twitter
    For Quick Alerts
    ALLOW NOTIFICATIONS  
    For Daily Alerts

    ಕರಾವಳಿಯ ಕಲಾವಿದರ 'ಚಾಲಿಪೋಲಿಲು' ತೆರೆಗೆ ಸಿದ್ಧ

    By Rajendra
    |

    ತುಳು ಸಿನಿಮಾ ರಂಗಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ, ತುಳು ಸಿನಿಮಾದ ಮೂಲಕ ಹಾಸ್ಯಕ್ಕೆ ಹೊಸ ಭಾಷ್ಯ ಬರೆಯುವ ತವಕದಲ್ಲಿ, ಚದುರಿ ಹೋಗಿರುವ ತುಳು ಕಲಾಭಿಮಾನಿಗಳನ್ನು ಒಂದೇ ಸಿನಿಮಾ ಸೂರಿನಡಿಯಲ್ಲಿ ಕಟ್ಟಿ ಹಾಕಿ ಏಕ ಕಾಲಕ್ಕೆ ಎಲ್ಲರನ್ನೂ ತೆರೆಯ ಮೇಲೆ ಮೂಡಿಸುವ ಪ್ರಯತ್ನದಲ್ಲಿ ತೆರೆಯ ಮೇಲೆ ಮೂಡಲು ತಯಾರಾಗುತ್ತಿದೆ ತುಳು ಸಿನಿಮಾ 'ಚಾಲಿಪೋಲಿಲು'.

    ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಗೆ ತಯಾರಾಗಿರುವ ಜಯಕಿರಣ ಫಿಲ್ಸ್ಮ್ ಲಾಂಛನದಡಿ ಪ್ರಕಾಶ್ ಪಾಂಡೇಶ್ವರ ಅವರು ನಿರ್ಮಿಸುತ್ತಿರುವ ಚಾಲಿಪೋಲಿಲು ತುಳು ಸಿನಿಮಾ ಬಗ್ಗೆ ಚಿತ್ರಪ್ರೇಮಿಗಳು ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಜಯಕಿರಣ ಫಿಲ್ಸ್ಮ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುವ ಮೊದಲ ಸಿನಿಮಾ ಇದಾಗಿದ್ದರೂ, ಇದರಲ್ಲಿರುವ ಹಲವಾರು ಗುಣಾತ್ಮಕ ಅಂಶಗಳು ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ.

    ಹಲವು ಪ್ರಥಮಗಳಿಗೆ ಚಾಲಿಪೋಲಿಲು ಸಿನಿಮಾ ಸಾಕ್ಷಿಯಾಗಿದೆ. ಮುಖ್ಯವಾಗಿ ತುಳು ರಂಗಭೂಮಿಯ ಹೆಚ್ಚಿನೆಲ್ಲ ಪ್ರಮುಖ ತಂಡಗಳ ಮುಖ್ಯ ಕಲಾವಿದರೆಲ್ಲರಿಗೂ ಇಲ್ಲಿ ಅವಕಾಶ ನೀಡಲಾಗಿರುವುದು ಮತ್ತು ಈ ರೀತಿ ಎಲ್ಲ ಪ್ರಮುಖ ಕಲಾವಿದರನ್ನು ಸೇರಿಸಿಕೊಂಡು ನಿರ್ಮಾಣವಾಗುತ್ತಿರುವ ಮೊದಲ ತುಳು ಸಿನಿಮಾ ಇದು.

    ಸುಮಾರು 400ಕ್ಕೂ ಮಿಕ್ಕಿದ ತಮಿಳು, ತೆಲುಗು, ಮಲಯಾಳ, ಕನ್ನಡ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಕೂಲ್ ಜಯಂತ್ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವ ಮೊದಲ ತುಳು ಸಿನಿಮಾ ಚಾಲಿಪೋಲಿಲು. ಮಲಯಾಳಿ ಸಿನಿಮಾಗಳಲ್ಲಿ ಕಂಡುಬರುವಂಥ ಉತ್ಕೃಷ್ಟ ಗುಣಮಟ್ಟದ ಹಾಸ್ಯಪ್ರಧಾನ ಚಿತ್ರವಾಗಿರುವ ಇದು ಆ ಸಾಲಿಗೆ ಸೇರುವ ಮೊದಲ ತುಳು ಚಿತ್ರ.

