twitter
    For Quick Alerts
    ALLOW NOTIFICATIONS  
    For Daily Alerts

    200 ರೂಪಾಯಿಗೆ ಬಂದು ನಿಂತಿದೆಯಾ ಪತ್ರಿಕೋದ್ಯಮ?

    By Shami
    |

    ಕಳೆದ 5 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ತಲ್ಲಣವೇ ಆಗಿಹೋಯ್ತು. ಪತ್ರಿಕೋದ್ಯಮ ಬಲ್ಲವರು ಇದನ್ನು ಮಾಧ್ಯಮ ಜಗತ್ತಿನ ಪರ್ವಕಾಲ ಎಂದು ಬಣ್ಣಿಸಿದರು. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮೀಡಿಯಾ ಅಥವಾ ದೃಶ್ಯ ಮಾಧ್ಯಮ ಎಂಬುದು ಒಂದು ಬಗೆಯಲ್ಲಿ ಸಾಫ್ಟ್‌ವೇರ್ ಬೂಮಿಂಗ್ ಥರವೇ ಬುಗ್ಗೆಯೊಡೆದಿದ್ದು, ಅಲ್ಪನಿಗೆ ಅಷ್ಟೈಶ್ವರ್ಯ ಬಂದಂತೆ ಕೆಲವರಿಗೆ ಏಕಾಏಕಿ ವಿಪರೀತ ಸಂಬಳದ ನೌಕರಿ ಸಿಕ್ಕಿದ್ದು ಸುಳ್ಳಲ್ಲ.

    ಇನ್ಟ್ರೊ ಹೀಗಿರುವಾಗ ಪತ್ರಿಕೋದ್ಯಮಕ್ಕೂ 200 ರೂಪಾಯಿಗೂ ಎಲ್ಲಿಯ ಸಂಬಂಧ ಎನ್ನುತ್ತೀರಾ? ಪೈಂಟ್ ಮಾಡುವವನ ದಿನಗೂಲಿ ಇವತ್ತು 800ರೂ. ಮರಗೆಲಸದವನ ದಿನಗೂಲಿ 600 ರೂ. ಗಾರೆ ಕೆಲಸದವನಿಗೆ 500.. ಇಂತಿಪ್ಪ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ, ಎಲ್ಲ ಹೋರಾಟಗಳಿಗೂ ವೇದಿಕೆ ಒದಗಿಸುವ ಪತ್ರಿಕೋದ್ಯಮ 200 ರೂಪಾಯಿಗೆ ಬಂದು ನಿಂತಿದೆಯಾ ಎಂಬ ಪ್ರಶ್ನೆಯೇ ಅಸಂಬದ್ಧ ಅನ್ನಿಸಬಹುದು.

    ಅದು ವಾಹಿನಿಯೊಂದರ ಡೆಸ್ಕ್. ಯಡಿಯೂರಪ್ಪ ಮಲಮೂತ್ರ ವಿಸರ್ಜನೆ ಮಾಡಿದ್ದೋ, ಈಶ್ವರಪ್ಪ ಸ್ನಾನ ಮಾಡಿದ್ದೋ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು! ಶ್ರೀರಾಮುಲು ಸ್ನಾನ ಮಾಡಿದ ಮೇಲೆ ಟವೆಲ್‌ನಿಂದ ಒರೆಸಿಕೊಂಡರು ಎಂಬ ಬ್ರೇಕಿಂಗ್ ನ್ಯೂಸ್ ನಮ್ಮಲ್ಲಿ ಮಿಸ್ ಆಗಿದೆ ಅಂತ ಡೆಸ್ಕ್‌ಚೀಫ್ ಬೊಬ್ಬೆ ಹಾಕುತ್ತಿದ್ದ. ಅಷ್ಟೆಲ್ಲದರ ನಡುವೆ ಹುಡುಗಿಯೊಬ್ಬಳು ಡೆಸ್ಕ್‌ನಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದಳು.

