»   » ವಿಮರ್ಶೆ: 'ರುದ್ರದೇವ'ನಾದ 'ರುದ್ರಮದೇವಿಗೆ' ಬಹುಪರಾಕ್

ವಿಮರ್ಶೆ: 'ರುದ್ರದೇವ'ನಾದ 'ರುದ್ರಮದೇವಿಗೆ' ಬಹುಪರಾಕ್

Written by: ಸೋನು ಗೌಡ
Subscribe to Filmibeat Kannada

ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅಭಿನಯದ 'ರುದ್ರಮದೇವಿ' ಚಿತ್ರ ಬಿಡುಗಡೆಯಾಗಿದ್ದು, ಹದಿಮೂರನೇ ಶತಮಾನದ ಕಾಕತೀಯ ಸಾಮ್ರಾಜ್ಯದಲ್ಲಿ ನೆಲೆಸಿರುವ ರಾಜವಂಶದ ಕಥೆಗೆ ನಿರ್ದೇಶಕ ಗುಣಶೇಖರ್ ಅವರು ನೀಟಾಗಿ ಬಣ್ಣ ಹಚ್ಚಿದ್ದಾರೆ. ನೈಜ ಕಥೆಯಾದ್ದರಿಂದ ಮೂಲ ಕಥೆಗೆ ಯಾವುದೇ ಧಕ್ಕೆಯಾಗದಂತೆ ಸಿನಿಮಾ ಮಾಡಿದ್ದು, ನಿರ್ದೇಶಕರ ಕೈಚಳಕ. ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ ನೋಡಿ

ಸಂಪೂರ್ಣ ವಿಮರ್ಶೆ

ಕಥೆ:

ಓರಗಲ್ಲು (ಈಗಿನ ವಾರಂಗಲ್) ರಾಜಧಾನಿಯಾಗಿ ಮಾಡಿಕೊಂಡು ಕಾಕತೀಯ ಸಾಮ್ರಾಜ್ಯವನ್ನು ಸತತ 63 ವರ್ಷಗಳಿಂದ ಆಳ್ವಿಕೆ ನಡೆಸಿದ ರಾಜ ಗಣಪತಿ ದೇವುಡು (ಕೃಷ್ಣಂರಾಜು) ಹಾಗು ಆತನ ಮಗಳು 'ರುದ್ರಮದೇವಿ' (ಅನುಷ್ಕಾ ಶೆಟ್ಟಿ) ಯ ಕಥೆ ನೋಡುತ್ತಿದ್ದಂತೆ ಪ್ರೇಕ್ಷಕರಿಗೆ ಇಟಾಲಿಯನ್ ಪ್ರವಾಸಿ ವ್ಯಾಪಾರಿ ಮಾರ್ಕೋ ಪೋಲೋ ಕಥೆ ನೆನಪಾಗಬಹುದು.

ಕಾಕತೀಯ ರಾಜ್ಯದಲ್ಲಿ ಹೆಣ್ಣು ಮಕ್ಕಳು ಆಳ್ವಿಕೆ ಮಾಡಬಾರದು ಎಂಬ ವಿಶಿಷ್ಟ ಆಜ್ಞೆ ಇರುತ್ತದೆ. ಆದರೆ ರಾಜ ಗಣಪತಿ ದೇವುಡುಗೆ ಹೆಣ್ಣು ಮಗು ಜನಿಸುತ್ತದೆ. ಇದರಿಂದ ಆತಂಕಗೊಂಡ ರಾಜ ಪರಿವಾರಕ್ಕೆ ಏನು ಮಾಡುವುದೆಂದು ತೋಚದೆ ಇರುವಾಗ ಮಂತ್ರಿ ಶಿವ ದೇವಯ್ಯ (ಪ್ರಕಾಶ್ ರೈ) ಹೆಣ್ಣು ಮಗುವನ್ನು ಗಂಡು ಮಗುವೆಂದು ಇಡೀ ರಾಜ್ಯದ ಜನತೆ ಮುಂದೆ ಘೋಷಿಸುತ್ತಾರೆ.[ಚಿತ್ರಗಳು: ಅನುಷ್ಕಾ ಶೆಟ್ಟಿ 'ರುದ್ರಮ್ಮದೇವಿ' ಗೆ, ಬಹುಪರಾಕ್]

ಮಗಳಿಗೆ ರಹಸ್ಯವಾಗಿ 'ರುದ್ರಮದೇವಿ' ಎಂದು ನಾಮಕರಣ ಮಾಡುವ ರಾಜ ಮನೆತನ ರಾಜ್ಯದ ಜನತೆಯ ಮುಂದೆ 'ರುದ್ರದೇವ' ಎಂದು ನಾಮಕರಣ ಮಾಡಿ ಆಕೆಗೆ ಯುದ್ದ ವಿದ್ಯೆಗಳನ್ನು ಕಲಿಸುವ ಮೂಲಕ ಗಂಡಿನಂತೆ ರಹಸ್ಯವಾಗಿ ಬೆಳೆಸುತ್ತಾರೆ. ಅಲ್ಲದೇ ಮದುವೆ ವಯಸ್ಸಿಗೆ ಬಂದಾಗ ಮುಕ್ತಾಂಬ (ನಿತ್ಯಾ ಮೆನನ್) ಜೊತೆ ಮದುವೆ ಕೂಡ ಮಾಡುತ್ತಾರೆ. ನಿಜ ವಿಷಯ ತಿಳಿದ ಮೇಲೂ ನಿತ್ಯಾ ಮೆನನ್ ಮದುವೆಯಾಗುವುದು ವಿಶೇಷ.

