ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಏಕಕಾಲಕ್ಕೆ ಸಿನಿಮಾ ದೇಶವಿದೇಶಗಳಲ್ಲಿ ಬಿಡುಗಡೆ ಆಗಲಿದೆ. ಮುಂದಿನ ವಾರ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ದೆಹಲಿಯಲ್ಲಿ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

Advertisement

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಸಿನಿಮಾ ತೆರೆಗೆ ಬರಲಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸಿದ್ದಾರೆ. ಚಿತ್ರ ನಿರ್ಮಾಣಕ್ಕೂ ಯಶ್ ಕೈಜೋಡಿಸಿದ್ದಾರೆ. ಸದ್ಯ ಟ್ರೈಲರ್ ಜೊತೆಗೆ 34 ನಿಮಿಷಗಳ ಸ್ಪೆಷಲ್ ಫುಟೇಜ್ ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆಗಿದೆ. ಅಚ್ಚರಿ ಅಂದ್ರೆ ಅಲ್ಲಿನ ಸೆನ್ಸಾರ್ ಮಂಡಳಿ 'M' ರೇಟಿಂಗ್ ಕೊಟ್ಟಿದೆ. ಅಂದ್ರೆ 15 ವರ್ಷಕ್ಕಿಂತ ಚಿಕ್ಕ ಮಕ್ಕಳು ಸಿನಿಮಾ ನೋಡಲು ಅವಕಾಶ ಇಲ್ಲ.

Advertisement

ಅರೇ, ನಮ್ಮ ಪೌರಾಣಿಕ 'ರಾಮಾಯಣ' ಚಿತ್ರದಲ್ಲಿ ಮಕ್ಕಳು ನೋಡಬಾರದಂತಹ ಯಾವ ಅಂಶ ಇದೆ. ಯಾಕೆ ಆಸ್ಟ್ರೇಲಿಯಾ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'M' ರೇಟಿಂಗ್(Mature)ರೇಟಿಂಗ್ ಕೊಟ್ರು ಎನ್ನುವ ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕೆಲವರು ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಮಕ್ಕಳ ಸಮೇತ ಎಲ್ಲರೂ ರಾಮಚರಿತ್ರೆಯನ್ನು ನೋಡಬೇಕು ಎನ್ನುವ ಕಾರಣಕ್ಕೆ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಹೀಗೆ ಯಾಕೆ ಎನ್ನುವ ಪ್ರಶ್ನೆ ಶುರುವಾಗಿದೆ. ಅದಕ್ಕೆ ಕಾರಣವೂ ಇದೆ.

ಹಿಂಸಾತ್ಮಕ ದೃಶ್ಯಗಳು

ಆಸ್ಟ್ರೇಲಿಯಾದಲ್ಲಿ ಮಕ್ಕಳ ಬಗ್ಗೆ ಬಹಳ ಕಾಳಜಿ ವಹಿಸಲಾಗ್ತಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಅದೇ ರೀತಿ ಯಾವುದೇ ಕಂಟೆಂಟ್ ಆಸ್ಟ್ರೇಲಿಯಾದ ವರ್ಗೀಕರಣ ಮಾರ್ಗಸೂಚಿ ಭಾರತಕ್ಕಿಂತ ಕೊಂಚ ಭಿನ್ನವಾಗಿದೆ. 'M' ರೇಟಿಂಗ್ ಹಿಂಸೆ, ಅಸಭ್ಯ ಭಾಷೆ ಅಥವಾ ಇತರ ಮೆಚ್ಯೂರ್ಡ್ ವಿಷಯಗಳಿದ್ದಕ್ಕೆ ಅದನ್ನು ಸಲಹಾ ವರ್ಗಕ್ಕೆ ಸೇರಿಸಲಾಗಿದೆ. 'M' ರೇಟಿಂಗ್ ಕಂಟೆಂಟ್ ವೀಕ್ಷಿಸಲು ಕಾನೂನು ನಿರ್ಬಂಧಗಳಿಲ್ಲದಿದ್ದರೂ, ಇದನ್ನು 15 ವರ್ಷದೊಳಗಿನ ಮಕ್ಕಳಿಗೆ ಶಿಫಾರಸ್ಸು ಮಾಡುವುದಿಲ್ಲ. ರಾಮಾಯಣ ಚಿತ್ರದಲ್ಲಿ ಒಂದಷ್ಟು ಆಕ್ಷನ್ ಸನ್ನಿವೇಶಗಳಿವೆ. ರಾಕ್ಷಕರ ಎದುರು ರಾಮ- ಲಕ್ಷ್ಮಣರ ಆರ್ಭಟದ ದೃಶ್ಯಗಳಿವೆ. ಇದೇ ಕಾರಣಕ್ಕೆ ಅಲ್ಲಿ 'M' ರೇಟಿಂಗ್ ಕೊಟ್ಟಿರುವ ಸಾಧ್ಯತೆಯಿದೆ.

