ಸಂಭಾವನೆ ವಿಚಾರಕ್ಕೆ ಕಿರಿಕ್ ಆಗಿ 'ಕರಾವಳಿ' ಸಿನಿಮಾ ವಿವಾದ ಸೃಷ್ಟಿಸಿಕೊಂಡಿತ್ತು. ಪೂರ್ತಿ ಸಂಭಾವನೆ ಕೊಡುವರೆಗೂ ನಾನು ಡಬ್ಬಿಂಗ್ ಮಾಡಲ್ಲ ಎಂದು ನಾಯಕ ಪ್ರಜ್ವಲ್ ದೇವರಾಜ್ ಪಟ್ಟು ಹಿಡಿದಿದ್ದಾರೆ. ಬೇರೆಯವರಿಂದ ಡಬ್ ಮಾಡಿಸಿ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ ನಿರ್ಮಾಪಕರು. ಆದರೆ ಪ್ರಜ್ವಲ್ ಒಪ್ಪಿಗೆ ಇಲ್ಲದೇ ಸಿನಿಮಾ ಬಿಡುಗಡೆ ಕಷ್ಟ ಕಷ್ಟ ಎನ್ನುವಂತಾಗಿದೆ.

Advertisement

ಜುಲೈ 24ರಂದು 'ಕರಾವಳಿ' ಸಿನಿಮಾ ಬಿಡುಗಡೆ ಆಗಬೇಕಿದೆ. ಇತ್ತೀಚೆಗೆ ಬಂದ ಟ್ರೈಲರ್ ಹಿಟ್ ಆಗಿದೆ. ಪ್ರಜ್ವಲ್ ವಾಯ್ಸ್ ಮಿಸ್ ಆಗಿದೆ ಎನ್ನುವುದು ಬಿಟ್ಟರೆ ಮೊದಲ ನೋಟದಲ್ಲೇ ಕುತೂಹಲ ಮೂಡಿಸುವಂತಿದೆ. ರಾಜ್ ಬಿ ಶೆಟ್ಟಿ ಕೂಡ ವಿಶೇಷ ಪಾತ್ರದಲ್ಲಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಗಲಾಟೆ ಮಾಡಿದ್ದರು. ಪ್ರಜ್ವಲ್ ವಾಯ್ಸ್ ಇಲ್ಲದೇ ಟ್ರೈಲರ್ ಬಿಡುಗಡೆ ಮಾಡಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದರು. ಪ್ರಜ್ವಲ್ ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದರು.

Advertisement

ಸದ್ಯ ವಿವಾದ ಬಗೆ ಹರಿಯುವ ಸುಳಿವು ಸಿಕ್ತಿದೆ. ಸದ್ದಿಲ್ಲದೇ ಸೆನ್ಸಾರ್ ಕೆಲಸಗಳು ಮುಗಿದಿದೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು ಚಿತ್ರದ ರನ್ ಟೈಮ್ ಕೂಡ ರಿವೀಲ್ ಆಗಿದೆ. ಈ ಹಿಂದೆ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಕಟ್ಟಿಕೊಟ್ಟಿದ್ದ ಗುರುದತ್ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತಾವೇ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ವಿವಾದ ಬಗೆ ಹರಿಯಿತು?

'ಕರಾವಳಿ' ಚಿತ್ರದಲ್ಲಿ ನಟಿಸೋಕೆ 1 ಕೋಟಿ 25 ಲಕ್ಷ ರೂ. ಸಂಭಾವನೆ ಕೊಡುವುದಾಗಿ ಪ್ರಜ್ವಲ್ ಹಾಗೂ ಗುರುದತ್ ನಡುವೆ ಮಾತುಕತೆ ನಡೆದಿದೆ. ಈಗಾಗಲೇ 1 ಕೋಟಿ ರೂ. ಸಂಭಾವನೆ ಅವರಿಗೆ ತಲುಪಿದೆ. ಇನ್ನುಳಿದ ಸಂಭಾವನೆ ಕೊಟ್ಟಿಲ್ಲ, ಜೊತೆಗೆ ಜಿಎಸ್‌ಟಿ ಹಣ ಕೂಡ ಕೊಡಬೇಕು ಎಂದು ಪ್ರಜ್ವಲ್ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೊಡ್ತೀವಿ ಮೊದಲು ಸಿನಿಮಾ ಡಬ್ಬಿಂಗ್ ಮುಗಿಸಿ ಬಿಡುಗಡೆ ಮಾಡೋಣ ಎಂದು ನಿರ್ಮಾಪಕರು ಪಟ್ಟು ಹಿಡಿದಿದ್ದಾರೆ. ಇದೇ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಪ್ರಜ್ವಲ್ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಗಮನಿಸಿದರೆ ಸಮಸ್ಯೆ ಬಗೆಹರಿಸಿಕೊಳ್ಳುವ ಮನಸ್ಸು ಮಾಡಿರುವ ಸುಳಿವು ಸಿಕ್ತಿದೆ.