    ಬ್ರೇಕಿಂಗ್ ನ್ಯೂಸ್ ಅಬ್ಬರದಲ್ಲಿದ್ದವರಿಗೆ ಹುಡುಗಿಯ ಕಣ್ಣೀರು ಕಾಣಿಸಲಿಲ್ಲ. ಆದರೆ ಅಳು ಅರ್ಧಗಂಟೆವರೆಗೆ ಮುಂದುವರಿದಾಗ ಎಲ್ಲರ ಚಿತ್ತ ಹುಡುಗಿಯತ್ತ ಹೋಗಿದೆ. ಹುಡುಗಿಯೇ ಬ್ರೇಕಿಂಗ್ ನ್ಯೂಸ್ ಐಟಂ ಆಗಿದ್ದಾಳೆ. ಆಕೆ ಅತ್ತಿದ್ದಕ್ಕೆ ಕಾರಣವಿಷ್ಟೆ, ದುಡ್ಡು ಕಟ್ಟಿಲ್ಲ ಅಂತ ಆಕೆ ವಾಸವಾಗಿದ್ದ ಪಿಜಿಯಲ್ಲಿ ಆಕೆಯ ಸರಕುಗಳನ್ನು ಕೋಣೆಯಿಂದ ಹೊರಗಿಟ್ಟಿದ್ದಾರೆ. ನಿಮ್ಮ ಸರಕುಗಳನ್ನು ಹೊರಗಿಟ್ಟಿದ್ದೇವೆ, ಬಂದು ತೆಗೆದುಕೊಂಡು ಹೋಗಿ ಎಂದು ಪಿಜಿಯಿಂದ ಫೋನ್ ಮಾಡಿದ್ದಾರೆ. ಈ ಸುದ್ದಿ ತಿಳಿದ ಹುಡುಗಿಗೆ ದುಃಖ ಉಮ್ಮಳಿಸಿದೆ.

    ಜನರಿಗೆ ದನಿಯಾಗುವ ವಾಹಿನಿಯಲ್ಲಿ 2 ತಿಂಗಳಿನಿಂದ ಸಂಬಳವಾಗಿಲ್ಲ. ಹೊಸತಾಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಹುಡುಗಿಗೆ ಸಂಬಳದ ಹೊರತು ಬೇರೆ ಕಾಸಿಲ್ಲ. ಹೀಗಾಗಿ ಪಿಜಿಗೆ ದುಡ್ಡು ಕಟ್ಟಿಲ್ಲ. ಮುಖ್ಯಸ್ಥರ ಬಳಿ ಹೋಗಿ ಬಿಟ್ಟು ಹೋಗುತ್ತೇನೆ ಎಂದರೆ, ಅವರು ಬೈದು ಕಳುಹಿಸಿದ್ದಾರೆ. ಬಿಟ್ಟರೆ ಈವರೆಗಿನ ಸಂಬಳವನ್ನೂ ಕೊಡುವುದಿಲ್ಲ ಎಂದು ಅವಾಜ್ ಹಾಕಿದ್ದಾರೆ. ಇಷ್ಟೆಲ್ಲ ಡ್ರಾಮದ ಬಳಿಕ ಹುಡುಗಿ ಕಣ್ಣೀರು ಇಟ್ಟಿದ್ದಾಳೆ. ಆದರೆ ಈ ಸುದ್ದಿ ಬ್ರೇಕಿಂಗ್ ನ್ಯೂಸ್ ಹಾಳಾಗಲಿ, ಸ್ಕ್ರಾಲ್ ಸುದ್ದಿ ಕೂಡ ಆಗಲಿಲ್ಲ! ಆದರೇನಂತೆ ಬಿಡಿ, ಇಂಥ ಸುದ್ದಿಗಳಿಗೆಲ್ಲ ಒನ್ ಇಂಡಿಯ ಅಂತರ್ ಜಾಲ ತಾಣ ಇದೆಯಲ್ಲ!

    ಅಕ್ಕ ಮಧ್ಯಾಹ್ನ ಊಟಕ್ಕೆ ದುಡ್ಡಿಲ್ಲ. ಒಂದು 35 ರೂಪಾಯಿ ಸಾಲ ಕೊಡ್ತಿಯಾ? ಸಂಬಳದ ಆದ ನಂತರ ನಿನಗೆ ಕೊಡ್ತೀನಿ...ಹಾಗಂತ ಉತ್ತರ ಕರ್ನಾಟಕದ ಆ ಹುಡುಗಿ ಮುಗ್ಧವಾಗಿ ಕೇಳಿದ್ದಾಳೆ. ನಿನ್ನ ಬಾಸ್ ಹತ್ರ ಹೋಗಿ ಇನ್ನೆಷ್ಟು ಸಮಯ ಸಂಬಳವಿಲ್ಲದೆ ದುಡಿಯಬೇಕು ಎಂದು ಗಟ್ಟಿಯಾಗಿ ಕೇಳು ಎಂಬುದಾಗಿ ಆ ಅಕ್ಕ ತಿರುಗಿ ಹೇಳಿದ್ದಾಳೆ. ಹುಡುಗಿ ಹೋಗಿ ಸಂಬಳ ಕೇಳಿದ್ದಕ್ಕೆ ಮುಖ್ಯಸ್ಥನ ಬಾಯಿಯಿಂದ ಬರಬಾರದ ಪದಗಳೆಲ್ಲ ಬಂದಿವೆ! ಈ ಸುದ್ದಿ ಕೂಡ ಸ್ಯಾಟಲೈಟ್ ಕಿವಿಗೆ ಕೇಳಿಸ್ಲಿಲ್ಲ.

