twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ನೆನಪಿನಲ್ಲಿ ಅಮರ ಚಿತ್ರಕಥಾದಿಂದ ಕಾಮಿಕ್ಸ್

    By Prasad
    |

    ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರು ಅಭಿಮಾನಿಗಳ ಹೃದಯದಲ್ಲಿ ಅಜರಾಮರ ಎನ್ನುವುದಕ್ಕೆ ಅಭಿಮಾನ್ ಸ್ಟುಡಿಯೋದಲ್ಲಿ ಸೆಪ್ಟೆಂಬರ್ 18ರಂದು ನಡೆದ ಅವರ 63ನೇ ಹುಟ್ಟುಹಬ್ಬದ ಸಂಭ್ರಮವೇ ಸಾಕ್ಷಿ. ವಿಷ್ಣು ಸ್ಮಾರಕ ಸ್ಥಳಾಂತರದ ಬಗ್ಗೆ ವಿವಾದ ಹುಟ್ಟಿಕೊಂಡಿದ್ದರೂ ಗಂಡಸರು, ಹೆಂಗಸರು, ಬಡವರು ಶ್ರೀಮಂತರು ಸಹಸ್ರಾರು ಸಂಖ್ಯೆಯಲ್ಲಿ ನೆರೆದು ಅಭಿನವ ಭಾರ್ಗವನಿಗೆ ನಮನ ಸಲ್ಲಿಸಿದರು.

    ಈ ಹುಟ್ಟುಹಬ್ಬದ ವಿಶೇಷವೇನೆಂದರೆ, ವಿಷ್ಣು ಅವರ ವ್ಯಕ್ತಿತ್ವ, ಅವರ ಅಭಿನಯ ಇನ್ನೂ ಅಜರಾಮರವಾಗಿರಬೇಕೆಂಬ ಉದ್ದೇಶದಿಂದ 'ಸಾಹಸಸಿಂಹ ಕಾಮಿಕ್ಸ್ ಸರಣಿ'ಯನ್ನು ಜನಪ್ರಿಯ ಮಕ್ಕಳ ಪುಸ್ತಕ 'ಅಮರ ಚಿತ್ರ ಕಥಾ' ಹೊರತರುತ್ತಿದೆ. ಒಬ್ಬ ಪ್ರಸಿದ್ಧ ಚಲನಚಿತ್ರ ವ್ಯಕ್ತಿಯೊಬ್ಬರ ಕಾಮಿಕ್ಸ್ ಸರಣಿಯೊಂದು ಹೊರಬರುತ್ತಿರುವುದು ಇದೇ ಮೊದಲನೇ ಬಾರಿ ಇರಬಹುದು. [ಚಿತ್ರಪಟ]

    ಇದರ ಪರಿಕಲ್ಪನೆ ವಿಷ್ಣು ಅವರ ಅಳಿಯ ಮತ್ತು ನಟ ಅನಿರುದ್ಧ್ ಅವರದ್ದು. ಇದು ವಿಷ್ಣುವರ್ಧನ್ ಅವರ 4ನೇ ಪುಣ್ಯತಿಥಿ ಡಿಸೆಂಬರ್ 30ರಂದು ಹೊರಬರಲಿದೆ. ಮತ್ತೊಂದು ವಿಶೇಷವೆಂದರೆ, ವಿಷ್ಣು ಅವರ ಮೊಮ್ಮಕ್ಕಳಾದ ಜ್ಯೇಷ್ಠ (4ನೇ ತರಗತಿ) ಮತ್ತು ಶ್ಲೋಕ (1ನೇ ತರಗತಿ) ಈ ಕಾಮಿಕ್ಸ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಷ್ಣು ಅವರ ಜೀವನದ ಬಗ್ಗೆ ಇಂದಿನ ಮತ್ತು ಮುಂದಿನ ಪೀಳಿಗೆಯ ಜನರಿಗೂ ಗೊತ್ತಾಗಬೇಕೆಂದು ಈ ಹೊಸ ಪ್ರಯತ್ನ ಮಾಡಲಾಗುತ್ತಿದೆ ಎಂದು ಅನಿರುದ್ಧ್ ಅವರು ತಿಳಿಸಿದರು.

