»   » ಚಿತ್ರ ವಿಮರ್ಶೆ: 'ಆಟಗಾರ'ನ ಆಟ, ಓಟ ಜೋರಾಗಿದೆ ಗುರು

ಚಿತ್ರ ವಿಮರ್ಶೆ: 'ಆಟಗಾರ'ನ ಆಟ, ಓಟ ಜೋರಾಗಿದೆ ಗುರು

Written by: ಬಾಲರಾಜ್ ತಂತ್ರಿ
Subscribe to Filmibeat Kannada
Rating:
4.0/5
ಖುಷಿ ಪಡುವ ವಿಚಾರವೇನಂದರೆ ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪ್ರಯತ್ನದ, ನಿರೂಪಣೆಯಲ್ಲಿ ಹೊಸತನವಿರುವ ಚಿತ್ರಗಳು ಬರುತ್ತಿರುವುದು. ಇಂತಹ ಪ್ರಯತ್ನದ ಚಿತ್ರಗಳನ್ನು ತೆರೆಗೆ ತರುವಾಗ ಅಲ್ಲಲ್ಲಿ ಕೆಲವೊಂದು ಸಣ್ಣಪುಟ್ಟ ತಪ್ಪಾಗುವುದು ಸಹಜ.

2007ರಲ್ಲಿ ಅಗ್ನಿ ಶ್ರೀಧರ್ ಕಥೆಯಾದಾರಿತ 'ಆ ದಿನಗಳು' ಚಿತ್ರವನ್ನು ನಿರ್ದೇಶಕ ಕೆ ಎಂ ಚೈತನ್ಯ ತೆರೆಗೆ ತಂದಿದ್ದ ರೀತಿಗೆ ಕನ್ನಡದ ಸಿನಿ ಪ್ರೇಕ್ಷಕ ಅವರಲ್ಲಿ ಹೊಸ ಭರವಸೆಯನ್ನು ಇಟ್ಟಿದ್ದ. (ಆಟಗಾರ ಸ್ವಮೇಕ್ ಸಿನಿಮಾ)

ಅದಾದ ನಂತರ ಇವರ ನಿರ್ದೇಶನದ ಸೂರ್ಯಕಾಂತಿ ಮತ್ತು ಪರಾರಿ ಚಿತ್ರಗಳು ಅಷ್ಟಾಗಿ ಸದ್ದು ಮಾಡಿರಲಿಲ್ಲ. ಈಗ ನಿರ್ದೇಶಕ ಚೈತನ್ಯ 'ಆಟಗಾರ' ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ಮತ್ತೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡದ ಹಿರಿಯ ನಿರ್ಮಾಪಕ, ನಟ ದ್ವಾರಕೀಶ್ ಬ್ಯಾನರಿನಲ್ಲಿ ಮೂಡಿಬಂದ ಬಹು ತಾರಾಗಣದ 'ಆಟಗಾರ' ಚಿತ್ರದಲ್ಲಿ ಎಲ್ಲಾ ಪಾತ್ರಕ್ಕೂ ಪ್ರಾಮುಖ್ಯತೆಯಿದೆ. ಚಿತ್ರದಲ್ಲಿ ಎಲ್ಲೂ ಗಿಮಿಕ್ ಇಲ್ಲ, ಐಟಂ ಸಾಂಗ್ ಇಲ್ಲ, ಸನ್ನಿವೇಶಕ್ಕೆ ಎಷ್ಟು ಬೇಕೋ ಅಷ್ಟೇ ಸಾಹಸ ದೃಶ್ಯಗಳಿವೆ.

ಚಿತ್ರದಲ್ಲಿ ನಾಯಕನನ್ನು ಹೊಗಳುವ ಶತನಾಮಾವಳಿಗಳಿಲ್ಲ, ರೌಡಿಗಳನ್ನು ಚೆಂಡಾಡುವ ಮಚ್ಚುಗಳಿಗೆ ಕೆಲಸವಿಲ್ಲ. ಪಡ್ಡೆಗಳ ಶಿಳ್ಳೆಗಿಟ್ಟಿಸಲು ಉದ್ದುದ್ದ ಡೈಲಾಗುಗಳಿಲ್ಲ. ಚಿತ್ರದಲ್ಲಿ ಆರಂಭದಿಂದ ಕೊನೆಯವರೆಗೆ ಇರುವುದು ಸಸ್ಪೆನ್ಸ್.. ಸಸ್ಪೆನ್ಸ್.. ಸಸ್ಪೆನ್ಸ್..

