twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿಮಾ ಡೈರೆಕ್ಟರ್ಸ್ : ಸ್ಪೆಷಲ್ ಸೆವೆನ್

    |

    ಸಿನಿ ಪ್ರೇಕ್ಷಕರ, ನಿರ್ಮಾಪಕರ ಮತ್ತು ಹಂಚಿಕೆದಾರರ ಅಚ್ಚುಮೆಚ್ಚಿನ ನಿರ್ದೇಶಕರಾರು ಎನ್ನುವ ಪ್ರಶ್ನೆಗೆ ಎಲ್ಲರಲ್ಲೂ ಒಂದಲ್ಲಾ ಒಂದು ಗೊಂದಲವಿರುವುದು ಸಹಜ. ಯಾಕೆಂದರೆ ಎಲ್ಲರ ಅಭಿರುಚಿ ಒಂದೇಯಾಗಿರುವುದಿಲ್ಲ.

    ದಶಕಗಳ ಹಿಂದಿನ ಜಿ ವಿ ಅಯ್ಯರ್, ಬಿ ಆರ್ ಪಂತುಲು, ಬಿ ಎಸ್ ರಂಗಾ, ಕೆ ಎಸ್ ಎಲ್ ಸ್ವಾಮಿ, ಪುಟ್ಟಣ್ಣ ಕಣಗಾಲ್, ಭಾರ್ಗವ, ಗೀತಪ್ರಿಯ, ಸಿದ್ದಲಿಂಗಯ್ಯ, ಸಿಂಗೀತಂ ಶ್ರೀನಿವಾಸ ರಾವ್, ಹುಣಸೂರು ಕೃಷ್ಣಮೂರ್ತಿ, ರಾಜೇಂದ್ರ ಸಿಂಗ್ ಬಾಬು ಹೀಗೆ ಸಾಗುವ ಘಟಾನುಗಟಿ ನಿರ್ದೇಶಕರ ಹೆಸರಿಗೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವ ತಾಕತ್ತಿತ್ತು.

    1934ರಲ್ಲಿ ಬಿಡುಗಡೆಯಾದ ಮೊದಲ ಟಾಕಿ ಚಿತ್ರ ಸತಿ ಸುಲೋಚನಾದಿಂದ ಹಿಡಿದು ಹೋದ ವಾರ ಬಿಡುಗಡೆಯಾದ ಚಿತ್ರಗಳವರೆಗೆ ಲೆಕ್ಕವಿಲ್ಲದಷ್ಟು ನಿರ್ದೇಶಕರು ಕನ್ನಡ ಚಿತ್ರಗಳಿಗಾಗಿ ಶ್ರಮಿಸಿದ್ದಾರೆ.

    ದಶಕಗಳ ಹಿಂದಿನಿಂದ ಅಂದರೆ 2000 ಇಸವಿಯಿಂದ ಬಿಡುಗಡೆಯಾದ ಚಿತ್ರಗಳನ್ನು ಪಟ್ಟಿಮಾಡತ್ತಾ ಸಾಗಿದರೆ ಹೊಸ ಪ್ರತಿಭಾನ್ವಿತ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಹೊಸ ಬೆಳಕು ಚೆಲ್ಲಿದ್ದಾರೆ, ಹೊಸತನವನ್ನು, ತನ್ನತನವನ್ನು ತಂದಿದ್ದಾರೆ.

    ಇದಕ್ಕೆ ಉದಾಹರಣೆ ಕೊಡುವುದಾದರೆ ಮಹೇಶ್ ಬಾಬು, ದಯಾಳ್ ಪದ್ಮನಾಭನ್, ರತ್ನಜ, ಮಿಲನ ಪ್ರಕಾಶ್, ಸಂತೋಶ್ ರೈ ಪಾತಾಜೆ,ಮಹೇಶ್ ಸುಖಧರೆ, ಇಂದ್ರಜಿತ್ ಲಂಕೇಶ್, ಎ ಎಂ ಆರ್ ರಮೇಶ್, ದಿನಕರ್ ತೂಗುದೀಪ್, ಗುರುಪ್ರಸಾದ್, ಶಶಾಂಕ್, ಸೂರಿ, ಕೆ ಎಂ ಚೈತನ್ಯ ಹೀಗೆ ಪಟ್ಟಿ ಸಾಗುತ್ತೆ.

