ಹಿಂದೂ ಧರ್ಮ, ಶ್ರೀರಾಮ, ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ನಡುವಿನ ಸಂಘರ್ಷದ ಬಗ್ಗೆ ನಟ ಕಿರಣ್ ಶ್ರೀನಿವಾಸ್ ಹೇಳಿಕೆ ಭಾರೀ ಚರ್ಚೆ ಹುಟ್ಟು ಹಾಕಿದೆ. ಅವರ ಅಭಿಪ್ರಾಯಗಳ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಬ್ರಾಹ್ಮಣ ಕುಟುಂಬದಲ್ಲೇ ಹುಟ್ಟಿ ಬೆಳೆದರೂ ಈಗ ನಾನು ನಾಸ್ತಿಕನಾಗಿದ್ದೀನಿ ಎಂದು ಕಿರಣ್ ಶ್ರೀನಿವಾಸ್ ಹೇಳಿದ್ದಾರೆ.
ಸಾಕ್ಷಿ ಆಧಾರ ಇಲ್ಲದೇ ನಾನು ಯಾವುದನ್ನು ಒಪ್ಪುವುದಿಲ್ಲ. ಸಂವಿಧಾನವೇ ಮುಖ್ಯ. ಆದರೆ ಅದರ ಪ್ರಕಾರ ಯಾರೂ ನಡೆದುಕೊಳ್ಳುತ್ತಿಲ್ಲ ಎಂದು ಕಿರಣ್ ಶ್ರೀನಿವಾಸ್ ಹೇಳಿದ್ದಾರೆ. ಹಿಂದೂ ಧರ್ಮದ ಕೆಲ ನಂಬಿಕೆ, ಸಂಪ್ರದಾಯ ಹಾಗೂ ಆಚಾರ ವಿಚಾರಗಳ ಬಗ್ಗೆ ಕೂಡ ಕಿರಣ್ ಮಾತನಾಡಿದ್ದಾರೆ. ಮನೆ ಗೃಹಪ್ರವೇಶದ ವೇಳೆ ಯಾಕೆ ಗೋಮೂತ್ರ ಹಾಕಿ ಶುದ್ಧಿ ಮಾಡ್ತಾರೆ? ಅದಕ್ಕೆ ಕಾರಣ ಏನು? ಎಂದು ಅವರು ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆ ಕಿರಣ್ ಶ್ರೀನಿವಾಸ್ ಮಾತುಗಳು ವೈರಲ್ ಆಗ್ತಿದೆ. ನಾನು ಆರ್‌ಎಸ್‌ಎಸ್ ಶಾಖೆಗೆ ಚಿಕ್ಕಂದಿನಲ್ಲಿ ಹೋಗ್ತಿದ್ದೆ. ಅಲ್ಲಿ ಹೇಳುತ್ತಿದ್ದ ಕಥೆಗಳು ಮುಸ್ಲಿಂ ಸಮುದಾಯದವರನ್ನು ದ್ವೇಷಿಸುವಂತೆ ಮಾಡ್ತಿತ್ತು. ನಾನು ಶಾಲೆಗೆ ಹೋಗಿ ನಮ್ಮ ದೇವರೇ ಶ್ರೇಷ್ಠ ಎಂದು ಮುಸ್ಲಿಂ ಸ್ನೇಹಿತನ ಜೊತೆಗೂ ಜಗಳವಾಡಿದ್ದೆ. ಮುಸ್ಲಿಂ ಸಮುದಾಯದವರ ವಿರುದ್ಧ ಬಿತ್ತಿದ್ದ ದ್ವೇಷದಿಂದ ಹೊರ ಬರಲು ನನಗೆ ಹಲವು ವರ್ಷಗಳ ಬೇಕಾಯ್ತು ಎಂದಿದ್ದಾರೆ. ಬ್ರಾಹ್ಮಣರೇ ಸಾಕಷ್ಟು ಜನ ಆರ್‌ಎಸ್‌ಎಸ್ ಕಡೆ ಆಕರ್ಷಿತರಾಗುತ್ತಾರಲ್ಲ ಎನ್ನುವ ಪ್ರಶ್ನೆಗೆ ಬ್ರಾಹ್ಮಣರದ್ದು ಸಮಸ್ಯೆ ಅಲ್ಲ. ಬ್ರಾಹ್ಮಣ ಜನರು, ಆ ವ್ಯವಸ್ಥೆ.. ನನ್ನ ಗೌಡರ ಫ್ರೆಂಡ್ಸ್, ಲಿಂಗಾಯತ ಫ್ರೆಂಡ್ಸ್, ಕೆಲ ದಲಿತರು ಕೂಡ ಬ್ರಾಹ್ಮಣ ವ್ಯವಸ್ಥೆ ಅನುಸರಿಸುತ್ತಾರೆ ಎಂದು ಕಿರಣ್ ಹೇಳಿದ್ದಾರೆ. ಗೃಹಪ್ರವೇಶ ಯಾಕೆ ಮಾಡ್ತಾರೆ ಎಂದು ನನಗೆ ಗೊತ್ತಾದ ಮೇಲೆ ಶಾಕ್ ಆಯ್ತು ಎಂದು ಕಿರಣ್ ಶ್ರೀನಿವಾಸ್ ತಿಳಿಸಿದ್ದಾರೆ. "ಹೊಸದಾಗಿ ಮನೆ ಕಟ್ಟಿದ್ದೀವಿ ಎನ್ನುವ ಕಾರಣಕ್ಕೆ ಗೃಹಪ್ರವೇಶ ಮಾಡ್ತಾರೆ. ಹೊಸದಾಗಿ ಮನೆ ಕಟ್ಟಿಸಿದ ಮೇಲೆ ಹೋಮ ಯಾಕೆ ಮಾಡ್ತೀರಾ? ಕೆಟ್ಟದು ಪರಿಹಾರ ಆಗಲಿ ಅಂತ ಮಾಡೋದಲ್ವಾ..