twitter
    For Quick Alerts
    ALLOW NOTIFICATIONS  
    For Daily Alerts

    ರಾಮ ರಾಮ ರೇ: ಒಂದೇ ನೋವಿನ ಒಳಗೇ ಎಲ್ಲ ಇಲ್ಲಿ ಬಂಧಿಯು

    ಸಿನೆಮಾ ಸಪ್ಪೆಯಾಗಬಾರದೆಂದು ತುರುಕಿಸುವ ಐಟಂ ಸಾಂಗ್, ನಾಯಕನ ಮಾಸ್ ಎಂಟ್ರಿ, ಮುಖ್ಯಕತೆಗೆ ಸಂಬಂಧವಿಲ್ಲದ ಹಾಸ್ಯ ಸನ್ನಿವೇಶಗಳು ಯಾವುವು ಇಲ್ಲದ ಹೊಸ ಹೆಸರಿನ ಹೊಸ ಸಿನೆಮಾ "ರಾಮ ರಾಮ ರೇ".

    By ಭಾಸ್ಕರ ಬಂಗೇರ
    |

    "ಈ ಭೂಮಿ ಮೇಲೆ ಮನುಷ್ಯಂಗೆ ಏನ್ ಗಾಳಿ ಸಿಗ್ತದೋ ಕೊಂದು ತಿನ್ನೋ ಹುಲಿಗು ಅದೇ ಗಾಳಿ, ಹುಲ್ಲ್ ತಿನ್ನೋ ಹಸುಗು ಅದೇ ಗಾಳಿ. ಅದಕ್ಕೆ ಮನುಷ್ಯ ಒಂದೊಂದ್ ಸಲ ಹುಲಿನು ಆಗ್ತಾನೆ ಒಂದೊಂದ್ ಸಲ ಹಸುನು ಆಗ್ತಾನೆ. ಪ್ರತಿ ದೇಹದಾಗು ಪರಮಾತ್ಮ ಇರ್ತಾನೆ.

    ಈ ಮೈಮೇಲ್ ತನ್ ಕೆಲ್ಸಾ ಮುಗದ್ಮೇಲೆ ಅವ್ನು ಹೊಂಟೋಯ್ತಾನೆ. ಅವನ್ನ ಹೊಡ್ದು, ಬಡ್ದು ಹಿಂಸೆ ಕೊಟ್ಟು ಕಳಸ್ಬಾರ್ದು ಕಣ್ರಪ್ಪ ಶಿವ ಮೆಚ್ಚಕ್ಕಿಲ್ಲ" ಈ ಮೂರು ಸಾಲಿನ ಸಂಭಾಷಣೆ "ರಾಮ ರಾಮ ರೇ" ಸಿನೆಮಾದ ಸಂಪೂರ್ಣ ಭಾವಾರ್ಥವು ಆಗಬಲ್ಲುದು.

    ನಮ್ಮ ಗ್ರಹಿಕೆಯ ಸಾಮರ್ಥ್ಯಕ್ಕೆ ತಕ್ಕಂತೆ "ರಾಮ ರಾಮ ರೇ" ಸಿನೆಮಾದ ಪಾತ್ರಗಳು ನಮ್ಮದೇ ಹಲವು ಒಳಮುಖಗಳ ನಡುವಿನ ಮಾತುಕತೆಯಂತೆ ಭಾಸವಾಗುತ್ತದೆ. ನಮ್ಮೊಳಗೆ ಪ್ರಶ್ನೆಗಳನ್ನು ಹೆತ್ತುಕೊಂಡು ಅದಕ್ಕೆ ಅಪ್ಪ ಅಮ್ಮಂದಿರನ್ನು ನಾವೇ ಹುಡುಕಿಕೊಳ್ಳುವ ಧ್ಯಾನಕ್ಕೆ ಕುಳಿಸುತ್ತದೆ ಈ ಸಿನೆಮಾ.