    ಸಾರ್ ಎಲ್ಲಿಗೆ ಬಂದುಬಿಟ್ಟಿದೆ ಪತ್ರಿಕೋದ್ಯಮ? ನಮ್ಮ ಜಿಲ್ಲೆಯಲ್ಲಿ ಕೆಲ ವಾಹಿನಿ ವರದಿಗಾರರು 100, 200 ರೂಪಾಯಿ ಸುದ್ದಿಗೋಷ್ಠಿಗೆ ಬಕಪಕ್ಷಿಗಳಂತೆ ಕಾಯ್ತಾ ಇದ್ದಾರೆ. ನೋಡಿದ್ರೆ ಪಾಪ ಅನ್ನಿಸುತ್ತೆ. ಹೆಂಡ್ತಿ ಮಕ್ಕಳಿಗೆ ಊಟ ಹಾಕೋಕೆ ಪರದಾಡುತ್ತಿದ್ದಾರೆ ಅಂತ ಗೆಳೆಯ ಫೋನ್ ಮಾಡಿ ಹೇಳಿದಾಗ ಅದ್ಯಾಕೊ ಕರುಳು ಕಿವುಚಿತ್ತು. ಸಾವಿರಾರು ಕೋಟಿ ಮೌಲ್ಯದ ಕನ್ನಡ ಪತ್ರಿಕೋದ್ಯಮ ಎಲ್ಲಿಗೆ ಬಂದು ನಿಂತಿದೆ ಅನ್ನಿಸಿತ್ತು.

    ಆ ಹುಡುಗಿಯ ಕಥೆಯಷ್ಟೇ ಅಲ್ಲ, ಕಳೆದ 5 ವರ್ಷಗಳ ಹಿಂದೆ ಸಾಫ್ಟ್‌ವೇರ್ ಸಂಬಳ ಎಂದು ಸಂಭ್ರಮ ಪಟ್ಟವರ ಮುಖಗಳೂ ಈಗ ಬಾಡಿದ ಕನಕಾಂಬರದಂತೆ ಕಾಣಿಸ್ತಿವೆ. ನಮ್ಮ ವಾಹಿನಿ ಯಾವಾಗ ಬಾಗಿಲು ಹಾಕಬಹುದು? ನಮ್ಮನ್ನು ಯಾವತ್ತು ಕೆಲಸದಿಂದ ತೆಗೆಯಬಹುದು ಎಂಬ ಆತಂಕದಲ್ಲಿ ಅನೇಕ ಪತ್ರಕರ್ತರಿದ್ದಾರೆ. ಈ ಸ್ಥಿತಿ ಸ್ಟಾರ್ ಪತ್ರಕರ್ತರನ್ನೂ ಕಾಡ್ತಿದೆ. ಹಾಗಿದ್ರೆ ಯಾಕೆ ಇಂಥ ಪರಿಸ್ಥಿತಿ ಬಂದಿದೆ ಎಂದು ಅವಲೋಕಿಸಬೇಕಾದ ಹೊತ್ತಿನಲ್ಲಿ ನಾವಿದ್ದೇವೆ. [ಈ ಲೇಖನಕ್ಕೆ ರವಿ ಕೃಷ್ಣಾ ರೆಡ್ಡಿ ಪ್ರತಿಕ್ರಿಯೆ]

    ಅತಿವೇಗ ಅಪಾಯಕರ!

    ಅತಿವೇಗ ಅಪಾಯಕರ!

    ಸೋಜಿಗ ಅನ್ನಿಸಬಹುದು, ಆದರೂ ಸತ್ಯ. ‘ಅವಸರವೇ ಅಪಾಯಕ್ಕೆ ಕಾರಣ. ಬೇಗ ಹೊರಟು ನಿಧಾನವಾಗಿ ಚಲಿಸಿ. ಸುರಕ್ಷಿತವಾಗಿ ಗುರಿ ತಲುಪಿ' ಎಂಬಿತ್ಯಾದಿ ಬೋರ್ಡ್‌ಗಳು ಪ್ರಯಾಣ ಮಾಡುತ್ತಿರುವಾಗ ರಸ್ತೆಯಲ್ಲಿ ಕಾಣಿಸುತ್ತವೆ. ಅದನ್ನು ನೋಡಿದಾಗ ನಗು ಬರುತ್ತೆ. ಆದರೆ ಇವತ್ತಿನ ಪತ್ರಿಕೋದ್ಯಮದ ಸ್ಥಿತಿ ನೋಡಿದಾಗ ಆ ಬೋರ್ಡ್‌ಗಳೆಲ್ಲ ಮತ್ಯಾಕೊ ನೆನಪಿಗೆ ಬರುತ್ತೆ. ನಾವೆಲ್ಲ ಮುದ್ರಣ ಮಾಧ್ಯಮದಲ್ಲಿ ಕಡಿಮೆ ಸಂಬಳಕ್ಕೆ, ಆತ್ಮಸಂತೃಪ್ತಿಯಿಂದ ಬರೆದುಕೊಂಡು ಇದ್ದವರು. ನಮ್ಮನ್ನೆಲ್ಲ ಬಡಿದೆಬ್ಬಿಸಿದ್ದು ದೃಶ್ಯ ಮಾಧ್ಯಮ ಹೈಬ್ರಿಡ್ ಪತ್ರಿಕೋದ್ಯಮ.

