತಲ್ಲಂ ನಂಜುಂಡಶೆಟ್ಟಿ ಈಗಾಗಲೇ ಶೇಕಡಾವಾರು ಹಂಚಿಕೆ ವಿಚಾರವಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಒಪ್ಪಂದದ ಪ್ರಕಾರ, ಮೊದಲ ವಾರ ನಿರ್ಮಾಪಕನಿಗೆ ಶೇ.60 ಹಾಗೂ ವಿತರಕನಿಗೆ ಶೇ.40 ಲೆಕ್ಕಾಚಾರದಲ್ಲಿ ವರಮಾನ ಹಂಚಿಕೆಯಾಗಲಿದೆ. ಹಾಗೆಯೇ ಎರಡನೇ ವಾರದಲ್ಲಿ ನಿರ್ಮಾಪಕನಿಗೆ ಶೇ.55 ಹಾಗೂ ವಿತರಕನಿಗೆ ಶೇ.45 ಹಾಗೂ ಮೂರನೇ ವಾರದಲ್ಲಿ ನಿರ್ಮಾಪಕ ಮತ್ತು ವಿತರಕನಿಗೆ 50:50ರ ಅನುಪಾತದಲ್ಲಿ ವರಮಾನ ಹಂಚಿಕೆಯಾಗಲಿದೆ.

ನಾಲ್ಕನೇ ವಾರದಲ್ಲಿ ಗಳಿಕೆ ರು.2 ಲಕ್ಷಕ್ಕಿಂತಲೂ ಅಧಿಕವಾಗಿದ್ದರೆ ಅದು ನಿರ್ಮಾಪಕನಿಗೆ ಸಂದಾಯವಾಗಲಿದೆ. ಒಂದು ವೇಳೆ ನಾಲ್ಕನೆ ವಾರದಲ್ಲಿ ಗಳಿಕೆ ಕನಿಷ್ಠ ರು.2 ಲಕ್ಷಕ್ಕಿಂತ ಕಡಿಮೆ ಇದ್ದರೆ ಚಿತ್ರ ಎತ್ತಂಗಡಿಯಾಗಲಿದೆ. ಭೂಮಿಕಾ ಚಿತ್ರಮಂದಿರದ ಮಾಲೀಕರೂ ಆಗಿರುವ ತಲ್ಲಂ ನಂಜುಂಡಶೆಟ್ಟಿ ಶೇಕಡಾವಾರು ಪದ್ಧತಿಗೆ ಒಪ್ಪಿಗೆ ಕೊಟ್ಟಿರುವ ಕಾರಣ ಎ ಎಂ ಆರ್ ರಮೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ತಮ್ಮ 'ಸೈನೇಡ್' ಚಿತ್ರವನ್ನು ಯಾವುದೇ ವಿತರಕನ ನೆರವಿಲ್ಲದೆ ಎ ಎಂ ಆರ್ ರಮೇಶ್ ಸ್ವತಃ ಅವರೇ ಬಿಡುಗಡೆ ಮಾಡಿದ್ದರು. ಇದೀಗ 'ಪೊಲೀಸ್ ಕ್ವಾಟ್ರಸ್' ಚಿತ್ರವನ್ನು ಶೇಕಡಾವಾರು ಪದ್ಧತಿ ಮೂಲಕ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುತ್ತಿದ್ದಾರೆ. ಶೇಕಡಾವಾರು ಪದ್ಧತಿ ನನ್ನಂಥಹ ನಿರ್ಮಾಪಕನಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎನ್ನುತ್ತಾರೆ ರಮೇಶ್.

'ಪೊಲೀಸ್ ಕ್ವಾಟ್ರಸ್' ಕನ್ನಡ ಅವತರಣಿಕೆಗೆ ಗಾಂಧಿನಗರದಲ್ಲಿ ಯಾರೊಬ್ಬ ವಿತರಕನೂ ಸಿಗಲಿಲ್ಲ. ಅದೇ ತಮಿಳಿನ ಅವತರಣಿಕೆಗೆ ನಾ ಮುಂದು ತಾ ಮುಂದು ಎಂದು ಚಿತ್ರ ವಿತರಕರು ಮುಂದೆ ಬಂದರು. ರು.5 ರಿಂದ ರು.10 ಲಕ್ಷ ಮುಂಗಡ ಹಣವನ್ನು ಕೊಡಲು ಅವರು ತಯಾರಿದ್ದಾರೆ. ಜನವರಿ 29ಕ್ಕೆ ತಮಿಳು ಅವತರಣಿಕೆಯನ್ನು ಬಿಡುಗಡೆ ಮಾಡುವುದಾಗಿ ರಮೇಶ್ ತಿಳಿಸಿದ್ದಾರೆ. ಮಹೇಶ್ ಕೊಠಾರಿ ಮೂಲಕ ಪೊಲೀಸ್ ಕ್ವಾಟ್ರಸ್ ಟೆಲಿವಿಷನ್ ಹಕ್ಕುಗಳನ್ನು ರು.50 ಲಕ್ಷಕ್ಕೆ ಈಗಾಗಲೇ ಮಾರಾಟ ಮಾಡಲಾಗಿದೆ.

Read more about: ಭೂಮಿಕಾ, ಎ ಎಂ ಆರ್ ರಮೇಶ್, police quarters, amr ramesh, ಪೊಲೀಸ್ ಕ್ವಾಟ್ರಸ್, ತಲ್ಲಂ ನಂಜುಂಡ ಶೆಟ್ಟಿ, bhumika theatre, percentage system, ಶೇಕಡಾವಾರು ಪದ್ಧತಿ, ಚಿತ್ರ ವಿತರಕ, tallam nanjunda shetty

Please Wait while comments are loading...
Your Fashion Voice

Kannada Photos

Go to : More Photos