    ಜಾತಿಯ ಕಾರಣಕ್ಕೆ ಪ್ರೇಮಿಗಳನ್ನು ಬೇರೆ ಮಾಡಲು ಹೊರಟ ಮನೆಯವರು ಅಂತರ್ಜಾತೀಯ ವಿವಾಹದ ಹೊರತಾಗಿಯೂ ಮಗಳಿಗೆ ಹೆಣ್ಣು ಮಗು ಹುಟ್ಟಿದರೆ ಒಳ್ಳೆಯದಾಗುತ್ತದೆ ಎನ್ನುವ ಜ್ಯೋತಿಷಿಯ ಮಾತನ್ನು ನಂಬುತ್ತಾರೆ,

    ಅಪರಾಧಿಗಳನ್ನು ಗಲ್ಲಿಗೇರಿಸಲು ಉಪಯೋಗಿಸಬೇಕಾದ ಹಗ್ಗ ತೊಟ್ಟಿಲು ಕಟ್ಟಲು ಬಳಸಲ್ಪಡುತ್ತದೆ, ಹೂವು ಮಾರುವಾಕೆಯಿಂದ ಹೂವು ಕಟ್ಟಿಸಿಕೊಂಡ ವ್ಯಕ್ತಿ ದೇವಸ್ಥಾನದ ಮುಂಭಾಗದಿಂದ ಹಾದು ಹೋಗಿ ತನ್ನ ಜೀಪಿಗೆ ಆ ಹೂವನ್ನು ಸಿಂಗರಿಸುತ್ತಾನೆ, ಕೊಲ್ಲಬೇಕಾದವನು ಹಾಗು ಸಾಯುವವನು ಜೊತೆಯಾಗಿ ಹೆರಿಗೆ ಬೇನೆಯಿಂದ ನರಳುತ್ತಿದ್ದವಳಿಗೆ ಹೆಗಲು ಕೊಡುತ್ತಾರೆ.

    ಇಂತಹ ಅನೇಕ ದೃಶ್ಯ ತುಣುಕುಗಳು "ರಾಮ ರಾಮ ರೇ" ಸಿನೆಮಾದಲ್ಲಿವೆ. ತೆರೆಯ ಮೇಲೆ ಕಾಣಿಸಿದ್ದು ಹಾಗು ಕೇಳಿಸಿದ್ದಕ್ಕಿಂತ ಹೆಚ್ಚಾಗಿ ಸಿನೆಮಾ ನಮ್ಮನ್ನು ಆವಾಹಿಸಿಕೊಳ್ಳುತ್ತದೆ.

    ಜಯನಗರ 4th ಬ್ಲಾಕ್: ಈ ಹಿಂದೆ "ಜಯನಗರ 4th ಬ್ಲಾಕ್" ಎನ್ನುವ ಮನಕಲುಕುವ ಕಥಾಹಂದರವನ್ನು ಹೊಂದಿದ್ದ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದ ಡಿ. ಸತ್ಯಪ್ರಕಾಶ್ "ರಾಮ ರಾಮ ರೇ" ಸಿನೆಮಾದ ನಿರ್ದೇಶಕರು. ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಬಳಿ ಸಾಕಷ್ಟು ವರ್ಷ ದುಡಿದಿರುವ ಅನುಭವ ಇವರ ಜೊತೆಯಿದೆ.

    ಉದುರಿ ಬೀಳುವ ಭಯದಲ್ಲಿರುವ ಕಾಯೊಂದು ಈಗಷ್ಟೇ ಅರಳಿ ಘಮ ಚೆಲ್ಲುತ್ತಿರುವ ಹೂವನ್ನು ನೋಡಿ ತನ್ನೆಲ್ಲ ಪಾಪ ಕೃತ್ಯಗಳನ್ನು ಮರೆತು ಸಂಭ್ರಮಿಸುವುದನ್ನು ತೆರೆಯ ಮೇಲೆ ತಂದ ಶೈಲಿ ಇಂದಿನ ಕನ್ನಡ ಚಿತ್ರರಂಗದ ಕೃಷಿಯ ಅಚ್ಚರಿ.