    ಆರ್ ಶೇಷಾದ್ರಿ, ಗಿರೀಶ್ ಕಾಸರವಳ್ಳಿ, ಟಿ ಎಸ್ ನಾಗಾಭರಣ, ಬರಗೂರು ರಾಮಚಂದ್ರಪ್ಪ ಮುಂತಾದ ಕಲಾ ನಿರ್ದೇಶಕರ ಚಿತ್ರಗಳು ಒಂದು ಕಡೆ. ವ್ಯಾಪಾರೀ ದೃಷ್ಟಿಯಿಂದ ತಯಾರಾದ ಚಿತ್ರಗಳ ಇನ್ನೊಂದೆಡೆ.

    ರಮೇಶ್ ಅರವಿಂದ್, ಸುದೀಪ್, ದಿನೇಶ್ ಬಾಬೂ, ನಾಗತಿಹಳ್ಳಿ ಚಂದ್ರಶೇಕರ್, ಪವನ್ ಒಡೆಯರ್, ಪಿ ವಾಸು, ಜಗ್ಗೇಶ್ ಮುಂತಾದವರು ತಮ್ಮ ತಮ್ಮ ಚಿತ್ರದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ.

    ಈ ಎಲ್ಲಾ ಪಟ್ಟಿಗಳ ನಡುವೆ ಪ್ರಸಕ್ತ ಚಾಲ್ತಿಯಲ್ಲಿರುವ ಡೈರೆಕ್ಟರ್ ಗಳ ಹೆಸರು ಪಟ್ಟಿ ಮಾಡುವುದಾದರೆ ಅದು ಮುಂಗಾರು ಮಳೆ ಯೋಗರಾಜ್ ಭಟ್, ದುನಿಯಾ ಸೂರಿ, ಮಠ ಗುರುಪ್ರಸಾದ್, ಜೋಗಿ ಪ್ರೇಮ್, ಓಂ ಉಪೇಂದ್ರ, ಮೊಗ್ಗಿನ ಮನಸು ಶಶಾಂಕ್. ಇವರೆಲ್ಲಾ ಕನ್ನಡ ಚಿತ್ರರಂಗದಲ್ಲೇ ತನ್ನದೇ ಆದ ಟ್ರೆಂಡ್ ಹುಟ್ಟುಹಾಕಿದವರು. ಮೂರಕ್ಕೆ ಮೂರೂ ಸೂಪರ್ ಹಿಟ್ ಚಿತ್ರ ನೀಡಿದ ದಿನಕರ್ ತೂಗುದೀಪ್ ಸದ್ಯ ಯಾವುದೇ ಚಿತ್ರ ನಿರ್ದೆಶಿಸುತ್ತಿಲ್ಲ.

    ಹಾಗಾದರೆ ದಿನಕರ್ ಹೊರತು ಪಡಿಸಿ ಏಳು ಮಂದಿ ನಿರ್ದೇಶಕರುಗಳ ಪೈಕಿ ನಿಮ್ಮ ಒಲವು ಯಾರ ಕಡೆ?

