twitter
    For Quick Alerts
    ALLOW NOTIFICATIONS  
    For Daily Alerts

    ಮೂಗಿಗೇರಿದರೂ ನೆತ್ತಿಗೇರದ ಮಲ್ಲಿಗೆಯ ಘಮಲು

    By Staff
    |

    ಜಾಗತೀಕರಣದ ವಿರುದ್ಧ ಜನರನ್ನು ರೊಚ್ಚಿಗೇಳಿಸುವಂತಿಲ್ಲದಿದ್ದರೂ ನೆತ್ತಿಗೆ ತಟ್ಟುವಂತೆ ನಾಗತಿಹಳ್ಳಿ ಚಂದ್ರಶೇಖರ್ 'ಮಾತಾಡ್ ಮಾತಾಡು ಮಲ್ಲಿಗೆ' ಸಿನೆಮಾ ಮಾಡಿದ್ದಾರೆ.
    ಪ್ರಸಾದ ನಾಯಿಕ
    ಅಸಲಿಗೆ ಹಳ್ಳಿ ನಗರಗಳಲ್ಲಿ ಕುಡಿಯಲು ನೀರಿಲ್ಲದಿದ್ದರೂ ಕುಡಿಯಲು ಅಯೋಗ್ಯವಾಗಿರುವ ನೀರು ಬಾಟಲಿಗಳ ರೂಪದಲ್ಲಿ ಮಾರಾಟಕ್ಕಿವೆ, ಎಳನೀರು ಕುಡಿಯಲು ಹಿಂದೆಮುಂದೆ ನೋಡುವ ಜನ ಪೆಪ್ಸಿ ಕೋಲಾಗಳ ಗಟಾರು ನೀರಿಗೆ ಲಜ್ಜೆಯಿಲ್ಲದೆ ಬಾಯಿಡುತ್ತಿದ್ದಾರೆ, ಬಹುರಾಷ್ಟ್ರೀಯ ಕಂಪನಿಗಳು ಬಿಸಾಕುವ ಹಣಕ್ಕೆ ಸರ್ಕಾರದಿಂದ ಭೂಮಿ ಒತ್ತುವರಿಯಾಗುತ್ತಲೇ ಇದೆ, ಜನರಲ್ಲಿ ಪ್ರತಿರೋಧದ ಧ್ವನಿ ಬತ್ತಿಹೋಗಿದೆ.

    ಒಂದು ಚಿತ್ರ ಮಾಡುವುದು ಎಷ್ಟು ಮುಖ್ಯವೋ ಅದು ಸಮಾಜದ ಮೇಲೆ ಬೀರುವ ಪರಣಾಮ ಕೂಡ ಅಷ್ಟೇ ಮುಖ್ಯ. ಜಾಗತೀಕರಣದ ವಿರುದ್ಧ ಜನರನ್ನು ರೊಚ್ಚಿಗೇಳಿಸುವಂತಿಲ್ಲದಿದ್ದರೂ ನೆತ್ತಿಗೆ ತಟ್ಟುವಂತೆ ನಾಗತಿಹಳ್ಳಿ ಚಂದ್ರಶೇಖರ್ 'ಮಾತಾಡ್ ಮಾತಾಡು ಮಲ್ಲಿಗೆ' ಸಿನೆಮಾ ಮಾಡಿದ್ದಾರೆ. ಸುಮ್ಮನೆ ಘಮ್ಮೆನ್ನುವ ಮಲ್ಲಿಗೆ ಮಾತಾಡಿದೆ.ಧಗಧಗಿಸುವ ಇಳೆಯ ಮೇಲೆ ಬಿದ್ದ ಮೊದಲ ಮಳೆಯ ಹನಿ ಹಬ್ಬುವ ಮಣ್ಣಿನ ವಾಸನೆ ನೀವು ಇಷ್ಟಪಡುವಿರಾದರೆ ನಿಮಗೆ ಈ ಚಿತ್ರ ಇಷ್ಟವಾಗುತ್ತದೆ. ಜುಳುಜುಳು ಹರಿಯುವ ನದಿ, ನಿಷ್ಕಲ್ಮಶ ಪರಿಸರದ ಆಸ್ವಾದಿಗಳಾದರೆ ಮಲ್ಲಿಗೆ ನಿಮ್ಮನ್ನು ಚಿಂತನೆಗೀಡುಮಾಡುತ್ತದೆ. ರಭಸವಿಲ್ಲದಿದ್ದರೂ ಮಂದಗಾಮಿನಿಯಾಗಿ ಪರಿಮಳದ ಓಘ ನಿಮ್ಮನ್ನು ತಟ್ಟುತ್ತದೆ.

