ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇತ್ತೀಚೆಗೆ ಟ್ರೈಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಆದರೆ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಗಲಾಟೆ ಮಾಡಿದ್ದರು. ಆದರೆ ಈ ಗಲಾಟೆಗೆ ಪ್ರಜ್ವಲ್ ದೇವರಾಜ್ ಸಹಾಯಕರು ಕುಮ್ಮಕ್ಕು ನೀಡಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಸಿನಿಮಾ ಜುಲೈ 24ರಂದು ಬಿಡುಗಡೆ ಆಗಬೇಕಿದೆ. ಸಂಭಾವನೆ ವಿಚಾರದಲ್ಲಿ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಗುರುದತ್ ಗಾಣಿಗ ಹಾಗೂ ನಾಯಕ ನಟ ಪ್ರಜ್ವಲ್ ದೇವರಾಜ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಸಂಭಾವನೆ ಬಾಕಿ ಕೊಡುವವರೆಗೂ ಡಬ್ಬಿಂಗ್ ಮಾಡಲ್ಲ ಎಂದು ಪ್ರಜ್ವಲ್ ಪಟ್ಟು ಹಿಡಿದಿದ್ದಾರೆ. ಬೇರೆಯವರಿಂದ ಡಬ್ ಮಾಡಿಸಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಜುಲೈ 7ರಂದು ಗಾಂಧಿನಗರದ ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೀತು. ಕಾರ್ಯಕ್ರಮಕ್ಕೆ ಪ್ರಜ್ವಲ್ ದೇವರಾಜ್ ಗೈರಾಗಿದ್ದರು.

Advertisement

ಟ್ರೈಲರ್ ಪ್ರದರ್ಶನದ ವೇಳೆ ಪ್ರಜ್ವಲ್ ಅಭಿಮಾನಿಗಳು ಗಲಾಟೆ ಮಾಡಿದ್ದರು. ಪ್ರಜ್ವಲ್ ವಾಯ್ಸ್ ಇಲ್ಲದೇ ಬೇರೆಯವರ ವಾಯ್ಸ್ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೂಗಾಡಿದ್ದರು. ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಗಲಾಟೆ ವಿಚಾರ ಪೊಲೀಸ್ ದೂರು ನೀಡು ಹಂತಕ್ಕೆ ಹೋಗಿದೆ. ಬೇಕೆಂದೇ ಗುಂಪು ಕಟ್ಟಿಕೊಂಡು ಬಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಬೆದರಿಕೆ ಹಾಕಲಾಗಿದೆ ಎಂದು ಪ್ರಜ್ವಲ್ ಆಪ್ತರ ವಿರುದ್ಧ ಚಿತ್ರದ ಕಾರ್ಯಕಾರಿ ನಿರ್ಮಾಪಕ ಅಂಕಿತ್ ದೂರು ನೀಡಿದ್ದಾರೆ. ಅವಿನಾಶ್, ದಿಲೀಪ್ ಹಾಗೂ ನಂದಕುಮಾರ್ ಎಂಬ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Advertisement

ಗಲಾಟೆ ಮಾಡಿದವರಲ್ಲಿ ಅವಿನಾಶ್, ದಿಲೀಪ್ ಹಾಗೂ ನಂದಕುಮಾರ್ ಮೂವರು ಪ್ರಜ್ವಲ್ ಅಭಿಮಾನಿಗಳು ಮಾತ್ರವಲ್ಲ, ಆಪ್ತ ಸಹಾಯಕರು. ಅವರೊಟ್ಟಿಗೆ ಕೆಲಸ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾಗಿದೆ. ಸಂಭಾವನೆ ವಿಚಾರಕ್ಕೆ ಸ್ವತಃ ಪ್ರಜ್ವಲ್ ಆಪ್ತರ ಮೂಲಕ ಗಲಾಟೆ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು ಗಲಾಟೆ ಮಾಡಿದವರು ಪ್ರಜ್ವಲ್ ಆಪ್ತರೇ ಎನ್ನುವ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದ್ದಾರೆ.