twitter
    For Quick Alerts
    ALLOW NOTIFICATIONS  
    For Daily Alerts

    ಏನ್ ಹುಡ್ಗರೋ ಯಾಕೆ ಹಿಂಗಾಡ್ತಾರೋ ಸಿಗ್ನಲ್ ನಲ್ಲಿ

    By * ಅಮರ್
    |

    By2Coffee presents 'Signal Movie'
    "ಹೇ ನಡೀಲೆ, ಪೋಲೀಸು ಯಾರದೋ ಜೊತೆ ಮಾತಾಡ್ತಾಯಿದ್ದಾರೆ, ಯಾವ ಗಾಡೀನು ಬರ್ತಾಯಿಲ್ಲ" ಇನ್ನೂ ರೆಡ್ ಸಿಗ್ನಲ್ ಇದ್ದಿದ್ರೂ ಹೋಗು ಅಂತ ಮಿತ್ರ ಪುಸಲಾಯಿಸುತ್ತಿದ್ದ. "ಗ್ರೀನ್ ಸಿಗ್ನಲ್ ಬರ್ಲಿ ತಾಳು" ಅಂದರೆ, "ಅದೇನ್ ಹೆದರ್ತಿಯೋ ಪೋಲೀಸ್ ಕಂಡ್ರೆ" ಅಂತ ಒಂದೆ ಸಮನೆ ಗೊಣಗುತ್ತಲೆ ಇದ್ದ. ಜೊತೆಗೆ ಹಿಂದುಗಡೆಯಿಂದ ಹಾರ್ನ್ ಬೇರೆ.

    ಇನ್ನೂ ಗ್ರೀನ್ ಸಿಗ್ನಲ್ ಬರದಿದ್ದರೂ ಅದೇನ್ ಅವಸರ ಅಂತಿರಾ ಇವರಿಗೆಲ್ಲಾ ಅಂತ ಅಂದುಕೊಳ್ಳುವಷ್ಟರಲ್ಲಿ ಹಳದಿ ದೀಪ ಬಂತು, ಅದು ಮೂಡೋದೆ ತಡ ಎಷ್ಟೊಂದು ಜನ ಮನೆಗೆ ಬೆಂಕಿ ಹತ್ತಿದಾಗ ಸತ್ನೋ-ಬಿದ್ನೋ ಅಂತ ರಾಕೆಟ್ ವೇಗದಲ್ಲಿ ಗಾಳಿಯನ್ನು ಸೀಳಿಕೊಂಡು ಹೋಗೋ ಹಾಗೆ ಹೋದ್ರು.

    ಹಾಗೆಯೆ ಸ್ವಲ್ಪ ಮುಂದಕ್ಕೆ ಬರೋವಷ್ಟರಲ್ಲಿ ಹೆಬ್ಬಾಳ್ ಫ್ಲೈ-ಓವರ್ ಬಂತು ಅದನ್ನ ದಾಟಿ ಸರ್ವೀಸ್ ರೋಡ್-ನಲ್ಲಿ ನಿಧಾನವಾಗಿ ಹೋಗ್ತಾಯಿದ್ರೆ "ಏನ್ಲೇ ಇಷ್ಟು ನಿಧಾನವಾಗಿ ಹೋಗ್ತೀಯಾ" ಅಂತ ಅನ್ನಲಿಕ್ಕೆ ಶುರು ಮಾಡಿದ. "ಅಲ್ಲೋ ಸರ್ವೀಸ್ ರೋಡು, ಎರಡೂ ಕಡೆಯಿಂದ ಬರ್ತಾಯಿರ್ತಾರೆ ನಿಧಾನವಾಗಿ ಹೋದ್ರೆ ಯಾವುದೇ ತೊಂದರೆಯಿರಲ್ಲ "ಅಂತ ಅನ್ನುತಾ ಎಡಗಡೆಯ ಕನ್ನಡಿಯಲ್ಲಿ ಹಿಂದುಗಡೆ ಬರುತ್ತಿರುವ ವಾಹನ ನೋಡಿ ಸ್ವಲ್ಪ ಎಡಗಡೆ ತಗೊಳ್ತಾಯಿದ್ದೆ,

