twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಹೊಸ ರೀತಿ 'ಪ್ರೀತಿ ಗೀತಿ ಇತ್ಯಾದಿ'

    By Rajendra
    |

    ಒಂದು ಸನ್ನಿವೇಶದಲ್ಲಿ ಚಿತ್ರದ ನಾಯಕಿ ನಂದಿತಾ (ಸಂಗೀತಾ ಭಟ್) "ನನಗೆ ಕಟ್ಟಿಕೊಂಡು ಬದುಕುವವನು ಬೇಕು, ಇಟ್ಟುಕೊಂಡು ಬದುಕುವವನಲ್ಲ" ಎನ್ನುತ್ತಾರೆ. ಇನ್ನೊಂದು ಸನ್ನಿವೇಶದಲ್ಲಿ "If you don't mind, can I get a friendly hug" ಎಂದು ನಾಯಕನನ್ನು ಸ್ನೇಹದಿಂದ ತಬ್ಬಿಕೊಳ್ಳುತ್ತಾಳೆ.

    ಈ ರೀತಿಯ ಸಾಕಷ್ಟು ಆಪ್ತ ಸನ್ನಿವೇಶಗಳು 'ಪ್ರೀತಿ ಗೀತಿ ಇತ್ಯಾದಿ' ಚಿತ್ರದ ಸೊಬಗನ್ನು ಹೆಚ್ಚಿಸಿವೆ. ಈ ಚಿತ್ರದ ಜೀವಾಳವೇ ಈ ರೀತಿಯ ಸನ್ನಿವೇಶಗಳು. ಏಕೆಂದರೆ ಯೋಗರಾಜ್ ಭಟ್ ಹೆಣೆದಿರುವ ಕಥೆ ಆ ರೀತಿಯ ಸನ್ನಿವೇಶಗಳಿಂದ ತುಂಬಿ ತುಳುಕಿ ಭೋರ್ಗರೆಯುವಂತಿದೆ. [ಕನ್ನಡ ಚಿತ್ರ ವಿಮರ್ಶೆಗಳು]

    ತನ್ನ ತಂಗಿಯೊಂದಿಗೆ (ನಭಾ ನಟೇಶ್) ಪವನ್ (ಪವನ್ ಒಡೆಯರ್) ಸ್ಕಾರ್ಪಿಯೋದಲ್ಲಿ ಜಾಲಿಯಾಗಿ ಹರಟೆ ಹೊಡೆಯುತ್ತಾ ಹೋಗುತ್ತಿರಬೇಕಾದರೆ ಆಕ್ಸಿಡೆಂಟ್ ಆಗುತ್ತದೆ. ಟಿವಿಎಸ್ ಮೊಪೆಡ್ ನಲ್ಲಿ ಬರುತ್ತಿದ್ದ ವ್ಯಕ್ತಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆಯುತ್ತದೆ. ರಸ್ತೆಯಲ್ಲಿ ಬಿದ್ದ ಆ ಜೀವ ವಿಲವಿಲ ಎಂದು ಒದ್ದಾಡುತ್ತಿರುತ್ತದೆ.

    Rating:
    3.5/5

    ಚಿತ್ರ: ಪ್ರೀತಿ ಗೀತಿ ಇತ್ಯಾದಿ
    ನಿರ್ಮಾಪಕರು: ವಿಜಯಕುಮಾರ್ ಮಂಗ್ಸುಳೆ
    ಚಿತ್ರಕಥೆ, ನಿರ್ದೇಶನ, ಸಂಭಾಷಣೆ: ವೀರೇಂದ್ರ
    ಸಂಗೀತ: ವೀರ್ ಸಮರ್ಥ್
    ಛಾಯಾಗ್ರಹಣ: ಭಾಸ್ಕರ್ ರೆಡ್ಡಿ
    ತಾರಾಗಣ
    : ಪವನ್ ಒಡೆಯರ್, ಸಂಗೀತಾ ಭಟ್, ರಂಗಾಯಣ ರಘು, ವಿನಯಪ್ರಕಾಶ್, ಮಂಜುನಾಥ್ ಗೌಡ, ನಭ ನಟೇಶ್ ಮುಂತಾದವರು.

