» 

ಭೀಮಾ ತೀರದ ಹಂತಕರು ಪುಸ್ತಕ ಬಿಸಿಬಿಸಿ ಭಕ್ಕರಿ

Posted by:
 
Share this on your social network:
   Facebook Twitter Google+    Comments Mail

ಭೀಮಾ ತೀರದ ಹಂತಕರು ಪುಸ್ತಕ ಬಿಸಿಬಿಸಿ ಭಕ್ಕರಿ
'ಭೀಮಾ ತೀರದಲ್ಲಿ' ಕೃತಿಚೌರ್ಯ ಕುರಿತಂತೆ ಚಿತ್ರದ ನಿರ್ಮಾಪಕರು ಮತ್ತು ಭೀಮಾ ತೀರದ ಹಂತಕರು ಪುಸ್ತಕ ಬರೆದ ಪತ್ರಕರ್ತ ರವಿ ಬೆಳಗೆರೆ ನಡುವೆ ಆರಂಭವಾಗಿರುವ ಯುದ್ಧ, ಜ್ಯುರಿಸ್ಡಿಕ್ಷನ್ ದಾಟಿ ಎಲ್ಲೆಲ್ಲೋ ಸಾಗುತ್ತಿದೆ. ಸಿನೆಮಾ ಬಗ್ಗೆ ನಡೆದ ಚರ್ಚೆ, ಸಿನೆಮಾವನ್ನು ಹಿಂದೆ ಹಾಕಿ, ಆ ಕಥೆಯ ಮೂಲ ಕರ್ತೃ ಯಾರು ಎಂಬ ಹಂತಕ್ಕೆ ಬಂದುಮುಟ್ಟಿದೆ.

ಭೀಮಾ ತೀರದ ಹಂತಕರು ವರದಿಯ ಮುಖಾಂತರ ಚಂದಪ್ಪ ಹರಿಜನನನ್ನು ಬೆಳಕಿಗೆ ತಂದಿದ್ದೇ ನಾನು ಎಂದು ಪತ್ರಕರ್ತ ರವಿ ಬೆಳಗೆರೆ ಹೇಳುತ್ತಿದ್ದರೆ, ಚಂದಪ್ಪನ ಬಗ್ಗೆ ಮೊತ್ತಮೊದಲು ಬರೆದಿದ್ದೇ ನಾನು ಎಂಬ ಸಂಗತಿಯನ್ನು ಚಂದಪ್ಪನ ದೂರದ ಸಂಬಂಧಿ ಮತ್ತು ಪತ್ರಕರ್ತ ಟಿ.ಕೆ. ಮಳಗೊಂಡ ಎಂಬುವವರು ಹೇಳಿಕೊಂಡಿದ್ದಾರೆ.

ಈ ವಿವಾದದ ಚರ್ಚೆ ಅನೇಕ ಖಾಸಗಿ ಬದುಕನ್ನು ಮೂರಾಬಟ್ಟೆ ಕೂಡ ಮಾಡಿದೆ. ಚಿತ್ರಕ್ಕೂ ವಿವಾದಕ್ಕೂ ಸಂಬಂಧವೇ ಇಲ್ಲದ ಗಂಡ ಹೆಂಡತಿಯರ ಜಗಳ, ಹೆಂಡತಿಯರ ಸಂಖ್ಯೆ, ಮಾಡಿಕೊಂಡಿರುವ ಆಸ್ತಿ ಅವರಿವರ ಬಾಯಲ್ಲಿ ಬಟಾಬಯಲಾಗಿ ವೀಕ್ಷಕರಲ್ಲಿ ಚರ್ಚೆಯ ಬಗ್ಗೆ ಅಸಹ್ಯ, ರೇಜಿಗೆಯನ್ನೂ ಹುಟ್ಟಿಸಿರುವುದು ಸುಳ್ಳಲ್ಲ.