    ಪರಿಸ್ಥಿತಿ ಅಕ್ಷರಶಃ ಉಲ್ಟಾಪುಲ್ಟಾ

    ಪರಿಸ್ಥಿತಿ ಅಕ್ಷರಶಃ ಉಲ್ಟಾಪುಲ್ಟಾ

    ಲೋ ಮಗ ಆ ಚಾನೆಲ್‌ನಲ್ಲಿ ಅವನಿಗೆ ಇಷ್ಟು ಸಂಬಳ ಕೊಟ್ಟರಂತೆ, ಈ ವಾಹಿನಿಯಲ್ಲಿ ಇವಳಿಗೆ ಇಷ್ಟು ಸ್ಯಾಲರಿಯಂತೆ ಎಂಬುದು ಈಗೊಂದು 3 ವರ್ಷಗಳ ಹಿಂದೆ ನಿತ್ಯವೂ ಚರ್ಚೆಯಾಗುತ್ತಿದ್ದ ಸುದ್ದಿ. ಆದರೆ ಇವತ್ತು ಪರಿಸ್ಥಿತಿ ಅಕ್ಷರಶಃ ಬದಲಾಗಿದೆ. ಆ ವಾಹಿನಿಯಲ್ಲಿ ಸಂಬಳವಿಲ್ಲವಂತೆ, ಈ ವಾಹಿನಿಯಲ್ಲಿ ಇಂಥವರನ್ನು ಕೆಲಸದಿಂದ ತೆಗೆದರಂತೆ, ಅಲ್ಲಿ 60,000 ರೂಪಾಯಿಗೆ ಸೇರಿದವನು ಇವತ್ತು ಕೆಲಸ ಬಿಟ್ಟು ಬಿರಿಯಾನಿ ಅಡ್ಡ ತೆರೆದಿದ್ದಾನಂತೆ ಎಂಬುದು ಈಗೀಗ ಚರ್ಚೆಯಾಗುತ್ತಿರುವ ಸುದ್ದಿಗಳು. ದೃಶ್ಯ ಮಾಧ್ಯಮದಲ್ಲಿದ್ದವರಂತೂ ಯಾವತ್ತು ನನ್ನ ಕೆಲಸ ಹೋಗಬಹುದು, ಯಾವತ್ತು ನಮ್ಮ ವಾಹಿನಿ ಬಾಗಿಲು ಹಾಕಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕೆ ಕಾರಣ ಮಕಾಡೆ ಬಿದ್ದಿರುವ ಮಾರುಕಟ್ಟೆ.

    ಯಡ್ಡಿ ಮೈತಿಕ್ಕಿದ್ದು, ರೆಡ್ಡಿ ಸೋಪು ಹಚ್ಚಿದ್ದು

    ಯಡ್ಡಿ ಮೈತಿಕ್ಕಿದ್ದು, ರೆಡ್ಡಿ ಸೋಪು ಹಚ್ಚಿದ್ದು

    ಈಗೊಂದು 10 ವರ್ಷದ ಹಿಂದೆ ಬಹುಶಃ ಕನ್ನಡದ ಮಂದಿಗೆ ಗೊತ್ತಿದಿದ್ದು ಉದಯ ಟಿವಿ ಮತ್ತು ಈಟಿವಿಗಳು ಮಾತ್ರ. ಅದರ ಹೊರತಾಗಿ ಎವರ್‌ಗ್ರೀನ್ ಡಿಡಿ1 ಮತ್ತು ಚಂದನವಾಹಿನಿ. ನಂತರ ಸುವರ್ಣ ಬಂತು. ಜೀಕನ್ನಡ ಶುರುವಾಯ್ತು. ಟಿವಿ9 ಎಂಬ ಸುದ್ದಿ ವಾಹಿನಿ ಕೂಡ ಕನ್ನಡ ನಾಡಿಗೆ ಕಾಲಿಟ್ಟಿತ್ತು. ಯಾವಾಗ ಯಡಿಯೂರಪ್ಪ ಮೈತಿಕ್ಕಿದ್ದು, ಜನಾರ್ದನ ರೆಡ್ಡಿ ಸೋಪು ಹಚ್ಚಿದ್ದು ಎಲ್ಲ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಗೊಂಡಿತೋ, ಆಗಲೇ ಹಲವರಿಗೆ ಸುದ್ದಿ ವಾಹಿನಿ ಮಾಡುವುದು ತುಂಬ ಸರಳ ಅನ್ನಿಸಿಬಿಡ್ತು.

