ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿಯ ಸಂಸ್ಕೃತಿ ಪ್ರಪಂಚಕ್ಕೆ ಮಾದರಿ. ಹಲವು ಭಾಷೆ, ಜಾತಿಗಳಿಂದ ಕೂಡಿದ್ದರೂ ಏಕತೆ ಸಾಧಿಸಿದ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ವ್ಯಕ್ತಿ ಜನ್ಮ ಪಡೆದ ಮರು ಕ್ಷಣದಿಂದಲೇ ನಿರ್ದಿಷ್ಟ ಜಾತಿ ಅಥವಾ ಮತದ ಜೊತೆ ಗುರುತಿಸಿಕೊಳ್ಳುತ್ತಾನೆ. ಅದಕ್ಕೆ ಮುಖ್ಯ ಕಾರಣ ಸಮಾಜ ಒಪ್ಪಿಕೊಂಡ ಸಂಪ್ರದಾಯ. ಆಚರಣೆ.

Advertisement

ಇನ್ನು ಧರ್ಮ ಭಾರತದಲ್ಲಿ ಕೇವಲ ವೈಯಕ್ತಿಕ ಆಯ್ಕೆಯಾಗಿ ಉಳಿದಿಲ್ಲ. ಅದು ಇಲ್ಲಿನ ಜನರ ಜೀವನ ವಿಧಾನ, ಸಾಂಸ್ಕ್ರತಿಕ ಬೇರು ಮತ್ತು ಕೆಲ ಬಾರಿ ತೀವ್ರ ಚರ್ಚೆಗೆ ಗ್ರಾಸವಾಗುವ ಸೂಕ್ಷ್ಮ ವಿಷಯ ಕೂಡ ಹೌದು. ಶತ ಶತಮಾನದಿಂದಲೂ ವೈವಿಧ್ಯಮಯ ನಂಬಿಕೆಗಳ ಸಂಗಮ ಭೂಮಿಯಾಗಿರುವ ಈ ದೇಶದಲ್ಲಿ ಮತಾಂತರ ಎಂಬುದು ಸಾಮಾಜಿಕ ಸಂಕೀರ್ಣ ಸಮಸ್ಯೆ.

Advertisement

ತನ್ನ ಧರ್ಮವನ್ನು ತೊರೆದು ಬೇರೆಯ ಧರ್ಮದ ಹಾದಿಯಲ್ಲಿ ವ್ಯಕ್ತಿಯೊಬ್ಬ ನಡೆಯಲು ಮುಂದಾದರೆ, ಅಥವಾ ಅನ್ಯ ಧರ್ಮದವರನ್ನು ಇಲ್ಲಿ ಯಾರಾದರೂ ಮದುವೆಯಾದರೆ ಅದು ಕೇವಲ ವೈಯಕ್ತಿಕ ನಿರ್ಧಾರವಾಗಿ ಉಳಿಯುವುದಿಲ್ಲ. ಬದಲಿಗೆ ಸಾಮಾಜಿಕ ಸಹಿಷ್ಣುತೆ ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ಬಹುದೊಡ್ಡ ಚರ್ಚೆಗೆ ಮುನ್ನುಡಿ ಬರೆಯುತ್ತೆ. ಅದರಲ್ಲಿಯೂ ಸೆಲೆಬ್ರಿಟಿಗಳು ಅಂತರಧರ್ಮೀಯ ಮದುವೆಯಾದರೆ ಮುಗಿದೇ ಹೋಯ್ತು. ಅಡಿಗಡಿಗೂ ಕೊಂಕು ನುಡಿ. ಟ್ರೋಲ್‌ಗಳ ಸುರಿಮಳೆ. ಸದ್ಯ ಆಮಿರ್ ಖಾನ್ ವಿಚಾರದಲ್ಲಿಯೂ ಇದೇ ಆಗಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಆಮಿರ್ ಖಾನ್ ಮೂರನೇ ಮದುವೆಯಾಗಿದ್ದಾರೆ. ಆದರೆ, ಗೌರಿ ಜೊತೆ ವಿವಾಹ ಬಂಧನಕ್ಕೊಳಗಾದ ಬೆನ್ನಲ್ಲೇ ಕೆಲವರು ಆಮಿರ್ ಖಾನ್ ಅವರನ್ನು ಮದುವೆಯಾಗಲು ಗೌರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ಧಾರೆ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ಸುದ್ದಿಯ ಸತ್ಯಾಸತ್ಯತೆ ಅರಿಯದೇ ಹಲವರು ಈ ಸುದ್ದಿ ನಿಜಾ ಅಂದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ಮಾಡುತ್ತಾ ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ.

