ಬೆಂಗಳೂರು ಬೆಡಗಿ ರುಕ್ಮಿಣಿ ವಸಂತ್ ಕ್ರೇಜ್ ಸೌತ್ ಸಿನಿದುನಿಯಾದಲ್ಲಿ ಜೋರಾಗಿದೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ರುಕ್ಕು ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಈಗಾಗಲೇ ಜ್ಯೂ. ಎನ್‌ಟಿಆರ್ ಜೋಡಿಯಾಗಿ ತೆಲುಗಿನ 'ಡ್ರ್ಯಾಗನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಧನುಷ್ ಜೊತೆಗೂ ಒಂದು ಚಿತ್ರದಲ್ಲಿ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿದೆ.

Advertisement

'ಬೀರ್‌ಬಲ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರುಕ್ಮಿಣಿ ಬಳಿಕ 'ಸಪ್ತಸಾಗರದಾಚೆ ಎಲ್ಲೊ' ಸಿನಿಮಾಗಳ ಮೂಲಕ ಮೋಡಿ ಮಾಡಿದ್ದರು. 'ಕಾಂತಾರ- 1' ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಸದ್ಯ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ರುಕ್ಕು ನಟಿಸಿದ್ದಾರೆ. ಆಗಸ್ಟ್ 26ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇದೆಲ್ಲದರ ನಡುವೆ ರಜನಿಕಾಂತ್ ನಟನೆಯ 'ಧರ್ಮನ್' ಸಿನಿಮಾ ಚಿತ್ರೀಕರಣದಲ್ಲಿ ರುಕ್ಮಿಣಿ ಭಾಗಿ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

Advertisement

ಅಶ್ವಥ್ ಮಾರಿಮುತ್ತು ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಧರ್ಮನ್' ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಕಮಲ್ ಹಾಸನ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಜನಿಕಾಂತ್ ಜೊತೆಗೆ ಸಿಮ್ರನ್, ರಾಶಿ ಖನ್ನಾ, ಯೋಗಿಬಾಬು ಸೇರಿ ದೊಡ್ಡ ತಾರಾಗಣವಿದೆ. ಚಿತ್ರದಲ್ಲಿ ಡೆಡ್ಲಿ ಡಾಕ್ಟರ್ ಆಗಿ ತಲೈವಾ ಅಬ್ಬರಿಸೋಕೆ ಬರ್ತಿದ್ದಾರೆ. ಅಂದಹಾಗೆ ಇದು ರಜನಿಕಾಂತ್ ನಟನೆಯ 173ನೇ ಸಿನಿಮಾ. ದಶಕಗಳ ಬಳಿಕ ಕಮಲ್ ಹಾಗೂ ತಲೈವಾ ಈ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಯಾರು ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಬಗ್ಗೆ ಭಾರೀ ಕುತೂಹಲ ಇತ್ತು. ಇತ್ತೀಚೆಗೆ ಅದಕ್ಕೆ ಉತ್ತರ ಸಿಕ್ಕಿತ್ತು.

Advertisement

ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ದೊಡ್ಡ ಸಿನಿಮಾಗಳು 5 ಭಾಷೆಗಳಿಗೆ ಡಬ್ ಆಗಿ ಬರ್ತಿವೆ. ಹಾಗಾಗಿ ಕಲಾವಿದರು ಭಾಷೆಯ ಗಡಿಮೀರಿ ಬೇರೆ ಬೇರೆ ಸಿನಿಮಾಗಳ ಭಾಗವಾಗುತ್ತಿದ್ದಾರೆ. 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ ಅಬ್ಬರಿಸಿದ್ದರು. ಇದೀಗ ಸೀಕ್ವೆಲ್‌ನಲ್ಲಿ ಕೂಡ ಶಿವಣ್ಣ ನಟಿಸಿದ್ದಾರೆ. 'ಕೂಲಿ' ಚಿತ್ರದಲ್ಲಿ ತಲೈವಾ ಜೊಯೆ ಉಪೇಂದ್ರ ಮಿಂಚಿದ್ದರು. ಮತ್ತೊಂದು ಪ್ರಮುಖ ಪಾತ್ರದಲ್ಲಿ ರಚಿತಾ ರಾಮ್ ಕಮಾಲ್ ಮಾಡಿದ್ದರು.

'ಧರ್ಮನ್' ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರವೇ ರುಕ್ಮಿಣಿಗೆ ಸಿಕ್ಕಿದೆ ಎನ್ನುವ ಚರ್ಚೆ ನಡೀತಿದೆ. ಸದ್ಯ ಚೆನ್ನೈನಲ್ಲಿ ಸಿನಿಮಾ ಚಿತ್ರೀಕರಣ ನಡೀತಿದ್ದು ಯೋಗಿಬಾಬು ಜೊತೆ ರುಕ್ಮಿಣಿ ಕೂಡ ನಟಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಈಗಾಗಲೇ ಇಂಟ್ರಡಕ್ಷನ್ ಸಾಂಗ್ ಹಾಗೂ ಒಂದು ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮುಗಿದಿದೆ ಎಂದು ಹೇಳಲಾಗ್ತಿದೆ.