ಚಿತ್ರದ ಕಥೆಯ ಬಗ್ಗೆ

ಚಿತ್ರದ ಕಥೆಯ ಬಗ್ಗೆ

ಟಿವಿ ರಿಯಾಲಿಟಿ ಶೋನ ಒಂದು ಕೋಟಿ ರೂಪಾಯಿ ಬಹುಮಾನವನ್ನು ಗೆಲ್ಲುಲು ಸಮಾಜದ ವಿವಿಧ ರಂಗದ ಹತ್ತು ಮಂದಿ ಗಣ್ಯರು ನಿರ್ಜನ ದ್ವೀಪವೊಂದರಲ್ಲಿರುವ ಬಂಗ್ಲೆಯಲ್ಲಿ ಸೇರುತ್ತಾರೆ. ಮೊದಲ ದಿನದ ರಾತ್ರಿ ಕಳೆಯುತ್ತಿದ್ದಂತೇ ತಂಡದ ಸದಸ್ಯರು ನಿಗೂಢವಾಗಿ ಸಾವನ್ನಪ್ಪಲು ಆರಂಭಿಸುತ್ತಾರೆ.

ಚಿತ್ರದ ಕಥೆಯ ಬಗ್ಗೆ ಇನ್ನೂ ಸ್ವಲ್ಪ

ಚಿತ್ರದ ಕಥೆಯ ಬಗ್ಗೆ ಇನ್ನೂ ಸ್ವಲ್ಪ

ಗೃಹಬಂಧನಕ್ಕೊಳಗಾಗಿ ಹೊರ ಜಗತ್ತಿನ ಸಂಪರ್ಕವೇ ಇಲ್ಲದೇ ಈ ತಂಡದ ಸದಸ್ಯರ ಸಾವಿನ ಸರಪಳಿ ಮುಂದುವರಿಯುತ್ತಲೇ ಇರುತ್ತದೆ. ಈ ಕೊಲೆಗಳ ಹಿಂದೆ ಯಾರ ಕೈವಾಡವಿದೆ, ರಿಯಾಲಿಟಿ ಶೋ ನಡೆಸುವ ಟಿವಿಯ ಪಾತ್ರವೇನು, ಕೊಲೆ ಮಾಡಿಸುತ್ತಿರುವವರ ಉದ್ದೇಶವೇನು ಎನ್ನುವುದೇ ಚಿತ್ರದ ರೋಚಕ ಕಥೆ. ಸಮಾಜದ ಕ್ರೌರ್ಯ ಮುಖಗಳಿಂದ ದಬ್ಬಾಳಿಕೆಗೊಳಗಾದವರು ಕಾನೂನನ್ನು ಕೈಯಲ್ಲಿ ತೆಗೆದುಕೊಂಡು ಸೇಡು ತೀರಿಸಿಕೊಳ್ಳುವ ಕಥೆಗೆ ನಿರ್ದೇಶಕರು 21ನೇ ಶತಮಾನದ ಟಚ್ ಅನ್ನು ನೀಡಿದ್ದಾರೆ.

