ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.

Advertisement

ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ. ಉದಾಹರಣೆಗೆ ನಾನಾ ಪಾಟೇಕರ್ ಮತ್ತು ನೀತು ಕಪೂರ್ ಅವರ ಮದುವೆಯ ವಿಚಾರವನ್ನೇ ತೆಗೆದುಕೊಳ್ಳಿ.

Advertisement

ಹೌದು, ಕೆಲ ಕಿಡಿಗೇಡಿಗಳು ಕಳೆದ ಎರಡ್ಮೂರು ದಿನಗಳಿಂದ ಸುದ್ದಿಯೊಂದನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಾರೆ. ಬಾಲಿವುಡ್‌ನ ದಿಗ್ಗಜ ನಾನಾ ಪಾಟೇಕರ್ ತಮ್ಮ 86ನೇ ವಯಸ್ಸಿನಲ್ಲಿ ಹಿಂದಿ ಚಿತ್ರರಂಗದ ಮತ್ತೊಬ್ಬ ದಂತಕಥೆ ದಿವಂಗತ್ ರಿಶಿ ಕಪೂರ್ ಅವರ ಪತ್ನಿ ನೀತು ಕಪೂರ್ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಅದು.

ಈ ಸುದ್ದಿ ನೋಡ ನೋಡುತ್ತಲೇ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿದೆ. ಸೋಶಿಯಲ್ ಮೀಡಿಯಾ ತೆರೆದರೆ ಸಾಕು, ಹಲವರಿಗೆ ಇವರ ಮದುವೆಯ ಕುರಿತು ಸುದ್ದಿಗಳೇ ಕಾಣಿಸುತ್ತಿವೆ. ತರಹೇವಾರಿ ಮಿಮ್ಸ್ ಮತ್ತು ಟ್ರೋಲ್‌ಗಳು ಕಣ್ಣಿಗೆ ರಾಚುತ್ತವೆ.

ಇನ್ನು ನೀತು ಕಪೂರ್ ಗೆ ಈಗ 67ರ ಹರೆಯ. ರಿಶಿ ಕಪೂರ್ ಅವರನ್ನು ನೀತು ಕಳೆದುಕೊಂಡು ಆರು ವರ್ಷಗಳಾಗಿವೆ. ಈ ಆರು ವರ್ಷದಲ್ಲಿ ಗಂಡನ್ನು ಕಳೆದುಕೊಂಡು ನೀತು ಕಪೂರ್ ಅನುಭವಿಸಿದ ಕಷ್ಟ ಅವರಿಗೆ ಗೊತ್ತು. ಆದರೆ ಇದು ಸೋಶಿಯಲ್ ಮೀಡಿಯಾ ಕಾಲ. ಎಲ್ಲಕ್ಕಿಂತ ಮುಖ್ಯವಾಗಿ ಸುಳ್ಳು ಸುದ್ದಿಯ ಕಾಲ.

Advertisement

ಇದಕ್ಕೆ ಪುರಾವೆ ಎಂಬಂತೆ, ಆಗಲೇ ನಿಮಗೆ ಹೇಳಿದಂತೆ ಕೆಲವರು ಇವರಿಬ್ಬರ ಮದುವೆಯ ಸುದ್ದಿಯನ್ನು ಹಬ್ಬಿಸಿ ವಿಕೃತ ಖುಷಿ ಪಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು. ''ಫಿಲ್ಮಿಬೀಟ್ ಕನ್ನಡ''ಗೆ ಇವರ ಮದುವೆ ಸುದ್ದಿಗೆ ಪೂರಕವಾಗಿ ಯಾವುದೇ ಸುದ್ದಿ ಸಿಕ್ಕಿಲ್ಲ. ಬದಲಿಗೆ ಹಬ್ಬಿರುವ ಸುದ್ದಿಯ ಆಳಕ್ಕೆ ಇಳಿದಾಗ ಇದೊಂದು ಕಪೋಲಕಲ್ಪಿತ ಸುದ್ದಿ ಎನ್ನುವುದಷ್ಟೇ ''ಫಿಲ್ಮಿಬೀಟ್ ಕನ್ನಡ''ಗೆ ಮನವರಿಕೆಯಾಗಿದೆ.