    ತುಳು ರಂಗಭೂಮಿಯ ಎರಡು ಅತಿ ಪ್ರಮುಖರಾಗಿರುವ ದೇವದಾಸ್ ಕಾಪಿಕಾಡ್ ಮತ್ತು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ಜಂಟಿಯಾಗಿ ದುಡಿದಿರುವ ಮೊದಲ ತುಳು ಸಿನಿಮಾ ಇದು. ಮಲಯಾಳ ಚಿತ್ರರಂಗದ ಖ್ಯಾತ ಕೆಮೆರಾಮ್ಯಾನ್ ಉತ್ಪಲ್ ನಾಯನಾರ್ ಅವರ ಕೆಮರಾದಿಂದ ಮೂಡಿ ಬಂದಿರುವ ಮೊದಲ ತುಳು ಚಿತ್ರ ಇದಾಗಿದೆ.

    ಎರಡು ಕ್ಯಾಮೆರಾಗಳನ್ನು ಬಳಸಿಕೊಂಡು ಸುಮಾರು 26 ದಿನಗಳ ಕಾಲ ಒಂದು ಹಂತದಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾದಲ್ಲಿ ಒಂದು ಉತ್ತಮ ಸ್ಟಂಟ್ ದೃಶ್ಯವಿದೆ. ಈ ದೃಶ್ಯಕ್ಕಾಗಿ ವಿಶೇಷ ತಯಾರಿ ಮಾಡಲಾಗಿದ್ದು, ವಿನೋದ್ ಬೆಂಗಳೂರು ನೇತೃತ್ವದಲ್ಲಿ ನಡೆದಿದೆ. ಈ ಸ್ಟಂಟ್ ದೃಶ್ಯಕ್ಕಾಗಿ ಬೆಂಗಳೂರಿನ ಒಂದು ತಂಡವೇ ಬಂದಿತ್ತು. ಹೊಡೆದಾಟದ ದೃಶ್ಯವನ್ನು ಉತ್ಕೃಷ್ಟ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ. ವಿ.ಮನೋಹರ್ ಸಂಗೀತ ಒದಗಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಹಿನ್ನಲೆ ಸಂಗೀತವಿದೆ. ಮಾಧವ ಶೆಟ್ಟಿ ಸುರತ್ಕಲ್ ಚಿತ್ರದಲ್ಲಿ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದಾರೆ.

    ಯುವ ನಿರ್ದೇಶಕ ವಿರೇಂದ್ರ ಶೆಟ್ಟಿ ಕಾವೂರು ಅವರ ನಿರ್ದೇಶನವಿರುವ ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಅವರದ್ದೇ. ಜತೆಗೆ ಸಾಹಿತ್ಯವನ್ನೂ ಒದಗಿಸಿದ್ದಾರೆ. ಇವರ ಜತೆಗೆ ವಿ.ಮನೋಹರ್, ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್ ಕೂಡ ಹಾಡುಗಳನ್ನು ಬರೆದಿದ್ದಾರೆ. ಈ ಪೈಕಿ ಕಾಪಿಕಾಡ್ ಮತ್ತು ಕೊಡಿಯಾಲ್ ಬೈಲ್ ರಚನೆಯ ಹಾಡುಗಳು ಈಗಾಗಲೇ ಕೆಲವು ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡಲ್ಪಡುತ್ತಿದ್ದು, ಅಪಾರ ಜನಮನ್ನಣೆ ಪಡೆಯುತ್ತಿದೆ. ಜನರ ಬಾಯಲ್ಲಿ ಗುರುತಿಸಲ್ಪಡುತ್ತಿದೆ.

    ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಒಂದು ಹಾಡನ್ನು ಮಡಿಕೇರಿಯಲ್ಲಿ ಅದ್ಬುತವಾಗಿ ಚಿತ್ರೀಕರಿಸಿಕೊಳ್ಳಲಾಗಿದೆ. ಮಂಗಳೂರಿನ ಸುತ್ತಮುತ್ತ, ಕಾವೂರು, ಸುರತ್ಕಲ್ ಸಮೀಪದ ಚೇಳ್ಯಾರುಪದವು, ಸಸಿಹಿತ್ಲು, ಮಡಿಕೇರಿ...ಮುಂತಾದ ಆಕರ್ಷಕ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲ್ಪಟ್ಟಿರುವ ಈ ಸಿನಿಮಾದಲ್ಲಿ ಜಿಲ್ಲೆಯ ಪ್ರಕೃತಿ ಸೊಬಗನ್ನು ಪ್ರೇಕ್ಷಕರಿಗೆ ಉಣಬಡಿಸಲು ನಿರ್ಮಾಪಕರು ಬಯಸಿರುವುದು ಸಿನಿಮಾದಲ್ಲಿ ಪ್ರತಿಬಿಂಬಿಸಲ್ಪಡಲಿದೆ.

    ಚಾಲಿಪೋಲಿಲು ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಅವರು ತನ್ನ ಪ್ರತಿಭೆಯ ವಿಶ್ವದರ್ಶನ ಮಾಡಿದ್ದಾರೆ ಎಂದು ಹೇಳಿದರೂ ತಪ್ಪಾಗದು. ಕಾಪಿಕಾಡ್ ಅದ್ಭುತ ಅಭಿನಯದ ಮೂಲಕ ನಟನಾಗಿ, ಒಂದು ಹಾಡು ಬರೆದು ಹಾಡುವ ಮೂಲಕ ಸಾಹಿತಿ ಮತ್ತು ಗಾಯಕನಾಗಿ, ಡಾನ್ಸ್ ಮಾಡುವ ಮೂಲಕ ಡಾನ್ಸರ್ ಆಗಿ, ಸ್ಟೆಂಟ್ ದೃಶ್ಯದಲ್ಲೂ ಭಾಗವಹಿಸಿ ಫೈಟರ್ ಆಗಿಯೂ ಕಾಣಿಸಿಕೊಂಡಿರುವುದು ಭೇಷ್ ಎನ್ನಲೇಬೇಕಾದ ಸಂಗತಿ.

    ಒಬ್ಬ ವ್ಯಕ್ತಿ ಇಷ್ಟೆಲ್ಲ ಮಾಡಿರುವುದು ಅದ್ಭುತವೇ. ಕಾಪಿಕಾಡ್‍ರಂಥ ಮಹಾ ಕಲಾವಿದರಿಂದ ಇಂಥ ಕಲಾಸೇವೆಯನ್ನು ಪಡೆದುಕೊಂಡಿರುವ ಚಾಲಿಪೋಲಿಲು ಬಗ್ಗೆ ಪ್ರೇಕ್ಷಕರಿಗೆ ಅಪಾರ ನಿರೀಕ್ಷೆಯಿರುವುದು ಸಹಜವೇ. ಕಾಪಿಕಾಡ್ ಅವರಿಗೆ ಕುಸೇಲ್ದರಸೆ ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಅರವಿಂದ ಬೋಳಾರ್, ಸುಂದರ ರೈ ಮಂದಾರ, ಸಾಥ್ ನೀಡಿದ್ದಾರೆ. ಈ ಸಿನಿಮಾದಲ್ಲಿ ತಂದೆ ಕಾಪಿಕಾಡ್ ಮತ್ತು ಮಗ ಅರ್ಜುನ್ ಜೋಡಿಯೂ ನಟಿಸಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ತೆಲಿಕೆದ ಬೊಳ್ಳಿಯಲ್ಲಿ ಈ ಜೋಡಿ ಕಾಣಸಿಕ್ಕಿದ್ದು. ಮತ್ತೆ ಚಾಲಿಪೋಲಿಲು ಸಿನಿಮಾದಲ್ಲಿ ಅವರನ್ನು ಕಾಣುವ ಅವಕಾಶ ತುಳು ಚಿತ್ರಪ್ರೇಮಿಗಳಿಗೆ ಒದಗಿ ಬಂದಿದೆ.