    ಪಾಪಪ್ರಜ್ಞೆಯಿಂದ ನರಳುವ ನಾಯಕ ನಟ

    ಪಾಪಪ್ರಜ್ಞೆಯಿಂದ ನರಳುವ ನಾಯಕ ನಟ

    ಅಣ್ಣತಂಗಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಆದರೆ ಅಣ್ಣತಂಗಿ ಮನಸ್ಸಿನಲ್ಲಿ ಅಪಘಾತವಾದ ವ್ಯಕ್ತಿ ಏನಾದ ಎಂಬ ಪಾಪಪ್ರಜ್ಞೆ ಕಾಡುತ್ತಿರುತ್ತದೆ. ಆತನಿಗೆ ಏನೂ ಆಗಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ, ಬದುಕಿದ್ದಾನೆ ಎಂದು ತನ್ನ ತಂಗಿಗೆ ಸುಳ್ಳು ಹೇಳುತ್ತಾನೆ. ಆದರೆ ನಿಜವಾಗಿಯೂ ಆತ ಬದುಕಿರಲ್ಲ.

    ಸತ್ತವರ ಕುಟುಂಬಕ್ಕೆ ಹತ್ತಿರವಾಗುವ ಪವನ್

    ಸತ್ತವರ ಕುಟುಂಬಕ್ಕೆ ಹತ್ತಿರವಾಗುವ ಪವನ್

    ಸತ್ತವರ ಕುಟುಂಬಕ್ಕೆ ಹತ್ತಿರವಾಗಲು ಚಿತ್ರದ ನಾಯಕ ನಟ ಪ್ರಯತ್ನಿಸುತ್ತಾನೆ. ಅವರ ಕುಟುಂಬಕ್ಕೆ ಸಹಾಯ ಮಾಡುತ್ತಾನೆ. ಆತ್ಮೀಯತೆ ಬೆಳೆಸಿಕೊಳ್ಳುತ್ತಾನೆ. ತನ್ನ ತಂದೆ ಸತ್ತ ನೆನಪಿನಲ್ಲೇ ಕೊರಗುತ್ತಿರುವ ನಂದಿತಾ (ಸಂಗೀತಾ ಭಟ್) ಜೊತೆಗೆ ಆತ್ಮೀಯತೆ ಸ್ವಲ್ಪ ಜಾಸ್ತಿಯಾಗಿ ಅದು ಪ್ರೇಮಕ್ಕೆ ಹೊರಳುತ್ತದೆ.

    ಸತ್ಯ ಗೊತ್ತಾದರೆ ನಂದಿತಾ ಸುಮ್ಮನೆ ಬಿಡ್ತಾಳಾ?

    ಸತ್ಯ ಗೊತ್ತಾದರೆ ನಂದಿತಾ ಸುಮ್ಮನೆ ಬಿಡ್ತಾಳಾ?

    ಆದರೂ ಪವನ್ ಗೆ ತಾನು ಮಾಡುತ್ತಿರುವುದು ಸರಿಯಲ್ಲ ಅನ್ನಿಸಿ ಎಲ್ಲವನ್ನೂ ಹೇಳಬೇಕು ಎಂದುಕೊಳ್ಳುತ್ತಾನೆ. ಸತ್ಯ ಗೊತ್ತಾದರೆ ನಂದಿತಾ ಏನು ಮಾಡುತ್ತಾಳೆ? ತನ್ನ ತಂದೆಯನ್ನು ಸಾಯಿಸಿದವನನ್ನು ಪ್ರೀತಿಸುತ್ತಾಳಾ, ತಿರಸ್ಕರಿಸುತ್ತಾಳಾ? ಎಂಬುದೇ ಚಿತ್ರದ ಇಂಟರೆಸ್ಟಿಂಗ್ ವಿಚಾರ.

