twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೊಮ್ಮೆ ಇತಿಹಾಸ ಸೃಷ್ಟಿಸತ್ತಾ ಆಟೋ ರಾಜ?

    By Prasad
    |

    ತನ್ನ ಅಸಾಮಾನ್ಯವಾದ ಕ್ರಿಯಾಶೀಲತೆಯಿಂದ ನಟ ಶಂಕರ್ ನಾಗ್ ಅವರು ಹೇಗೆ ಜನಮನ ಗೆದ್ದಿದ್ದರೆಂದು ವಿವರಿಸಿ ಹೇಳಬೇಕಾಗಿಲ್ಲ. ಚಿತ್ರರಂಗದಲ್ಲಿ ದುಡಿಯುವವರಿಗೆ ಮಾತ್ರವಲ್ಲ, ಅವರ ಚಿತ್ರಗಳನ್ನು ನೋಡುವವರಿಗೂ ಪಾದರಸದ ವ್ಯಕ್ತಿತ್ವದ ಶಂಕರ್ ಸ್ಫೂರ್ತಿಯ ಸೆಲೆಯಾಗಿದ್ದರು. ಆಟೋ ಚಾಲಕರಿಗಂತೂ 'ಆಟೋ ರಾಜ' ಇಂದಿಗೂ ಆರಾಧ್ಯ ದೈವ.

    ರಾಜ್ಯದ ಆಟೋಗಳ ಮೇಲೆಲ್ಲ ರಾರಾಜಿಸುತ್ತಿರುವ ಶಂಕರ್ ಇಂದಿಗೂ ಕೂಡ ಜನಮಾನಸದಲ್ಲಿ ಜೀವಂತವಾಗಿದ್ದಾರೆ. ರೇಡಿಯೋಗಳಲ್ಲಿ, ಅವರನ್ನು ಅನುಕರಿಸುವವರ ಬಾಯಲ್ಲಿ ಶಂಕರ್ ಸ್ಟೈಲಿನ ಮಾತು ಕೇಳಿದರೆ ಇಂದಿಗೂ ರೋಮರೋಮಗಳು ನಿಮಿರೇಳುತ್ತವೆ. ಅವರ ನಟನೆ, ಅವರು ಮಾತಾಡುವ ಶೈಲಿ, ಅವರ ನಡಿಗೆ, ಅವರ ನೃತ್ಯ ಶೈಲಿ ಕೂಡ ಇಂದಿಗೂ ಅನುಕರಣೀಯ.

    ಅಂತಹ ಶಂಕರ್ ಅವರು ನಟಿಸಿ, ಆಟೋ ಚಾಲಕರ ಮೇಲೆ ಅಭಿಮಾನ ಮೂಡುವಂತೆ ಮಾಡಿದ್ದ 'ಆಟೋ ರಾಜ' ಹೆಸರಿನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ, ಅದೇ ಆಟೋ ರಾಜನ ಗೆಟಪ್ಪಿನಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್ ಹಾಜರಾಗಿದ್ದಾರೆ. ಅಂದು 1982ರಲ್ಲಿ ಶಂಕರ್ ಅವರ 'ಆಟೋ ರಾಜ' ಇತಿಹಾಸ ನಿರ್ಮಿಸಿತ್ತು. 'ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಬರಲಿದೆ' ಮೇಲ್ ಬರಹವಿರುವ ಇಂದಿನ ಆಟೋ ರಾಜ ಇತಿಹಾಸ ನಿರ್ಮಿಸುವುದಾ?

    Rating:
    3.0/5

    ಈ ಆಟೋ ರಾಜನ ವಿಶೇಷತೆ ಏನು?

    ಈ ಆಟೋ ರಾಜನ ವಿಶೇಷತೆ ಏನು?

    ಆ ಆಟೋ ರಾಜನಿಗೂ ಈ ಆಟೋ ರಾಜನಿಗೂ ಹೋಲಿಸುವ ಹಾಗೆಯೇ ಇಲ್ಲ. ಎರಡೂ ವಿಭಿನ್ನಮಯವಾದ ಚಿತ್ರಕಥೆ ಹೊಂದಿವೆ. ಆದರೆ ಈ ಆಟೋ ರಾಜದಲ್ಲಿ ಶಂಕರ್ ಅವರ ದನಿಯೇ ತುಂಬಿಕೊಂಡಿದೆ. ಅವರೇ ಜೀವಂತವಾಗಿ ಮಾತಾಡಿ ಯುವಜನತೆಯನ್ನು ಹುರಿದುಂಬಿಸುತ್ತಿದ್ದಾರೋ ಎಂಬಂತೆ ಸ್ಫೂರ್ತಿ ತುಂಬುವ ಸತ್ವಯುತವಾದ ಮಾತುಗಳಿವೆ. ಇವುಗಳ ನಡುವೆಯೇ ಪ್ರೇಮಕಥೆಯೊಂದು ಅಡಕಗೊಂಡಿದೆ. ಹಾಗೆಯೇ ಕ್ಲೈಮ್ಯಾಕ್ಸ್ ಕೂಡ ವಿಭಿನ್ನವಾಗಿದೆ.