    ಹುಟ್ಟುಹಬ್ಬದ ಪ್ರಯುಕ್ತ, ಸಮಾಜಸೇವೆಯಲ್ಲಿ ತೊಡಗಿದ್ದ ವಿಷ್ಣು ಅವರ ಗೌರವಾರ್ಥವಾಗಿ ಪೀಣ್ಯ ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ, ವಿವಿಧ ಆಸ್ಪತ್ರೆಗಳಿಂದ ಉಚಿತ ವೈದ್ಯಕೀಯ ತಪಾಸಣೆ ಶಿಬಿರ, ವಿಕಲಾಂಗರಿಗೆ ಗಾಲಿಕುರ್ಚಿ ವಿತರಣೆ, ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಬೆಂಗಳೂರಿಂದ ಮಾತ್ರವಲ್ಲ ದೂರದ ಊರುಗಳಿಂದಲೂ ವಿಷ್ಣು ಅಭಿಮಾನಿಗಳು ಅಭಿಮಾನ್ ಸ್ಟುಡಿಯೋಗೆ ಆಗಮಿಸಿದ್ದರು. ಈ ಸಮಾರಂಭದ ಮತ್ತಷ್ಟು ವಿವರಗಳು ಮುಂದಿನ ಸ್ಟೈಡ್ ನಲ್ಲಿವೆ.

    ಅಲಂಕೃತ ವಿಷ್ಣು ಸಮಾಧಿ

    ಅಲಂಕೃತ ವಿಷ್ಣು ಸಮಾಧಿ

    ಸುಂದರವಾಗಿ ಅಲಂಕೃತಗೊಂಡಿದ್ದ ಡಾ. ವಿಷ್ಣು ಅವರ ಸಮಾಧಿ ಸಂದರ್ಶನಕ್ಕೆ ಜನಸ್ತೋಮವೇ ಹರಿದುಬಂದಿತ್ತು. ಆದರೆ, ವಿಐಪಿಗಳಿಗೆ ಮತ್ತು ಮಾಧ್ಯಮಗಳಿಗೆ ಮಾತ್ರ ಸಮಾಧಿ ಪ್ರವೇಶವಿತ್ತು. ಭಾರತಿ, ಅನಿರುದ್ಧ್, ಕೀರ್ತಿ, ಭಾರದ್ವಾಜ್, ದಿನೇಶ್ ಗುಂಡೂರಾವ್ ಮುಂತಾದವರು ಪುಷ್ಪ ಅರ್ಚಿಸಿ ನಮನ ಸಲ್ಲಿಸಿದರು.

    ಸಾಹಸಸಿಂಹ ಕಾಮಿಕ್ಸ್ ಸರಣಿ ಅನಾವರಣ

    ಸಾಹಸಸಿಂಹ ಕಾಮಿಕ್ಸ್ ಸರಣಿ ಅನಾವರಣ

    ಅಳಿಯ ಅನಿರುದ್ಧ್ ಪರಿಕಲ್ಪನೆಯ ಮತ್ತು ಅಮರ ಚಿತ್ರ ಕಥಾ ಪುಸ್ತಕ ಹೊರತರುತ್ತಿರುವ 'ಸಾಹಸಸಿಂಹ ಕಾಮಿಕ್ಸ್ ಸರಣಿ'ಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅನಾವರಣಗೊಳಿಸಿದರು. ಇದು ವಿಷ್ಣು ಪುಣ್ಯತಿಥಿ, ಡಿ.30ರಂದು ಹೊರಬರಲಿದೆ.

    ಜ್ಯೋತಿ ಬೆಳಗಿ ಉದ್ಘಾಟನೆ

    ಜ್ಯೋತಿ ಬೆಳಗಿ ಉದ್ಘಾಟನೆ

    ಹದಿನೈದು ನಿಮಿಷ ತಡವಾಗಿ ಬಂದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಭಾರತಿ ವಿಷ್ಣುವರ್ಧನ್, ಅನಿರುದ್ಧ್, ಕೀರ್ತಿ ಮುಂತಾದವರು ಜ್ಯೋತಿ ಬೆಳಗಿ ಈ ಹುಟ್ಟುಹಬ್ಬದ ಸಮಾರಂಭವನ್ನು ಉದ್ಘಾಟಿಸಿದರು. ರಾಜ್ಯಪಾಲರು ಬರುವ ಮೊದಲೂ ಒಂದು ಬಾರಿ ಜ್ಯೋತಿ ಬೆಳಗಲಾಗಿತ್ತು.