    ಯೋಗರಾಜ್ ಭಟ್

    ಯೋಗರಾಜ್ ಭಟ್

    ಉಡುಪಿ ಜಿಲ್ಲೆಯ ಮಂದರ್ತಿ ಮೂಲದ (ಬೆಳೆದದ್ದು ಹಲ್ಯಾಳ) ಯೋಗರಾಜ್ ಭಟ್ 'ಚಕ್ರ' ಎನ್ನುವ ಟಿವಿ ಸೀರಿಯಲ್ ಗೆ ಮೊದಲು ನಿರ್ದೇಶಕರಾಗಿ ಕೆಲಸ ಮಾಡಿದವರು. ಮಣಿ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಭಟ್ರು ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದವರು. ಇದುವರೆಗೆ ಎಂಟು ಚಿತ್ರಗಳನ್ನು ನಿರ್ದೇಶಿಸಿರುವ ಭಟ್ರು ನಾಲ್ಕು ಚಿತ್ರಕ್ಕೆ ನಿರ್ಮಾಪಕರಾಗಿಯೂ ಹಣ ಹೂಡಿದ್ದಾರೆ. ಅವರ ಲೇಟೆಸ್ಟ್ ಡ್ರಾಮಾ ಚಿತ್ರ ತೆರೆಕಂಡಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.

    ಉಪೇಂದ್ರ

    ಉಪೇಂದ್ರ

    ಉಡುಪಿ ಜಿಲ್ಲೆ ಕೋಟೇಶ್ವರ ಮೂಲದ ಉಪೇಂದ್ರ, ಕಾಶೀನಾಥ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು. 1992ರಲ್ಲಿ ತರ್ಲೆ ನನ್ ಮಗ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದ ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ. ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ 'ಓಂ' ಚಿತ್ರ ಉಪೇಂದ್ರ ಸಿನಿಮಾ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿತು. ನಾಯಕ ನಟನಾಗಿಯೂ ಗುರುತಿಸಿಕೊಂಡಿರುವ ಉಪೇಂದ್ರ ಚಿತ್ರ ನಿರ್ದೇಶಿಸುತ್ತಿದ್ದಾರೆಂದರೆ ಅಭಿಮಾನಿಗಳಿಗೆ ಇನ್ನಿಲ್ಲದ ಕ್ರೇಜ್.

    ದುನಿಯಾ ಸೂರಿ

    ದುನಿಯಾ ಸೂರಿ

    ಬೆಂಗಳೂರು ಗೊಟ್ಟಿಗೆರೆಯಲ್ಲಿ ಜನಿಸಿದ ಸೂರಿ ಮೊದಲು ಕಲಾ ವಿಭಾಗದಲ್ಲಿ ಪದವೀಧರರಾದ ನಂತರ ಡಾಕ್ಯುಮೆಂಟರಿ ನಿರ್ಮಿಸುತ್ತಿದ್ದರು. ದುನಿಯಾ ಎನ್ನುವ ಬ್ಲಾಕ್ ಬಸ್ಟರ್ ಚಿತ್ರದ ಮೂಲಕ ದುನಿಯಾ ಸೂರಿಯಾದ ಇವರು ಒಟ್ಟು ಐದು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ದುನಿಯಾ ಚಿತ್ರದ ನಂತರ ಬಂದ 'ಇಂತಿ ನನ್ನ ಪ್ರೀತಿಯ' ಚಿತ್ರ ನೆಲಕಚ್ಚಿದಾಗ ಮುಂದಿನ ಚಿತ್ರವೇನಾದರೂ ಸೋತರೆ ನಿರ್ದೇಶನದಿಂದ ದೂರವಾಗುತ್ತೇನೆ ಎಂದು ಶಪಥ ಮಾಡಿದ್ದರು. ಆದರೆ ಆನಂತರ ಬಂದ ವಿಜಯ್ ಅಭಿನಯದ ಜಂಗ್ಲಿ ಚಿತ್ರ ಹಿಟ್ ಆಯಿತು. ನಂತರ ಅವರು ಡೈರೆಕ್ಟ್ ಮಾಡಿದ ಪುನೀತ್ ಅಭಿನಯದ ಜಾಕಿ ಚಿತ್ರ ಗಲ್ಲಾಪೆಟ್ಟಿಗೆ ಸೂರೆ ಮಾಡಿದ್ದು ಇತಿಹಾಸ. ಸದ್ಯ ಸೂರಿ, ಶಿವಣ್ಣ ಮತ್ತು ರಾಧಿಕಾ ಪಂಡಿತ್ ತಾರಾಗಣದಲ್ಲಿರುವ 'ಕಡ್ಡಿಪುಡಿ' ಚಿತ್ರ ನಿರ್ದೇಶಿಸುತ್ತಿದ್ದಾರೆ.