    ಇಷ್ಟಕ್ಕೂ ಆಟೋ ರಾಜನ ಕಥೆ ಏನು?

    ಇಷ್ಟಕ್ಕೂ ಆಟೋ ರಾಜನ ಕಥೆ ಏನು?

    ಪ್ರಾಮಾಣಿಕತೆಯನ್ನೇ ದೇವರು ಅಂದುಕೊಂಡಿರುವ ರಾಜ ಆಟೋ ಡ್ರೈವರ್. ಬೆಕ್ಕು ಅಡ್ಡ ಹಾಯ್ದರೆ ಅಪಶಕುನ ಅಂತಾರೆ ಜನರು. ಆದರೆ ಆಟೋ ರಾಜನಿಗೆ ಅದೇ ಶಕುನವಾಗಿ ಒಂದು ಹಳ್ಳಿ ಹುಡುಗಿಯಲ್ಲಿ ಪ್ರೇಮ ಕುದುರುತ್ತದೆ. ಯಾವುದೋ ಲಹರಿಯಲ್ಲಿ ಕನ್ನಡ ದ್ವೇಷಿಸುವ ಎಫ್ಎಂ ಚಾನಲ್ಲುಗಳನ್ನು 'ಫಿಟ್ಟಿಂಗ್ ಮಾಸ್ಟರ್ಸ್', 'ಫೂಲಿಂಗ್ ಮಂಕೀಸ್' ಎಂದು ಜರಿಯುವ ರಾಜನಿಗೆ ಅಂದೇ ಎಫ್ಎಂ ಚಾನಲ್ಲಿನ ಮುಖ್ಯಸ್ಥೆಯೊಬ್ಬಳು ತಾಕತ್ತಿದ್ದರೆ ಲೈವಾಗಿ ಮಾತಾಡು ಅಂತ ಚಾಲೇಂಜ್ ಮಾಡುತ್ತಾಳೆ. 'ಇತಿಹಾಸದ ಪುಟ ತೆಗೆದು ನೋಡಿ ಮಾತಿನ ಮಳೆ ಸುರಿಸಿದವರು ಯಾರಂತ ಗೊತ್ತಾಗತ್ತೆ' ಅಂತ ಚಾಲೇಂಜ್ ಸ್ವೀಕರಿಸಿದ ರಾಜ ಶಂಕರ್ ಧ್ವನಿಯನ್ನು ಅನುಕರಿಸಿ ಎಫ್ಎಂ ಕೇಳುವ ಜನರನ್ನು ಮಾತಲ್ಲೇ ಮರುಳು ಮಾಡಿಬಿಡುತ್ತಾನೆ.

