ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಮದುವೆ ಏಳೇಳು ಜನ್ಮದ ಅನುಬಂಧವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿ ಎಂಬ ಎರಡಕ್ಷರಕ್ಕೂ ಬೆಲೆ ಇಲ್ಲ. ಮದುವೆ ಎಂಬ ಮೂರಕ್ಷರಕ್ಕೂ ಕಿಮ್ಮತ್ತು ಇಲ್ಲ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ .. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಮದುವೆಯ ಸಂಕೋಲೆಯಿಂದ ಮುಕ್ತರಾಗಿದ್ದಾರೆ.
ಈ ವರ್ಷ ಕೂಡ ಈ ವಿಚ್ಛೇದನದ ಕಾರ್ಯಕ್ರಮ ಬಣ್ಣದ ಪ್ರಪಂಚದಲ್ಲಿ ಮುಂದುವರೆದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಈ ವರ್ಷದಲ್ಲಿ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ, ಹಿಂದಿ ಕಿರುತೆರೆಯ ಮತ್ತೊಂದು ಖ್ಯಾತ ಜೋಡಿ ಮಹಿ ವಿಜ್ ಮತ್ತು ಜೈಭಾನುಶಾಲಿ.. ತನ್ವಿ ಠಕ್ಕರ್ ಮತ್ತು ಆದಿತ್ಯ ಕಪಾಡಿಯಾ.. ಮ್ಯಾಂಡಿ ಟಾಖರ್ ಮತ್ತು ಶೇಖರ್ ಕೌಶಾಲ್.. ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್.. ಹೀಗೆ ಹಲವರು ತಮ್ಮ ಸಾಂಸಾರಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಸಾಲಿಗೆ ಈಗ ಆದಿನಾಥ್ ಕೊಠಾರೆ ಮತ್ತು ಊರ್ಮಿಳಾ ಕಾನಿಟ್ಕರ್ ಕೂಡ ಸೇರಿಕೊಂಡಿದ್ದಾರೆ.
ಬಾಲಕಲಾವಿದರಾಗಿ ಚಿತ್ರರಂಗಕ್ಕೆ ಬಂದವರು ಆದಿನಾಥ್ ಕೊಠಾರೆ.1994ರಿಂದ ಮರಾಠಿಯಲ್ಲಿ ಹಲವು ಚಿತ್ರಗಳಲ್ಲಿ ಇವರು ಅಭಿನಯಿಸುತ್ತಾ ಬಂದಿದ್ದಾರೆ. ಕೇವಲ ಮರಾಠಿ ಮಾತ್ರವಲ್ಲ ಹಿಂದಿಯಲ್ಲಿಯೂ ಕೂಡ ಆದಿನಾಥ್ ಕೊಠಾರೆ ಚಿರಪರಿಚಿತ. ರಣವೀರ್ ಸಿಂಗ್ ಅಭಿನಯದ ''83'' ಚಿತ್ರದಲ್ಲಿ ದಿಲೀಪ್ ವೆಂಗ್‌ಸರ್ಕರ್ ಅವರ ಪಾತ್ರವನ್ನು ನಿರ್ವಹಿಸಿದ್ದು ಇದೇ ಆದಿನಾಥ್ ಕೊಠಾರೆ. ಇನ್ನು ಆದಿನಾಥ್ ಕೊಠಾರೆ ಕೇವಲ ನಾಯಕ ಮಾತ್ರ ಅಲ್ಲ. ಅತ್ಯುತ್ತಮ ನಿರ್ದೇಶಕ ಕೂಡ ಹೌದು. ಇವರ ನಿರ್ದೇಶನದ ''ಪಾನಿ'' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ನಮ್ಮ ಕನ್ನಡ ಚಿತ್ರರಂಗದ ಸ್ಟಾರ್ ಯಶ್ ಸಹ ನಿರ್ಮಾಣದಡಿ ಸಿದ್ಧವಾಗಿರುವ ''ರಾಮಾಯಣ'' ಚಿತ್ರದಲ್ಲಿ ಆದಿನಾಥ್ ಕೊಠಾರೆ ಭರತನ ಪಾತ್ರವನ್ನು ನಿರ್ವಹಿಸಿದ್ದಾರೆ. ಆದಿನಾಥ್ ಕೊಠಾರೆ ಅವರಂತೆಯೇ ಊರ್ಮಿಳಾ ಕಾನಿಟ್ಕರ್ ಕೂಡ ಮರಾಠಿ ಚಿತ್ರರಂಗದ ಖ್ಯಾತ ಹೆಸರು. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಛಾಪು ಮೂಡಿಸಿರುವ ಊರ್ಮಿಳಾ, ''ಆಯಿ ಶಪಥ್''.. ''ದುನಿಯಾದಾರಿ''.. ''ಟೈಮ್ ಪಾಸ್''.. ಹೀಗೆ ಹಲವಾರು ಮರಾಠಿ ಚಿತ್ರಗಳಲ್ಲಿ ಮಿಂಚಿದ್ದಾರೆ. ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಮಹಾರಾಷ್ಟ್ರದೆಲ್ಲೆಡೆ ಮನೆ ಮಾತಾಗಿದ್ದಾರೆ. ಇಂಥಾ ಆದಿನಾಥ್ ಕೊಠಾರೆ ಮತ್ತು ಊರ್ಮಿಳಾ ಕಾನಿಟ್ಕರ್ 2006ರಲ್ಲಿ ಬಂದ ''ಶುಭ್ ಮಂಗಲ್ ಸಾವಧಾನ್'' ಚಿತ್ರದ ಸಂದರ್ಭದಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದರು. ಈ ಚಿತ್ರಕ್ಕೆ ಆದಿನಾಥ್ ಕೊಠಾರೆ ಅವರ ತಂದೆ ಮಹೇಶ್ ಕೊಠಾರೆ ನಿರ್ದೇಶನ ಇತ್ತು. ಆದಿನಾಥ್ ಸಹಾಯಕ ನಿರ್ದೇಶಕರಾಗಿದ್ದರು. ಹೀಗೆ ಶುರುವಾದ ಪರಿಚಯ ಆ ನಂತರ ಪ್ರೇಮದ ಸ್ವರೂಪ ಪಡೆಯಿತು. ಭರ್ತಿ 5 ವರ್ಷ ಪ್ರೀತಿಯ ಅಮಲಿನಲ್ಲಿ ಓಡಾಡಿದ ಈ ಜೋಡಿ 2011ರ ಡಿಸೆಂಬರ್ ನಲ್ಲಿ ಮದುವೆಯ ಬಂಧನಕ್ಕೊಳಗಾಯ್ತು. ಮದುವೆಯಾದ 7 ವರ್ಷಗಳ ನಂತರ ಜೂನ್ 2018ರಲ್ಲಿ ಮುದ್ದಾದ ಮಗಳಿಗೆ ತಂದೆ-ತಾಯಿಯಾಗಿ ಇಬ್ಬರು ಬಡ್ತಿ ಪಡೆದರು. ಮಗಳಿಗೆ ಜಿಜಾ ಎಂದು ನಾಮಕರಣ ಮಾಡಿದರು. ಆದರೆ ಈಗ ಇಬ್ಬರ ನಡುವೆ ಇದ್ದ ಪ್ರೀತಿ ಕಮರಿದೆ. 15 ವರ್ಷಗಳ ಸುದೀರ್ಘವಾದ ದಾಂಪತ್ಯ ಮುರಿದು ಬಿದ್ದಿದೆ. ಈ ಕುರಿತು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಇಬ್ಬರು ''ಇಷ್ಟು ವರ್ಷ ನೀವು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಹೃದಯದಾಳದಿಂದ ಧನ್ಯವಾದ. ನಮ್ಮ ಬದುಕಿನ ಮುಂದಿನ ಹೊಸ ಪ್ರಯಾಣದಲ್ಲಿಯೂ ಕೂಡ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲಿರುತ್ತೆ ಎನ್ನುವುದು ನಮ್ಮ ನಂಬಿಕೆ''. ''ತುಂಬಾ ಗಾಢವಾಗಿ ಯೋಚನೆ ಮಾಡಿದ ನಂತರ ನಾವು ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ದೂರ ಆಗುವ ನಿರ್ಧಾರಕ್ಕೆ ಬಂದಿದ್ದೇವೆ. ಸಂಗಾತಿಗಳಾಗಿ ನಮ್ಮ ಪ್ರಯಾಣ ಇಲ್ಲಿಗೆ ಮುಗಿದಿರಬಹುದು. ಆದರೆ ನಮ್ಮ ಮಗಳು ಜಿಜಾ ಭವಿಷ್ಯಕ್ಕಾಗಿ ಜವಾಬ್ಧಾರಿಗಳನ್ನು ನಾವು ಹಂಚಿಕೊಂಡಿದ್ದೇವೆ, ಅವಳಿಗಾಗಿ ಮುಂದೆಯೂ ನಾವು ಜೊತೆಯಲ್ಲಿ ಇರುತ್ತೇವೆ. ಅವಳೇ ನಮಗೆಲ್ಲ. ಅವಳೇ ನಮ್ಮ ಮೊದಲ ಆದ್ಯತೆ. ಇಬ್ಬರು ಖುಷಿಯಿಂದ ಜೊತೆಗೂಡಿ ಅವರನ್ನು ಜವಾಬ್ಧಾರಿಯಿಂದ ಸಾಕಿ ಬೆಳೆಸುತ್ತೇವೆ. ಇಷ್ಟು ವರ್ಷಗಳ ಕಾಲ ಜೊತೆಯಲ್ಲಿ ಕಳೆದ ನೆನಪು ಸದಾ ಹಸಿರಾಗಿರುತ್ತೆ. ಪರಸ್ಪರ ಗೌರವ ಇದ್ದೇ ಇರುತ್ತೆ''. ''ನಮ್ಮ ಈ ವೈಯಕ್ತಿಕ ವಿಷಯದಲ್ಲಿ ಮಾಧ್ಯಮದವರು ಮತ್ತು ಜನರು ನಮ್ಮ ಖಾಸಗಿತನಕ್ಕೆ ಗೌರವ ಕೊಡಬೇಕು ಅಂತ ಕೈಮುಗಿದು ಕೇಳಿಕೊಳ್ಳುತ್ತೇವೆ. ಈ ವಿಷಯದ ಬಗ್ಗೆ ನಮ್ಮ ಕಡೆಯಿಂದ ಇದೊಂದೇ ಸ್ಟೇಟ್‌ಮೆಂಟ್. ಮುಂದೆ ನಾವು ಇದರ ಬಗ್ಗೆ ಯಾವುದೇ ಕಾಮೆಂಟ್ ಆಗಲಿ ಅಥವಾ ಚರ್ಚೆಯನ್ನಾಗಲಿ ಮಾಡಲ್ಲ. ನಿಮ್ಮ ಪ್ರೀತಿ ಮತ್ತು ಸಪೋರ್ಟ್‌ಗೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.ಯಾರು ಈ ಆದಿನಾಥ್ ಕೊಠಾರೆ ಮತ್ತು ಊರ್ಮಿಳಾ..?
5 ವರ್ಷಗಳ ಪ್ರೀತಿ 15 ವರ್ಷಗಳ ದಾಂಪತ್ಯ
ಹೇಳಿದ್ದೇನು ಇಬ್ಬರು..?
More Articles