twitter
    For Quick Alerts
    ALLOW NOTIFICATIONS  
    For Daily Alerts

    ಹೊಸತನದ ಬಿಕ್ಕಟ್ಟಿನಲ್ಲಿ ಸೀತಾರಾಂರ 'ಮುಕ್ತ ಮುಕ್ತ'

    By * ನಿವೇದಿತಾ ಪ್ರಭಾಕರ್, ಬೆಂಗಳೂರು
    |

    A scene from Muktha Muktha
    ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ 'ಮುಕ್ತ ಮುಕ್ತ' ಧಾರಾವಾಹಿಯ ನಿರ್ದೇಶಕ ಟಿಎನ್ ಸೀತಾರಾಂ ಅವರು ಹೊಸತನದ ಬಿಕ್ಕಟ್ಟಿನಲ್ಲಿ ಬಳಲುತ್ತಿದ್ದಾರೆ. 'ಮುಕ್ತ'ದ ನಂತರ ಪ್ರಾರಂಭಿಸಿರುವ 'ಮುಕ್ತ ಮುಕ್ತ' ಮೆಗಾ ಧಾರಾವಾಹಿಯನ್ನು ನೋಡಿದರೆ ನನ್ನ ಅರಿವಿಗೆ ಬಂದ ಅನಿಸಿಕೆಯಿದು. ನನ್ನ ಅನಿಸಿಕೆಯನ್ನು 'ಮುಕ್ತ'ವಾಗಿಯೇ ಹಂಚಿಕೊಳ್ಳಬಯಸುತ್ತೇನೆ.

    'ಮುಕ್ತ' ಮತ್ತು 'ಮುಕ್ತ ಮುಕ್ತ' ಧಾರಾವಾಹಿಗಳಲ್ಲಿ ಅಂಥ ವ್ಯತ್ಯಾಸವೇನೂ ಕಂಡುಬರುತ್ತಿಲ್ಲ. ಸಮಾಜದ ಕಷ್ಟಕಾರ್ಪಣ್ಯಕ್ಕೆ ಮೈಯೊಡ್ಡುವ ಅದೇ ಸಂಭಾವಿತ ಮುಗ್ಧ ಕುಟುಂಬ ಮತ್ತು ಅವರನ್ನು ಕಾಪಾಡಲು ಬರುವ ಅದೇ ವಿಪರೀತ ಬುದ್ಧಿವಂತ ವಕೀಲ ಸಿಎಸ್ಪಿ! ಈಗಿನದು ಹಿಂದಿನ ಧಾರಾವಾಹಿಯ ಮುಂದುವರಿದ ಭಾಗ ಎಂದು ಸೀತಾರಾಂ ಅವರೇ ಹೇಳಿಕೊಂಡಿದ್ದಾರೆ. ರಾಜಕೀಯ ವ್ಯವಸ್ಥೆ ಎಂದೂ ಬದಲಾಗದಿದ್ದರಿಂದ ಈ ಧಾರಾವಾಹಿಯಲ್ಲಿನ ರಾಜಕೀಯ ವ್ಯವಸ್ಥೆ ಕೂಡ ಹಿಂದಿನಂತೆಯೇ ಇದೆ.