Advertisement

ಇಷ್ಟೇ ಅಲ್ಲ ಆಮಿರ್ ಖಾನ್ ಅವರನ್ನು ಲವ್ ಜಿಹಾದ್‌ನ ಬ್ಯ್ರಾಂಡ್ ಅಂಬಾಸಿಡರ್ ಎಂದು ಕರೆಯುತ್ತಿದ್ದಾರೆ. ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾದ ಶಾಹಿಯ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಈ ಮದುವೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ನಟನ ವಿರುದ್ಧ ಫತ್ವಾ ಕೂಡ ಹೊರಡಿಸಿದ್ದಾರೆ. ಸದ್ಯ ತಮ್ಮ ಮದುವೆಯ ಸುತ್ತ ಮುತ್ತ ನಡೆಯುತ್ತಿರುವ ಈ ಚರ್ಚೆಗಳಿಗೆ, ಟ್ರೋಲ್‌ಗಳಿಗೆ ಆಮಿರ್ ಖಾನ್ ಉತ್ತರ ನೀಡಿದ್ದಾರೆ.

ಹೇಳಿದ್ದೇನು ಆಮಿರ್ ಖಾನ್ ..?

''ರೆಡಿಫ್'' ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆಯ ಕುರಿತು ಮಾತನಾಡಿರುವ ಆಮಿರ್ ಖಾನ್, ಲವ್ ಜಿಹಾದ್ ಆರೋಪ ತಳ್ಳಿ ಹಾಕಿದ್ದಾರೆ. ಗೌರಿ ಆಗಲಿ, ಕಿರಣ್ ಆಗಲಿ ಅಥವಾ ರೀನಾ ಆಗಲಿ ಯಾರು ಕೂಡ ಮತಾಂತರಗೊಂಡಿಲ್ಲ, ನನಗೋಸ್ಕರ ತಮ್ಮ ಧರ್ಮವನ್ನು ಕೂಡ ಬದಲಿಸಿಲ್ಲ ಎಂದು ಹೇಳಿರುವ ಆಮಿರ್ ಖಾನ್ ನನ್ನೆಲ್ಲ ಮದುವೆಗಳು ವಿಶೇಷ ವಿವಾಹ ಕಾಯ್ದೆಯಡಿಯೇ ನಡೆದಿವೆ ಎಂದು ನೆನಪಿಸಿದ್ದಾರೆ. ಹೀಗಿದ್ದಾಗ ಧರ್ಮ ಬದಲಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Advertisement

ನಿಜ ಹೇಳಬೇಕು ಅಂದರೆ ಎಲ್ಲರೂ ನಮ್ಮವರು ಎನ್ನುವ ಮನೋಭಾವದ ಕುಟುಂಬ ನಮ್ಮದು, ಎಲ್ಲಾ ಧರ್ಮವನ್ನು ನಾವು ಗೌರವಿಸುತ್ತೇವೆ ಎಂದು ಹೇಳಿರುವ ಆಮಿರ್ ಖಾನ್, ನನ್ನ ಇಬ್ಬರು ಸಹೋದರಿಯರು ಮದುವೆಯಾಗಿದ್ದು ಹಿಂದೂಗಳನ್ನು ಎಂದು ಹೇಳಿದ್ದಾರೆ. ನನ್ನ ಮಗಳು ಇರಾ ಕೂಡ ಮದುವೆಯಾಗಿರುವುದು ಹಿಂದೂ ಹುಡುಗನನ್ನೇ ಎಂದು ಹೇಳಿರುವ ಆಮಿರ್ ಖಾನ್ ನನ್ನ ಸಹೋದರ ಮನ್ಸೂರ್ ಮದುವೆಯಾಗಿದ್ದು ಕ್ರಿಶ್ಚಿಯನ್ ಹುಡುಗಿಯನ್ನು ಎಂದು ಹೇಳಿದ್ದಾರೆ.