    ಮಾಲೀಕರಿಗೆ ಸುದ್ದಿ ಅನ್ನಿಸಿದ್ದೆಲ್ಲವೂ ಸುದ್ದಿ!

    ಮಾಲೀಕರಿಗೆ ಸುದ್ದಿ ಅನ್ನಿಸಿದ್ದೆಲ್ಲವೂ ಸುದ್ದಿ!

    ಯಾಕಂದ್ರೆ ಅಲ್ಲಿಗೆ ಇಂಥದ್ದೆ ಸುದ್ದಿ ಬೇಕು ಅಂತಿಲ್ಲ. ಅಂದ್ಕೊಂಡಿದ್ದೇ ಸುದ್ದಿ. ಮಾಲೀಕರಿಗೆ ಸುದ್ದಿ ಅನ್ನಿಸಿದ್ದೆಲ್ಲವೂ ಸುದ್ದಿ! ಸುವರ್ಣ ನ್ಯೂಸ್, ಸಮಯ, ಕಸ್ತೂರಿ ನ್ಯೂಸ್, ಜನಶ್ರಿ, ಪಬ್ಲಿಕ್ ಟಿವಿ, ರಾಜ್‌ನ್ಯೂಸ್...ಸುದ್ದಿ ಜಗತ್ತಿನಲ್ಲೊಂದು ಯುದ್ಧವೇ ಆಗಿಹೋಯ್ತು. ನಮ್ಮ ಜನ ಸಂಖ್ಯೆ 6.2 ಕೋಟಿ. ಅದರಲ್ಲಿ ನಿತ್ಯವೂ ಟೀವಿ ನೋಡುವ ಕನ್ನಡದ ಕಣ್ಣುಗಳು ಮೂರುಮುಕ್ಕಾಲು ಕೋಟಿ! ಈ ಮಂದಿಗೆ ಸುಮಾರು 10 ಮನರಂಜನೆ ವಾಹಿನಿಗಳು (ಮ್ಯೂಸಿಕ್, ಕಾಮಿಡಿ ಎಲ್ಲ ಸೇರಿ), 7 ಸುದ್ದಿ ವಾಹಿನಿಗಳು ಜೊತೆಗೊಂದಿಷ್ಟು ಸ್ಥಳೀಯ ಕೇಬಲ್ ವಾಹಿನಿಗಳು.

    ಯುದ್ಧಕ್ಕೆ ನಿಂತಿದ್ದ ಟಿವಿ ಚಾನಲ್ಲುಗಳು

    ಯುದ್ಧಕ್ಕೆ ನಿಂತಿದ್ದ ಟಿವಿ ಚಾನಲ್ಲುಗಳು

    ಜನ ನಮ್ಮ ವಾಹಿನಿ ನೋಡಬೇಕು, ನಮ್ಮ ಚಾನೆಲ್ ನೋಡಬೇಕು ಎಂದು ಭರಾಟೆಗೆ ಬಿದ್ದವರಂತೆ ವಾಹಿನಿಗಳು ಯುದ್ಧಕ್ಕೆ ನಿಂತವು. ಬೆಳೆಯುತ್ತಿರುವ ಕನ್ನಡ ದೃಶ್ಯ ಮಾಧ್ಯಮ ನೋಡಿದ ಒಂದಷ್ಟು ಎಂಎನ್‌ಸಿ ಕಂಪನಿಗಳು, ಮನರಂಜನೆ ಜಗತ್ತಿನಲ್ಲಿ ಪಂಟರೆನಿಸಿಕೊಂಡ ಕಂಪನಿಗಳು ಕನ್ನಡಕ್ಕೆ ಕಾಲಿಟ್ಟು ಕೋಟಿಗಟ್ಟಲೇ ಹಣ ಸುರಿದವು. ಪರಿಣಾಮವಾಗಿ ಮೂರು ಮತ್ತೊಂದು ವಾಹಿನಿ ಹೊರತುಪಡಿಸಿ ಉಳಿದವೆಲ್ಲ ಕ್ರಮೇಣವಾಗಿ ಅವನತಿ ಅಂಚಿನತ್ತ ಹೆಜ್ಜೆ ಹಾಕುತ್ತಿವೆ. ಇಷ್ಟೆಲ್ಲ ಆಗಿದ್ದು ಕೇವಲ 5 ವರ್ಷದಲ್ಲಿ ಎಂಬುದನ್ನು ನೀವು ಮರೆಯಬಾರದು ಅಥವಾ ನೆನಪಿಟ್ಟುಕೊಳ್ಳಬೇಕು!