    ಎಲ್ಲಕ್ಕಿಂತ ಮಿಗಿಲಾಗಿ, ಸೀತಾರಾಂ ಅವರು ತಮ್ಮ ಟ್ರಂಪ್ ಕಾರ್ಡ್ ಎಂದು ತಿಳಿದುಕೊಂಡಿರುವ ನ್ಯಾಯಾಲಯದ ದೃಶ್ಯಗಳು ಹೆಚ್ಚಿನ ಆಸಕ್ತಿ ಕೆರಳಿಸದೆ, ವಿಪರೀತ ಎನ್ನುವ ನಿರೂಪಣೆ ವಿವರಣೆಗಳಿಂದ ಬೋರು ಹೊಡೆಸುತ್ತಿವೆ. ಈ ಬಾರಿಯಂತೂ ಕೋರ್ಟು ವಿಚಾರಣೆ, ಪಾಟಿ ವಿಚಾರಣೆ, ವಾದ ವಿವಾದಗಳು ಪ್ರೇಕ್ಷಕನ 'ನಿರೀಕ್ಷಾಮಟ್ಟ'ದಿಂದ ಮೇಲೇರಿಲ್ಲ. ಇದು ಸೀತಾರಾಂ ಅವರ ಸೋಲು ಕೂಡ ಹೌದು. ಇದು ಹೀಗೆ ಆಗುತ್ತದೆ ಅಂತ ಯಾವನೊಬ್ಬ ಕೂಡ ಊಹಿಸಬಹುದಾದಷ್ಟು ನೀರಸ ನಿರೂಪಣೆ ನಿರಾಸಕ್ತಿ ಮೂಡಿಸಿವೆ. ಕೋರ್ಟು ದೃಶ್ಯಗಳ ಕುರಿತಂತೆಯೇ ಪ್ರೇಕ್ಷಕರ ವಾದ ವಿವಾದಗಳೇನು, ಅವರು ಕೊಡುವ ತೀರ್ಪೇನು ಎಂಬುದನ್ನು ಸೀತಾರಾಂ ಅವರು ಕೇಳಿ ತಿಳಿದುಕೊಳ್ಳುವುದು ಉತ್ತಮ.

    ಮೊನ್ನೆ ಯಾವುದೋ ಊರಿನಲ್ಲಿ ನಡೆದ ಸಂವಾದದಲ್ಲಿ ಪ್ರೇಕ್ಷಕರೊಬ್ಬರು, ಪಬ್ಲಿಕ್ ಪ್ರಾಸಿಕ್ಟೂಟರ್ ದಯಾಶಂಕರ್ ಪಾಟೀಲ್ ಅವರನ್ನು 'ದಡ್ಡ'ನ ಹಾಗೆ ತೋರಿಸಿದ್ದೀರಲ್ಲಾ ಅಂತ ಕೇಳಿದಾಗ, ಅವರಿಗೂ ಕ್ರಾಸ್ ಎಕ್ಸಾಮಿನೇಷನ್ ಮಾಡಲು ಅವಕಾಶ ಸಿಗುತ್ತದೆ. ಆಗ ಅವರೂ ಶಾಣ್ಯಾತನ ತೋರಿಸಬಹುದು ಎಂದು ಹೇಳಿದ್ದರು. ಈಗ ನೋಡಿದರೆ, ಆರೋಪಿಗಳ ವಿಚಾರಣೆ, ಕ್ರಾಸ್ ಎಕ್ಸಾಮಿನೇಷನ್ ಎಲ್ಲಾ ರದ್ದು ಮಾಡಿ ತೀರ್ಪಿಗೇ ತಳ್ಳಿಬಿಟ್ಟಿದ್ದಾರೆ. ಪಾಟೀಲ್ ಅವರನ್ನು ದಡ್ಡರನ್ನಾಗಿಯೇ ಉಳಿಸಿದ್ದಾರೆ. ಕೋರ್ಟ್ ಸೀನನ್ನು ನಿಜವಾದ ಕೋರ್ಟು ವಿಚಾರಣೆಗಳಿಗಿಂತ ಹೆಚ್ಚು ಎಳೆದಾಡಿದ್ದರಿಂದ ಚಾನಲ್ಲಿನವರು ಎಡಿಟ್ ಮಾಡಲು ಹೇಳಿರಬಹುದು. ನ್ಯಾಯಾಲಯದ ದೃಶ್ಯಗಳು ಕ್ಲಿಕ್ ಆಗಿಲ್ಲ ಎನ್ನುವುದಕ್ಕೆ ಇದು ಕನ್ನಡಿ ಹಿಡಿದಿದೆ.