    "ಅಲ್ಲಾ, ಯಾಕೆ ಹಾಗೆ ಆ ಕಡೆ ಈ ಕಡೆ ನೋಡಿ ಓಡಿಸ್ತೀಯಾ, ಸುಮ್ನೆ ನುಗ್ಗುತಾ ಇರು, ಅವರ ಪಾಡಿಗೆ ಅವರು ಸರ್ಕೊಳ್ತಾರೆ" ಅಂತ ಮಿತ್ರ ಮತ್ತೆ ಅನ್ನಬೇಕೆ.. ಏನು ಹೇಳಬೇಕು ಅಂತ ತಿಳಿಯದೆ "ಹುಂ" ಅಂದು ಸುಮ್ಮನಾದೆ .

    ಊರ ಒಳಗೆ ಮಿತಕರವಾದ ವೇಗದಲ್ಲಿ, ಸಂಚಾರಿ ನಿಯಮಗಳನ್ನು ಪಾಲಿಸಿ ಕಾರನ್ನ ಓಡಿಸೋದಕ್ಕೆ ಸಿಕ್ಕಿರೋ ಹಣೆಪಟ್ಟಿ "ನಿಧಾನವಾಗಿ ಗಾಡಿ ಓಡಿಸೋನು" ಅಂತ, ಜೊತೆಗೆ "ಈಗ ಬಿಟ್ರೆ ಮುಟ್ಟೋವಷ್ಟರಲ್ಲಿ ಬೆಳಗಾಗಿರುತ್ತೆ/ಬಂದವರು ಹೋಗಿರ್ತಾರೆ/ಸಿನಿಮಾ ಮುಗಿದಿರುತ್ತೆ/ಮಗು ಹುಟ್ಟಿ ದೊಡ್ಡದಾಗಿರುತ್ತೆ" ಅನ್ನೋ ವ್ಯಂಗ್ಯವಾದ ಮಾತುಗಳು ಸದಾಕಾಲ ಕಿವಿಮೇಲೆ ಬೀಳ್ತಾ ಇರುತ್ವೆ.

    ಪೋಲೀಸರಿಗೆ ಹೆದರಿಕೊಂಡು ಗಾಡಿ ನಿಲ್ಲಿಸೋದು ಬಿಟ್ಟು "ನಿಯಮ"ಗಳನ್ನು ಪಾಲಿಸೋದು ನಮ್ಮ ಧರ್ಮ ಅನ್ನೋ ತಿಳುವಳಿಕೆ ಬರೋವರೆಗೂ. ರಸ್ತೆ ಸಂಚಾರದ ನಿಯಮಗಳು ಗಾಳಿಯಲ್ಲಿ ತೂರಲ್ಪಟ್ಟಿರುತ್ತವೆ. ವಿದ್ಯಾವಂತರಾಗಿ ನಾವೇ ನಿಯಮಗಳನ್ನು ಪಾಲಿಸದಿದ್ದರೆ ಕಲಿತ ವಿದ್ಯೆಗೆ, ಕಲಿಸಿದ ಗುರುಗಳಿಗೆ ದ್ರೋಹ ಬಗೆದ ಹಾಗೆಯೆ."ತಾಳಿದವನು ಬಾಳಿಯಾನು" ಅಂತ ಗಾದೆ ಮಾತೇ ಇದೆ. ಆದರೆ ಈಗ ಜನರಲ್ಲಿ ತಾಳ್ಮೆಯನ್ನ ಭೂತ ಕನ್ನಡಿಯಲ್ಲಿ ಹುಡುಕಿದರೂ ಸಿಕ್ಕೋದಿಲ್ಲ.