ಮನೆಗೆ ಏನು ಕೆಟ್ಟದಾಗಿದೆ. ನನ್ನ ಪ್ರಕಾರ ಏನಂದ್ರೆ ಮನೆ ಕಟ್ಟುವ ಕಾರ್ಮಿಕನ ಜಾತಿ ಏನು? ಶೂದ್ರ ಅಥವಾ ದಲಿತರು ಆಗಿರ್ತಾರೆ. ಅವ್ರು ನಿಮ್ಮ ಬೆಡ್ ರೂಂ, ಕಿಚನ್, ಹಾಲ್, ದೇವರ ಮನೆ ಎಲ್ಲಾ ಕಡೆ ಓಡಾಡಿರ್ತಾನೆ. ಹೆಂಗೆ ಕ್ಲೀನ್ ಮಾಡ್ತೀರಾ. ತೊಳೆದ್ರೆ ಹೋಗಲ್ಲ. ಅದಕ್ಕೆ ಗೋಮೂತ್ರ ಹಾಕಿ ಶುದ್ಧಿ ಮಾಡ್ತಾರೆ ದೆವ್ವ ಭೂತ ಹೋಗಲಿ ಎಂದು ಹೋಮ ಮಾಡಲ್ಲ. ಹಾಗಿದ್ದರೆ ಹೇಳಿ ಹೋಮ ಮಾಡಬಹುದಲ್ವಾ" ಎಂದು ಕಿರಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಟ ಪ್ರಕಾಶ್ ರಾಜ್ ಯಾವುದೋ ದೇವಸ್ಥಾನಕ್ಕೆ ಹೋಗಿದ್ರು ಎಂದು ಶುಚಿ ಮಾಡಿದ್ದರು. ಹಿಂದಿನ ರಾಷ್ಟ್ರಪತಿ ದೇವಸ್ಥಾನಕ್ಕೆ ಹೋಗಿದ್ರು ಅಂತ ಗೋಮೂತ್ರ ಹಾಕಿ ಶುದ್ಧೀಕರಣ ಮಾಡಿದ್ರು. ಇದೆಲ್ಲಾ ಯಾಕೆ ಮಾಡಿದ್ರು? ಎಂದು ಕಿರಣ್ ರಾಜ್ ಪ್ರಶ್ನಿಸಿದ್ದಾರೆ. ನಾನು ಕೂಡ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ಆಗಿದ್ದೆ. ಕೆಲವರು ನಂಬಿಕೆ ಇಲ್ಲದಿದ್ದರೂ ಅಂತಹ ಸಂಪ್ರದಾಯ ಅನುಸರಿಸುತ್ತಾರೆ. ನಾನು ಇದನ್ನೆಲ್ಲಾ ನಂಬಲ್ಲ ಎಂದೆ, ನನ್ನ ಪತ್ನಿ ಕೂಡ ನಿನ್ನನ್ನು ಬೆಂಬಲಿಸ್ತೀನಿ ಅಂದ್ರು. ಆದ್ರೆ ನನ್ನ ಪೋಷಕರು ಏನು ಅಂದುಕೊಳ್ತಾರೆ ಎನ್ನುವ ಕಾಳಜಿ ಇದೆ ಅಂದ್ರು. ಮದುವೆ ಆದ್ಮೇಲೆ ಹಿತಾ ಕೂಡ ಹೇಳಿದ್ಲು. ಮೊದ್ಲೆ ಗೊತ್ತಿದ್ರೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ಆಗಬಹುದಿತ್ತು ಅಂತ. ನನಗೂ ಆಗ ಆ ಬಗ್ಗೆ ಗೊತ್ತಿರಲಿಲ್ಲ ಅಂದ್ಲು.. ನೀನು ಮದುವೆಗೆ ಒಪ್ಪಿದ್ದೇ ಸಾಕಾಗಿತ್ತು. ಇಂತಹ ಸಮಯದಲ್ಲಿ ಅದು ಬೇಡ ಇದು ಬೇಡ ಎಂದು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾಗಿ ಕಿರಣ್ ವಿವರಿಸಿದ್ದಾರೆ.More Articles