Advertisement

ಟ್ರೈಲರ್ ಸೆನ್ಸಾರ್

ಜುಲೈ 24ರಂದು 'ರಾಮಾಯಣ' ಚಿತ್ರದ 4 ನಿಮಿಷಗಳ ಟ್ರೈಲರ್ ಬಿಡುಗಡೆಗೆ ತಯಾರಿ ನಡೀತಿದೆ. ಈಗಾಗಲೇ 5 ಭಾಷೆಗಳಲ್ಲಿ ಟ್ರೈಲರ್ ಸೆನ್ಸಾರ್ ಕೆಲಸಗಳು ಮುಗಿದಿದೆ. ಈ ಬಾರಿ ಬರೀ ರಾಮ ಅಲ್ಲ, ಇನ್ನುಳಿದ ಪಾತ್ರಗಳ ಝಲಕ್ ಕೂಡ ಟ್ರೈಲರ್‌ನಲ್ಲಿ ನೋಡಬಹುದು. ಮುಖ್ಯವಾಗಿ ದಶಕಂಠನ ಅವತಾರದಲ್ಲಿ ರಾಕಿಂಗ್ ಸ್ಟಾರ್ ಹೇಗಿರ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ದೀಪಾವಳಿ ಸಂಭ್ರಮದಲ್ಲಿ ಅಕ್ಟೋಬರ್ ಕೊನೆ ವಾರದಲ್ಲಿ 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ.

15 ನಿಮಿಷ ತೆರೆಮೇಲೆ ಯಶ್

ರಾವಣನಾಗಿ ಯಶ್ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಈ ವರ್ಷ ಬಿಡುಗಡೆ ಆಗುವ ಮೊದಲ ಭಾಗದಲ್ಲಿ ಅವರಿಗೆ ಹೆಚ್ಚು ಸ್ಕ್ರೀನ್‌ಸ್ಪೇಸ್ ಸಿಕ್ಕಿಲ್ಲ. ಕಾರಣ ಸೀತಾಪಹರಣದವರಗೆ ಮಾತ್ರ ಕಥೆ ಹೇಳಲಾಗ್ತಿದೆ. ಆದರೆ ರಾವಣನ ಹಿನ್ನೆಲೆಯನ್ನು ಕಟ್ಟಿಕೊಡುವ ಒಂದಷ್ಟು ದೃಶ್ಯಗಳಿವೆ. ವಿದ್ಯುಜ್ಜಿಹ್ವನ ಜೊತೆಗಿನ ಹೋರಾಟದ ಸನ್ನಿವೇಶ ಕೂಡ ಇರಲಿದೆ. 2ನೇ ಭಾಗದಲ್ಲಿ ರಾವಣನಾಗಿ ಯಶ್ ಬಹಳ ತೆರೆಮೇಲೆ ಅಬ್ಬರಿಸಲಿದ್ದಾರೆ. ಎ. ಆರ್ ರಹಮಾನ್ ಹಾಗೂ ಹನ್ಸ್ ಜಿಮ್ಮರ್ ಸಂಗೀತ ಚಿತ್ರಕ್ಕಿದೆ.