twitter
    For Quick Alerts
    ALLOW NOTIFICATIONS  
    For Daily Alerts

    'ಲೂಸಿಯಾ' ಚಿತ್ರ ವಿಮರ್ಶೆ : ಸಾಧಾರಣ ಪ್ರೇಕ್ಷಕರಿಗಲ್ಲ

    By Rajendra
    |

    ತನ್ನ ವಿಭಿನ್ನ ಹಾಡುಗಳು ಹಾಗೂ ಮೇಕಿಂಗ್ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ಚಿತ್ರ 'ಲೂಸಿಯಾ'. ಕನ್ನಡ ಚಿತ್ರೋದ್ಯಮದಲ್ಲೂ ಸಾಕಷ್ಟು ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಹುಟ್ಟುಹಾಕಿದ ಚಿತ್ರ ಇದು. ಮುಕ್ತ ಮನಸ್ಸಿನಿಂದ ಚಿತ್ರ ನೋಡುವ ಪ್ರೇಕ್ಷಕರಿಗೆ ಖಂಡಿತ ನಿರಾಸೆಪಡಿಸಲ್ಲ. ಆದರೆ ಇನ್ನೇನೋ ನಿರೀಕ್ಷಿಸಿ ಬರುವ ಪ್ರೇಕ್ಷಕರಿಗೆ ನಿದ್ದೆ ಗುಳಿಗೆ ನೀಡುತ್ತದೆ.

    ಥಿಯೇಟರ್ ನ ಕತ್ತಲಲ್ಲಿ ಸೀಟು ತಡಕಾಡುವ ಪ್ರೇಕ್ಷಕರಿಗೆ ಬ್ಯಾಟರಿ ಬಿಟ್ಟು ಬೆಳಕು ತೋರಿಸುವ ನಿಕ್ಕಿಗೆ (ಸತೀಶ್ ನೀನಾಸಂ) ರಾತ್ರಿಯಾದರೆ ನಿದ್ರೆ ಬರಲ್ಲ. ನಿದ್ದೆಯೇ ಇಲ್ಲ ಎಂದ ಮೇಲೆ ಇನ್ನು ಕನಸುಗಳು ಎಲ್ಲಿಂದ ಬರುತ್ತವೆ? ಹೀಗೆ ಒದ್ದಾಡುತ್ತಿರುವ ನಿಕ್ಕಿಗೆ ಒಂದಿಬ್ಬರು ಹೊಸ ದಾರಿ ತೋರಿಸುತ್ತಾರೆ.

    ಅದೇನೆಂದರೆ 'Lucia' ಎಂಬ ಕ್ಯಾಪ್ಸೂಲ್. ಇದನ್ನು ತೆಗೆದುಕೊಂಡರೆ ಕಣ್ತುಂಬ ನಿದ್ದೆ ಜೊತೆಗೆ ಸುಂದರ ಕನಸುಗಳು ಬರುತ್ತವೆ ಎಂದು ಬಣ್ಣಬಣ್ಣದ ಕ್ಯಾಪ್ಸೂಲ್ ಗಳನ್ನು ಕೊಡುತ್ತಾರೆ. ಒಮ್ಮೆ ಕಣ್ತುಂಬ ನಿದ್ದೆ ಮಾಡಿ ಸತ್ತು ಹೋದ್ರೆ ಸಾಕಪ್ಪಾ ಅಂತ ನಿಕ್ಕಿಗೆ ಅನ್ನಿಸಿರುತ್ತದೆ.