    ಹೀಗೇ ಸಾಗುವ ಕಥೆಯಲ್ಲಿ ಟ್ವಿಸ್ಟ್ ಟ್ವಿಸ್ಟ್ ಟ್ವಿಸ್ಟ್

    ಹೀಗೇ ಸಾಗುವ ಕಥೆಯಲ್ಲಿ ಟ್ವಿಸ್ಟ್ ಟ್ವಿಸ್ಟ್ ಟ್ವಿಸ್ಟ್

    ರಾಜ ಹಿಂದೆ ಬಿದ್ದ ಹಳ್ಳಿ ಹುಡುಗಿ ರಾಧಾ (ಭಾಮಾ), ರಾಜನ ಬದಲಾಗಿ ರೇಡಿಯೋ ಜಾಕಿ ಶಂಕರ್ ನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಅದೇ ಸಮಯದಲ್ಲಿ ಎಫ್ಎಂ ಚಾನಲ್ ಮುಖ್ಯಸ್ಥೆ(ದೀಪಿಕಾ ಕಾಮಯ್ಯ)ಗೂ ರಾಜನ ಮೇಲೆ ಪ್ರೇಮಾಂಕುರವಾಗಿರುತ್ತದೆ. ಚಿತ್ರನಟಿಯಾಗಬೇಕೆಂದು ಬಂದ ರಾಧಾಳನ್ನು ಬಳಸಿಕೊಂಡು ಬ್ಲೂ ಫಿಲ್ಮಂ ಮಾಡಬೇಕೆಂದು ಅವಳ ಹಿಂದೆ ಗೂಂಡಾಗಳ ಗ್ಯಾಂಗ್ ಬಿದ್ದಿರುತ್ತದೆ. ರಾಧಾ ಗೂಂಡಾಗಳ ಪಾಲಾಗುತ್ತಾಳಾ? ಕೊನೆಗೆ ರಾಜನ ಪ್ರೀತಿ ಗೆಲ್ಲುತ್ತಾ? ಚಿತ್ರ ನೋಡಿ ತಿಳಿಯಿರಿ.

    ನಿರ್ದೇಶಕರು ಗೆದ್ದಿದ್ದಾರಾ, ಸೋತಿದ್ದಾರಾ?

    ನಿರ್ದೇಶಕರು ಗೆದ್ದಿದ್ದಾರಾ, ಸೋತಿದ್ದಾರಾ?

    ಈ ಚಾಲೇಂಜಿಂಗ್ ಚಿತ್ರವನ್ನು ಕೈಗೆತ್ತಿಕೊಂಡ ನಿರ್ದೇಶಕ ಉದಯ ಪ್ರಕಾಶ್ ಅವರನ್ನು ಬೆನ್ನುತಟ್ಟಬೇಕು. ಪ್ರೇಮ ಕಥೆಯ ಜೊತೆಯೇ ಅಮಾಯಕ ಹುಡುಗಿಯರನ್ನು ಬೇಟೆಯಾಡುತ್ತಿರುವ ದುರುಳರ ಬಗ್ಗೆ ಎಚ್ಚರವಿರಬೇಕೆಂಬ ಸಂದೇಶವನ್ನು ಉದಯ ಪ್ರಕಾಶ್ ಸಾರಿದ್ದಾರೆ. ಡೈಲಾಗುಗಳು ಮೂಲಕ ಶಂಕರ್ ಅವರನ್ನು ಮತ್ತೆ ಜೀವಂತ ತರುವಲ್ಲಿ ನಿರ್ದೇಶಕರು ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಆದರೆ, ಶಂಕರ್ ಅವರ ಬಾಯಿಂದ ಬರುವ ಮಾತುಗಳು ಜನರ ಮೇಲೆ ಪ್ರಭಾವ ಬೀರುವುದಾ? ಡೌಟ್.

    ಚಿತ್ರಕಥೆ ಗೋಜಲು ಗೋಜಲು

    ಚಿತ್ರಕಥೆ ಗೋಜಲು ಗೋಜಲು

    ಇತ್ತಕಡೆ ಅಪ್ಪಟ ಪ್ರೇಮಕಥೆಯೂ ಅಲ್ಲ, ಅತ್ತಕಡೆ ಶಂಕರ್ ಅವರ ಕುರಿತ ಚಿತ್ರವೂ ಅಲ್ಲ. ಜೊತೆಗೆ ಆಟೋ ಚಾಲಕರ ಕುರಿತಾದ ಚಿತ್ರವಂತೂ ಅಲ್ಲವೇ ಅಲ್ಲ. ಅಮಾಯಕರ ಹುಡುಗಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಆಟೋ ರಾಜನ ಪ್ರೇಮ ಕಥೆ, ಶಂಕರ್ ಧ್ವನಿಯನ್ನು ಅನುಕರಿಸುವ ರೇಡಿಯೋ ಜಾಕಿಯ ಮಾತಿನ ಮೋಡಿ, ನಟಿಯಾಗಲು ರಾಧಾ ಪಡುವ ಪಡಿಪಾಟಲು ಎಲ್ಲವನ್ನೂ ಒಂದರೊಳಗೊಂದು ಹೊಸೆಯುತ್ತಾ ಕಥೆಯನ್ನು ಗೋಜಲು ಗೋಜಲಾಗಿಸಿದ್ದಾರೆ. ರಾಧಾಳನ್ನು ಕಿಡ್ನಾಪ್ ಮಾಡುವ ದುರುಳರು ಆಕೆಗೇನು ಮಾಡುತ್ತಾರೆ? ಉತ್ತರ ಸಿಗುವುದಿಲ್ಲ. ಅದೃಷ್ಟದ ಸಂಕೇತವಾಗಿ ಬಳಸಿರುವ ಬೆಕ್ಕಿನ ಮರಿಯ ಪಾತ್ರಪೋಷಣೆ ಕೂಡ ಜಾಳುಜಾಳಾಗಿದೆ.