    ಮೊಗ್ಗಿನ ಮನಸು ಶಶಾಂಕ್

    ಮೊಗ್ಗಿನ ಮನಸು ಶಶಾಂಕ್

    ಚಿತ್ರದುರ್ಗ ಮೂಲದ ಶಶಾಂಕ್ ಬೇರೆ ಬೇರೆ ರೀತಿಯ ಚಿತ್ರಗಳನ್ನು ನೀಡಿ ಹೆಸರು ಮಾಡಿದವರು. ಇಂಜಿನಿಯರಿಂಗ್ ಪದವೀಧರರಾಗಿರುವ ಶಶಾಂಕ್ ಆಯ್ಕೆ ಮಾಡಿಕೊಂಡಿದ್ದು ಸಿನಿಮಾ ರಂಗವನ್ನು. ತಾಯಿ ಇಲ್ಲದ ತವರು ಚಿತ್ರದಲ್ಲಿ ಎಸ್ ಮಹೇಂದರ್ ಜೊತೆ ಸಹಾಯಕರಾಗಿ ಕೆಲಸ ಮಾಡಿದ ಶಶಾಂಕ್ 'ಸಿಕ್ಸರ್' ಚಿತ್ರದ ಮೂಲಕ ನಿರ್ದೇಶಕರಾದರು.ಅವರ ಮೊಗ್ಗಿನ ಮನಸು ಚಿತ್ರ ಐದು ವಿಭಾಗದಲ್ಲಿ ಫಿಲಂ ಫೇರ್ ಪ್ರಶಸ್ತಿ ಗಳಿಸಿತ್ತು. ಸುದೀಪ್ ಅಭಿನಯದ ಬಹುನಿರೀಕ್ಷೆಯ 'ಬಚ್ಚನ್' ಚಿತ್ರ ಅವರ ನಿರ್ದೇಶನದಲ್ಲಿ ಬಿಡುಗಡೆಯಾಗುತ್ತಿರುವ ಮುಂದಿನ ಚಿತ್ರ.

    ಒಂ ಪ್ರಕಾಶ್ ರಾವ್

    ಒಂ ಪ್ರಕಾಶ್ ರಾವ್

    ಕಿಲಕಿಲ ಎನ್ ಎಸ್ ರಾವ್ ಅವರ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಒಂ ಪ್ರಕಾಶ್ ರಾವ್ ಕಮರ್ಷಿಯಲ್ ಚಿತ್ರ ತೆಗೆಯುವುದರಲ್ಲಿ ಎತ್ತಿದ ಕೈ. ಬೇರೆ ಭಾಷೆಗಳ ಚಿತ್ರಗಳ ದೃಶ್ಯವನ್ನು ಕದಿಯುತ್ತೇನೆ ಎಂದು ಮುಲಾಜಿಲ್ಲದೆ ಒಪ್ಪಿಕೊಳ್ಳುವ ಒಂ ಬಿಗಿ ನಿರೂಪಣೆ, ಸಂಭಾಷಣೆ ನೀಡುವುದರಲ್ಲಿ ಹೆಸರುವಾಸಿ. ಲಾಕಪ್ ಡೆತ್ ಚಿತ್ರದ ಮೂಲಕ ನಿರ್ದೇಶಕರಾದ ಒಂ ಇದುವರೆಗೆ 24 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಿಂಹದಮರಿ, ಎಕೆ47, ಹುಚ್ಚ, ಕಲಾಸಿಪಾಳ್ಯ, ಅಯ್ಯ, ಹುಬ್ಬಳ್ಳಿ, ಮಂಡ್ಯ, ಭೀಮಾ ತೀರದಲಿ ಚಿತ್ರಗಳು ಸೂಪರ್ ಹಿಟ್ ಸಾಲಿಗೆ ಸೇರಿರುವ ಅವರ ಚಿತ್ರಗಳು. ನಟನಾಗಿ ಕೂಡಾ ಗುರುತಿಸಿಕೊಂಡಿರುವ ಒಂ ಅವರ ಮುಂದಿನ ನಿರ್ದೇಶನದ 'ರೌಡಿ ರಾಣಿ' ಮತ್ತು 'ಪುಟ್ಟ' ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