ನಾನಾ ಪಾಟೇಕರ್ ನಿಜವಾದ ವಯಸ್ಸು ಎಷ್ಟು ?

ವೈರಲ್ ಆದ ಪೋಸ್ಟ್‌ನಲ್ಲಿ ನಾನಾ ಪಾಟೇಕರ್ ಅವರ ವಯಸ್ಸು 86 ಎಂದು ಹೇಳಲಾಗಿದೆ. ನಿಜ ಏನೆಂದರೆ ನಾನಾ ಪಾಟೇಕರ್ ಅವರಿಗೆ ಈಗ 86 ಅಲ್ಲ ಬದಲಿಗೆ 75 ವರ್ಷ. ನಾನಾ ಹುಟ್ಟಿದ್ದು ಜನವರಿ 1-1951ರಂದು. ವಯಸ್ಸಿನಲ್ಲೇ ಇಷ್ಟೊಂದು ಸುಳ್ಳು ಹೇಳಿರುವಾಗ ಮದುವೆ ಕಥೆ ನಂಬಲು ಸಾಧ್ಯನಾ..?

ನಾನಾ ಮತ್ತು ರಿಶಿ ಕಪೂರ್ ಸ್ನೇಹ

ಕಪೂರ್ ಖಾನ್ದಾನ್ ಮೇಲೆ ನಾನಾ ಪಾಟೇಕರ್ ಅವರಿಗೆ ಮೊದಲಿಂದ ಅಪಾರವಾದ ಗೌರವ ಇದೆ. 1995ರಲ್ಲಿ ತೆರೆಗೆ ಬಂದ ''ಹಮ್ ದೋನೋ'' ಚಿತ್ರದಲ್ಲಿ ನಾನಾ ಪಾಟೇಕರ್ ಮತ್ತು ರಿಶಿ ಕಪೂರ್ ಜೊತೆಯಲ್ಲಿ ತೆರೆ ಹಂಚಿಕೊಂಡಿದ್ದರು. ಇನ್ನು ಹಿಂದಿನ ಹಲವಾರು ಸಂದರ್ಶನಗಳಲ್ಲಿ ರಿಶಿ ಕಪೂರ್ ಮತ್ತು ನೀತು ಕಪೂರ್ ಕುರಿತು ನಾನಾ ಪಾಟೇಕರ್ ಅಭಿಮಾನದ ಮಾತುಗಳನ್ನಾಡಿದ್ಧಾರೆ. ಆದರೆ ಈಗ ನೋಡಿದರೆ ಕ್ಲಿಕ್‌ಬೈಟ್ ಶೂರರು ಇವರ ಸಂಬಂಧಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ಧಾರೆ. ನೀತು ಕಪೂರ್ ಜೊತೆ ನಾನಾ ಪಾಟೇಕರ್ ಮದುವೆಯಾಗಲಿದ್ಧಾರೆ ಎಂದು ಸುಖಾಸುಮ್ಮನೆ ಡಂಗುರ ಬಾರಿಸಿದ್ದಾರೆ.

Advertisement

ಒಟ್ನಲ್ಲಿ ಲೈಕ್ಸ್, ಕಮೆಂಟ್ಸ್ ಆಸೆಯಲ್ಲಿ ಕೆಲವರು ಹಬ್ಬಿಸಿರುವ ಸುಳ್ಳ ಸುದ್ದಿ ಇದು. ನೀತು ಕಪೂರ್ ಮತ್ತು ನಾನಾ ಪಾಟೇಕರ್ ಮದುವೆಯಾಗಲಿದ್ದಾರೆ ಅಥವಾ ಆಗುತ್ತಾರೆ ಎನ್ನುವ ಸುದ್ದಿಯಲ್ಲಿ ಯಾವ ಸತ್ಯಾಂಶವೂ ಇಲ್ಲ. ಇಂತಹ ಸುದ್ದಿಗಳಿಗೆ ಮರುಳಾಗಬೇಡಿ. ನಿಜ ಎಂದು ನಂಬಬೇಡಿ. ಇದು ಕೇವಲ ''ಕ್ಲಿಕ್ ಬೈಟ್'' ಗಿಮಿಕ್ ಅಷ್ಟೇ.