    ಎಲ್ಲವೂ ಟಿಆರ್‌ಪಿ ಎಂಬ ಪಿಶಾಚಿಗೋಸ್ಕರ

    ಎಲ್ಲವೂ ಟಿಆರ್‌ಪಿ ಎಂಬ ಪಿಶಾಚಿಗೋಸ್ಕರ

    ಎಲ್ಲರೂ ಪರದಾಡುತ್ತಿರುವುದು ಟಿಆರ್‌ಪಿ ಎಂಬ ಪಿಶಾಚಿಗೋಸ್ಕರ. ಅಂದರೆ ನಮ್ಮ ವಾಹಿನಿಯ ಯಾವ ಕಾರ್ಯಕ್ರಮವನ್ನು ಎಷ್ಟು ಮಂದಿ ನೋಡಿದ್ದಾರೆ ಎಂದು ತಿಳಿಸುವ ಪಾಯಿಂಟ್‌ಗೆ. ವಾಹಿನಿಯೊಂದಕ್ಕೆ ಆದಾಯ ಬರುವುದು ಈ ರೇಟಿಂಗ್‌ನಿಂದಲೇ. ರೇಟಿಂಗ್ ಆಧರಿಸಿ ಜಾಹೀರಾತುದಾರರು ಜಾಹೀರಾತು ನೀಡುತ್ತಾರೆ. ಹೀಗಾಗಿ ಹೆಚ್ಚು ಪಾಯಿಂಟ್ ಬಂದವರಿಗೆ ಹೆಚ್ಚು ಮುಖ ಬೆಲೆ.

    ರೇಟಿಂಗ್ ಹೆಸರಲ್ಲಿ ಕಿತ್ತು ಹಾಕುವುದು ಸಾಮಾನ್ಯ

    ರೇಟಿಂಗ್ ಹೆಸರಲ್ಲಿ ಕಿತ್ತು ಹಾಕುವುದು ಸಾಮಾನ್ಯ

    ಇವತ್ತು ಟಿಆರ್‌ಪಿಗಾಗಿ ಯುದ್ಧವೆ ನಡೆಯುತ್ತಿದೆ. ಪ್ರತಿ ವರ್ಷ ವಾಹಿನಿ ಮುಖ್ಯಸ್ಥರನ್ನು ಬದಲಿಸುವುದು, ಒಂದಷ್ಟು ಸಿಬ್ಬಂದಿಯನ್ನು ರೇಟಿಂಗ್ ಹೆಸರಿನಲ್ಲಿ ಕಿತ್ತು ಹಾಕುವುದು ದೃಶ್ಯ ಮಾಧ್ಯಮದಲ್ಲಿ ಸಾಮಾನ್ಯ ಅನ್ನಿಸಿಬಿಟ್ಟಿದೆ. ಇನ್ನೂ ಸೋಜಿಗದ ಸಂಗತಿ ಎಂದರೆ ಯಾವೊಂದು ಕನ್ನಡ ವಾಹಿನಿ, ಕನ್ನಡದ ಮುಖ್ಯಸ್ಥ ವಾಹಿನಿಯನ್ನು ಉತ್ತಮ ಮಟ್ಟಕ್ಕೆ ಕೊಂಡುಹೋಗುವಲ್ಲಿ ಯಶಸ್ವಿಯಾಗಿಲ್ಲ. ನಂಬರ್ ಒನ್ ಸ್ಥಾನದಲ್ಲಿರುವ ಉದಯ ಟಿವಿ ಸನ್ ನೆಟ್‌ವರ್ಕ್‌ನದ್ದು. ನಂಬರ್ 2 ಸ್ಥಾನದಲ್ಲಿರುವ ಸುವರ್ಣ, ಸ್ಟಾರ್ ಕಂ ಮಲೆಯಾಳಿಗಳದ್ದು. ಇನ್ನು ಕನ್ನಡದ ಅಷ್ಟು ಸುದ್ದಿ ವಾಹಿನಿಗಳನ್ನು ಒಟ್ಟು ಸೇರಿಸಿದರೂ ತನ್ನ ಸಮೀಪಕ್ಕೆ ಬರದಷ್ಟು ಎತ್ತರಕ್ಕೆ ಬೆಳೆದಿರುವ ಟಿವಿ9 ಕೂಡ ಕನ್ನಡಿಗರದ್ದಲ್ಲ.

    ಅನಂತ ಅದೃಷ್ಟ ತರುವರೆ?

    ಅನಂತ ಅದೃಷ್ಟ ತರುವರೆ?