    ಚೊಚ್ಚಲ ನಿರ್ದೇಶನದಲ್ಲೇ ಗೆದ್ದ ವೀರೇಂದ್ರ

    ಚೊಚ್ಚಲ ನಿರ್ದೇಶನದಲ್ಲೇ ಗೆದ್ದ ವೀರೇಂದ್ರ

    ಇದಿಷ್ಟನ್ನು ತೆರೆಗೆ ನಿರ್ದೇಶಕ ವೀರೇಂದ್ರ ಅವರು ಸೊಗಸಾಗಿ ತಂದಿದ್ದಾರೆ. ಚೊಚ್ಚಲ ನಿರ್ದೇಶನವಾದರೂ ಎಲ್ಲೂ ಚಿತ್ರದ ಕಥೆ ಹಳಿ ತಪ್ಪಿಲ್ಲ. ಚಿತ್ರದ ನಿರೂಪಣೆಯೂ ಅಷ್ಟೇ ನೀಟಾಗಿದೆ. ಇನ್ನು ಪವನ್ ಒಡೆಯರ್ ಅವರಲ್ಲಿ ಲವರ್ ಬಾಯ್ ಚಹರೆ ಕಾಣದಿದ್ದರೂ ತಮ್ಮ ಪಾತ್ರಕ್ಕೆ ಅವರು ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ.

    ಚೆಲ್ಲುಚೆಲ್ಲು ಹುಡುಗಿಯಾಗಿ ಸಂಗೀತಾ ಭಟ್

    ಚೆಲ್ಲುಚೆಲ್ಲು ಹುಡುಗಿಯಾಗಿ ಸಂಗೀತಾ ಭಟ್

    ಸಂಗೀತಾ ಭಟ್ ಅವರು ಚೆಲ್ಲುಚೆಲ್ಲು ಹುಡುಗಿಯಾಗಿ, ಪ್ರೀತಿ ಗೀತಿ ಇತ್ಯಾದಿ ಸನ್ನಿವೇಶಗಳಲ್ಲಿ ಮುಗ್ಧ ಅಭಿನಯ ನೀಡಿದ್ದಾರೆ. ಅಲ್ಲಲ್ಲಿ ಮೋಹಕವಾಗಿಯೂ ಕಾಡುತ್ತಾರೆ. ತಾಯಿಯ ಪಾತ್ರದಲ್ಲಿ ವಿನಯಾ ಪ್ರಕಾಶ್ ಅವರದು ಮನೋಜ್ಞ ಅಭಿನಯ.

    ರಂಗಾಯಣ ರಘು ಭಿನ್ನ ಪಾತ್ರ ಪೋಷಣೆ

    ರಂಗಾಯಣ ರಘು ಭಿನ್ನ ಪಾತ್ರ ಪೋಷಣೆ

    ಉಬ್ಬಸರೋಗದಿಂದ ಬಳಲುವ ಪವನ್ ಚಿಕ್ಕಪ್ಪನಾಗಿ ರಂಗಾಯಣ ರಘು ಅವರದು ಇಲ್ಲಿ ಭಿನ್ನ ಪಾತ್ರ ಪೋಷಣೆ. ಅವರ ಪಾತ್ರ ಕೇವಲ ಕಾಮಿಡಿಯಿಂದಷ್ಟೇ ಅಲ್ಲದೆ ಒಂದಷ್ಟು ಜವಾಬ್ದಾರಿಯಿಂದ ಕೂಡಿರುವ ಭಿನ್ನವಾದಂತಹ ಪಾತ್ರ.

