ಕನ್ನಡದ ಹೆಮ್ಮೆಯ ಚಲನಚಿತ್ರ ಛಾಯಾಗ್ರಾಹಕ ಗೌರಿಶಂಕರ್‌ ಇನ್ನಿಲ್ಲ


ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್‌(54) ಇನ್ನಿಲ್ಲ. ಬಹು ದಿನಗಳಿಂದ ಪಿತ್ತಕೋಶ ಕಾಯಿಲೆಯಿಂದ ಬಳಲುತ್ತಿದ್ದ ಗೌರಿಶಂಕರ್‌, ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ(ನ.16) ರಾತ್ರಿ ಮೃತಪಟ್ಟರು.

ನಟಿ ರಕ್ಷಿತಾ ಗೌರಿಶಂಕರ್‌ ಅವರ ಪುತ್ರಿ. ನಾಡಿನ ಹೆಮ್ಮೆಯ ಛಾಯಾಗ್ರಾಹಕರಲ್ಲಿ ಒಬ್ಬರಾಗಿದ್ದ ಗೌರಿಶಂಕರ್‌, 90 ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಛಾಯಾಗ್ರಹಣ ನೀಡಿದ್ದಾರೆ. ಅಲ್ಲದೇ ಒಂದು ಹಿಂದಿ ಚಿತ್ರ ಸೇರಿದಂತೆ ಕನ್ನಡದ ಕೆಂಡದ ಮಳೆ, ಏಳು ಸುತ್ತಿನ ಕೋಟೆ, ಆಟ ಬೊಂಬಾಟ ಚಿತ್ರಗಳನ್ನು ನಿರ್ದೇಶಿಸಿದ್ದರು

ಮಿಂಚಿನ ಓಟ, ಅರಿವು, ಸಿಂಗಾರೆವ್ವ, ಮೈಸೂರು ಮಲ್ಲಿಗೆ, ಓಂ, ಪುಷ್ಪಕ ವಿಮಾನ- ಈ ಚಿತ್ರಗಳ ಛಾಯಾಗ್ರಹಣಕ್ಕೆ ಪ್ರಶಸ್ತಿ ಪಡೆದು, ಆರು ಸಲ ರಾಜ್ಯ ಪ್ರಶಸ್ತಿ ಪಡೆದ ಏಕೈಕ ಛಾಯಾಗ್ರಾಹಕ ಎನ್ನುವ ಹೆಮ್ಮೆ ಅವರದಾಗಿತ್ತು.

ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಛಾಯಾಗ್ರಹಣದಲ್ಲಿ ಶಿಕ್ಷಣ ಪಡೆದ ಗೌರಿಶಂಕರ್‌, ಶೃಂಗಾರ ಮಾಸ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಆರಂಭಿಸಿದ್ದರು. ಹೊಸಬೆಳಕು,ಚಲಿಸುವ ಮೋಡಗಳು,ಬೆಂಕಿಯ ಬಲೆ, ಆಲೆಮನೆ, ಚಿಗುರಿದ ಕನಸು, ಜನುಮದ ಜೋಡಿ, ಇವರ ಪ್ರಮುಖ ಚಿತ್ರಗಳು. ನಿರ್ಮಾಣ ಹಂತದಲ್ಲಿರುವ ಕಾಂಚನಗಂಗಾ ಚಿತ್ರದ ಚಿತ್ರೀಕರಣಕ್ಕೆ ಮನಾಲಿಗೆ ತೆರಳಿದ್ದ ಅವರು ಅಲ್ಲಿಂದ ಮರಳಿದ ಬಳಿಕ ತೀವ್ರ ಅಸ್ವಸ್ಥರಾಗಿದ್ದರು. ತಮಿಳು ಹಾಗೂ ಹಿಂದಿಚಿತ್ರಗಳಿಗೆ ಸಹಾ ಗೌರಿಶಂಕರ್‌ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು.(ಇನ್ಫೋ ವಾರ್ತೆ)

Have a great day!
Read more...

English Summary

Cinematographer Gowri Shankar passes away