ಬಾಲಿವುಡ್‌ನ ಪ್ರತಿಭಾವಂತ ಸ್ಟಾರ್ ರಣ್ವೀರ್ ಸಿಂಗ್. ಝೀರೋದಿಂದ ಹೀರೋ ಆದ ರಣ್ವೀರ್, ಪಾತ್ರ ಎಂತಹದ್ದೇ ಇರಲಿ, ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ. ಕಾಲ ಕಾಲಕ್ಕೆ ತಮ್ಮ ಅಭಿನಯದಿಂದ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದಾರೆ. ಆದರೂ ಅದ್ಯಾಕೋ ರಣ್ವೀರ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದರು. ರಣ್ವೀರ್ ಅಭಿನಯದ ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ ನಿಂತು ಹೋಗುತ್ತಿದ್ದವು.

Advertisement

ಕರಣ್ ಜೋಹರ್ ನಿರ್ಮಾಣದ ''ತಖ್ತ್‌ ''.. ಶಂಕರ್ ನಿರ್ದೇಶನದಲ್ಲಿ ಬರಬೇಕಿದ್ದ ''ಅನ್ನಿಯನ್'' ಚಿತ್ರದ ರಿಮೇಕ್, ಹನುಮಾನ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ''ರಾಕ್ಷಸ್''.. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ''ಬೈಜೂ ಬವರಾ''.. ಹೀಗೆ ಅನೇಕ ಸಿನಿಮಾಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಒಂದಿಲ್ಲೊಂದು ವಿಘ್ನಗಳಿಂದಾಗಿ ನಿಂತು ಹೋದವು.

Advertisement

ಇದೆಲ್ಲದರಿಂದ ಖುದ್ದು ರಣ್ವೀರ್ ಸಿಂಗ್ ಬೇಸತ್ತು ಹೋಗಿದ್ದರು. ಹಾಗಂಥ ಸೋಲು ಒಪ್ಪಿಕೊಂಡಿರಲಿಲ್ಲ. ಬದಲಿಗೆ ನಿರಂತರ ಪ್ರಯತ್ನ ಮಾಡುತ್ತಲೇ ಬಂದರು. ಆ ಪ್ರಯತ್ನದ ಫಲವೇ ''ಧುರಂಧರ್''.

ಹಿಂದಿ ಚಿತ್ರರಂಗದ ಇತಿಹಾಸದಲ್ಲಿಯೇ ಹಿಂದ್ಯಾರು ಮಾಡಿರದ ಸಾಧನೆಯನ್ನು ''ಧುರಂಧರ್'' ಮೂಲಕ ರಣ್ವೀರ್ ಮಾಡಿದ್ಧಾರೆ. ಎರಡೆರಡು ಬಾರಿ ಬಾಕ್ಸಾಫೀಸ್‌ನಲ್ಲಿ 1000 ಕೋಟಿಗೂ ಅಧಿಕ ಹಣ ಕೊಳ್ಳೆ ಹೊಡೆದಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ.

ಎರಡು ಚಿತ್ರದ ಗಳಿಕೆ ಸೇರಿಸಿದರೆ 3100 ಕೋಟಿಯಾಗುತ್ತೆ. ಆದರೆ, ಇದೇ ''ಧುರಂಧರ್''ನ ಜಪಾನ್ ಜನ ಕ್ಯಾರೆಯೂ ಎನ್ನುತ್ತಿಲ್ಲ ಅಂದರೆ ನೀವು ನಂಬ್ತೀರಾ.? ನಂಬ್ಲೇಬೇಕು. ಯಾಕೆಂದರೆ ಇದು ಸತ್ಯ.

Advertisement

ಜಪಾನ್‌ನಲ್ಲಿ ಮುಗ್ಗರಿಸಿದ ''ಧುರಂಧರ್''

ಹೌದು, ಅಸಲಿಗೆ ಇತ್ತೀಚಿನ ವರ್ಷಗಳಲ್ಲಿ ಜಪಾನ್‌ನಲ್ಲಿ ಭಾರತೀಯ ಚಿತ್ರರಂಗಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ರಾಜ್‌ ಮೌಳಿ ಸಾರಥ್ಯದ ''ಆರ್ ಆರ್ ಆರ್'' ಚಿತ್ರ ಕೇವಲ ಜಪಾನ್‌ನಲ್ಲಿಯೇ ₹143.68 ಕೋಟಿಯನ್ನು ಕೊಳ್ಳೆ ಹೊಡೆದಿದೆ.