    ಭಾರತದ ಸಂಪತ್ತು, ಭಾರತದ ಬಡಜನತೆಯನ್ನು ನಿಕೃಷ್ಟವಾಗಿ ಕಾಣುವ ಬಹುರಾಷ್ಟ್ರೀಯ ಕಂಪನಿಗಳ ಭೂಕಬಳಿಕೆಯ ಹುನ್ನಾರದ ವಿರುದ್ಧ, ಅವರೊಡ್ಡುವ ಎಂಜಲಿಗೆ ನಾಲಿಗೆ ಚಾಚುವ, ಜನರನ್ನು ಒಕ್ಕಲೆಬ್ಬಿಸಲು ನಾಚದ ಹೊಲಸು ರಾಜಕಾರಣದ ವಿರುದ್ಧ, ವ್ಯವಸ್ಥೆಯೇ ಹದಗೆಟ್ಟಿದ್ದರೂ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟ ರೈತನೊಬ್ಬನ ಏಕಾಂಗಿ ಹೋರಾಟದ ಹೂರಣವಿರುವ ವಸ್ತುವಿಗೆ ಕಮರ್ಶಿಯಲ್ ಟಚ್ ನೀಡಿದ್ದಾರೆ ನಾಗತಿ.

    ಚಿತ್ರದ ತುಂಬ ಘಮಲೋ ಘಮಲು. ಎಂಎನ್‌ಸಿಗಳ ಹುನ್ನಾರವನ್ನರಿಯದ ಜೇನುಕೊಪ್ಪ ಗ್ರಾಮದ ಜನರ ಮುಗ್ಧತೆಯ ಘಮಲು. ಗಣಿಗಾರಿಕೆಗಾಗಿ ಚಿಲ್ಲರಿಯಂತೆ ಹಣ ಬಿಸಾಕಿ ಭೂಮಿ ಕಿತ್ತುಕೊಳ್ಳಲು ಯತ್ನಿಸುವ ಎಂಎನ್‌ಸಿಗಳು ಒಡ್ಡಿದ ಸವಾಲು. ಜನರ ಆಶೋತ್ತರಗಳನ್ನು ಕಡೆಗಣಿಸುವ ಹೊಲಸು ರಾಜಕಾರಣದ ತೆವಲು. ಕೊನೆಗೆ ನಕ್ಸಲೀಯರ ನೆತ್ತರದ ಹೊನಲು. ಒಂದೇ ದಾರದಲ್ಲಿ ನಾಲ್ಲು ಸಮಸ್ಯೆಗಳನ್ನು ಪೋಣಿಸಿದ್ದಾರೆ ನಾಗತಿ.

    ಇವೆಲ್ಲವನ್ನು ಮೀರಿದ ಅಮಲನ್ನು ಹೂಬೆಳೆಸುವ ರೈತ ಹೂವಯ್ಯನಾಗಿ ವಿಷ್ಣುವರ್ಧನ್ ಏರಿಸಿದ್ದಾರೆ. ಅದು ನೆತ್ತಿಗೇರದಂತೆ ಎಚ್ಚರವಹಿಸಿದ್ದಾರೆ. ಹೆಂಡತಿಗಾಗಿ ಚಿಟ್ಟೆ ಹಿಡಿಯಲು ಯತ್ನಿಸುವ ಗಂಡನಾಗಿ, ಬೆಳೆದ ಮಕ್ಕಳಿಗೆ ತುತ್ತುಣಿಸುವ ಅಪ್ಪನಾಗಿ, ಜೇನುಕೊಪ್ಪದ ಜನರ ಸಂಕಷ್ಟಕ್ಕೆ ಆಸರೆಯಾಗಿ ನಿಲ್ಲುವ ಜಮೀನ್ದಾರನಾಗಿ, ಭೂರಕ್ಷಣೆಗೆ ಎಂಎನ್‌ಸಿಗಳ ವಿರುದ್ಧ ಅಹಿಂಸೆಯಿಂದಲೇ ಸೆಡ್ಡು ಹೊಡೆಯುವ ಗಾಂಧೀವಾದಿಯಾಗಿ ವಿಷ್ಣು ಚಿತ್ರದ ತುಂಬ ಆಹ್ಲಾದಕರ ಕಂಪನ್ನು ಪಸರಿಸಿದ್ದಾರೆ. ಗಿರಿಜಾ ಮೀಸೆ ಬಿಟ್ಟು ಇಲ್ಲಿಯವರೆಗೆ ಗರ್ಜಿಸಿದ್ದ ಸಾಹಸಸಿಂಹ ಇಲ್ಲಿ ಕೆಂಚಲುಗಡ್ಡ ಬಿಟ್ಟ ಅಪ್ಪಟ ವೇದಾಂತಿ. ನಗುವ ಗುಣ ನಮಗೂ ಕಲಿಸಿರೆಂದು ಹೂವನ್ನೇ ಕೇಳುವ ವಿಷ್ಣುವಿನ ಮುಗ್ಧ ನಗು ದೇವಲೋಕದ ಪಾರಿಜಾತದಂತೆ. ಆಗಷ್ಟೇ ಬಿರಿದ ಎಂದೂ ಬಾಡದ ಮಲ್ಲಿಗೆ ನಗು. ವಿಷ್ಣು ಪತ್ನಿಯಾಗಿ ನಟಿಸಿರುವ ಸುಹಾಸಿನಿಯ ನಗು ಸ್ವಲ್ಪ ಜಾಸ್ತಿ ಅರಳಿದೆ. ಕಂಟ್ರೋಲ್ಡ್ ನಗುವಿನ ಮೂಲಕ ಎಂಥಾ ಮನಸ್ಸನ್ನೂ ಆವರಿಸಿದ್ದ ಅಮೃತವರ್ಷಿಣಿ ಅಳ್ಳಿಬಾಸೆಯಾಡುವ ಮುಖಾಂತರ ಇಲ್ಲಿ ಬೇರೆಯೇ ರೀತಿಯಲ್ಲಿ ಕಾಣುತ್ತಾರೆ.

    ಅಪ್ಪಟ ಗಂಭೀರ ವಸ್ತುವನ್ನು ಒಡ್ಡುಕಟ್ಟದ ನೀರಿನ ಹರಿವಂತೆ ಹಾಸ್ಯ ಸನ್ನಿವೇಶಗಳ ಮುಖಾಂತರ ತಿಳಿಗೊಳಿಸಿದ್ದಾರೆ ನಾಗತಿ. ಕುಡುಕನಾಗಿ ಮಂಡ್ಯ ರಮೇಶ್, ಕ್ಯಾಂಟೀನ್ ಮಾಲಕಿಯಾಗಿ ರಾಜ್ಯಪ್ರಶಸ್ತಿ ವಿಜೇತೆ ತಾರಾ, ಹಳ್ಳಿಗರನ್ನು ಯಾಮಾರಿಸಲು ಯತ್ನಿಸುವವನಾಗಿ ರಂಗಾಯಣ ರಘು, ಹಳ್ಳಿಗರಾಗಿ ದೊಡ್ಡಣ್ಣ, ಸಿಹಿಕಹಿ ಚಂದ್ರು ಸದಭಿರುಚಿಯ ಹಾಸ್ಯದ ಹೊನಲನ್ನು ಹರಿಸಿದ್ದಾರೆ. ಅದರಲ್ಲೂ ವಾಟಿಸ್ಸೆಯಾಗಿ ಕುಡುಕ ಮಂಡ್ಯ ರಮೇಶ್ ಹಾಸ್ಯಾಯಣ ಸಖತ್ ಕಿಕ್ ಕೊಡುತ್ತದೆ. ಅಪ್ಪಟ ಕಲಾವಿದರು ನಾಗತಿ ಕೆಲಸವನ್ನು ಸಲೀಸಾಗಿಸಿದ್ದಾರೆ.

    ಅಹಿಂಸೆಯ ಹೋರಾಟದ ಪ್ರತೀಕವಾಗಿ ವಿಷ್ಣು ನಿಂತರೆ, ಹಿಂಸಾತ್ಮಕ ಹೋರಾಟದ ಪ್ರತೀಕವಾಗಿ ಸುದೀಪ್‌ರನ್ನು ನಕ್ಸಲೀಯನನ್ನಾಗಿ ತೆರೆಗೆ ತರುವ ಮುಖಾಂತರ ಕಮರ್ಶಿಯಲ್ ರಂಗು ನೀಡಿದ್ದಾರೆ, ನಕ್ಸಲೀಯ ಹೋರಾಟಕ್ಕೆ ಒಂದು ಆಯಾಮ ನೀಡಲು ಪ್ರಯತ್ನಸಿದ್ದಾರೆ.

    ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ಹಾಡು ಬರೆದು ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ ನಾಗತಿ ಛಾಪು ಪ್ರತಿಯೊಂದು ಫ್ರೇಮಿನಲ್ಲೂ ಕಾಣುತ್ತದೆ. ಕಥೆಗಾಗಿ ನಾಗತಿ ಸಾಕಷ್ಟು ರಿಸರ್ಚ್ ಮಾಡಿದ್ದಾರೆ. ಭಾರತದಾದ್ಯಂತ ಎಂಎನ್‌ಸಿಗಳು ನಡೆಸಿರುವ ಹಾವಳಿ, ರೈತರ ಆತ್ಮಹತ್ಯೆಗಳು, ಇನ್ಹತ್ತು ವರುಷಗಳಲ್ಲಿ ಒತ್ತುವರಿಗಾಗುವ ಭೂಮಿಯ ಅಂಕಿಅಂಶ ಇದಕ್ಕೆ ಹಿಡಿದ ಕನ್ನಡಿ. ಮನೋಮೂರ್ತಿಯವರ ಗುನುಗುವ ಸಂಗೀತ, ಕೃಷ್ಣಕುಮಾರ್‌ರ ಕ್ಯಾಮೆರಾ ಚಿತ್ರದ ಓಟಕ್ಕೆ ಪೂರಕವಾಗಿ ನಿಂತಿವೆ.

    ಹೂವನ್ನೇ ಉಸಿರಾಡುವ ಹೂವಯ್ಯನ ಕುಟುಂಬವೇ ಒಂದು ಹೂತೋಟ. ಪೊಲೀಸರ ದಾಳಿಯಲ್ಲಿ ಗುಂಡೇಟಿಗೆ ಬಲಿಯಾಗುವ ಕನಕಳಾಗಿ ಸುಹಾಸಿನಿ, ಯೌವನದ ಗಾಳಿ ಬೀಸಿದಾಗ ಹಾರಿಹೋಗುವ ಹೂಗಳಾಗಿ ತೇಜಸ್ವಿನಿ, ರಶ್ಮಿ ಕುಲಕರ್ಣಿ, ಅವರು ಯಾವುದೇ ವಾಸನೆ ಉಳಿಸುವುದಿಲ್ಲ. ಹೆಚ್ಚು ಓದದ ತಿರಸ್ಕೃತ ಮಗಳಂತಿರುವ 26 ಬಗೆಯ ಹೂಗಳನ್ನು ಒಂದೇ ಉಸುರಿಗೆ ಉಸುರುವ ಸ್ಮಿತಾ ಮಾತ್ರ ಮಲ್ಲಿಗೆಯ ವಾಸನೆಯನ್ನು ಉಳಿಸಿದ್ದಾರೆ.

    ಎಂಎನ್‌ಸಿ, ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಹೂಡಿದ್ದ ಕೇಸು ಬಿದ್ದಹೋಗಿ, ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ಭೂಕಬಳಿಕೆಯ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ಹೂವಯ್ಯನ ಬಗ್ಗೆ ಕನಿಕರ, ಪ್ರೀತಿ ಉಕ್ಕಿದರೆ, ಹೂವಯ್ಯ ಉಪವಾಸ ಕುಳಿತಿದ್ದದ್ದನ್ನು ಟಿವಿ9 ಚಾನೆಲ್ ನಿರಂತರ ಬಿತ್ತರಿಸುತ್ತಿದ್ದರೂ ಹೂವಯ್ಯನ ವಿರುದ್ಧ ನಕ್ಸಲೀಯನ ಆರೋಪ ಹೊರಿಸಿ ಅವನನ್ನು ಮುಗಿಸಬೇಕೆಂದು ಇಡೀ ಪೊಲೀಸ್ ಇಲಾಖೆ ಬೊಬ್ಬಿಡುವುದನ್ನು ನೋಡಿದರೆ ರೋಷ ಉಕ್ಕದೇ ಇರುವುದಿಲ್ಲ.

    Thursday, April 25, 2024, 15:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X