    Rama Rama Re movie review by Bhaskar Bangera

    ಅವಮಾನ ಹಾಗು ಆತಂಕಗಳು ಅಂತಃಕರಣವನ್ನು ಹಿಂಡಿ ಹಿಪ್ಪೇ ಮಾಡಿದಾಗ ಹುಟ್ಟಿದ ಚಿತ್ರಕತೆಯಿದು ಅನಿಸುತ್ತದೆ. ಪುಟ್ಟ ಸಂಗತಿಗಳನ್ನು ಇಷ್ಟು ಆಪ್ತವಾಗಿ ಹೇಳುವ ಕಲೆಯನ್ನು ಹೀಗೆ ಉಳಿಸಿಕೊಂಡಲ್ಲಿ ಇವರು ಚಂದನವನವನ್ನು ಇನ್ನಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬಲ್ಲರು. ಸೀಮಿತ ಸೌಕರ್ಯಗಳ ನಡುವೆಯೂ ಲಿವಿತ್ ಛಾಯಾಗ್ರಹಣ ಬೆರಗು ಹುಟ್ಟಿಸುತ್ತದೆ. ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ.

    ಕೆ. ಜಯರಾಂ ಹಾಗು ನಟರಾಜ್ ಸಿನೆಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬೋಳು ದಾರಿಯ ಪಯಣದಲ್ಲಿ ಬಿಸಿಲಿಗಿಂತ ಇವರಿಬ್ಬರ ಮೌನ ಹೆಚ್ಚು ಸುಡುತ್ತದೆ. ಜಾಸ್ತಿ ಸಂಭಾಷನೆಗಳಿಲ್ಲದ ಪಾತ್ರದಲ್ಲಿ ನಟರಾಜ್ ಕಣ್ಣು ಹೆಚ್ಚು ಮಾತನಾಡುತ್ತದೆ. ಜೈಲಿನಿಂದ ತಪ್ಪಿಸಿಕೊಂಡ ಕ್ಷಣದ ಆತಂಕ, ಜೀಪಿನಲ್ಲಿ ಪಯಣಿಸುವಾಗಿನ ನಿರ್ಲಿಪ್ತ ಭಾವ, ಅನಾಮಿಕರು ತೋರಿಸುವ ಪ್ರೀತಿಗೆ ಮರುಗುವ ಮನ, ಯಾರನ್ನು ನಂಬಲಾಗದ ಚಡಪಡಿಕೆ ಹೀಗೆ ಎಲ್ಲವನ್ನು ಸಂಭಾಷಣೆಯ ಹಂಗಿಲ್ಲದೆ ನಟರಾಜ್ ಪಾತ್ರವನ್ನು ಜೀವಿಸಿದ್ದಾರೆ.

    ಧರ್ಮ ಎನ್ನುವ ಪಾತ್ರ ಕೆಲವು ಸಂದರ್ಭಗಳಲ್ಲಿ ಸುಖಾಸುಮ್ಮನೆ ಮಾತನಾಡುವುದು ಕಿರಿಕಿರಿ ಅನಿಸುತ್ತದೆ. ಎರಡು ಮುಖ್ಯ ಪಾತ್ರಗಳ ನಡುವಿನ ಮೌನ ಹಾಗು ವಿಷಾದ ಸಿನೆಮಾ ನೋಡುಗರ ಆಳಕ್ಕಿಳಿದು ತಣ್ಣನೆಯ ಅಲೆ ಮೂಡುವ ಹೊತ್ತಲ್ಲಿ ಆ ಪಾತ್ರ ಮಾತಿನ ಧೂಳೆಬ್ಬಿಸುತ್ತದೆ. ಆದರೆ ಧರ್ಮ ಪಾತ್ರದಲ್ಲಿ ಧರ್ಮ ಕಡೂರು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಅವರ ಮುಖಭಾವ ಹಾಗು ಆಂಗಿಕ ಅಭಿನಯ ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದೆ. ಪ್ರೇಯಸಿಯ ಪಾತ್ರದಲ್ಲಿ ನಟಿಸಿರುವ ಬಿಂಬಶ್ರೀ ಆತಂಕ ಹಾಗು ಸಡಗರ ಎರಡನ್ನು ಹೊತ್ತ ನೋಟದಿಂದ ಇಷ್ಟವಾಗುತ್ತಾರೆ.

