»   » ಧರಣಿ ನಿರತ ಸ್ಯಾಂಡಲ್ ವುಡ್ ನಿರ್ಮಾಪಕರಿಗೆ ಏಳು ಪ್ರಶ್ನೆಗಳು

ಧರಣಿ ನಿರತ ಸ್ಯಾಂಡಲ್ ವುಡ್ ನಿರ್ಮಾಪಕರಿಗೆ ಏಳು ಪ್ರಶ್ನೆಗಳು

Written by: ಬಾಲರಾಜ್ ತಂತ್ರಿ
Subscribe to Filmibeat Kannada

ನಿರ್ಮಾಪಕರನ್ನು ರಾಜಣ್ಣ ಅನ್ನದಾತರು ಅಂದಿದ್ರು, ಈಗಿನ ಪೀಳಿಗೆಯ ಚಿತ್ರೋದ್ಯಮವರಿಗೂ ನಿರ್ಮಾಪಕರು ಅನ್ನದಾತರೇ. ವ್ಯತ್ಯಾಸ ಕಂಡು ಬರುತ್ತಿರುವುದು ರಾಜ್ ಕಾಲದಲ್ಲಿದ್ದ ಸಂಘಟಿತ ವಾತಾವರಣ ಮತ್ತು ಈಗಿನ ಕಾಲದಲ್ಲಿರುವ ಶೀತಲ ವಾತಾವರಣ.

ಪ್ರಸ್ತುತ ಚಲನಚಿತ್ರ ಮಂಡಳಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ನಿರ್ಮಾಪಕರಲ್ಲಿ ಮೈನ್ ಸ್ಟ್ರೀಂ ನಲ್ಲಿರುವ ಪ್ರೊಡ್ಯೂಸರ್ಸ್ ಎಷ್ಟು ಜನ? ಇದರಲ್ಲಿ ಆರ್ಥಿಕವಾಗಿ ಚಿತ್ರೋದ್ಯಮವನ್ನೇ ನಂಬಿಕೊಂಡಿರುವವರು ಯಾರು ಎನ್ನುವುದೇ ಕಾಡುವ ಪ್ರಶ್ನೆ?

ಕನ್ನಡ ಚಿತ್ರವೊಂದು ನೋಡುವಂತಿದ್ದರೆ, ಅದು ಯಾವ ರಿಯಾಲಿಟಿ ಶೋಗಳೇ ಇರಲಿ, ಅದ್ಯಾವ ಐಪಿಎಲ್ಲಿನ ಆರ್ಸಿಬಿ ಪಂದ್ಯವಿರಲಿ ಚಿತ್ರ ಗೆದ್ದ ಉದಾಹರಣೆಗಳು ಒಂದೇ, ಎರಡೇ? ಇದು ನಿರ್ಮಾಪಕರಿಗೂ ಗೊತ್ತಿರುವ ವಿಚಾರ. (ನಿರ್ಮಾಪಕರ ಧರಣಿ ; ಅಂಬರೀಶ್ ನಿಲುವೇನು)

ಸೋಮವಾರದಿಂದ (ಜೂನ್1) ಆರಂಭವಾಗಿರುವ ಈ ಪ್ರತಿಭಟನೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲವಾದರೂ, ಹಲವು ಕಮಿಟಿಗಳಂತೂ ಆರಂಭವಾಗಿವೆ. ಜಗ್ಗೇಶ್, ಅಂಬರೀಶ್ ಸೇರಿದಂತೆ ಹಲವು ಕಲಾವಿದರು ಭೇಟಿ ನೀಡಿದ್ದಾರೆ. ಮಿಕ್ಕವರು?

ನಿರ್ಮಾಪಕರು ನಡೆಸುತ್ತಿರುವ ಈ ಮುಷ್ಕರದ ಸಂದರ್ಭದಲ್ಲಿ ಕೆಲವೊಂದು ಪ್ರಶ್ನೆಗಳು ಅನ್ನದಾತರಿಗೆ, ದಯವಿಟ್ಟು ಅನ್ಯಥಾ ಭಾವಿಸಬೇಡಿ...

1. ಪ್ರಮುಖರ ನಿರ್ಮಾಪಕರ ಗೈರು ಯಾಕೆ?