    Rating:
    3.0/5

    ಚಿತ್ರ: ಲೂಸಿಯಾ
    ನಿರ್ಮಾಣ: ಆಡಿಯನ್ಸ್ ಫಿಲಂಸ್ & ಹೋಮ್ ಟಾಕೀಸ್
    ನಿರ್ದೇಶನ: ಪವನ್ ಕುಮಾರ್
    ಸಂಗೀತ: ಪೂರ್ಣಚಂದ್ರ ತೇಜಸ್ವಿ
    ಛಾಯಾಗ್ರಹಣ: ಸಿದ್ಧಾರ್ಥ್ ನುನಿ
    ಸಂಕಲನ: ಸನತ್ ಸುರೇಶ್ ಮತ್ತು ಪವನ್ ಕುಮಾರ್
    ತಾರಾಬಳಗ: ನೀನಾಸಂ ಸತೀಶ್, ಶ್ರುತಿ ಹರಿಹರನ್, ಹಾರ್ದಿಕಾ ಶೆಟ್ಟಿ, ಅಚ್ಯುತಕುಮಾರ್, ಸಂಜಯ್, ಕೃಷ್ಣ, ರಿಷಬ್, ಬಾಲಾಜಿ ಮನೋಹರ್, ಆರ್ಯನ್, ಪೂರ್ಣಚಂದ್ರ, ಪ್ರಶಾಂತ್, ಭರತ್, ಮಹದೇವ್, ವಸುಧಾ, ಪವನ್ ಕುಮಾರ್, ಪ್ರಸಾದ್, ಅರಸು, ನಾರಾಯಣಭಟ್, ಗೌರೀಶ್, ಮಹೇಶ್, ಸತೀಶ್ ಮುಂತಾದವರು.

    ಕಪ್ಪು ಬಿಳುಪಿನಲ್ಲಿ ಸಾಗುವ ನಿಕ್ಕಿ ಕನಸು

    ಕಪ್ಪು ಬಿಳುಪಿನಲ್ಲಿ ಸಾಗುವ ನಿಕ್ಕಿ ಕನಸು

    ಕ್ಯಾಪ್ಸೂಲ್ ನಲ್ಲಿರುವ ಪುಡಿಯನ್ನು ನೀರಿಗೆ ಸುರಿದರೆ ಸೋಡಾ ತರಹ ಜಿರ್ರೆಂದು ಬುಗ್ಗೆ ಏಳಿಸುತ್ತಾ ನೀರಿನಲ್ಲಿ ಕರಗುತ್ತದೆ. ಅದನ್ನು ಹೊಟ್ಟೆಗೆ ಇಳಿಸಿದರೆ ಕಣ್ತುಂಬ ನಿದ್ದೆ, ಕನಸಿನ ಲೋಕಕ್ಕೆ ಹೊರಳುತ್ತಾನೆ ನಿಕ್ಕಿ. ಎಚ್ಚರವಿದ್ದಾಗ ನಿಕ್ಕಿಯ ನೈಜ ಕಥೆ. ನಿದ್ದೆಗೆ ಹೊರಳಿದಾಗ ಕಪ್ಪು ಬಿಳುಪಿನ ಕನಸು. ಎರಡೂ ಕಥೆಗಳು ಜೊತೆಗೆ ಜೊತೆಗೆ ಸಾಗುತ್ತವೆ.

    ಕನಸಿನಲ್ಲಿ ನಿಕ್ಕಿ ದೊಡ್ಡ ಹೀರೋ

    ಕನಸಿನಲ್ಲಿ ನಿಕ್ಕಿ ದೊಡ್ಡ ಹೀರೋ

    ಬ್ಯಾಟರಿ ಬಿಡುವ ನಿಕ್ಕಿ ಕನಸಿನಲ್ಲಿ ದೊಡ್ಡ ಹೀರೋ. ಥಿಯೇಟರ್ ಮಾಲೀಕ ಶಂಕರಣ್ಣ (ಅಚ್ಯುತ ಕುಮಾರ್) ಕನಸಿನಲ್ಲಿ ಪರ್ಸನಲ್ ಸೆಕ್ರೆಟರಿ. ತಾನು ಮದುವೆಯಾಗಬೇಕೆಂದಿರುವ ಪಿಜ್ಜಾ ಹಟ್ ನಲ್ಲಿ ಕೆಲಸ ಮಾಡುವ ಹುಡುಗಿ ಶ್ವೇತಾ (ಶ್ರುತಿ ಹರಿಹರನ್) ಹೀರೋಯಿನ್.