    ಮನತಟ್ಟುವ ಸದಭಿರುಚಿಯ ಹಾಡುಗಳು

    ಮನತಟ್ಟುವ ಸದಭಿರುಚಿಯ ಹಾಡುಗಳು

    ಇನ್ನು ಚಿತ್ರದಲ್ಲಿ ಹಾಡುಗಳಿಗೆ ವಿಶೇಷ ಒತ್ತು ನೀಡಲಾಗಿದ್ದು ಎಲ್ಲ ಹಾಡುಗಳ ಸಾಹಿತ್ಯ (ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ) ಸದಭಿರುಚಿಯಿಂದ ಕೂಡಿದ್ದು ಮನತಟ್ಟುತ್ತವೆ. ವೀರ್ ಸಮರ್ಥ್ ಅವರ ಸಂಗೀತವೂ ಅದಕ್ಕೆ ತಕ್ಕಂತೆ ಮಿಡಿದಿದೆ. ಭಾಸ್ಕರ್ ರೆಡ್ಡಿ ಅವರ ಛಾಯಾಗ್ರಹಣ ಹಿತಮಿತವಾಗಿದೆ.

    ಅಲ್ಲಲ್ಲಿ ಭಟ್ಟರ ಕೈವಾಡ ಇಲ್ಲದಿಲ್ಲ

    ಅಲ್ಲಲ್ಲಿ ಭಟ್ಟರ ಕೈವಾಡ ಇಲ್ಲದಿಲ್ಲ

    ಮನಸ್ಸಿನ ಮಲಬದ್ಧತೆ, ಲೀಗಲ್ ಪ್ರಾಸ್ಟಿಟ್ಯೂಷನ್ ನಂತಹ ಹೊಸಹೊಸ ಪದ ಪ್ರಯೋಗಗಳು ಕೇಳಬಹುದು. ಅಪಘಾತದಲ್ಲಿ ಎಲ್ಲರನ್ನೂ ಕಳೆದುಕೊಂಡು ಹುಚ್ಚ ಅಲ್ಲಿ ಸಿಕ್ಕ ಚಪ್ಪಲಿಗಳನ್ನು ಸಂಗ್ರಹಿಸುವ ಪಾತ್ರವೂ ಮತ್ತೆಮತ್ತೆ ಕಾಡುತ್ತದೆ. ಇದರಲ್ಲಿ ಭಟ್ಟರ ಕೈವಾಡ ಇಲ್ಲದಿಲ್ಲ. ಚಿತ್ರದ ಕೊನೆಯಲ್ಲಿ ಒಂದು ಸಣ್ಣ ಸಂದೇಶವೂ ಇದೆ. ಅದೇನೆಂದರೆ "ಕ್ಷಮೆ ಪ್ರೀತಿಯ ಅಂತಿಮ ರೂಪ" ಎಂಬುದು.

    ಅಳುಕು, ಆತಂಕವಿಲ್ಲದೆ ನೋಡುವಂತಹ ಚಿತ್ರ

    ಅಳುಕು, ಆತಂಕವಿಲ್ಲದೆ ನೋಡುವಂತಹ ಚಿತ್ರ

    ಚಿತ್ರದಲ್ಲಿ ಸ್ಟಾರ್ ನಟರಾಗಲಿ, ಖ್ಯಾತ ನಿರ್ದೇಶಕರಾಗಲಿ ಇಲ್ಲ. ಆದರೆ ಇದೆಲ್ಲವನ್ನೂ ಮೀರಿಸುವಂತಹ ಕಥೆ, ಸಂಭಾಷಣೆ, ಆಹ್ಲಾದಕರವಾದ ಹಾಡುಗಳು ಇವೆ. ಕಣ್ಣಿಗೆ ತಂಪೆರೆಯುವ ಸನ್ನಿವೇಶಗಳಿವೆ. ಇದೇ ಚಿತ್ರದ ಪ್ಲಸ್ ಪಾಯಿಂಟ್. ಯಾವುದೇ ಅಳುಕು, ಆತಂಕವಿಲ್ಲದೆ ನೋಡಿ ಆನಂದಿಸುವಂತಹ ಚಿತ್ರ ಇದು.

    English summary
    Kannada movie Preethi Geethi Ityaadi review. The dialogues and direction by Veerendra do not fail to entertain one. It is refreshingly different and definitely worth watching. Starring Pavan Wadeyar, Sangeetha Bhat. Veer Samarth is the music director of the film.
    Friday, June 13, 2014, 17:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X