    ಒಂದು ಕನ್ನಡ ಸಿನೆಮಾ ನೋಡುವಾಗ ಸಾಮಾನ್ಯವಾಗಿ ನಮಗೆ ಎದುರಾಗುವ ಬೆಂಗಳೂರಿನ ಗಲ್ಲಿಗಳು, ಹಳೆ ಮೈಸೂರು ಸುತ್ತಮುತ್ತಲಿನ ಗತ್ತು, ಸಿನೆಮಾ ಸಪ್ಪೆಯಾಗಬಾರದೆಂದು ತುರುಕಿಸುವ ಐಟಂ ಸಾಂಗ್, ನಾಯಕನ ಮಾಸ್ ಎಂಟ್ರಿ, ಮುಖ್ಯಕತೆಗೆ ಸಂಬಂಧವಿಲ್ಲದ ಹಾಸ್ಯ ಸನ್ನಿವೇಶಗಳು ಯಾವುವು ಇಲ್ಲದ ಹೊಸ ಹೆಸರಿನ ಹೊಸ ಸಿನೆಮಾ "ರಾಮ ರಾಮ ರೇ".

    ಹಾಡೊಂದರ ಸಾಲು "ಕೊಲ್ಲುವುದೇ ಬೇಡಯ್ಯ, ನನಗಿರಲಿ ಅಪಜಯ" ಎನ್ನುತ್ತದೆ. ಕಾರಾಗೃಹದ ಬಂಧನದಿಂದ ತಪ್ಪಿಸಿಕೊಂಡು ಬರುವ ವ್ಯಕ್ತಿಯನ್ನು ಕಟ್ಟಿ ಹಾಕುವ ಬಂಧಗಳು ಯಾವುವು, ಕ್ರೌರ್ಯವನ್ನು ಹೊತ್ತವನ ಎದೆಯಲ್ಲಿ ಪಾಪಪ್ರಜ್ಞೆ ಹುಟ್ಟುತ್ತದೋ, ಇಲ್ಲವೋ ಎನ್ನವುದನ್ನು ತಿಳಿಯಲು ನೀವು ಸಿನೆಮಾ ನೋಡಲೇಬೇಕು. ಸಿನೆಮಾ ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎನ್ನುವುದು ನಿಜ. ಆದರೆ ಸರಿಯಾದ ಪ್ರಚಾರ ಸಿಗದೇ ಸೋತ ಉತ್ತಮ ಚಿತ್ರಗಳು ಬಹಳಷ್ಟಿವೆ. "ರಾಮ ರಾಮ ರೇ" ಚಿತ್ರತಂಡ ಮತ್ತೇ ಭಿನ್ನವಾಗಿ ಆಲೋಚಿಸುವಷ್ಟು ಚೈತನ್ಯವನ್ನು ಪ್ರೇಕ್ಷಕ ಪ್ರಭು ನೀಡಲಿ.

    English summary
    Rama Rama Re movie directed by Jayanagar 4th Block short film fame Satya Prakash. Movie starring Nataraj, Jayaram, Bimbashree is getting good response. Why this movie is a heat touching and has real to life story explains Bhaskar Bangera
    Tuesday, October 25, 2016, 16:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X