    ನಿಕ್ಕಿ ನನಸು ಕನಸಿನಲ್ಲಿ ಸಾಕಾರ

    ನಿಕ್ಕಿ ನನಸು ಕನಸಿನಲ್ಲಿ ಸಾಕಾರ

    ನಿಕ್ಕಿ ನಿಜಜೀವನದ ನನಸುಗಳು ಕನಸಿನಲ್ಲಿ ಸಾಕಾರವಾಗುತ್ತಿರುತ್ತದೆ. ಅಂದಂದಿನ ಕನಸನ್ನು ಪ್ರತಿದಿನ ನೋಟ್ ಮಾಡಿಕೊಳ್ಳಬೇಕು ಎಂಬ ಎಚ್ಚರಿಕೆ ಬೇರೆ ನಿಕ್ಕಿಗೆ ಕೊಡಲಾಗಿರುತ್ತದೆ. ಇಲ್ಲದಿದ್ದರೆ ಕನಸಿನ ಧಾರಾವಾಹಿ ಮುಂದುವರಿಯಲ್ಲ ಎಂಬುದನ್ನೂ ತಿಳಿಸಿರುತ್ತಾರೆ. ಅದರಂತೆ ಕನಸಿನ ಜೊತೆಗೆ ತನ್ನ ಕಥೆಯೂ ಸಮಾನಂತರವಾಗಿ ಸಾಗುತ್ತದೆ. ಕಡೆಗೆ ನಿಕ್ಕಿ ತನ್ನ ಕನಸಿನಿಂದ ಹೊರಬರುತ್ತಾನಾ? ಎಂಬುದೇ ಮುಂದಿನ ಕಥೆ.

    'Lucid dream' ಮಾನಸಿಕ ಸಮಸ್ಯೆಯೇ ಕಥಾವಸ್ತು

    'Lucid dream' ಮಾನಸಿಕ ಸಮಸ್ಯೆಯೇ ಕಥಾವಸ್ತು

    ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಅವರು ಪ್ರತಿಪಾದಿಸಿದ 'Lucid dream' ಎಂಬ ಮಾನಸಿಕ ಸಮಸ್ಯೆಯೇ ಚಿತ್ರದ ಕಥಾವಸ್ತು. ಕನಸನ್ನೇ ನಿಜ ಎಂದು ಭ್ರಮಿಸುವ ಒಂದು ಭ್ರಾಮಕ ಮನಸ್ಥಿತಿ. ಈ ರೀತಿಯ ಒಂದು ವಸ್ತುವನ್ನು ನಿದ್ರಾಹೀನತೆಯಿಂದ ಬಳಲುವ ವ್ಯಕ್ತಿಗೆ ಥಳುಕು ಹಾಕಿ ಒಂದು ಮನೋವೈಜ್ಞಾನಿಕ ಕಥೆಯನ್ನು 'ಲೂಸಿಯಾ' ಹೇಳುತ್ತದೆ.

    ಚಿತ್ರದಲ್ಲಿ ಮಾಸ್ ಎಲಿಮೆಂಟ್ಸ್ ಇಲ್ಲ

    ಚಿತ್ರದಲ್ಲಿ ಮಾಸ್ ಎಲಿಮೆಂಟ್ಸ್ ಇಲ್ಲ

    ಹಾಗಾಗಿ ಈ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಇಂದು ಬರುತ್ತಿರುವ ಉಳಿದ ಚಿತ್ರಗಳಿಗೆ ಹೋಲಿಸಿದರೆ ಭಿನ್ನ ಅನ್ನಿಸುತ್ತದೆ. ಇಲ್ಲಿ ಮಾಸ್ ಪ್ರೇಕ್ಷಕರನ್ನು ರಂಜಿಸುವ ಡೈಲಾಗ್ ಗಳಾಗಲಿ, ನಕ್ಕು ನಲಿಸುವ ಕಾಮಿಡಿ ಸೀನ್ ಗಳಾಗಲಿ, ರೊಮ್ಯಾಂಟಿಕ್ ದೃಶ್ಯಗಳು ಸನ್ನಿವೇಶಗಳಾಗಲಿ ಇಲ್ಲ. ಇವನ್ನು ನಿರೀಕ್ಷಿಸಿ ಹೋದರೆ ಖಂಡಿತ ನಿರಾಸೆ ತಪ್ಪಿದ್ದಲ್ಲ.

