ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಬಹುನಿರೀಕ್ಷೆಯ ಕೆಜಿಎಫ್-2 ಟೀಸರ್ ನಂ.1 ಟ್ರೆಂಡಿಂಗ್ ನಲ್ಲಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡು ಟೀಸರ್ ದಾಖಲೆ ನಿರ್ಮಿಸಿದೆ.
ಇಡೀ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿರುವ ಚಿತ್ರದ ಟೀಸರ್ ಗೆ ಈ ಪರಿ ಪ್ರತಿಕ್ರಿಯೆ ಸಿಕ್ಕಿರುವುದು ನೋಡಿ ಭಾರತೀಯ ಸಿನಿಮಾರಂಗ ದಂಗ್ ಆಗಿದೆ. ಕನ್ನಡ ಚಿತ್ರದ ಟೀಸರ್ ವೊಂದು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರೀತಿಗೆ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ.
ಟೀಸರ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟೀಸರ್ ಸಂಬಂಧ ಯಶ್ ಗೆ ನೋಟಿಸ್ ನೀಡಿದೆ. ಟೀಸರ್ ನಲ್ಲಿ ಯಶ್ ಗನ್ ನಿಂದ ಸಿಗರೇಟ್ ಹಚ್ಚುವ ದೃಶ್ಯವಿದೆ. ಇದಕ್ಕೆ ನಿಯಮದ ಪ್ರಕಾರ 'ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ' ಎನ್ನುವ ಕ್ಯಾಪ್ಷನ್ ಹಾಕಬೇಕು. ಆದರೆ ಟೀಸರ್ ನಲ್ಲಿ ಹಾಕಿಲ್ಲ. ಇದು ಧೂಮಪಾನ ಪ್ರಚೋದಿಸುತ್ತಿದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹಾಗಾಗಿ ಈ ದೃಶ್ಯವನ್ನು ತೆಗೆದು ಹಾಕುವಂತೆ ಹೇಳಿದೆ.