    Chaalipolilu
    ಚಾಲಿಪೋಲು ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ನವೀನ್ ಡಿ,ಪಡೀಲ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ, ಚೇತನ್ ರೈ ಅವರ ಸ್ಪರ್ಧಾತ್ಮಕ ನಟನೆ ಒಂದು ದೊಡ್ಡ ಪ್ಲಸ್ ಪಾಯಿಂಟ್. ಸೀರಿಯಲ್ ನಟಿಯರಾದ ದಿವ್ಯಾ ಮತ್ತು ನವ್ಯಾ ಅವರು ನಾಯಕಿಯರಾಗಿದ್ದು, ಕಾಪಿಕಾಡ್ ಅವರ ಪುತ್ರ ಅರ್ಜುನ್ ಅವರು ಒಂದು ಪಾತ್ರದಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಸುರೇಂದ್ರ ಬಂಟ್ವಾಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಪದ್ಮಜಾ ರಾವ್, ಲಕ್ಷ್ಮಣ ಕುಮಾರ್ ಮಲ್ಲೂರು, ಉಮೇಶ್ ಮಿಜಾರ್, ರಾಘವೇಂದ್ರ ರೈ, ಪ್ರಸನ್ನ ಶೆಟ್ಟಿ ಬೈಲೂರು, ಶೋಭಾ ರೈ, ಸರೋಜಿನಿ ಶೆಟ್ಟಿ, ತಿಮ್ಮಪ್ಪ ಕುಲಾಲ್ ಉಮಾನಾಥ ಕೋಟ್ಯಾನ್, ಕರ್ನೂರ್ ಮೋಹನ್ ರೈ, ಗಿರೀಶ್ ಶೆಟ್ಟಿ ಪೆರ್ಮುದೆ, ಪ್ರದೀಪ್ ಆಳ್ವ ಕದ್ರಿ, ಸದಾಶಿವ ದಾಸ್, ಆಗ್ನೆಲ್, ಪಾಂಡುರಂಗ, ಮಂಗೇಶ್ ಭಟ್, ರವಿ ಸುರತ್ಕಲ್, ದಯಾನಂದ ಕುಲಾಲ್, ಸುರೇಶ್ ಕುಲಾಲ್, ಸುಮಿತ್ರಾ ರೈ, ರಶ್ಮಿಕಾ, ವಿದ್ಯಾಶ್ರೀ , ಪಾರ್ವತಿ, ಕರುಣಾಕರ ಸರಿಪಳ್ಳ, ಸೋಮು ಜೋಕಟ್ಟೆ ಮೊದಲಾದ ಕಲಾವಿದರ ದಂಡೇ ಚಿತ್ರದಲ್ಲಿದೆ.

    ಹಾಗೆಂದು ಇದು ಕೇವಲ ಹಾಸ್ಯದಲ್ಲೇ ಮುಗಿದು ಹೋಗುವ ಸಿನಿಮಾವಲ್ಲ. ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರಿಗೆ ಹಾಸ್ಯದೊಂದಿಗೆ ಉತ್ತಮ ಸಂದೇಶವನ್ನು ನೀಡುವ ಕಥೆಯೂ ಇದರಲ್ಲಿದೆ. ಚಿತ್ರದಲ್ಲಿ ಬೆಟ್ಟಿಂಗ್, ಜ್ಯೋತಿಷದ ಬಗೆಗೂ ವಿಡಂಬನಾತ್ಮಕ ಕಥೆಯಿರುವುದು ಒಂದು ದೊಡ್ಡ ಪ್ಲಸ್ ಪಾಯಿಂಟ್. ಹೀಗೆ ಹಲವಾರು ವೈಶಿಷ್ಟಗಳನ್ನು ಹೊಂದಿರುವ ಚಾಲಿಪೋಲಿಲು ಸಿನಿಮಾ ಈ ತಿಂಗಳಲ್ಲಿ ತೆರೆಗೆ ಬರಲಿದ್ದು ತುಳು ಚಿತ್ರಪ್ರೇಮಿಗಳು ಮತ್ತು ಚಿತ್ರಾಭಿಮಾನಿಗಳಿಗೆ ರಸದೌತಣ ನೀಡಲಿದೆ. (ಫಿಲ್ಮಿಬೀಟ್ ಕನ್ನಡ)

    English summary
    Tulu movie 'Chaali Polilu' ready for release. The movie produced by Prakash Pandeshwar under the banner Jayakirana Films. Veerendra Shetty Kavoor is the story writer, lyricist and director.
    Thursday, October 9, 2014, 14:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X