    ನ್ಯಾಯಾಲಯದ ದೃಶ್ಯಗಳಿಲ್ಲದೇ ಧಾರಾವಾಹಿಯನ್ನು ಗೆಲ್ಲಿಸಲು ಸೀತಾರಾಂ ಅವರಿಗೆ ಆಗುವುದೇ ಇಲ್ಲವೆ? ಚಾನಲ್ಲಿನವರು ಕೂಡ ನ್ಯಾಯಾಲಯದ ದೃಶ್ಯಗಳನ್ನೇ ಕೇಳುತ್ತಾರೆ ಎಂದು ಸೀತಾರಾಂ ಅವರು ಸಮಜಾಯಿಷಿಯನ್ನೂ ನೀಡಿದ್ದರು. ಆದರೆ ಇದು ಸಮರ್ಥನೀಯವೆ? ವೈವಿಧ್ಯಮಯ ಕಥೆ, ನಿರೂಪಣೆಯಿಂದ ನ್ಯಾಯಾಲಯದ ದೃಶ್ಯಗಳ ಸಹಾಯವಿಲ್ಲದೇ ಸೀತಾರಾಂ ಗೆಲ್ಲಿಸಿಕೊಡುತ್ತಾರೆಂಬ ವಿಶ್ವಾಸ ನನ್ನಲ್ಲಿದೆ. ಇದು ಅನೇಕರ ಅಭಿಪ್ರಾಯವೂ ಆಗಿರಬಹುದು.

    ಆ ಮುಗ್ಧ ಕುಟುಂಬದ ವಿಪರೀತ ಎನ್ನುವಂತಹ ಭಾವುಕತೆ, ಅವರಿಗೆ ಮಂತ್ರಿಗಳೊಡನೆ ಇರುವಂತಹ ಸಾಮೀಪ್ಯತೆ, ಮದುವೆ ವಯಸ್ಸು ಮೀರಿಯೋ ಅಥವಾ ಮದುವೆಯಾಗದಂತಹ ಎರಡು ಜೀವಗಳನ್ನು ಹತ್ತಿರ ತಂದು, ದೂರ ಮಾಡಿ ಮತ್ತೆ ಹತ್ತಿರ ತರುವಂತಹ 'ರಿಪೀಟ್' ದೃಶ್ಯಾವಳಿಗಳು ಹೊಸತನಕ್ಕೆ ಅಡ್ಡಗಾಲು ಹಾಕಿವೆ. ಸೀತಾರಾಂ ಅವರು ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ, ದೈನಂದಿನ ಸಮಸ್ಯೆಗಳಿಗೇ ಜೋತು ಬೀಳದೆ ವಿಭಿನ್ನ ರೀತಿಯ ವಿಷಯವನ್ನು ಆಯ್ದುಕೊಂಡಾಗ ಮಾತ್ರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯ. ಇಲ್ಲದಿದ್ದರೆ, ಸೀತಾರಾಂ ಅವರ ಸೀರಿಯಲ್ಲುಗಳು ಅಂದ್ರೆ ಇಷ್ಟೇನೆ ಅನ್ನುವ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ.

    ಈ ನನ್ನ ಮಾತುಗಳನ್ನು ಟಿಎನ್ ಸೀತಾರಾಂ ಕಟ್ಟಾ ಅಭಿಮಾನಿಗಳು ಒಪ್ಪಲಿಕ್ಕಿಲ್ಲ. ನಾನೂ ಅವರ ಅಭಿಮಾನಿಯಾಗಿದ್ದರಿಂದಲೇ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದೇನೆ. ಈ ಕುರಿತಂತೆ ಆರೋಗ್ಯಕರ ಚರ್ಚೆಯಾಗಿ ಅವು ಸೀತಾರಾಂ ಅವರಿಗೂ ತಲುಪಿದರೆ ಸಂತೋಷ.

    ಗ್ಯಾಲರಿ : ಮುಕ್ತ ಮುಕ್ತದಲ್ಲಿ ಯಾರ್ಯಾರಿದ್ದಾರೆ

    Tuesday, December 22, 2009, 16:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X