ಸಾಮಾನ್ಯವಾಗಿ ಮಳೆಗಾಲದಲ್ಲಿ ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರಿಮಿ ಕೀಟಗಳ ಕಾಟ ಹೆಚ್ಚಾಗುತ್ತದೆ.ಆದರೆ, ಹಲವರು ಈ ಕ್ರಿಮಿ ಕೀಟಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಈ ರೀತಿಯ ದಿವ್ಯ ನಿರ್ಲಕ್ಷ್ಯವೇ ಕೆಲವೊಮ್ಮೆ ಜೀವಕ್ಕೆ ಸಂಚಕಾರ ತರಬಹುದು ಎಂಬುದನ್ನು ನಾವು ಮರೆಯಬಾರದು. ರಾಜೇಶ್ ಶರ್ಮಾ ಈ ತಪ್ಪನ್ನೇ ಮಾಡಿದ್ದಾರೆ. ಪರಿಣಾಮ ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Advertisement

ಹೌದು, ರಾಜೇಶ್ ಶರ್ಮಾ.. ಬಾಲಿವುಡ್‌ನ ಪ್ರಖ್ಯಾತ ಕಲಾವಿದ. ''ದಿ ಡರ್ಟಿ ಪಿಕ್ಚರ್''.. ''ನೋ ಒನ್ ಕಿಲ್ಡ್ ಜೆಸ್ಸಿಕಾ''.. ''ತನು ವೆಡ್ಸ್ ಮನು ರಿಟರ್ನ್ಸ್‌''.. ''ಭಜರಂಗಿ ಭಾಯಿಜಾನ್''.. ''ಎಂ.ಎಸ್. ಧೋನಿ''.. ''ಟಾಯ್ಲೆಟ್: ಏಕ್ ಪ್ರೇಮ್ ಕಥಾ''.. ''ಸ್ಪೆಷಲ್ 26''..

Advertisement

ಹೀಗೆ ಹಲವಾರು ಚಿತ್ರಗಳ ಮೂಲಕ ಜನ ಮನ ಗೆದ್ದಿರುವ ರಾಜೇಶ್ ಶರ್ಮಾ, ಪ್ರಭಾಸ್ ಜೊತೆ ಸದ್ಯ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ರಾವ್ ಫಿಲ್ಮ್‌ ಸಿಟಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೇ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗ ರಾಜೇಶ್ ಶರ್ಮಾ ಅವರಿಗೆ ಕೀಟ ಕಚ್ಚಿದೆ.

ಸದ್ಯ ರಾಜೇಶ್ ಶರ್ಮಾ ಪಶ್ಚಿಮ ಬಂಗಾಳದ ಧಾಕುರಿಯಾದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದು ಅವರ ಆರೋಗ್ಯ ಗಂಭೀರವಾಗಿದೆ ಎಂದು ವರದಿಯಾಗಿದೆ. ರಾಜೇಶ್ ಶರ್ಮಾ ಕುಟುಂಬದ ಪರವಾಗಿ ನಟಿ ಸುದೀಪ ಚಟರ್ಜಿ ಆರೋಗ್ಯದ ಕುರಿತು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಾಜೇಶ್ ಶರ್ಮಾಗೆ ಆಗಿದ್ದೇನು..?


ಅಸಲಿಗೆ ರಾಜೇಶ್ ಶರ್ಮಾ ಎಂದಿನಂತೆ ಚಿತ್ರದ ಚಿತ್ರೀಕರಣದಲ್ಲಿ ಲವಲವಿಕೆಯಿಂದ ಭಾಗಿಯಾಗಿದ್ದರು. ದಿನದ ಚಿತ್ರೀಕರಣ ಮುಕ್ತಾಯ ಕೂಡ ಆಗಿತ್ತು. ಈ ಸಮಯದಲ್ಲಿ ರಾಜೇಶ್ ಶರ್ಮಾ ಅಲ್ಲಿಯ ಸ್ಥಳಿಯ ತಂತ್ರಜ್ಞರ ಜೊತೆ ಮಾತನಾಡುತ್ತಾ ಕುಂತಿದ್ದಾರೆ. ಗಿಡಗಂಟಿಗಳು ಜಾಸ್ತಿ ಇದ್ದ ಜಾಗ ಅದು.

Advertisement

ಈ ಸಮಯದಲ್ಲಿ ರಾಜೇಶ್ ಶರ್ಮಾ ಅವರಿಗೆ ಯಾವುದೋ ಹುಳ ಬಂದು ಕಚ್ಚಿದೆ. ಸಾಮಾನ್ಯ ಹುಳ ಎಂದುಕೊಂಡು ರಾಜೇಶ್ ಶರ್ಮಾ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ವೈದ್ಯಕೀಯ ಚಿಕಿತ್ಸೆ ಪಡೆಯದೆ ಹಾಗೇ ಸುಮ್ಮನಾಗಿದ್ದಾರೆ.