ಮುಂದುವರೆದು ತಮ್ಮ ಮೂರನೇ ಪತ್ನಿ ಗೌರಿಯ ಧರ್ಮದ ಕುರಿತು ಕೂಡ ಮಾತನಾಡಿರುವ ಆಮಿರ್ ಖಾನ್, ಗೌರಿ ಹಿಂದೂನೇ ಅಲ್ಲ, ಆಕೆ ಒಬ್ಬ ಕ್ರಿಶ್ಚಿಯನ್ ಎಂದು ಹೇಳಿದ್ದಾರೆ. ಆದರೆ, ಆಕೆ ಧಾರ್ಮಿಕ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದಿಲ್ಲ ಎಂದು ಹೇಳಿರುವ ಆಮಿರ್ ಖಾನ್ ದಿನಗಳು ಉರುಳಿದಂತೆ ಬದುಕು ತುಂಬಾನೇ ಆಸಕ್ತಿದಾಯಕವಾಗುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಮೇಲಿನ ಲವ್ ಜಿಹಾದ್ ಆರೋಪಗಳಿಗೆ ಉತ್ತರ ನೀಡಿದ್ದಾರೆ.

Advertisement

100 ಕೋಟಿ ಮನೆ 3 ಹೆಂಡತಿಯರ ಜೊತೆ ವಾಸ

ಇನ್ನು ಲವ್ ಜಿಹಾದ್ ಹೊರತು ಪಡಿಸಿದರೆ ಕೆಲ ದಿನಗಳಿಂದ ಆಮಿರ್ ಖಾನ್ ಕುರಿತು ಇನ್ನೊಂದು ಸುದ್ದಿ ಕೂಡ ಚರ್ಚೆಯಲ್ಲಿದೆ. ಮುಂಬೈನ ಬಾಂದ್ರಾ ವೆಸ್ಟ್‌ನ ಪಾಲಿ ಹಿಲ್ಸ್‌ನಲ್ಲಿ 100 ಕೋಟಿ ವೆಚ್ಚದಲ್ಲಿ ಆಮಿರ್ ಖಾನ್ ಹೊಸ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ, ಅಲ್ಲದೇ ತಮ್ಮ ಈ ಮನೆಯಲ್ಲಿ ತಮ್ಮ ಇಬ್ಬರು ಮಾಜಿ ಪತ್ನಿಯರಾದ ರೀನಾ ಮತ್ತು ಕಿರಣ್ ಅವರನ್ನು ಕೂಡ ಕರೆತರಲಿದ್ದಾರೆ. ಈ ಮೂಲಕ ಮೂವರ ಜೊತೆ ಒಂದೇ ಮನೆಯಲ್ಲಿ ವಾಸ ಮಾಡಲಿದ್ದಾರೆ ಎನ್ನುವ ಸುದ್ದಿ ಅದು.

Advertisement

ಈ ಸುದ್ದಿಗೆ ಕೂಡ ಪ್ರತಿಕ್ರಿಯೆ ನೀಡಿರುವ ಆಮಿರ್ ಖಾನ್, ನಮ್ಮ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ರಿ-ಡೆವಲಪ್‌ಮೆಂಟ್ ನಡೀತಿದೆ. ಮುಂಬೈನ ಬೇರೆ ಬಿಲ್ಡಿಂಗ್‌ಗಳು ಹೇಗೆ ರಿ-ಡೆವಲಪ್ ಆಗ್ತಿವೆಯೋ, ಹಾಗೇ ಇದು ನಮ್ಮ ಹೌಸಿಂಗ್ ಸೊಸೈಟಿಯ ನಿರ್ಧಾರ ಅಷ್ಟೇ. ಈ ಸೊಸೈಟಿಯಲ್ಲಿ ನನ್ನನ್ನೂ ಸೇರಿಸಿ ಒಟ್ಟು 24 ಮೆಂಬರ್ಸ್ ಇದ್ದಾರೆ. ಇದರಲ್ಲಿ ಒಬ್ಬ ಬಿಲ್ಡರ್ ಕೂಡ ಇದ್ದಾರೆ, ಅವರು ತುಂಬಾ ಫ್ಲ್ಯಾಟ್‌ಗಳನ್ನ ಖರೀದಿಸಿರೋದ್ರಿಂದ ಬಿಲ್ಡಿಂಗ್‌ನ ದೊಡ್ಡ ಭಾಗ ಅವರ ಹೆಸರಲ್ಲಿದೆ ಎಂದು ಹೇಳಿದ್ದಾರೆ.