ನಿರ್ಮಾಪಕರ ಉಳಿವಿಗಾಗಿ ನಡೆಯುತ್ತಿರುವ ಮುಷ್ಕರದಲ್ಲಿ ಹಾಲಿ ಚಿತ್ರ ನಿರ್ಮಾಣದಲ್ಲಿ ಮಂಚೂಣಿಯಲ್ಲಿರುವ ನಿರ್ಮಾಪಕರು ಹಾಜರಾತಿ ಎಷ್ಟು? ನಿರ್ಮಾಪಕರ ಸಂಘದ ಕಾರ್ಯದರ್ಶಿ ಸೂರಪ್ಪ ಬಾಬು ಯಾಕೆ (ಜೂ 3) ಇದುವರೆಗೂ ಹಾಜರಾಗಲಿಲ್ಲ. ನಿರ್ಮಾಪಕರ ಈ ಮುಷ್ಕರದಲ್ಲೂ ಒಗ್ಗಟ್ಟಿಲ್ಲವೇ, ನಿರ್ಮಾಪಕರು ಯಾಕೆ ಸೂರಪ್ಪ ಬಾಬು ರಾಜೀನಾಮೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ?

2. ಪಾರ್ವತಮ್ಮ ರಾಜಕುಮಾರ್ ಬಂದಿದ್ರಾ?

ನಿರ್ಮಾಪಕರಾಗಿರುವ ಪಾರ್ವತಮ್ಮ ರಾಜಕುಮಾರ್, ರಾಘಣ್ಣ, ಜಯಣ್ಣ, ಭೋಗೇಂದ್ರ, ಶ್ರೀನಿವಾಸ್, ಮನೋಹರ್ ಮುಂತಾದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ರಾ? ನಿರ್ಮಾಪಕರ ಸಂಘದ ಅಧ್ಯಕ್ಷ ಜೊತೆಗೆ ಶಾಸಕರೂ ಆಗಿರುವ ಮುನಿರತ್ನಂ ನಾಯ್ಡು ಅವರಿಗೆ ಕೆಲಸದ ಒತ್ತಡ ಇದೆ ಎನ್ನುವುದು ಒಪ್ಪಿಕೊಳ್ಳುವ ವಿಚಾರವಾದರೂ, ಅವರು ಹಾಗೇ ಬಂದು ಹೀಗೆ ಯಾಕೆ ಹೋದ್ರು? ಅವರು ಭಾಗವಹಿಸಲಿಲ್ಲ ಎಂದು ಧರಣಿ ಸಮಯದಲ್ಲಿ ಗೊಂದಲ ಉಂಟಾಗಿದ್ದು ಹೌದಲ್ಲವೇ?

3. ಕ್ರಿಕೆಟ್ ಬ್ಯಾನ್ ಮಾಡಿ ಅಂದ್ರೆ ಏನು ಮೋಡೋದು?

ರಿಯಾಲಿಟಿ ಶೋನಿಂದ ಕನ್ನಡ ಚಿತ್ರಗಳ ಫಸ್ಟ್ ಎಂಡ್ ಸೆಕೆಂಡ್ ಶೋಗೆ ತೊಂದರೆ ಆಗುತ್ತೆ ಎನ್ನುವ ನಿರ್ಮಾಪಕರು, ನಾಳೆ ದಿನ ಐಪಿಎಲ್ ಅಥವಾ ಇನ್ಯಾವುದೋ ಕ್ರಿಕೆಟ್ ಪಂದ್ಯದಿಂದ ಕಲೆಕ್ಷನ್ ಡೌನ್ ಆಯಿತು, ಕೇಬಲ್ ಕಟ್ ಮಾಡಿ ಅಂದ್ರೆ ಅದು ಒಪ್ಪಿಕೊಳ್ಳುವ ಮಾತಾ? ಕೇಬಲ್ ಆಪರೇಟರ್ ಒಪ್ಪಿಕೊಳ್ತಾರಾ?

4. ಬೇರೆ ಭಾಷೆಯ ಚಿತ್ರಗಳು

ಸರ್ವಾಂತರ್ಯಾಮಿಯಾಗಿರುವ ಬೆಂಗಳೂರು ಮಾರುಕಟ್ಟೆಯಲ್ಲಿ ಎಲ್ಲಾ ಭಾಷೆಯ ಚಿತ್ರಕ್ಕೂ ಬಹುಬೇಡಿಕೆ. ಈಗ ಧರಣಿ ಕೂತಿರುವ ನಿರ್ಮಾಪಕರಲ್ಲಿ ಎಷ್ಟು ಮಂದಿ ತೆಲುಗು, ತಮಿಳು, ಹಿಂದಿ ಭಾಷೆಯ ವಿತರಣೆ ಹಕ್ಕನ್ನು ಪಡೆದಿಲ್ಲ, ನಗರದ ಎಷ್ಟು ಚಿತ್ರಮಂದಿರದಲ್ಲಿ ಬೇರೆ ಭಾಷೆಯ ಚಿತ್ರ ಪ್ರದರ್ಶಿಸಲಿಲ್ಲ. ಆ ಸಮಯದಲ್ಲಿ ಬಿಡುಗಡೆಯಾಗಿದ್ದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗದೇ ಎಷ್ಟು ಪರದಾಡುವಂತಾಯಿತು? ಯಾಕೆ ನಿಮಗೆ ಆವಾಗ ಬೇರೆ ನಿರ್ಮಾಪಕರ ಬಗ್ಗೆ ಕಾಳಜಿಯಿರಲಿಲ್ಲ? ಅವರೂ ನಿಮ್ಮ ಹಾಗೇ ನಿರ್ಮಾಪಕರು ಅನ್ನೋದನ್ನು ಮರೆತ್ರಾ?