ಈ ನಡುವೆ ರಾಜ ಗಣಪತಿ ದೇವುಡು ಸೋದರರಾದ ಹರಿಹರ ದೇವ (ಸುಮನ್) ಹಾಗೂ ಮುರಾರಿದೇವ (ಆದಿತ್ಯ ಮೆನನ್) ರಾಜನನ್ನು ಸಿಂಹಾಸನದಿಂದ ಉರುಳಿಸಲು ಪ್ರಯತ್ನಪಡುತ್ತಿದ್ದು, ಕಾಕತೀಯ ರಾಜ್ಯದ ಮೇಲೆ ದಂಡೆತ್ತಿ ಬರಲು ಪ್ರಯತ್ನಿಸುತ್ತಿರುವ ವೈರಿ ರಾಜ ಮಹಾದೇವ ನಾಯಕುಡುಗೆ (ವಿಕ್ರಮ್ ಜಿತ್) ರಹಸ್ಯ ಹೇಳಲು ಮುಂದಾಗುತ್ತಾರೆ.

ಇನ್ನು ಮತ್ತೊಂದು ಕಡೆಯಿಂದ ರಾಜಾಜ್ಞೆ ದಿಕ್ಕರಿಸಿರುವ ದರೋಡೆಕೋರ ಗೋನ ಗನ್ನಾ ರೆಡ್ಡಿ (ಅಲ್ಲು ಅರ್ಜುನ್) ರಾಜ್ಯಾಡಳಿತಕ್ಕೆ ತಲೆನೋವಾಗಿ ಪರಿಣಮಿಸುತ್ತಾನೆ.[ಸೆಪ್ಟೆಂಬರ್ 17 ರಂದು ತೆರೆ ಮೇಲೆ 'ರುದ್ರಮ್ಮದೇವಿ' ]

ಒಟ್ನಲ್ಲಿ ರಾಜ್ಯಕ್ಕೆ ಕೇಡು ಬಯಸಲು ಮಸಲತ್ತು ನಡೆಸುವ ದಾಯಾದಿಗಳ ಜೊತೆಗೆ ಗೋನ ಗನ್ನ ರೆಡ್ಡಿಯ ಉಪದ್ರ, ಸಾಲದೆಂಬಂತೆ ರಾಜಕುಮಾರ ರುದ್ರದೇವ ಅಂತ ಹೇಳಿಕೊಂಡಿರುವ 'ರುದ್ರಮದೇವಿ' ಹೆಣ್ಣು ಅಂತ ಗೊತ್ತಾದರೆ ಜನರ ಪ್ರತಿಕ್ರಿಯೆ ಹೇಗಿರಬಹುದು ಅಂತ ರಾಜ ಪರಿವಾರ ಆತಂಕಪಡುತ್ತಾರೆ. ಮುಂದೆನಾಗುತ್ತದೆ ಇದೆಲ್ಲ ಸಮಸ್ಯೆಗೆ 'ರುದ್ರಮದೇವಿ' ಹೇಗೆ ಪರಿಹಾರ ಸೂಚಿಸುತ್ತಾಳೆ ಅಂತ ನೋಡಲು ಚಿತ್ರಮಂದಿರಕ್ಕೆ ಭೇಟಿ ನೀಡಿ.

ನಟನೆ:

ವಿಶೇಷವಾಗಿ ಅನುಷ್ಕಾ ಶೆಟ್ಟಿ ಅವರು ಪುರುಷ ಹಾಗೂ ಮಹಿಳೆ ಎರಡು ಪಾತ್ರವನ್ನು ಸಮಾನವಾಗಿ ನಿರ್ವಹಿಸಿರುವುದು ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ. ಅರಮನೆಯಿಂದ ಕಳ್ಳ ದಾರಿಯಲ್ಲಿ ಬಂದು ನದಿಯಲ್ಲಿ ಸ್ನಾನ ಮಾಡುತ್ತಿರುವ 'ರುದ್ರಮದೇವಿ'ಯ ಅಂದ-ಚಂದ ನೋಡಿ ಮನಸೋಲುವ ಚಾಲುಕ್ಯ ವೀರಭದ್ರ (ರಾಣಾ ದಗ್ಗುಬಾಟಿ) ಎಲ್ಲರಿಗೂ ಇಷ್ಟವಾಗುತ್ತಾನೆ.

