ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂತಹ ಪ್ರೀತಿಯ ಬಲೆಯಲ್ಲಿ ಚಿತ್ರರಂಗದ ಹಲವು ತಾರೆಯರು ಸಿಲುಕಿದ್ದಾರೆ. ಪ್ರೀತಿ ಎಂದರೆ ಸಂತೋಷ. ಅದರ ಮಾಯೆಯೇ ಅಂತಹದ್ದು ಎನ್ನುವ ಮಾತುಗಳನ್ನಾಡಿದ್ದಾರೆ.
ತಮ್ಮ ಹೃದಯ ಗೆದ್ದ ವ್ಯಕ್ತಿಯನ್ನು ಅಳೆಯಲಾಗದಷ್ಟು.. ಅಂತ್ಯ ಇಲ್ಲದಷ್ಟು.. ಪ್ರೀತಿಸುವ ಅನೇಕರು ಚಿತ್ರರಂಗದಲ್ಲಿ ಇದ್ದಾರೆ. ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯ ಮೇಲೆ ಮದುವೆಯ ಅಧಿಕೃತ ಮುದ್ರೆಯನ್ನು ಹಾಕುತ್ತಿದ್ದಾರೆ. ಈ ಸಾಲಿಗೆ ಈಗ ಜಾಸ್ಮಿನ್ ಸ್ಯಾಂಡ್ಲಾಸ್ ಕೂಡ ಸೇರಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಜಾಸ್ಮಿನ್ ಪಂಜಾಬ್‌ನ ಪೋರಿ. ಸಿಂಗರ್ ಕೂಡ ಹೌದು. ಸಾಹಿತಿ ಕೂಡ ಹೌದು. ಪಂಜಾಬ್‌ನಲ್ಲಿ ಹುಟ್ಟಿ ಬೆಳೆದ ಇವರಿಗೆ ಆ ನಂತರ ಆಸರೆಯಾಗಿದ್ದು ಅಮೆರಿಕಾ. ಬೋಲ್ಡ್ ಸೈಲ್ ಮತ್ತು ತಮ್ಮ ಲುಕ್‌ಗಳಿಂದಲೇ ಹಲವರ ಗಮನ ಸೆಳೆದ ಇವರನ್ನು ''ಗುಲಾಬಿ ಕ್ವೀನ್'' ಎಂದೇ ಕರೆಯಲಾಗುತ್ತೆ. ಸಲ್ಮಾನ್ ಖಾನ್ ಅಭಿನಯದ ''ಕಿಕ್'' ಚಿತ್ರದ ''ಯಾರ್ ನಾ ಮಿಲೇ'' ಹಾಡಿನ ಮೂಲಕ ಹಿಂದಿ ಚಿತ್ರರಂಗಕ್ಕೆ ಬಂದ ಜಾಸ್ಮಿನ್ ಆ ನಂತರ ಹತ್ತಾರು ಹಾಡುಗಳಿಗೆ ಧ್ವನಿಯಾದರು. ಆದರೆ.. ''ಧುರಂಧರ್'' ಇವರ ಬದುಕನ್ನು ಮತ್ತೊಂದು ಮಗ್ಗಲಿನತ್ತ ಹೊರಳಿಸಿತು. ''ಧುರಂಧರ್'' ಚಿತ್ರದ ಹಾಡು ''ಜಾಯಿಯೇ ಸಜ್ನಾ'' ಅಸಂಖ್ಯಾತ ಜನರ ಹೃದಯ ಗೆಲ್ಲಲು, ವೈರಲ್ ಆಗಲು ಇವರ ಚಿನ್ನದ ಕಂಠ ಕೂಡ ಕಾರಣ. ''ಧುರಂಧರ್'' ನಂತರ ಭಾರತದೆಲ್ಲೆಡೆ ಮಾತ್ರವಲ್ಲದೇ ವಿಶ್ವದೆಲ್ಲೆಡೆ ''ಧುರಂಧರ್'' ಜಾಸ್ಮಿನ್ ಎಂದೇ ಕರೆಯಲ್ಪಡುವ ಈ ಗಾಯಕಿ ಸದ್ಯ ತಮ್ಮ 40ನೇ ವಸಂತದಲ್ಲಿ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ. ಎಲ್ಲರೆದುರು ಇವನೇ ನನ್ನ ಕನಸಿನ ಹುಡುಗ ಎಂದು ತಮ್ಮ ಭಾವಿ ಗಂಡನನ್ನು ಪರಿಚಯ ಮಾಡಿಸಿದ್ದಾರೆ. ಜಾಸ್ಮಿನ್ ಸದ್ಯ ಭಾರತದೆಲ್ಲೆಡೆ ಪ್ರವಾಸದಲ್ಲಿದ್ದಾರೆ. ಈ ಪ್ರವಾಸಕ್ಕೆ ಇವರು ಇಟ್ಟಿರುವ ಹೆಸರು ''ಡ್ರೀಮ್ ಗರ್ಲ್ ಇಂಡಿಯಾ ಟೂರ್''. ಹಲವಡೆ ಕಾನ್ಸರ್ಟ್‌ಗಳನ್ನು ಮಾಡುತ್ತಾ ಗಾನಪ್ರಿಯರ ಮನ ತಣಿಸುತ್ತಿರುವ ಜಾಸ್ಮಿನ್ ಮೊನ್ನೆ ದೆಹಲಿಯ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಅಸಂಖ್ಯಾತ ಜನರ ಎದುರು ತಮ್ಮ ಕಂಠ ಕುಣಿಸಿದರು. ಇದೇ ಸಮಯದಲ್ಲಿ ತಾವು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಹೇಳಿ ನೆರೆದ ಸಭಿಕರನ್ನೆಲ್ಲಾ ಅಚ್ಚರಿಗೆ ದೂಡಿದ ಜಾಸ್ಮಿನ್ ಸ್ಯಾಂಡ್ಲಾಸ್, ಕಾರ್ಯಕ್ರಮದ ಮಧ್ಯದಲ್ಲೇ ತಮ್ಮ ಕೈ ಹಿಡಿಯುತ್ತಿರುವ ಹುಡುಗ ಶೇಖರ್ ಚೌಧರಿ ಅವರನ್ನು ವೇದಿಕೆಗೆ ಬರುವಂತೆ ಕರೆದರು. ನನ್ನ ಬೆರಳಿಗೆ ಉಂಗುರ ತೊಡಿಸಿದ ವ್ಯಕ್ತಿ ಇವನೇ..ಇವನು ನನ್ನವನು ಎಂದು ಜೋರಾಗಿ ಕೂಗಿದರು. ಆ ನಂತರ ವೇದಿಕೆಯಲ್ಲಿಯೇ ಓಡಿ ಹೋಗಿ ಶೇಖರ್ ಅವರನ್ನು ಬಿಗಿದಪ್ಪಿಕೊಂಡರು. ಹೀಗೆ ತಮ್ಮ ಹುಡುಗನನ್ನು ಜಾಸ್ಮಿನ್ ಪರಿಚಯಿಸಿದ್ದೇ ತಡ, ಹಲವರು ಶೇಖರ್ ಚೌಧರಿಯ ಕುಲ ಗೋತ್ರ ಹುಡುಕಲು ಶುರು ಮಾಡಿದ್ದಾರೆ. ಆದರೆ.. ಯಾರ ಕೈಯಲ್ಲಿಯೂ ಯಾವ ಮಾಹಿತಿಯೂ ಕೂಡ ಸದ್ಯದವರೆಗೆ ಸಿಕ್ಕಿಲ್ಲ. ಚಿತ್ರರಂಗಕ್ಕೂ ಶೇಖರ್ ಗೆ ಯಾವುದೇ ಸಂಬಂಧ ಇಲ್ಲ, ಪ್ರಚಾರದಿಂದ ಇವರು ದೂರ ಉಳಿಯಲು ಬಯಸುತ್ತಾರೆ ಎನ್ನುವುದಷ್ಟೇ ಸದ್ಯಕ್ಕೆ ಹಲವರಿಗೆ ಸಿಕ್ಕಿರುವ ಮಾಹಿತಿ. ಉದ್ಯಮಿ ಇರಬಹುದು ಎನ್ನುವ ಶಂಕೆ ಹಲವರದ್ದು. ಅಂದ್ಹಾಗೇ ಈ ಹಿಂದೆ ಜಾಸ್ಮಿನ್ ಸ್ಯಾಂಡ್ಲಾಸ್ ಹೆಸರು ಪಂಜಾಬಿನ ಖ್ಯಾತ ಗಾಯಕ ಗ್ಯಾರಿ ಸಂಧು ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರು ಸೇರಿ ಹಲವು ಚಾರ್ಟ್‌ಬಸ್ಟರ್ ಹಾಡುಗಳನ್ನು ಕೂಡ ನೀಡಿದ್ದರು. ಆದರೆ 2022ರ ಆಸು ಪಾಸು ಇವರ ಸಂಬಂಧದಲ್ಲಿ ಬಿರುಕು ಮೂಡಿತು. ಸದ್ಯ ಜಾಸ್ಮಿನ್ ಮತ್ತು ಶೇಖರ್ ಗೆ ಹಲವರು ಶುಭಾಶಯಗಳನ್ನು ಕೊರುತ್ತಿದ್ಧಾರೆ. ಬೇಗನೇ ಮದುವೆಯ ಬಂಧನಕ್ಕೊಳಗಾಗುವಂತೆ ಸಲಹೆ ಕೊಡುತ್ತಿದ್ದಾರೆ. ಜಾಸ್ಮಿನ್ ಅವರ ಮುಂಬರುವ ಕಾನ್ಸರ್ಟ್ ಜುಲೈ 18ಕ್ಕೆ ಇದ್ದು ಆ ದಿನ ತಮ್ಮ ಪ್ರೇಮಕತೆಯ ಮತ್ತಷ್ಟು ವಿವರಗಳನ್ನು ಜಾಸ್ಮಿನ್ ಬಹಿರಂಗಪಡಿಸುವ ಸಾಧ್ಯತೆ ಇದೆ.ಯಾರು ಈ ಜಾಸ್ಮಿನ್ ..?
ಮೊದಲ ಹಾಡು..ಮೊದಲ ಆಲ್ಬಂ
ಪಂಜಾಬಿಯ ''ಮುಸ್ಕಾನ್'' ಇವರ ಮೊದಲ ಹಾಡು. 2008ರಲ್ಲಿ ಈ ಹಾಡು ಬಿಡುಗಡೆಯಾಗಿತ್ತು. 2012ರಲ್ಲಿ ಬಂದ ''ಗುಲಾಬಿ'' ಹಾಡು ಇವರನ್ನು ಯಶಸ್ಸಿನ ಉತ್ತುಂಗಕ್ಕೆ ಕರೆದೊಯ್ಯಿತು. ಬಾಲಿವುಡ್‌ನವರ ಕಣ್ಣು ಕೂಡ ಇವರ ಮೇಲೆ ಬಿತ್ತು. ಹಲವರು ಇವತ್ತು ಕೂಡ ಇವರನ್ನು ಕರೆಯುವುದು ''ಗುಲಾಬಿ ಕ್ವೀನ್'' ಎಂದೇ.
ಹೃದಯ ಗೆದ್ದ ಹುಡುಗನನ್ನು ವೇದಿಕೆಯಲ್ಲಿ ಪರಿಚಯಿಸಿದ ಜಾಸ್ಮಿನ್
ಯಾರು ಈ ಶೇಖರ್ ಚೌಧರಿ ..?
ಗ್ಯಾರಿ ಸಂಧು ಜೊತೆಗಿನ ಬ್ರೇಕಪ್
More Articles