    ಅದರ ಮುಖ್ಯಸ್ಥರೂ ಕನ್ನಡಿಗರಲ್ಲ. ಇದರರ್ಥ ಇಷ್ಟೆ, ಕನ್ನಡಿಗರಿಗೆ ಟಿಆರ್‌ಪಿ ತರುವ ಕೌಶಲ್ಯವಿಲ್ಲ. ಇದನ್ನು ನಮ್ಮ ಕನ್ನಡ ನಾಡಿನ ಅನೇಕ ದಿಗ್ಗಜ ಪತ್ರಕರ್ತರು ಸಾಬೀತುಪಡಿಸಿದ್ದಾರೆ! ಇದಕ್ಕೆ ಉತ್ತಮ ನಿದರ್ಶನ ಸುವರ್ಣ ನ್ಯೂಸ್. ಟಿವಿ9ನಲ್ಲಿ ಜನಪ್ರಿಯವಾದ ಒಬ್ಬರನ್ನು ಪ್ರತಿ ವರ್ಷ ತಂದು ಕೂರಿಸಿ ಸೋಲುವುದು ಸುವರ್ಣ ನ್ಯೂಸ್‌ಗೆ ವಾಡಿಕೆಯಾಗಿಬಿಟ್ಟಿದೆ. ಇದೀಗ ಜನಶ್ರೀ ಸಂಪಾದಕರಾಗಿದ್ದ ಅನಂತ ಚಿನಿವಾರ ಸಂಪಾದಕರಾಗಿ ಆಗಮಿಸಿದ್ದಾರೆ. ಅವರ ಅದೃಷ್ಟ ಹೇಗೋ? ಕಾದು ನೋಡಬೇಕು.

    ಓದುಗರು ಎಷ್ಟಂತ ನೋಡ್ತಾರೆ ಹೇಳಿ?

    ಓದುಗರು ಎಷ್ಟಂತ ನೋಡ್ತಾರೆ ಹೇಳಿ?

    ತುಂಬಾ ಸರಳವಾದ ಲೆಕ್ಕಾಚಾರವೆಂದರೆ ನಮ್ಮಲ್ಲಿ 17 ಪ್ಲಸ್ ವಾಹಿನಿಗಳಿವೆ. ವರ್ಷವರ್ಷ ವಾಹಿನಿಗಳ ಸಂಖ್ಯೆ ದೊಡ್ಡದಾಗುತ್ತದೆ. ಆದರೆ ಜನಸಂಖ್ಯೆ ಜಾಸ್ತಿಯಾದರೂ ನೋಡುಗರ ಪ್ರಮಾಣ ಹೆಚ್ಚುತ್ತಿಲ್ಲ. ಬದಲಾಗಿ ಇರೋಬರೋ ನೋಡುಗರು ಒಡೆದುಹೋಗುತ್ತಿದ್ದಾರೆ. ಹೀಗಾಗಿ ಟಿವಿ9, ಉದಯ ಟಿವಿಯಂಥ ಸುಭದ್ರವಾಹಿನಿಗಳೂ ಇತ್ತೀಚಿನ ದಿನಗಳಲ್ಲಿ ಟಿಆರ್‌ಪಿಯಲ್ಲಿ ಅಲುಗಾಡುತ್ತಿವೆ.

    ಬೇರೆಯವರ ಹಕ್ಕಿಗಾಗಿ ಹೋರಾಡುವ ಪತ್ರಕರ್ತ...

    ಬೇರೆಯವರ ಹಕ್ಕಿಗಾಗಿ ಹೋರಾಡುವ ಪತ್ರಕರ್ತ...

    ಈ ಅಲುಗಾಟದ ನೇರ ಪರಿಣಾಮ ನೌಕರರ ಮೇಲೆ ಬೀಳುತ್ತದೆ. ಎಲ್ಲೂ ಗುರುತಿಸಿಕೊಳ್ಳದೇ, ಎಲ್ಲೂ ಕಾಸು ಮಾಡಿಕೊಳ್ಳಲಾಗದೆ ಇರುವ ಒಂದಷ್ಟು ಬಡಪಾಯಿ ಪತ್ರಕರ್ತರು ಬಲಿಪಶುಗಳಾಗುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ಇವತ್ತು ಪರದಾಡುವ ಸ್ಥಿತಿಯಲ್ಲಿದ್ದಾರೆ. ಅಸ್ತಿತ್ವಕ್ಕಾಗಿ ಹೋರಾಡಲಾಗದ ಒಂದಷ್ಟು ವಾಹಿನಿಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ. ಬೇರೆಯವರ ಹಕ್ಕುಗಳಿಗಾಗಿ ಹೋರಾಡುವ ಪತ್ರಕರ್ತ, ತನ್ನ ಹಕ್ಕುಗಳಿಗೆ ಧ್ವನಿಯೆತ್ತಲಾಗದ ಸ್ಥಿತಿ ತಲುಪಿದ್ದಾನೆ.

    ಮುಂದಿನ ಸೆಗ್ ಮೆಂಟ್ ಏನು?

    ಮುಂದಿನ ಸೆಗ್ ಮೆಂಟ್ ಏನು?