    ಕಾಮಿಕ್ಸಲ್ಲಿ ಮಿಂಚಲಿರುವ ವಿಷ್ಣು ಮೊಮ್ಮಕ್ಕಳು

    ಕಾಮಿಕ್ಸಲ್ಲಿ ಮಿಂಚಲಿರುವ ವಿಷ್ಣು ಮೊಮ್ಮಕ್ಕಳು

    ಸಾಹಸಸಿಂಹ ಕಾಮಿಕ್ಸ್ ಸರಣಿಯಲ್ಲಿ ಮಿಂಚಲಿರುವ ಪುಟಾಣಿಗಳು ಇವರೇ. ಮೊಮ್ಮಗ ಜ್ಯೇಷ್ಠ ಮತ್ತು ಮೊಮ್ಮಗಳು ಶ್ಲೋಕ. ಇವರಲ್ಲಿ ಶ್ಲೋಕ ತನ್ನ ಅಜ್ಜಿಯ ಜೊತೆಗೇ ವೇದಿಕೆಯ ಮೇಲೆ ಇದ್ದು ಸ್ಮರಣಿಕೆಗಳನ್ನು ಕೊಡುವಾಗ ಸಹಾಯಮಾಡುತ್ತಿದ್ದಳು.

    ವಿಷ್ಣುವನ್ನು ಕೊಂಡಾಡಿದ ಹಂಸರಾಜ್ ಭಾರದ್ವಾಜ್

    ವಿಷ್ಣುವನ್ನು ಕೊಂಡಾಡಿದ ಹಂಸರಾಜ್ ಭಾರದ್ವಾಜ್

    ಕನ್ನಡ ಮತ್ತು ಕರ್ನಾಟಕ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಸಮೃದ್ಧಿ ಹೊಂದಿರುವುದರಿಂದಲೇ ವಿಷ್ಣುವರ್ಧನ್ ಅವರಂಥ ಸಾತ್ವಿಕ ವ್ಯಕ್ತಿತ್ವದ ಮನುಷ್ಯ ಬೆಳೆಯಲು ಸಾಧ್ಯವಾಯಿತು. ವಿಷ್ಣು ಕುಟುಂಬ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಸೇವೆಗಳನ್ನು ಮಾಡಲಿ ಎಂದು ಭಾರದ್ವಾಜ್ ಅವರು ಹಾರೈಸಿದರು.

    ದಿನೇಶ್ ಗುಂಡೂರಾವ್ ಗೆಸ್ಟ್ ಅಪಿಯರನ್ಸ್

    ದಿನೇಶ್ ಗುಂಡೂರಾವ್ ಗೆಸ್ಟ್ ಅಪಿಯರನ್ಸ್

    ಸಮಾರಂಭದಲ್ಲಿ ಅಲ್ಪಕಾಲವಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಕುಟುಂಬ ಹಾಗು ವಿಷ್ಣು ಅವರ ಸ್ನೇಹ, ಸಂಬಂಧವನ್ನು ಮೆಲುಕು ಹಾಕಿದರು. ವಿಷ್ಣು ಸ್ಮಾರಕದ ಬಗ್ಗೆ ಉದ್ಭವವಾಗಿರುವ ವಿವಾದದ ಬಗ್ಗೆ ಪ್ರಸ್ತಾಪಿಸಿದ ಅವರು ಸರಕಾರದ ಜೊತೆ ಚರ್ಚಿಸಿ ಬಗೆಹರಿಸುವುದಾಗಿ ನುಡಿದರು.

    ಸ್ಮಾರಕದ ಬಗ್ಗೆ ಡಾ. ರಾಧಾಕೃಷ್ಣ ಸ್ಪಷ್ಟನೆ

    ಸ್ಮಾರಕದ ಬಗ್ಗೆ ಡಾ. ರಾಧಾಕೃಷ್ಣ ಸ್ಪಷ್ಟನೆ

    ವಿಷ್ಣು ಸ್ಮಾರಕದ ಬಗ್ಗೆ ಉದ್ಭವವಾಗಿರುವ ವಿವಾದದ ಬಗ್ಗೆ ವಿವರ ನೀಡಿದ ತಹಶೀಲ್ದಾರ್ ಡಾ. ರಾಧಾಕೃಷ್ಣ ಅವರು, ಸಮಾಧಿ ಬಳಿಯಲ್ಲಿಯೇ ಯಾವುದೇ ವಿವಾದವಿಲ್ಲದ ಬೇರೆ ಸ್ಥಳವನ್ನು ಗುರುತಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ವಿವರಿಸಿದರು.