5. ಸಂಭಾವನೆ ಕೇಳ್ತಾರೆ ಕೊಡ್ತೀರಾ?

ರಿಯಾಲಿಟಿ ಶೋನಿಂದ ಬಾಕ್ಸಾಫೀಸಿಗೆ ತೊಂದರೆ ಆಗುತ್ತೆ ಎನ್ನುವುದು ನಿಮ್ಮ ವಾದವಾದರೆ, ಮುಂದಿನ ಚಿತ್ರಗಳಿಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ/ಭಾಗವಹಿಸಿದ್ದ ಸೆಲೆಬ್ರಿಟಿಗಳು ಹೆಚ್ಚಿನ ಸಂಭಾವನೆ ಕೇಳ್ತಾರೆ. ರಿಯಾಲಿಟಿ ಶೋನಲ್ಲಿ ಬರುವ ಸಂಭಾವನೆಯನ್ನು ಚಿತ್ರದಲ್ಲಿ ಸೇರಿಸಿ ಕೊಡಿ ಅಂದರೆ ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೇ?

6. ರಣವಿಕ್ರಮ, ಕೃಷ್ಣಲೀಲಾ

ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಂಡ ರಣವಿಕ್ರಮ, ಕೃಷ್ಣಲೀಲಾ ಚಿತ್ರಗಳಿಗೆ ರಿಯಾಲಿಟಿ ಶೋ ಅಥವಾ ಐಪಿಲ್ ಪಂದ್ಯದಿಂದ ಮೊದಲ ಎರಡು ದಿನ ಮಾತ್ರ ಫಸ್ಟ್ ಮತ್ತು ಸೆಕೆಂಡ್ ಶೋನಲ್ಲಿ ಗಳಿಕೆಯಲ್ಲಿ ತೊಂದರೆಯಾಗಿತ್ತು, ಮಿಕ್ಕಿದಂತೇ ಕಲೆಕ್ಷನ್ ನಲ್ಲಿ ಯಾವುದೇ ತೊಂದರೆಯಾಗಿಲ್ಲ ಎನ್ನುವುದು ಗಾಂಧಿನಗರಕ್ಕೆ ಗೊತ್ತಿಲ್ಲದ ವಿಚಾರನಾ?

7. ನಿಮ್ಮ ಪ್ರತಿಭಟನೆ ಯಾಕೆ ಹಿಂದೆ ಕಾವು ಪಡೆದಿರಲಿಲ್ಲ

ಪುನೀತ್ ರಾಜಕುಮಾರ್, ಗಣೇಶ್, ರಮೇಶ್ ಅರವಿಂದ್, ಸುದೀಪ್ ನಡೆಸಿಕೊಟ್ಟ ರಿಯಾಲಿಟಿ ಶೋ ಮುಗಿದು ಕೆಲವು ತಿಂಗಳುಗಳೇ ಆಗಿಹೋಯಿತು. ಯಾಕೆ ಈಗ ನಿಮ್ಮ ಪ್ರತಿಭಟನೆ ಇಷ್ಟು ಕಾವು ಪಡೆಯುತ್ತಿದೆ ಎನ್ನುವುದೇ ಅರ್ಥವಾಗದ ವಿಚಾರ. ಟಿವಿಯವರು ಚಿತ್ರದ ರೈಟ್ಸ್ ತೆಗೆದುಕೊಳ್ಳದಿರುವುದಕ್ಕೂ, ಸೆಲೆಬ್ರಿಟಿಗಳು ರಿಯಾಲಿಟಿ ಶೋನಲ್ಲಿ ಭಾಗವಹಿಸುವುದಕ್ಕೂ ಏನು ಸಂಬಂಧವೋ ಗೊತ್ತಾಗುತ್ತಿಲ್ಲ?

English summary
Sandalwood producers on strike over reality show and other issues, seven questions to them.
Please Wait while comments are loading...

Kannada Photos

Go to : More Photos