    ಎಲ್ಲದರಲ್ಲೂ ವೇಗದ ನಾಗಾಲೋಟ ಹಾಸು ಹೊಕ್ಕಾಗಿದೆ. ಹಾಲು ಗಲ್ಲದ ಹಸುಳೆ ಹಾಲು ಕುಡಿಯೋದು ನಿಲ್ಲಿಸುವ ಮುಂಚೆಯೇ ತಾಯಿಯಿಂದ ಬೇರ್ಪಡಿಕೆ, ಮಾನವ ಸಂಬಂಧಗಳ ಅರಿವು ಅಡಿಯಿಡುವ ಮುಂಚೆಯೆ ಬಾಯ್ ಫ್ರೆಂಡ್-ಗರ್ಲ್ ಫ್ರೆಂಡ್ ಅನ್ನೋ ಮತ್ತು ಅನ್ನಿಸಿ ಕೊಳ್ಳೋ ಅಭಿಲಾಷೆ, ಕೂಸು ಹುಟ್ಟೋಕ್ ಮುಂಚೆ ಕುಲಾಯಿ ಹೊಲೆಸಿದ ಹಾಗೆ, ಚಿಗುರು ಮೀಸೆ ಮೂಡೋಕ್ ಮುಂಚೆ ರಕ್ತ ದೊತ್ತಡ, ಸಕ್ಕರೆ ಖಾಯಿಲೆಗಳು, ಮುಪ್ಪಡರುವ ಮುಂಚೆ ವೃದ್ಧಾಶ್ರಮಕ್ಕೆ ಸ್ವಾಗತ. ನಿವೃತ್ತಿ ಹೊಂದೋಕ್ ಮುಂಚೆ ಕೈಲಾಸವಾಸ.

    ಇವೆಲ್ಲಾ ವೇಗ, ವೇಗವಾಗಿ ತಂದಂತಹ ಬಳುವಳಿಗಳು.ಈ ಬಳುವಳಿಗಳು ನಮಗೆಲ್ಲಾ ಅಗತ್ಯವಿದೆಯಾ ಅಂತ ನಮ್ಮೊಳಗೆ ನಾವೇ ಕೇಳಿಕೊಳ್ಳ ಬೇಕಾಗಿರುವ ಪ್ರಶ್ನೆಗಳು.

    ಸಂಚಾರಿ ನಿಯಮಗಳನ್ನು ಪಾಲಿಸದೆ ಎಷ್ಟೋ ಜನರ ಪಾಲಿಗೆ ಪರಿಹರಿಸಲಾಗದ ಸಮಸ್ಯೆಗಳಿಗೆ ಕಾರಣರಾದಂತಹವರ ಕಣ್ತೆರೆಯುವಂತೆ ಮಾಡಲು ಒಂದು ಸಣ್ಣ ಪ್ರಯತ್ನ, ಉತ್ಸಾಹಿ ಸಾಫ್ಟ್ ವೇರ್ ಹುಡುಗರ ದಂಡು "ಬೈಟು ಕಾಫೀ ಫಿಲ್ಮ್ಸ್"[ಅಂತರ್ಜಾಲ ತಾಣ] ನಿಂದ ಬಂದಿರುವ "ಸಿಗ್ನಲ್". ಕಿರು ಮಾದರಿಯ ಸಿನಿಮಾಗಳಿಂದ ಜನರಲ್ಲಿ ಜಾಗೃತಿ ಮೂಡಿಸಲು ಪಣತೊಟ್ಟು ನಿಂತು ಮಾಡುತ್ತಿರುವ ದಂಡಿನಿಂದ ಬಂದಿರುವ ಮೂರನೆಯ ಕಾಣಿಕೆಯೆ ಈ "ಸಿಗ್ನಲ್".

    ಈಗ"ಬೈಟು ಕಾಫೀ ಫಿಲ್ಮ್ಸ್ ನ ವಿಡಿಯೋ ನಿಮಗಾಗಿ. ಈ "ಸಿಗ್ನಲ್"ನಿಂದಾಗಿ ಬದುಕಿನ ನಲುಮೆಯ "ಸಿಗ್ನಲ್" ಎಲ್ಲರಿಗೂ ಸಿಗಲಿ...

    Monday, July 26, 2010, 16:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X