    ಕಾರ್ಯಕ್ರಮದ ಕೇಂದ್ರಬಿಂದು ಭಾರತಿ

    ಕಾರ್ಯಕ್ರಮದ ಕೇಂದ್ರಬಿಂದು ಭಾರತಿ

    ಹುಟ್ಟುಹಬ್ಬ ಸಮಾರಂಭದ ಕೇಂದ್ರಬಿಂದುವಾಗಿದ್ದ ಭಾರತಿ ವಿಷ್ಣುವರ್ಧನ್ ಅವರು ಚಟುವಟಿಕೆಯಿಂದ ಓಡಾಡುತ್ತ ಅತಿಥಿಗಳನ್ನು ಸ್ವತಃ ಬರಮಾಡಿಕೊಳ್ಳುತ್ತಿದ್ದರು. ವಿಷ್ಣು ಕನಸುಗಳ ಬಗ್ಗೆ ಮತ್ತು ಸ್ಮಾರಕದ ಸುತ್ತ ಇರುವ ವಿವಾದದ ಬಗ್ಗೆ ಮಾತನಾಡುತ್ತ, ತಾಳ್ಮೆ ಇರುವವರೆಗೆ ಕಾಯುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.

    ಅಪರ್ಣಾ ಆಂಕರಿಂಗ್

    ಅಪರ್ಣಾ ಆಂಕರಿಂಗ್

    ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಅಪರ್ಣಾ ಅವರು ಹೊತ್ತಿದ್ದರು. ಕನ್ನಡ ಮತ್ತು ಹಂಸರಾಜ್ ಭಾರದ್ವಾಜ್ ಅವರಿದ್ದರಿಂದ ಇಂಗ್ಲಿಷ್ ನಲ್ಲಿ ನಿರೂಪಣೆಯನ್ನು ನಿರರ್ಗಳವಾಗಿ ಮಾಡಿದರು.

    ವಿಷ್ಣು ಅಭಿಮಾನಿಗಳ ಮಹಾಪೂರ

    ವಿಷ್ಣು ಅಭಿಮಾನಿಗಳ ಮಹಾಪೂರ

    ಭಾರೀ ಸಂಖ್ಯೆಯಲ್ಲಿ ವಿಷ್ಣು ಅಭಿಮಾನಿಗಳು ನಮನ ಸಲ್ಲಿಸಲು ಅಭಿಮಾನ್ ಸ್ಟುಡಿಯೋಗೆ ಬಂದಿದ್ದರು. ಕೈಯಲ್ಲಿ ಹೂಗುಚ್ಛ ಹಿಡಿದು ತಮ್ಮ ನೆಚ್ಚಿನ ನಟನಿಗೆ ಗೌರವ ಅರ್ಪಿಸಿದರು. ಎಲ್ಲೆಲ್ಲೂ ಯಾವಾಗಲೂ ವಿಷ್ಣು ಜಯಕಾರ ಮೊಳಗುತ್ತಿತ್ತು, ಅವರ ಬಾಯಿಯಿಂದ ವಿಷ್ಣು ಅಭಿನಯದ ಹಾಡುಗಳು ಹೊರಹೊಮ್ಮುತ್ತಿದ್ದವು. ವಿಷ್ಣು ಅಭಿಮಾನಿಗಳು ಎಂಥವರು ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿತ್ತು.

    ಅಭಿಮಾನಿಗಳಿಂದ ರಕ್ತದಾನ

    ಅಭಿಮಾನಿಗಳಿಂದ ರಕ್ತದಾನ

    ಪೀಣ್ಯ ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಹಲವಾರು ಅಬಿಮಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ರೋಟರಿ ಕ್ಲಬ್ ವತಿಯಿಂದ ವಿಭಾ ಚಾರಿಟೇಬಲ್ ಟ್ರಸ್ಟ್ ಗೆ ಪ್ರಮಾಣಪತ್ರವನ್ನೂ ನೀಡಲಾಯಿತು.

    English summary
    Popular Amar Chitra Katha books is bringing out comic series on Sahasasimha Dr. Vishnuvardhan as a token of respect to the legendary actor. This was announed and inaugurated on 63rd birth anniversary of Vishnu at Abhiman Studio in Bangalore.
    Wednesday, September 18, 2013, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X