    ಈಗ ಎದ್ದಿರುವ ಬಹುದೊಡ್ಡ ಪ್ರಶ್ನೆ ಮುಂದೇನು ಎಂಬುದು. ಇವತ್ತು ಪತ್ರಿಕೋದ್ಯಮ ಕಲಿಸುವ ಕಾಲೇಜುಗಳು ಬೇಕಾದಷ್ಟು ತಲೆಯೆತ್ತಿವೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪತ್ರಿಕೋದ್ಯಮ ಪದವಿ ಮುಗಿಸಿ ಹೊರಬರುತ್ತಿದ್ದಾರೆ. ಇರುವವರ ಸ್ಥಿತಿಯೇ ಅಭದ್ರವಾಗಿರುವಾಗ ಹೊಸತಾಗಿ ಬರುವವರ ಕಥೆ ಏನು ಎಂಬುದು ಕಗ್ಗಂಟಾಗಿದೆ. ಇನ್ನೂ ಮಜವಾದ ಸಂಗತಿಯೆಂದರೆ ದೃಶ್ಯ ಮಾಧ್ಯಮದಲ್ಲಿರುವ ಅನೇಕರು ಅನಕ್ಷರಸ್ಥರು! ಅನೇಕರು ಪತ್ರಿಕೋದ್ಯಮ ಪದವಿ ಪಡೆದು ಬಂದಿದ್ದು ಹೌದಾದರೂ ಎರಡಕ್ಷರ ಬರೆಯಲು ಬರುವುದಿಲ್ಲ. ನಮ್ಮ ಕಾಲೇಜುಗಳು ಪತ್ರಿಕೋದ್ಯಮ ಕಲಿಸುತ್ತಿವೆಯೇ ಹೊರತು ಬರೆಯುವುದನ್ನು ಕಲಿಸುತ್ತಿಲ್ಲ. ಹೀಗಾಗಿ ದೃಶ್ಯ ಮಾಧ್ಯಮದಲ್ಲಿರುವ ಅನೇಕರಿಗೆ ಅಲ್ಲಿನ ಕೆಲಸ ಬಿಟ್ಟು ಬೇರೆ ಕೆಲಸ ಮಾಡಲು ಗೊತ್ತಿಲ್ಲ. ಇದು ಸುದ್ದಿ ಮನೆಯೊಳಗಿನ ನ್ಯೂಸ್ ಕಾಪಿ.

    ನೈಜ ಪತ್ರಕರ್ತ ಸೃಷ್ಟಿಯಾಗೋದು ಯಾವಾಗ?

    ನೈಜ ಪತ್ರಕರ್ತ ಸೃಷ್ಟಿಯಾಗೋದು ಯಾವಾಗ?

    ಬರವಣಿಗೆ ಗೊತ್ತಿದ್ದರೆ ಬದುಕಲು ಸಾಕಷ್ಟು ಅವಕಾಶವಿದೆ. ಆದರೆ ಪ್ರತಿಕೋದ್ಯಮಿ ಬರೆಯುವುದನ್ನು ಬಿಟ್ಟು ಮತ್ತೆಲ್ಲವನ್ನೂ ಕಲಿಯುತ್ತಿದ್ದಾನೆ. ಈ ಟ್ರೆಂಡ್ ದೂರವಾದರೆ ಮಾತ್ರ ನೈಜ ಪತ್ರಕರ್ತನೊಬ್ಬ ಸೃಷ್ಟಿಯಾಗಬಲ್ಲ. ಒಂದು ಒಳ್ಳೆ ಸುದ್ದಿ ಹೊರಬರಬಲ್ಲದು. ಒಂದು ಮನಕಲಕುವ ಘಟನೆ ಬಿಗ್‌ ಬ್ರೇಕಿಂಗ್ ಅನ್ನಿಸಿಕೊಳ್ಳಬಹುದು. ಇಲ್ಲವಾದರೆ ಜನಾರ್ದನ ರೆಡ್ಡಿ ಮೂತ್ರ ಮಾಡಿದ್ದು, ರಾಮುಲುಗೆ ಎದೆನೋವು ಕಾಣಿಸಿಕೊಂಡಿದ್ದು, ಕುಮಾರಸ್ವಾಮಿ ಮತ್ತೊಂದು ನೋವು ಕಾಣಿಸಿಕೊಂಡಿದ್ದೇ ಬಿಗ್‌ ಬ್ರೇಕಿಂಗ್ ಅನ್ನಿಸಿಕೊಳ್ಳುತ್ತದೆ! ಹೀಗಾಗಿ ಪತ್ರಿಕೋದ್ಯಮವನ್ನು ಕ್ರೇಜ್‌ಗಾಗಿ ಕಲಿಯದೇ ಒಂದು ವೃತ್ತಿಯಾಗಿ ತೆಗೆದುಕೊಂಡರೆ ಉತ್ತಮ ಎಂದೆನಿಸುತ್ತದೆ.

    English summary
    Poor/average content and rate race for TRP among Kannada TV news channels has pushed both the investors and employees back to the wall. With lay off threat looming large on couple of Channels, Journalists and support staff fear losing jobs. Our staff reporters analyze the genesis of the trend.
    Monday, July 15, 2013, 12:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X