ಇಡೀ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ತುಂಬಾ ಸಮಯ ಸ್ಕ್ರೀನ್ ನಲ್ಲಿ ಇರುತ್ತಾರೆ. ಹೀರೋಯಿಸಂ ಅನ್ನೋದನ್ನ ತಲೆಯಲ್ಲಿ ಇಟ್ಟುಕೊಂಡು ನಿರ್ದೇಶಕರು ಅಲ್ಲು ಅರ್ಜುನ್ ಗೆ ಕೊಟ್ಟ ಪಾತ್ರ, ಗೆಟಪ್ ಹಾಗೂ ಕುದುರೆ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತದೆ.

ಇನ್ನುಳಿದಂತೆ ನಿತ್ಯಾ ಮೆನನ್, ರಾಣಾ ದಗ್ಗುಬಾಟಿ, ಕೃಷ್ಣಂರಾಜು, ಪ್ರಕಾಶ್ ರೈ, ನಿತ್ಯಾ ಮೆನನ್, ಸುಮನ್, ಆದಿತ್ಯಾ ಮೆನನ್ ಮುಂತಾದವರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.


ತಾಂತ್ರಿಕತೆ:

ಲಿಮಿಟೆಡ್ ಬಜೆಟ್ ನಲ್ಲಿ ಮಾಡಿರುವ 'ರುದ್ರಮದೇವಿ', ಪ್ರೇಕ್ಷಕರು ನಿರೀಕ್ಷಿಸಿದಷ್ಟು ಟೆಕ್ನಿಕಲಿ ರಿಚ್ ಆಗಿ ಬಂದಿಲ್ಲ, ಅನ್ನೋದು ಬಿಟ್ಟರೆ ಅರಮನೆ ಸೆಟ್, ನದಿ ಪ್ರಪಾತ, ಕುದುರೆಗಳ ಸಾಹಸ ದೃಶ್ಯವನ್ನು ಗ್ರಾಫಿಕ್ಸ್ ನಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಗರುಡವ್ಯೂಹ ಹಾಗೂ ಸರ್ಪವ್ಯೂಹ ಗಳ ಯುದ್ದದ ಸಂಯೋಜನೆ ಚೆನ್ನಾಗಿ ಮೂಡಿಸಿದ್ದಾರೆ.

ಇಳೆಯರಾಜ ಅವರ ಸಂಗೀತ ಪ್ರೇಕ್ಷಕರ ಮನದಾಳಕ್ಕೆ ಇಳಿಯುತ್ತದೆ. ವಿಶೇಷವಾಗಿ ಎಲ್ಲಾ ನಟ-ನಟಿಯರ ಕಾಸ್ಟ್ಯೂಮ್ ತುಂಬಾ ರಿಚ್ ಆಗಿದೆ.

ಒಟ್ಟಾರೆ:

ಮೆಗಾಸ್ಟಾರ್ ಚಿರಂಜೀವಿ ಅವರ ಧ್ವನಿಯಲ್ಲಿ ಪ್ರಾರಂಭವಾಗುವ ಚಿತ್ರ ಇಂಟರ್ ವಲ್ ತನಕ ಪ್ರೇಕ್ಷಕರನ್ನು ಹೈ ಲೆವಲ್ ಗೆ ಕೊಂಡುಹೋಗಿ ಕ್ಲೈಮ್ಯಾಕ್ಸ್ ಗೆ ನಿರ್ದೇಶಕರು ಎಮೋಷನಲ್ ಟಚ್ ನೀಡಿದ್ದಾರೆ. ಒಟ್ನಲ್ಲಿ ಚಿತ್ರ ನೋಡಬಹುದು, ಈ ವಾರ ಫ್ರೀ ಇದ್ದರೆ ಒಮ್ಮೆ ಚಿತ್ರಮಂದಿರಕ್ಕೆ ಭೇಟಿ ನೀಡಿ..

ರೇಟಿಂಗ್:

Rating:
3.0/5

ಕಥೆ-ಚಿತ್ರಕಥೆ-ನಿರ್ದೇಶನ-ನಿರ್ಮಾಣ: ಗುಣಶೇಖರ

ಸಂಗೀತ: ಇಳೆಯರಾಜ

ತಾರಾಗಣ: ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ಅಲ್ಲು ಅರ್ಜುನ್, ನಿತ್ಯಾ ಮೆನನ್, ಪ್ರಕಾಶ್ ರೈ, ಸುಮನ್, ಕೃಷ್ಣಂರಾಜು ಹಾಗೂ ಇತರರು.

ಬಿಡುಗಡೆ: ಅಕ್ಟೋಬರ್ 9, 2015

English summary
Actress Anushka Shetty's Telugu movie Rudhramadevi has hit the screens (October 09). Gunasekhar directorial 'Rudhramadevi' film review is here.
Please Wait while comments are loading...

Kannada Photos

Go to : More Photos