ಇನ್ನು ತೀರಾ ಇತ್ತೀಚಿಗೆ ಬಿಡುಗಡೆಯಾದ ''ಪುಷ್ಪಾ'' ₹6.23 ಕೋಟಿಯನ್ನು ಜಪಾನ್‌ನಲ್ಲಿ ಗಳಿಸಿದೆ. ''3 ಈಡಿಯಟ್ಸ್''.. ''ಸಾಹೋ''.. ''ಬಾಹುಬಲಿ 2''... ಸೇರಿ ಹಲವು ಚಿತ್ರಗಳನ್ನು ಕಳೆದ ಕೆಲ ವರ್ಷಗಳಲ್ಲಿ ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರಗಳಿಗೆ ತಕ್ಕ ಮಟ್ಟಿಗೆ ಉತ್ತಮವಾದ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ಈ ಹಿನ್ನೆಲೆ ಈಗ ''ಧುರಂಧರ್'' ಚಿತ್ರವನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 80 ಸ್ಕ್ರೀನ್‌ಗಳಲ್ಲಿ ಜುಲೈ 10ರಂದು ತೆರೆಗೆ ಬಂದಿದೆ. ಆದರೆ ಅಂದುಕೊಂಡಿದ್ದು ಒಂದು. ಆಗಿದ್ದು ಮತ್ತೊಂದು. ಭಾರತದ ಬಾಕ್ಸಾಫೀಸ್‌ನಲ್ಲಿ ಧಗಧಗಿಸಿದ ''ಧುರಂಧರ್'' ಚಿತ್ರಕ್ಕೆ ಜಪಾನ್‌ನಲ್ಲಿ ತಣ್ಣನೆಯ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ 900 ಪ್ರೇಕ್ಷಕರು ಮಾತ್ರ ಈ ಚಿತ್ರವನ್ನು ನೋಡಿದ್ದಾರೆ.

Advertisement

ಮೊದಲ ದಿನ ಅಂದರೆ ಶುಕ್ರವಾರ (ಜುಲೈ 10) 57 ಚಿತ್ರಮಂದಿರಗಳಿಂದ ಕೇವಲ 449 ಟಿಕೆಟ್ ಸೇಲ್ ಆಗಿದ್ದವು. ಸಂಜೆಯ ನಂತರ ನೂಕು ನುಗ್ಗಲಿನ ವಾತಾವರಣ ಕಂಡು ಬರುತ್ತೆ ಎನ್ನುವ ಲೆಕ್ಕಾಚಾರ ಹಾಕಲಾಗಿತ್ತಾದರೂ ಅಲ್ಲಿಯೂ ದಕ್ಕಿದ್ದು ನಿರಾಸೆಯೇ. ಕೊನೆಗೆ 80 ಥಿಯೇಟರ್ ಗಳಿಂದ ಕೇವಲ 900 ಟಿಕೆಟ್‌ಗಳು ಮಾತ್ರ ಬಿಕರಿಯಾದವು. ವಿಪರ್ಯಾಸ ಅಂದರೆ ಜಪಾನ್‌ನಲ್ಲಿ ಚಿತ್ರತಂಡ ಅದ್ದೂರಿ ಪ್ರಚಾರವನ್ನು ಕೂಡ ಮಾಡಿತ್ತು. ಆದರೂ ಕೂಡ ಜಪಾನ್ ಜನ ''ಧುರಂಧರ್''ನ ಕಣ್ಣೆತ್ತಿ ನೋಡಲಿಲ್ಲ.

ಟೈಗರ್ 3 ಚಿತ್ರವನ್ನು ಕೂಡ ಹಿಂದಿಕ್ಕದ ''ಧುರಂಧರ್''

ಜಪಾನ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತದ ಚಿತ್ರಗಳ ಸಾಲಿನಲ್ಲಿ ಇವತ್ತು ಕೂಡ ಆರ್ ಆರ್ ಆರ್ ಮೊದಲ ಸ್ಥಾನದಲ್ಲಿದೆ. ಆ ನಂತರದ ಸ್ಥಾನಗಳಲ್ಲಿ ಸಾಹೋ , ಕಲ್ಕಿ 2898 AD , ಪಠಾಣ್ , ಸಲಾರ್, ಜವಾನ್ , ರಂಗಸ್ಥಳಂ, ದೇವರ, ಬಾಹುಬಲಿ 2, ಮತ್ತು ಟೈಗರ್ 3 ಚಿತ್ರಗಳಿವೆ. ಈ ಟಾಪ್ 10 ಪಟ್ಟಿಯಲ್ಲಿ ಸೇರುವಲ್ಲಿ ಕೂಡ ''ಧುರಂಧರ್'' ವಿಫಲವಾಗಿದೆ.

Advertisement

ಒಟ್ನಲ್ಲಿ ಭಾರತದ ''ಧುರಂಧರ್''ನ ಜಪಾನ್ ಜನ ರಿಜೆಕ್ಟ್ ಮಾಡಿದ್ದಾರೆ. ವಿಶ್ವದೆಲ್ಲೆಡೆ ಗೆದ್ದು ಬೀಗಿದ ಈ ''ಧುರಂಧರ್'' ಜಪಾನ್‌ನಲ್ಲಿ ಮುಗ್ಗರಿಸಿ ಬಿದ್ದಿದ್ದಾನೆ. ಈ ಮೂಲಕ ''ದಂಗಲ್'' ದಾಖಲೆ ಮುರಿಯುವ ''ಧುರಂಧರ್''ನ ಕನಸು ಕನಸಾಗಿಯೇ ಉಳಿದಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.