ಹೇಮಂತ್ ರಾವ್ ನಿರ್ದೇಶನದ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಶಿವರಾಜ್‌ಕುಮಾರ್ ಹುಟ್ಟುಹಬ್ಬ ಸನಿಹವಾಗುತ್ತಿದ್ದಂತೆ ಚಿತ್ರದ ಟೀಸರ್ ಬಿಟ್ಟು ಕುತೂಹಲ ಮೂಡಿಸಿದೆ ಚಿತ್ರತಂಡ. ಏಜೆಂಟ್ 999 ಶಿವಣ್ಣನ ಜೊತೆ ಶಂಕರ್ ಆಗಿ ಡಾಲಿ ಧನಂಜಯ್ ಗಮನ ಸೆಳೆದಿದ್ದಾರೆ.

Advertisement

ರೆಟ್ರೋ ಶೈಲಿಯಲ್ಲಿ ಇಡೀ ಸಿನಿಮಾ ಕಟ್ಟಿಕೊಡಲಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಟೀಸರ್ ನೋಡದರೆ ಅರ್ಥವಾಗುತ್ತಿದೆ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಿಂದ ಬಹಳ ವಿಭಿನ್ನವಾದ ಕಥೆ ಇಲ್ಲಿದೆ. ಅದರ ಟ್ರೀಟ್‌ಮೆಂಟ್ ಕೂಡ ಅಷ್ಟೇ ವಿಭಿನ್ನವಾಗಿದೆ. ದಶಕಗಳ ಹಿಂದೆ ಡಾ. ರಾಜ್‌ಕುಮಾರ್ ಬಾಂಡ್ ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡಿದ್ದರು. ಅದೇ ಸಿನಿಮಾಗಳನ್ನು '666 ಆಪರೇಷನ್ ಡ್ರೀಮ್ ಥಿಯೇಟರ್' ನೆನಪಿಸ್ತಿದೆ.

Advertisement

ಏಜೆಂಟ್ ಪ್ರಕಾಶ್ ಆಗಿ ಕೆಲ ಫ್ರೇಮ್‌ಗಳಲ್ಲಿ ಅಣ್ಣಾವ್ರನ್ನು ಶಿವರಾಜ್‌ಕುಮಾರ್ ನೆನಪಿಸುತ್ತಿದ್ದಾರೆ. ಹೇಮಂತ್ ರಾವ್ ಟೇಕಿಂಗ್ ಜೊತೆಗೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ಹೊಸ ಅನುಭವ ಕೊಡುತ್ತಿದೆ. ಮೊದಲ ನೋಟದಲ್ಲೇ ಟೀಸರ್ ಅಭಿಮಾನಿಗಳ ಮನಗೆದ್ದಿದೆ. ಕಥೆಯ ಸುಳಿವು ಬಿಟ್ಟು ಕೊಡದೇ ವಿಷ್ಯುವಲಿ ಎಷ್ಟು ರಿಚ್ ಆಗಿದೆ ಎನ್ನುವುದನ್ನು ಹೇಮಂತ್ ರಾವ್ ತೋರಿಸಿದ್ದಾರೆ. ಚಿತ್ರದ ಹೀರೊ ಶಿವಣ್ಣನಾ ಅಥವಾ ಧನಂಜಯನಾ? ಎನ್ನುವ ಅನುಮಾನ ಮೂಡುವಂತಿದೆ. ಡಾಲಿಗೆ ಹೆಚ್ಚು ಅವಕಾಶ ಸಿಕ್ಕಿರುವಂತೆ ಕಾಣ್ತಿದೆ.

60-70ರ ದಶಕದಲ್ಲಿ ಕಥೆ ನಡೆಯುವಂತೆ ತೋರಿಸಲಾಗಿದೆ. ಆ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ಕಾಸ್ಟ್ಯೂಮ್, ಸೆಟ್, ಪ್ರಾಪ್ಸ್ ಎಲ್ಲವೂ ಹಳೇ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ. ರೆಟ್ರೋ ಲುಕ್‌ನಲ್ಲಿ ಶಿವಣ್ಣ ಹಾಗೂ ಡಾಲಿ ಮಿಂಚಿದ್ದಾರೆ. 'ಕೆಜಿಎಫ್' ಸರಣಿ ಸಿನಿಮಾಗಳನ್ನು ನೆನಪಿಸುವಂತೆ ಕತ್ತಲೆಯಲ್ಲೇ ಹೆಚ್ಚು ಸನ್ನಿವೇಶಗಳಿರುವುದು ಬೇಸರ ಮೂಡಿಸುತ್ತದೆ. ಇನ್ನುಳಿದಂತೆ ಸ್ಟೈಲ್, ಕಲರ್‌ ಗ್ರೇಡಿಂಗ್ ಮುಖ್ಯವಾಗಿ ಬಾಂಡ್ ಸಿನಿಮಾಗಳ ಶೈಲಿಯ ಬಿಜಿಎಂ ಕಿಕ್ ಕೊಡುತ್ತಿದೆ.

Advertisement

ಟೀಸರ್ ನೋಡಿದ್ರೆ ಇದು ಟೈಮ್ ಟ್ರಾವೆಲ್ ಸಿನಿಮಾ ಎನಿಸುವಂತಿದೆ. ಧನಂಜಯ್ ದೃಶ್ಯಗಳನ್ನು ಗಮನಿಸಿದರೆ ಸ್ಪ್ಲಿಟ್ ಪರ್ಸನಾಲಿಟಿ ಇರುವ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದಾರೆ. ಡಿಟೆಕ್ಟಿವ್ ಡ್ರಾಮಾ ಕೂಡ ಅನ್ನಿಸುತ್ತೆ. ಇದೆಲ್ಲವೂ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಒಟ್ಟಾರೆ ಹೇಮಂತ್ ರಾವ್ ಟೆಕ್ನಿಕಲಿ ಬ್ರಿಲಿಯಂಟ್ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಆಪರೇಷನ್? ಶಂಕರ್ ಹಾಗೂ ಪ್ರಕಾಶ್ ಜೊತೆ ಆಗೋದು ಯಾಕೆ? ಎನ್ನುವ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಶಿವಣ್ಣ ಸೂಟ್‌ಕೇಸ್ ಗನ್ ಹಿಡಿದು ಅಬ್ಬರಿಸುವುದು 'ಕೆಜಿಎಫ್' ಚಿತ್ರದ ದೊಡ್ಡಮ್ಮ ಗನ್ ದೃಶ್ಯ ನೆನಪಿಸುವಂತಿದೆ.

ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ಬಿಡುಗಡೆಯಾಗಲಿದೆ. 3 ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗಿದೆ. ನಾನಿ ಸೇರಿ ಪರಭಾಷೆಯ ಸ್ಟಾರ್ ನಟರು ಟೀಸರ್ ಶೇರ್ ಮಾಡಿ ಶುಭಾಶಯ ಕೋರಿದ್ದಾರೆ. ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಖ್ ಜೆ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಪ್ರಿಯಾಂಕ ಮೋಹನ್, ಯಶ್ ಶೆಟ್ಟಿ, ಅದಿತಿ ಬಾಲನ್, ಅಶೋಕ್ ಶರ್ಮಾ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಹಾಗೆ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.