ಚಿತ್ರದ ನಿರೂಪಣೆಯ ಬಗ್ಗೆ

ಚಿತ್ರದ ನಿರೂಪಣೆಯ ಬಗ್ಗೆ

ಚಿತ್ರದ ನಿರೂಪಣೆ 'ಒಟ್ಟಾರೆ'ಯಾಗಿ ಬಿಗಿಯಾಗಿದೆ, ಪ್ರೇಕ್ಷಕ ಮುಂದೇನಾಗುತ್ತೆ ಎನ್ನುವ ಕುತೂಹಲದಲ್ಲಿ 'ಸೀಟಿ'ನಲ್ಲಿ ಕೂತಿರುತ್ತಾನೆ. ತಂಡದ ಸದಸ್ಯರು ಒಬ್ಬಬ್ಬರೊಬ್ಬರು ಸಾವನ್ನಪ್ಪುತ್ತಿದ್ದಂತೆಯೇ ಕಳಚುವ ಹತ್ತು ಮುಖದ ರಾವಣನ ಒಂದೊಂದು ಮುಖದ ಕಾನ್ಸೆಪ್ಟ್ ಉತ್ತಮವಾಗಿ ಮೂಡಿಬಂದಿದೆ. ಡ್ರಗ್ಸ್ ದುಡ್ಡಿನ ಮಾರಾಟದ ವಿಚಾರದಲ್ಲಿ ಚಿರಂಜೀವಿ ಸರ್ಜಾ ಮತ್ತು ಮುನಿ ತಂಡದ ಜೊತೆ ನಡೆಯುವ ಏಕೈಕ ಫೈಟ್ ನೀಟಾಗಿ ಬಂದಿದೆ. ಅಲ್ಲಲ್ಲಿ ಬರುವ ರವಿಶಂಕರ್ ಮತ್ತು ಅವರ ಸಹದ್ಯೋಗಿಗಳ ಮಸಾಲ ಸಂಭಾಷಣೆ ಮಜಾ ನೀಡುವುದರ ಜೊತೆಗೆ, ಸಿಕ್ಕಾಪಟ್ಟೆ ಶಿಳ್ಳೆಗಿಟ್ಟಿಸುತ್ತೆ.

ಚಿತ್ರದಲ್ಲಿ ಬಿಗಿತನ ಇನ್ನೂ ಸ್ವಲ್ಪ ಕಾಯ್ದುಕೊಳ್ಳಬಹುದಾಗಿತ್ತು

ಚಿತ್ರದಲ್ಲಿ ಬಿಗಿತನ ಇನ್ನೂ ಸ್ವಲ್ಪ ಕಾಯ್ದುಕೊಳ್ಳಬಹುದಾಗಿತ್ತು

ಅನಂತ್ ನಾಗ್ ಎಂಟ್ರಿ ಕೊಟ್ಟ ನಂತರ ನಿರೂಪಣೆ ಸ್ವಲ್ಪ ಬಿಗಿತನವನ್ನು ಕಳೆದುಕೊಳ್ಳುತ್ತದೆ. ಭಯ ಪಡುವ ಸನ್ನಿವೇಶಗಳು ಚಿತ್ರದಲ್ಲಿ ಹೇರಳವಾಗಿದ್ದರೂ, ಪ್ರೇಕ್ಷಕನನ್ನು ಸಿಕ್ಕಾಪಟ್ಟೆ ಬೆಚ್ಚಿಬೀಳಿಸುವಲ್ಲಿ ನಿರೂಪಣೆ ಸ್ವಲ್ಪ ಎಡವಿದೆ. ಪೂರ್ವಾರ್ಧದಲ್ಲಿ ಬರುವ ಕಾಡಿನಲ್ಲಿ ನರಬಲಿ ಕೊಟ್ಟಂತಿರುವ ಸನ್ನಿವೇಶ, ತಂಡದ ಸದಸ್ಯರು ಸ್ಟೋರ್ / ಕಂಟ್ರೋಲ್ ರೂಮಿಗೆ ಹೋಗುವ ಸನ್ನಿವೇಶಕ್ಕೆ ಇನ್ನೂ ಭಯಾನಕ ಟಚ್ ನೀಡಬಹುದಿತ್ತು.

ಚಿತ್ರದ ಫೋಟೋಗ್ರಾಫಿ

ಚಿತ್ರದ ಫೋಟೋಗ್ರಾಫಿ

ಇಡೀ ಚಿತ್ರದ ಪ್ರಮುಖ ಹೈಲೆಟ್ಸ್ ಅಂದರೆ ಅದು ಸತ್ಯ ಹೆಗಡೆಯವರ ಫೋಟೋಗ್ರಾಫಿ. ಲಾಂಗ್ ಶಾಟ್, ಕಾಡಿನ ದೃಶ್ಯ, ಮನೆಯೊಳಗೆ ನಡೆಯುವ ಸನ್ನಿವೇಶಗಳನ್ನು ಹೆಗಡೆ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಕಾಡಿನಲ್ಲಿ ಹೆಣಬೀಳುವ ದೃಶ್ಯಗಳು ಪಕ್ಕಾ ಹಾಲಿವುಡ್ ಶೈಲಿಯಲ್ಲಿ ಹೆಗಡೆ ಸೆರೆಹಿಡಿದಿದ್ದಾರೆ.

ಸಂಗೀತ, ಬ್ಯಾಕ್ ಗ್ರೌಂಡ್ ಮ್ಯೂಸಿಕ್

ಸಂಗೀತ, ಬ್ಯಾಕ್ ಗ್ರೌಂಡ್ ಮ್ಯೂಸಿಕ್

ಸಸ್ಪೆನ್ಸ್ ಚಿತ್ರಕ್ಕೆ ಪ್ರಮುಖ ಜೀವಾಳವೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್. ಚಿತ್ರದಲ್ಲಿ ಬರುವ ಎರಡೋ, ಮೂರು ಹಾಡುಗಳು ಸನ್ನಿವೇಶಕ್ಕೆ ತಕ್ಕಂತಿದೆ. ಚಿತ್ರದುದ್ದಕ್ಕೂ ಅನೂಪ್ ಶೀಳನ್ ಬಿಜಿಎಂ ಉತ್ತಮವಾಗಿದೆ. ಆದರೆ ಕೆಲವೊಂದು ದೃಶ್ಯಗಳಲ್ಲಿ ಬ್ಯಾಕ್ ಗ್ರೌಂಡ್ ಸಂಗೀತ ಇನ್ನಷ್ಟು ಅಬ್ಬರವಾಗಿದ್ದರೆ ಚಿತ್ರಕಥೆಗೆ ಇನ್ನಷ್ಟು ಪೂರಕವಾಗುತ್ತಿತ್ತು.

ಕಲಾವಿದರ ನಟನೆ

ಕಲಾವಿದರ ನಟನೆ

ಬಹುತಾರಾಗಣದ ಈ ಚಿತ್ರದಲ್ಲಿ ಎಲ್ಲರಿಗೂ ಇಕ್ವಲ್ ಪಾಲು. ಎಲ್ಲರೂ ಸೂಪರ್, ಕೆಮ್ಮಂಗಿಲ್ಲ ಶೀನಂಗಿಲ್ಲ. ವೈದ್ಯ ಪಾತ್ರಧಾರಿ ಪ್ರಕಾಶ್ ಬೆಳವಾಡಿ ಅವರ ನಟನೆ, ಬಾಡಿ ಲಾಂಗ್ವೇಜ್ ಸೂಪರ್. ಚಿರು, ಮೇಘನಾ, ಪಾರೂಲ್, ಸಾಧು, ಅನಂತ್ ನಾಗ್, ಅಚ್ಯುತ್, ಅನು ಪ್ರಭಾಕರ್, ಪಾವನಾ, ಅರೋಹಿತ್, ರವಿಶಂಕರ್, ದ್ವಾರಕೀಶ್ ನಟನೆ ಎಲ್ಲೂ ಹಳಿತಪ್ಪಿಲ್ಲ, ಓವರ್ ಆಕ್ಟಿಂಗೂ ಆಗಿಲ್ಲ.

ಕೊನೆಯದಾಗಿ, ಚಿತ್ರದ ಬಗ್ಗೆ

ಕೊನೆಯದಾಗಿ, ಚಿತ್ರದ ಬಗ್ಗೆ

ಸಸ್ಪೆನ್ಸ್ ಥ್ರಿಲ್ಲರ್ ಅದಕ್ಕಿಂತ ಹೆಚ್ಚಾಗಿ ಹೊಸ ಪ್ರಯತ್ನದ ಹೆಮ್ಮೆ ಪಡುವ ಸ್ವಮೇಕ್ ಚಿತ್ರವಿದು. ಅಲ್ಪಸ್ವಲ್ಪ ತಪ್ಪುಗಳ ನಡುವೆಯೂ ನಿರ್ದೇಶಕ ಚೈತನ್ಯ ವಿಭಿನ್ನವಾದ ಚಿತ್ರವನ್ನು ತೆರೆಗೆ ತಂದಿದ್ದಾರೆ, ಕುಟುಂಬ ಸಮೇತ ಬಂದು ನಿರ್ಭಯವಾಗಿ ಚಿತ್ರವನ್ನು ನೋಡಿ ಚಿತ್ರತಂಡದ ಬೆನ್ನುತಟ್ಟಿ.

English summary
K M Chaitanya directed suspense thriller Aatagara movie review.
Please Wait while comments are loading...

Kannada Photos

Go to : More Photos