    ಗುರುಪ್ರಸಾದ್

    ಗುರುಪ್ರಸಾದ್

    ಕನಕಪುರ ಮೂಲದ ಗುರುಪ್ರಸಾದ್ ಇದುವರೆಗೆ ತೆಗೆದಿದ್ದು ಎರಡೇ ಚಿತ್ರ. ಆದರೆ ಎರಡೇ ಚಿತ್ರದಲ್ಲಿ ಅವರು ಪಡೆದ ಖ್ಯಾತಿ ಬೆಟ್ಟದಷ್ಟು. ತನ್ನ ಮೊದಲ ನಿರ್ದೇಶನದ ಮಠ ಚಿತ್ರ, ಎರಡನೇ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರದ ಯಶಸ್ವಿ ಇವರಿಗೆ ಗಾಂಧಿನಗರದಲ್ಲಿ ಸ್ಟಾರ್ ನಿರ್ದೇಶಕ ಪಟ್ಟ ದಕ್ಕುವಂತೆ ಮಾಡಿತು. ನಿರ್ದೇಶನದ ಜೊತೆಗೆ ಸಂಭಾಷಣೆ ಬರೆಯುವ ಗುರುಪ್ರಸಾದ್ ಸದ್ಯ ಪುನೀತ್ ಅಭಿನಯದ ಯಾರೇ ಕೂಗಾಡಲಿ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಅವರ ನಿರ್ದೇಶನದ ಮುಂದಿನ ಚಿತ್ರ ಡೈರೆಕ್ಟರ್ ಸ್ಪೆಷಲ್.

    ಜೋಗಿ ಪ್ರೇಮ್

    ಜೋಗಿ ಪ್ರೇಮ್

    ಮಂಡ್ಯ ಮೂಲದ ಪ್ರೇಮ್ 2003 ರಲ್ಲಿ ಬಿಡುಗಡೆಯಾದ ದರ್ಶನ್ ಅಭಿನಯದ ಕರಿಯಾ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಕರಿಯಾ, ಎಕ್ಸ್ ಕ್ಯೂಸ್ ಮಿ, ಜೋಗಿ ಮೂರು ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಹ್ಯಾಟ್ರಿಕ್ ಡೈರೆಕ್ಟರ್ ಎಂದೇ ಹೆಸರುವಾಸಿಯಾದರು. ಆ ನಂತರ ಅವರೇ ನಟಿಸಿ, ನಿರ್ದೇಶಿಸಿದ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ಸೋತಿತು. ಚಿತ್ರಕ್ಕೆ ಹೈಪ್ ನೀಡುವುದರಲ್ಲಿ ಎತ್ತಿದ ಕೈಯಾಗಿರುವ ಪ್ರೇಮ್ ನಿರ್ದೇಶನದ ಪುನೀತ್ ಅಭಿನಯದ ರಾಜ್ ದಿ ಶೋಮ್ಯಾನ್ ಮತ್ತು ಶಿವಣ್ಣ ಅಭಿನಯದ ಜೋಗಯ್ಯ ಚಿತ್ರ ನೆಲಕಚ್ಚಿತು. ಸದ್ಯ 'ಪ್ರೇಮ್ ಅಡ್ಡಾ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಪ್ರೇಮ್ ಚಿತ್ರ ನಿರ್ದೆಶಿಸುತ್ತಾರಂದರೆ ಜನರು ಒಳ್ಳೆ ನಿರೀಕ್ಷೆ ಇಟ್ಟು ಕೊಂಡಿದ್ದಾರೆ.

    English summary
    Here goes seven Kannada movie directors in action. The talented seven who have made an impact on Kannada movie fans and the industry. What makes the 7 so special? Scroll through.
    Sunday, January 20, 2013, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X