    ಆದರೆ, ಗಣೇಶ್ ಮಾತ್ರ ಸೂಪರ್

    ಆದರೆ, ಗಣೇಶ್ ಮಾತ್ರ ಸೂಪರ್

    ಆಟೋ ರಾಜನ ಪಾತ್ರದಲ್ಲಿ ಗಣೇಶನನ್ನು ಬಿಟ್ಟು ಬೇರೆಯವರನ್ನು ಕಲ್ಪಿಸಿಕೊಳ್ಳುವ ಹಾಗಿಲ್ಲ. ಶಂಕರ್ ಧ್ವನಿಯನ್ನು ಅನುಕರಣೆ ಮಾಡುತ್ತ ಗಣೇಶ್ ತಾವೇ ಶಂಕರ್ ಆಗಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಹಲವಾರು ಕಡೆ ಇಷ್ಟವಾಗುತ್ತಾರೆ. ಆದರೆ, ಪಾತ್ರಪೋಷಣೆಯೇ ಗಟ್ಟಿಯಾಗಿಲ್ಲದ ಮೇಲೆ ಗಣೇಶ್ ಆದರೂ ಏನು ಮಾಡಲು ಸಾಧ್ಯ ಹೇಳಿ. ಗಣೇಶ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ರಾಣಿ ಆಗಿ ರಾಜನನ್ನು ದ್ವೇಷಿಸುವ, ರಾಧಾಳಾಗಿ ಶಂಕರ್ ನನ್ನು ಪ್ರೇಮಿಸುವ ಭಾಮಾ ನೋಡಲು ಇಷ್ಟವಾಗುತ್ತಾರೆ. ಆದರೆ, ಐಟಂ ಸಾಂಗಲ್ಲಿ ನೋಡಲು ಬಲು ಕಷ್ಟವಾಗುತ್ತಾರೆ.

    ಒಟ್ಟಾರೆಯಾಗಿ ಹೇಳುವುದಾದರೆ...

    ಒಟ್ಟಾರೆಯಾಗಿ ಹೇಳುವುದಾದರೆ...

    ಅಪ್ಪಟ ಶಂಕರ್ ನಾಗ್ ಮತ್ತು ಗೋಲ್ಡನ್ ಸ್ಟಾರ್ ಪ್ರೇಮಿಗಳು ಒಂದು ಬಾರಿ ಹೋಗಿ ನೋಡಲು ಅಡ್ಡಿಯಿಲ್ಲ. ಗಣೇಶ್ ಬಗ್ಗೆ ವಿಪರೀತ ನಿರೀಕ್ಷೆಯಿಟ್ಟುಕೊಂಡು ಹೋದವರನ್ನು ಗಣೇಶ್ ನಿರಾಶೆಗೊಳಿಸುವುದಿಲ್ಲ. ಆದರೆ, ಗಣೇಶನಿಗೆ ಇಂಥದೇ ಪಾತ್ರ ಏಕೆ ಬೇಕಾಗಿತ್ತು? ಎಂಬುದಕ್ಕೆ ಇಲ್ಲಿ ಖಚಿತವಾದ ಉತ್ತರ ಸಿಗುವುದಿಲ್ಲ. ಮೊದಲಾರ್ಧದ ನಂತರ ಎಳೆದಾಟ ವಿಪರೀತವಾಗಿದೆ. ಆದರೆ, ರಬ್ಬಾ ಹೋ ರಬ್ಬಾ ಹಾಡಿನಲ್ಲಿ ಚಿತ್ತೀಕರಿಸಿರುವ ಬಾದಾಮಿ ಗುಹೆಗಳು ಬಾ.. ಬಾ ಎಂದು ಕರೆಯುತ್ತವೆ. ಚಿತ್ರ ನೋಡಲು ಹೋಗ್ತೀರೋ, ಬಾದಾಮಿಗೆ ಹೋಗ್ತೀರೋ ನಿಮಗೆ ಬಿಟ್ಟಿದ್ದು.

    English summary
    Auto Raja Kannada movie review. Golden Star Ganesh, Bhama in the lead. Movie directed by Uday Prakash brings back fond memory of late Shankar Nag, who had stole the hearts of lakhs through his movie Auto Raja.
    Friday, June 21, 2013, 18:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X