ದಿನದಿಂದ ದಿನಕ್ಕೆ ಪ್ರಪಂಚದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ನಾನಾ ಬಗೆಯ ಕ್ಯಾನ್ಸರ್ ಜನರನ್ನು ಕಾಡುತ್ತಿದೆ. ಇತ್ತೀಚೆಗೆ ನಟ ಶಿವರಾಜ್‌ಕುಮಾರ್ ಕೂಡ ಮೂತ್ರಕೋಶ ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದರು. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಇದೀಗ ಖ್ಯಾತ ನಟಿ ಉಮಾಶಂಕರಿ ತಮ್ಮ ಕ್ಯಾನ್ಸರ್ ವಿರುದ್ಧ ಹೋರಾಟದ ಬಗ್ಗೆ ಬಹಿರಂಗಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಬಾಬು ಹಾಗೂ ಹಿರಿಯ ನಟಿ ಸುಮಿತ್ರಾ ಮಗಳು ಉಮಾಶಂಕರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. 2006ರಲ್ಲಿ ದುಷ್ಯಂತ್ ಎಂಬುವವರ ಜೊತೆ ಮದುವೆ ಆಗಿತ್ತು. ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕ್ಯಾನ್ಸರ್ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ. 2ನೇ ಹಂತದ ಕಿಮೊಥೆರಪಿ/ಇಮ್ಯುನೊಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಫೋಟೊ ಹಂಚಿಕೊಂಡಿದ್ದಾರೆ.
"ದಿನದಿಂದ ದಿನಕ್ಕೆ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುತ್ತಿದ್ದೇನೆ. ಕಷ್ಟದ ದಿನಗಳನ್ನು ಹೇಗೆ ನಿಭಾಯಿಸಬೇಕೆಂದು ನಾನು ಕಲಿಯುತ್ತಿದ್ದೇನೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾನು ಎಷ್ಟು ಬಲಶಾಲಿ ಎನ್ನುವುದು ಗೊತ್ತಾಗುತ್ತಿದೆ. ಸದಾ ನನ್ನೊಂದಿಗೆ ನಿಂತಿದ್ದಕ್ಕಾಗಿ ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಧೈರ್ಯವಾಗಿ ಮುನ್ನಡೆಯುತ್ತಿದ್ದೇನೆ. ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಆರೋಗ್ಯದ ಕಡೆ ಗಮನಹರಿಸುತ್ತಿದ್ದೇನೆ. ಸಂಪೂರ್ಣವಾಗಿ ಅಲ್ಲದೇ ಇದ್ದರೂ ಬದಲಾವನೆ ಗೊತ್ತಾಗುತ್ತಿದೆ" ಎಂದು ನಟಿ ಉಮಾಶಂಕರಿ ಪೋಸ್ಟ್ ಮಾಡಿದ್ದಾರೆ. 2000ನೇ ಇಸವಿಯಲ್ಲಿ 'ವೀರನದೈ' ಎಂಬ ತಮಿಳು ಸಿನಿಮಾ ಮೂಲಕ ಉಮಾಶಂಕರಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ತಮಿಳು, ತೆಲುಗಿನ ಒಂದಷ್ಟು ಸಿನಿಮಾಗಳಲ್ಲಿ ಅವರು ಮಿಂಚಿದ್ದರು. 2006ರಲ್ಲಿ ಉಪೇಂದ್ರ ನಟನೆಯ 'ಉಪ್ಪಿದಾದಾ MBBS' ಸಿನಿಮಾ ಮೂಲಕ ಉಮಾಶಂಕರಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಟಿ. ಎಸ್ ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. 4 ವರ್ಷಗಳ ಹಿಂದೆ ಅಜಿತ್ ನಟನೆಯ 'ವಾಲಿಮೈ' ಚಿತ್ರದಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು. 'ಚಿಕ್ಕಮ್ಮ' ಹಾಗೂ 'ವಲ್ಲಿ' ಎಂಬ ಎರಡು ಧಾರಾವಾಹಿಗಳಲ್ಲಿ ಕೂಡ ಉಮಾಶಂಕರಿ ನಟಿಸಿದ್ದರು. ಮದುವೆ ಬಳಿಕ ನಟಿ ಉಮಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಮದುವೆ ನಂತರ ಎರಡ್ಮೂರು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ವಿಷಯ ತಿಳಿಸಿದ್ದು ಅಭಿಮಾನಿಗಳು ಶಾಕ್ ಆಗಿದ್ದಾರೆ.More Articles