    ನಿಕ್ಕಿ ಪಾತ್ರಕ್ಕೆ ಸತೀಶ್ ನೀನಾಸಂ ಜೀವತುಂಬಿದ್ದಾರೆ

    ನಿಕ್ಕಿ ಪಾತ್ರಕ್ಕೆ ಸತೀಶ್ ನೀನಾಸಂ ಜೀವತುಂಬಿದ್ದಾರೆ

    ಹಲವು ಶೇಡ್ ಗಳುಳ್ಳ ನಿಕ್ಕಿ ಪಾತ್ರಕ್ಕೆ ಸತೀಶ್ ನೀನಾಸಂ ಜೀವತುಂಬಿದ್ದಾರೆ. ಥಿಯೇಟರ್ ಮಾಲೀಕ ಶಂಕ್ರಣ್ಣನಾಗಿ ಅಚ್ಯುತ್ ಕುಮಾರ್ ಅವರದು ಭಿನ್ನ ಪಾತ್ರ. ಇಂದಿನ ಥಿಯೇಟರ್ ಮಾಲೀಕನ ಸಮಸ್ಯೆಗಳು, ತೊಳಲಾಟಗಳನ್ನು ಅವರ ಪಾತ್ರ ಬಿಚ್ಚಿಡುತ್ತದೆ.

    ಶ್ರುತಿ ಹರಿಹರನ್ ಹೊಸ ಮಿಂಚು

    ಶ್ರುತಿ ಹರಿಹರನ್ ಹೊಸ ಮಿಂಚು

    ಚಿತ್ರದ ನಾಯಕಿ ಶ್ರುತಿ ಹರಿಹರನ್ ಅವರು ಶ್ವೇತಾ ಪಾತ್ರದಲ್ಲಿ ಹೊಸ ಮಿಂಚು ಹರಿಸುತ್ತಾರೆ. ಅವರದು ಎರಡು ಶೇಡ್ ಗಳುಳ್ಳ ಪಾತ್ರ. ಒಂದರಲ್ಲಿ ಸೀದಾಸಾದಾ ಹುಡುಗಿಯಾಗಿ, ನಿಕ್ಕಿ ಕನಸಿನಲ್ಲಿ ಹೀರೋಯಿನ್ ಆಗಿ ಅವರು ಕಾಣಿಸುತ್ತಾರೆ.

    ಕಥೆಯಲ್ಲಿ ಬಲವಿದೆ ಆದರೆ ವೇಗವಿಲ್ಲ

    ಕಥೆಯಲ್ಲಿ ಬಲವಿದೆ ಆದರೆ ವೇಗವಿಲ್ಲ

    ಇಲ್ಲಿ ಕಥೆ ಎರಡು ಶೇಡ್ ಗಳಲ್ಲಿ ಜೊತೆಜೊತೆಯಾಗಿ ಸಾಗುವ ಕಾರಣ ವೇಗವಿಲ್ಲ ಅನ್ನಿಸುತ್ತದೆ. ಕಥೆಯಲ್ಲಿ ಬಲವಿದೆ ಆದರೆ ವೇಗವಿಲ್ಲ. ಇದೇ ಚಿತ್ರಕ್ಕೆ ದೊಡ್ಡ ತೊಡಕಾಗಿರುವುದು. ಕಥೆ ಮುಂದಕ್ಕೆ ಸಾಗಲ್ಲ ಅನ್ನಿಸಿ ಪ್ರೇಕ್ಷಕರು ಕುಳಿತಲ್ಲೇ ಚಡಪಡಿಸುತ್ತಾರೆ.

    ಚಿತ್ರದ ತಾಂತ್ರಿಕ ಅಂಶಗಳು ಹೇಗಿವೆ?