Advertisement

ಪ್ರಜ್ವಲ್ ಪೋಸ್ಟ್

ಇತ್ತೀಚೆಗೆ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಪತ್ನಿ ರಾಗಿಣಿ ಶುಭ ಕೋರಿ ಪೋಸ್ಟ್ ಮಾಡಿದ್ದರು. ವಿವಾದದ ಹಿನ್ನೆಲೆಯಲ್ಲಿ ಪತಿಯ ಬೆಂಬಲಕ್ಕೆ ನಿಂತಿದ್ದರು. ನೀವು ಹೇಗೆ, ಕೆಲಸದ ಬಗ್ಗೆ ನಿಮಗೆ ಇರುವ ಶ್ರದ್ಧೆ, ಬದ್ಧತೆ ಎಂಥದ್ದು ಎನ್ನುವುದು ನಮಗೆ ಚೆನ್ನಾಗಿ ಗೊತ್ತು ಎನ್ನುವ ಅರ್ಥದಲ್ಲಿ ಬರೆದುಕೊಂಡಿದ್ದರು. ಇದೀಗ ಪ್ರಜ್ವಲ್ ಒಂದು ಪೋಸ್ಟ್ ಮಾಡಿದ್ದಾರೆ. 1 ಡಿಸೆಂಬರ್ 2024ರಂದು ನಡೆದ ಸತ್ಯಧರ್ಮ ಕಂಬಳದಲ್ಲಿ ಭಾಗಿ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ. 'ಕರಾವಳಿ' ಸಿನಿಮಾ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಚಿತ್ರ. ಈ ಸಿನಿಮಾವನ್ನು ನಿಮ್ಮೆಲ್ಲರ ತನಕ ತಲುಪಿಸಲು ನನ್ನಿಂದಾಗುವ ಪ್ರತಿಯೊಂದು ಪ್ರಚಾರವನ್ನೂ ಅದೇ ಪ್ರೀತಿ, ಅದೇ ಬದ್ಧತೆಯೊಂದಿಗೆ ಮುಂದುವರಿಸುತ್ತೇನೆ. ಕರಾವಳಿಯ ಈ ಪ್ರೀತಿ ಮತ್ತು ನಿಮ್ಮ ಬೆಂಬಲಕ್ಕೆ ಸದಾ ಋಣಿ. ಶೀಘ್ರದಲ್ಲೇ ಚಿತ್ರಮಂದಿರದಲ್ಲಿ ಭೇಟಿಯಾಗೋಣ" ಎಂದು ಬರೆದುಕೊಂಡಿದ್ದಾರೆ.

Advertisement

'ಕರಾವಳಿ' ರನ್‌ಟೈಮ್

ಪ್ರಜ್ವಲ್ ಹಾಗೂ ಗುರುದತ್ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡ್ರಾ ಎನ್ನುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು ಕನ್ನಡ ಸಿನಿಮಾಗಳ ರನ್‌ಟೈಮ್ ಬರ್ತಾ ಬರ್ತಾ ಕಮ್ಮಿ ಆಗ್ತಿದೆ. 'ಮ್ಯಾಂಗೋ ಪಚ್ಚ' ಸಿನಿಮಾ ಒಂದು ಗಂಟೆ 35 ನಿಮಿಷ ಕಾಲಾವಧಿ ಹೊಂದಿತ್ತು. 'ಕರಾವಳಿ' ಚಿತ್ರದ ರನ್‌ಟೈಮ್ ಕೇವಲ ಎರಡು ಗಂಟೆ 6 ನಿಮಿಷ ಮಾತ್ರ ಎನ್ನುವುದು ಸೆನ್ಸಾರ್ ಸರ್ಟಿಫಿಕೇಟ್ ನೋಡಿದ್ರೆ ಅರ್ಥವಾಗ್ತಿದೆ. ಚಂದ್ರಶೇಖರ್ ಬಂಡಿಯಪ್ಪ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಚಿನ್ ಬಸ್ರೂರು ಸಂಗೀತ, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಚಿತ್ರಕ್ಕಿದೆ. ಟ್ರೈಲರ್ ನೋಡಿದ ಮೇಲೆ ಸಿನಿಮಾ ನೋಡಲು ಸಾಕಷ್ಟು ಜನ ಕಾಯುತ್ತಿದ್ದಾರೆ.