ಅಚ್ಚರಿಯ ಸಂಗತಿಯೆಂದರೆ, ಈ ಚರ್ಚೆಯಿಂದ ಯಾರಿಗೂ ನಷ್ಟವಾಗಿಲ್ಲ, ಎಲ್ಲರಿಗೂ ಲಾಭವಾಗಿದೆ. ಟಿವಿ ವೀಕ್ಷಕರಿಗೆ ಮತ್ತು ಪತ್ರಿಕೆಯ ಓದುಗರಿಗೆ ಭರ್ಜರಿ ಮನರಂಜನೆ ದೊರೆಯುತ್ತಿದೆ. ನಿರ್ಮಾಪಕರನ್ನು, ನಟರನ್ನು, ಪತ್ರಕರ್ತರನ್ನು ಗುಡ್ಡೆ ಹಾಕಿಕೊಂಡು ಗಂಟೆಗಟ್ಟಲೆ ಚರ್ಚೆ ನಡೆಸುತ್ತಿರುವ ಅನೇಕ ಟಿವಿ ಚಾನಲ್ಲುಗಳು ಟಿಆರ್‌ಪಿಯನ್ನು ಭರ್ಜರಿಯಾಗಿ ಏರಿಸಿಕೊಂಡಿವೆ.

ವಿವಾದದ ಕೇಂದ್ರಬಿಂದುವಾಗಿರುವ ರವಿ ಬೆಳಗೆರೆಯವರೂ ಹಿಂದೆ ಬಿದ್ದಿಲ್ಲ. ಭೀಮಾ ತೀರದ ಜನರನ್ನು ಸ್ಟುಡಿಯೋ ಒಳಗೆ ಕರೆತಂದರು, ಪುಸ್ತಕದ ಪುಟಪುಟಗಳನ್ನು ತಿರುವಿಹಾಕಿ ಜನರ ಮುಂದೆ ಭೀಮಾ ತೀರದ ಹಂತಕರ ಕಥಾನಕವನ್ನು ಬಿಚ್ಚಿಟ್ಟರು. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಬೆಳಗೆರೆಯವರು, ನಗರದ ಹಲವೆಡೆಗಳಲ್ಲಿ ಪುಸ್ತಕದ ಬ್ಯಾನರುಗಳನ್ನು ಹಾರಾಡಿಸಿದ್ದಾರೆ. ಹಡ್ಸನ್ ವೃತ್ತದಲ್ಲಿ ಮತ್ತು ಚಾಮರಾಜಪೇಟೆಯ ಉಮಾ ಥಿಯೇಟರ್ ಮುಂದೆ ಈ ಬ್ಯಾನರುಗಳು ರಾರಾಜಿಸುತ್ತಿರುವುದು ನಮ್ಮ ವರದಿಗಾರರ ಗಮನಕ್ಕೆ ಬಂದಿದೆ.

"ರವಿ ಬೆಳಗೆರೆಯವರ ಭೀಮಾ ತೀರದ ಹಂತಕರು, ಇದು ಕಥೆ ಕದ್ದವರ ಸಿನೆಮಾ ಅಲ್ಲ, ಉತ್ತರ ಕರ್ನಾಟಕದ ನೆತ್ತರಗಾಥೆಯ ನೈಜ ಪುಸ್ತಕ, ಬೆಳಗೆರೆ ಬುಕ್ಸ್ ಅಂಡ್ ಕಾಫಿ" ಎಂದು ಬರೆಸಲಾದ ಬ್ಯಾನರುಗಳು ಜನರನ್ನು ಆಕರ್ಷಿಸುತ್ತಿವೆ. ಬಸವನಗುಡಿಯಲ್ಲಿರುವ ರವಿಯವರ ಬೆಳಗೆರೆ ಬುಕ್ಸ್ ಅಂಡ್ ಕಾಫಿ ಶಾಪಿನಲ್ಲಿ, 150 ರು. ಮೊತ್ತದ, 185+20 ಪುಟಗಳಿರುವ, ಮೂರನೇ ಮುದ್ರಣ ಕಂಡಿರುವ 'ಭೀಮಾ ತೀರದ ಹಂತಕರು' ಪುಸ್ತಕ ಬಿಸಿಬಿಸಿ ದೋಸೆ, ಖಡಕ್ ಜ್ವಾಳದ ಭಕ್ಕರಿಯಂತೆ ಮಾರಾಟವಾಗುತ್ತಿರುವುದಂತೂ ಖಂಡಿತ.

Topics: ರವಿ ಬೆಳಗೆರೆ, ಭೀಮಾ ತೀರದಲ್ಲಿ, ಬೆಂಗಳೂರು, ravi belagere, bheema theeradalli, bangalore
English summary
Ravi Belagere, author of Bheema Teerada Hantakaru, has been flashing banner about the book in many places in Bangalore. The banner says, the book is not movie of those people who lifted story, but blood stained true story of North Karnataka.

Kannada Photos

Go to : More Photos