    ಚಿತ್ರದ ತಾಂತ್ರಿಕ ಅಂಶಗಳು ಹೇಗಿವೆ?

    ಚಿತ್ರವನ್ನು ತಾಂತ್ರಿಕವಾಗಿ ತುಲನೆ ಮಾಡುವುದಾದರೆ ಚಿತ್ರದ ನಿಜವಾದ ಹೀರೋ ಸನತ್ ಸುರೇಶ್ ಮತ್ತು ಪವನ್ ಕುಮಾರ್ ಸಂಕಲನ. ಒಂದು ಪ್ಯಾರಲಲ್ ಕಥೆಯನ್ನು ಎಡಿಟ್ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಇದರಲ್ಲಿ ಇಬ್ಬರೂ ಗೆದ್ದಿದ್ದಾರೆ. ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ.

    ಸಾಧಾರಣ ಪ್ರೇಕ್ಷಕರ ತಲೆಗೆ ಹೋಗುವುದು ಕಷ್ಟ

    ಸಾಧಾರಣ ಪ್ರೇಕ್ಷಕರ ತಲೆಗೆ ಹೋಗುವುದು ಕಷ್ಟ

    ಸಿದ್ಧಾರ್ಥ ನುನಿ ಅವರ ಛಾಯಾಗ್ರಹಣ ಓಕೆ. ಈ ಚಿತ್ರದ ಅಡಿಬರಹ 'ತಿನ್ಬೇಡ ಕಮ್ಮಿ' ಎಂಬುದು. ಬಹುಶಃ ಲೂಸಿಯಾ ಎಂಬ ಟ್ಯಾಬ್ಲೆಟ್ ತಿನ್ಬೇಡ ಕಮ್ಮಿ ಎಂಬ ಸಂದೇಶವೂ ಪ್ರೇಕ್ಷಕರಿಗೆ ನೀಡಿದಂತೆ. ಒಂದೇ ನೋಟಕ್ಕೆ ಈ ಚಿತ್ರ ಸಾಧಾರಣ ಪ್ರೇಕ್ಷಕರ ತಲೆಗೆ ಹೋಗುವುದು ಕಷ್ಟ. ಹಾಗಂತ ಮತ್ತೊಮ್ಮೆ ನೋಡುತ್ತೇನೆ ಎಂದರೆ ನಿಮ್ಮಿಷ್ಟ.

    ಇಂಗ್ಲಿಷ್ ಸಬ್ ಟೈಟಲ್ ಕಿರಿಕಿರಿ ಅನುಭವ

    ಇಂಗ್ಲಿಷ್ ಸಬ್ ಟೈಟಲ್ ಕಿರಿಕಿರಿ ಅನುಭವ

    ಒಂದು ಚಿತ್ರಕ್ಕೆ ಸಿಕ್ಕಾಪಟ್ಟೆ ಹೈಪ್ ಸಿಕ್ಕಿದರೆ ಅದು ಚಿತ್ರಕ್ಕೆ ಇನ್ನೊಂದು ರೀತಿಯಲ್ಲೂ ಮುಳುವಾಗುವ ಸಾಧ್ಯತೆಗಳಿವೆ. ಲೂಸಿಯಾ ಇದನ್ನು ಮೆಟ್ಟಿ ನಿಲ್ಲುತ್ತದೆಯೋ ಇಲ್ಲವೋ ಎಂಬುದನ್ನು ಕಾದುನೋಡಬೇಕು. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಕನ್ನಡ ಚಿತ್ರವನ್ನು ಇಂಗ್ಲಿಷ್ ಸಬ್ ಟೈಟಲ್ ನಲ್ಲಿ ವೀಕ್ಷಿಸುವುದು ನಿಜಕ್ಕೂ ಕಿರಿಕಿರಿ ಅನುಭವ.

    English summary
    Kannada film Lucia review. It's a mystery movie with a surprise twist in the end and it’s not your average Sandalwood potboiler. It's not a movie for ordinary audience.
    Friday, September 6, 2013, 18:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X