ಆದರೆ, ಆರು ಗಂಟೆಗಳ ನಂತರ ಬಲಗಾಲಿನಲ್ಲಿ ನೋವು ಕಾಣಿಸಿಕೊಂಡಿದೆ. ಆರೋಗ್ಯ ಹದಗೆಟ್ಟಿದೆ. ಆದರೂ ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯದ ರಾಜೇಶ್ ಶರ್ಮಾ ನಂತರ ಹಾಗೂ ಹೀಗೂ ನೋವಿನಲ್ಲಿಯೇ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಕೋಲ್ಕತ್ತಾಗೆ ಮರಳಿ ಬರಲು ಫ್ಲೈಟ್ ಹತ್ತಿದ್ಧಾರೆ.

ಈ ಸಮಯದಲ್ಲಿ ಇವರ ಆರೋಗ್ಯ ಇನ್ನೂ ಕ್ಷೀಣಿಸಿದ್ದು, ತೀವೃವಾದ ಜ್ವರ ಬಂದಿದೆ.ಇದರಿಂದ ಆತಂಕಕ್ಕೊಳಗಾಗಿರುವ ಕುಟುಂಬಸ್ಥರು ಧಾಕುರಿಯಾದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸುದೀಪ ಚಟರ್ಜಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Advertisement

ಈಗ ಹೇಗಿದೆ ಆರೋಗ್ಯ ..?


ಸೋಂಕು ಹರಡಿದ ನಂತರ ಸದ್ಯ ರಾಜೇಶ್ ಶರ್ಮಾ ಅವರನ್ನು ತೀವೃ ನಿಗಾ ಘಟಕದಲ್ಲಿಡಲಾಗಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಅವಿಜಿತ್ ಭಟ್ಟಾಚಾರ್ಯ ಮಾಹಿತಿಯನ್ನು ಹಂಚಿಕೊಂಡಿದ್ದು, ರಾಜೇಶ್ ಶರ್ಮಾ ಅವರ ಆರೋಗ್ಯದ ಕುರಿತು ಈಗಲೇ ಹೇಳಲು ಸಾಧ್ಯ ಇಲ್ಲ ಎಂದಿದ್ದಾರೆ.

ಪ್ರಾಣಾಪಾಯದಿಂದ ರಾಜೇಶ್ ಶರ್ಮಾ ಹೊರ ಬಂದಿಲ್ಲ ಎಂದು ಹೇಳಿರುವ ಡಾ.ಅವಿಜಿತ್ ಭಟ್ಟಾಚಾರ್ಯ, ಕಾಲಿನ ಬೆರಳಿನಿಂದ ಸೋಂಕು ಮೊಣಕಾಲಿನವರೆಗೆ ಹರಡಿದ್ದು, ಬಲಗಾಲಿನ ತುಂಬೆಲ್ಲಾ ದೊಡ್ಡದಾದ ನೀರಿನ ಗುಳ್ಳೆಗಳು ಎದ್ದಿವೆ ಎಂದು ಹೇಳಿದ್ಧಾರೆ. ಸೋಂಕು ಹೆಚ್ಚಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಇದೆ ಎಂದು ಹೇಳಿರುವ ವೈದ್ಯರು ಒಂದು ವೇಳೆ ಆ ರಕ್ತ ಹೆಪ್ಪುಗಟ್ಟುವಿಕೆ ಶ್ವಾಸಕೋಶಕ್ಕೆ ಹರಡಿದರೆ, ಅವರ ಪ್ರಾಣಕ್ಕೆ ಅಪಾಯ ಎದುರಾಗುವ ಆತಂಕ ಇದೆ ಎಂದಿದ್ದಾರೆ.

Advertisement

ರಾಜೇಶ್ ಶರ್ಮಾ ಅವರ ಆರೋಗ್ಯದಲ್ಲಿನ ಏರುಪೇರಿನ ಈ ಸುದ್ದಿಯಿಂದ ಬಾಲಿವುಡ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಅಂದ್ಹಾಗೇ ಪ್ರಭಾಸ್ ಸದ್ಯ ಹನು ರಾಘವಪುಡಿ ನಿರ್ದೇಶನದ ''ಫೌಜಿ'' ಮತ್ತು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ''ಸ್ಪಿರಿಟ್'' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಎರಡು ಸಿನಿಮಾಗಳ ಪೈಕಿ ಯಾವ ಸೆಟ್‌ನಲ್ಲಿ ಈ ಘಟನೆ ನಡೆದಿದೆ ಎನ್ನುವುದಕ್ಕೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ.