ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಇನ್ನು 40 ದಿನ ಬಾಕಿಯಿದೆ. 'ತಬಾಹಿ' ಸಾಂಗ್ ಮೂಲಕ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಶೀಘ್ರದಲ್ಲೇ ಇನ್ನುಳಿದ ಸಾಂಗ್ಸ್ ರಿಲೀಸ್ ಮಾಡುವ ತಯಾರಿ ನಡೀತಿದೆ. ಇದರ ನಡುವೆ ಆಫ್‌ಲೈನ್ ಪ್ರಚಾರ ಶುರುವಾಗುತ್ತಿದೆ. ಕಟೌಟ್‌ಗಳ ನಿರ್ಮಾಣ ಜೋರಾಗಿದೆ. ಸಾಕಷ್ಟು ಕಡೆಗಳಲ್ಲಿ ಚಿತ್ರದ ಸ್ಟ್ಯಾಂಡಿಸ್ ಹಾಕಲಾಗಿದೆ. ಸದ್ಯ ಸಿನಿಮಾ ಪ್ರಚಾರಕ್ಕಾಗಿ ನಟ, ನಿರ್ಮಾಪಕ ಯಶ್ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಆಗಸ್ಟ್ 26ಕ್ಕೆ 'ಟಾಕ್ಸಿಕ್' ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ದೊಡ್ಡದಾಗಿ ಬಿಡುಗಡೆ ಆಗಲಿದೆ. ವಿದೇಶಗಳಲ್ಲಿ ಯಾರು ಸಿನಿಮಾ ವಿತರಣೆ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಹಾಲಿವುಡ್ ಅಂಗಳದಲ್ಲಿ ಬಹಳ ದೊಡ್ಡದಾಗಿ ಸಿನಿಮಾ ಪ್ರಚಾರ, ಬಿಡುಗಡೆ ನಡೆಯಲಿದೆ. ಅದೇ ಕಾರಣಕ್ಕೆ ಯಶ್ ಹೆಚ್ಚಿನ ಸಮಯ ತೆಗೆದುಕೊಂಡಿದ್ದರು. ನಿಧಾನವಾಗಿ ಸಿನಿಮಾ ಪ್ರಚಾರ, ರಿಲೀಸ್ ಕಸರತ್ತು ಶುರುವಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ಸೇರಿ ಹಲವು ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಲಿದೆ.
ಬೆಂಗಳೂರಿನ ಆನಂದ್ ಆರ್ಟ್ಸ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಕಟೌಟ್ ತಯಾರಿ ನಡೀತಿದೆ. 150ಕ್ಕೂ ಅಧಿಕ ಕಟೌಟ್ ಸಿದ್ಧವಾಗ್ತಿದೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಿಗೆ ಕೂಡ ಇಲ್ಲಿಂದಲೇ ಕಟೌಟ್‌ಗಳು ಹೋಗಲಿದೆ. ಆತ್ಮೀಯ ಕನ್ನಡಿಗ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಕಟೌಟ್ ತಯಾರಕ ಆನಂದ್ ಮಾತನಾಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಕ್ರೇಜ್ ಬಗ್ಗೆ ವಿವರಿಸಿದ್ದಾರೆ. ಅಭಿಮಾನಿಗಳೇ ಸಾಕಷ್ಟು ಕಟೌಟ್ ಮಾಡಿ ಕೊಡುವಂತೆ ಕೇಳಿದ್ದಾರೆ ಎಂದು ತಿಳಿಸಿದ್ದಾರೆ. ಕನ್ನಡದ ಹಲವು ಸಿನಿಮಾಗಳಿಗೆ ಆನಂದ್ ಮತ್ತು ತಂಡ ಕಟೌಟ್ ತಯಾರಿಸುತ್ತಾ ಬರ್ತಿದೆ. ಯಶ್, ದರ್ಶನ್, ಸುದೀಪ್, ಪುನೀತ್, ಶಿವಣ್ಣ ಹೀಗೆ ಎಲ್ಲಾ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ವೇಳೆ ಚಿತ್ರಮಂದಿರಗಳ ಮುಂದೆ ಕಟೌಟ್‌ಗಳನ್ನು ನಿಲ್ಲಿಸಲು ಆನಂದ್ ಆರ್ಟ್ಸ್ ಶ್ರಮ ಮರೆಯುವಂತಿಲ್ಲ. ಸದ್ಯ 'ಟಾಕ್ಸಿಕ್' ಸಿನಿಮಾ ಕಟೌಟ್‌ಗಳ ನಿರ್ಮಾಣ ಕೆಲಸ ಹಗಳಿರುಳು ಸಾಗಿದೆ. ಎರಡ್ಮೂರು ತಿಂಗಳಿಂದ ರಾಯನ ಕಟೌಟ್ ಸಿದ್ಧವಾಗ್ತಿದೆ. 3 ತಿಂಗಳ ಹಿಂದೆಯೇ ತುಮಕೂರಿನಲ್ಲಿ ಒಂದು ಕಟೌಟ್ ಕಟ್ಟಿದ್ದೀವಿ ಎಂದು ಆನಂದ್ ಮಾಹಿತಿ ಕೊಟ್ಟಿದ್ದಾರೆ. ಈಗಾಗಲೇ ಮಾಲ್‌ಗಳಲ್ಲಿ 'ಟಾಕ್ಸಿಕ್' ಚಿತ್ರದ ಸ್ಯಾಂಡಿಸ್ ಹಾಕಲಾಗಿದೆ. ರಾಯ ಹಾಗೂ ಟಿಕೆಟ್ ಖಡಕ್ ಲುಕ್‌ನಲ್ಲಿರುವ ಸ್ಯಾಂಡಿಸ್ ಗಮನ ಸೆಳೆಯುತ್ತಿದೆ. ಬೆಂಗಳೂರು ಮಾತ್ರವಲ್ಲ ಮುಂಬೈ ಮಲ್ಟಿಪ್ಲೆಕ್ಸ್‌ಗಳ ಮುಂದೆ ಕೂಡ ಯಶ್ ಸ್ಯಾಂಡಿಸ್ ಹಾಕಲಾಗಿದೆ. 'ಕೆಜಿಎಫ್- 2' ಸಿನಿಮಾ ಬಿಡುಗಡೆ ವೇಳೆ ಮುಂಬೈ ಚಿತ್ರಮಂದಿರದ ಮುಂದೆ ರಾಕಿಭಾಯ್ 102 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದು ಗೊತ್ತೇಯಿದೆ. ಮಲ್ಟಿಪ್ಲೆಕ್ಸ್ ಮುಂದೆ ಹಾಕಿರುವ 'ಟಾಕ್ಸಿಕ್' ಸ್ಯಾಂಡಿ ಫೋಟೊ ಕ್ಲಿಕ್ಕಿಸಿ ನಟಿ ತಾರಾ ಸುತಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆ ಮುಂಬೈಗೆ ತೆರಳಿದ್ದಾರೆ. 'ಟಾಕ್ಸಿಕ್' ಚಿತ್ರದ ಪ್ರಚಾರಕ್ಕಾಗಿ ಅಲ್ಲಿಗೆ ಹೋಗಿದ್ದಾರೆ ಎನ್ನಲಾಗ್ತಿದೆ. ಹಿಂದಿ ಮಾಧ್ಯಮಗಳಿಗೆ ಸಂದರ್ಶನ ನೀಡಲು ಸಿನಿಮಾ ಪ್ರಚಾರ ಮಾಡಲು ಯಶ್ ಅಲ್ಲಿ ಇರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. 'ಕೆಜಿಎಫ್' ಸಿನಿಮಾ ಬಿಡುಗಡೆ ವೇಳೆ ಕೂಡ ಯಶ್ ಮುಂಬೈನಲ್ಲಿ ಬಹಳ ಪ್ರಚಾರ ಮಾಡಿದ್ದರು. ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ಆದರೆ 'ಕೆಜಿಎಫ್' ಸೀಕ್ವೆಲ್ ಬಿಡುಗಡೆ ವೇಳೆ ಅಷ್ಟೇನು ಸಂದರ್ಶನಗಳನ್ನು ನೀಡಿರಲಿಲ್ಲ. ತಿಂಗಳಿಗೂ ಮುನ್ನ 'ಟಾಕ್ಸಿಕ್' ಸಿನಿಮಾ ಟ್ರೈಲರ್ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಬೆಂಗಳೂರಿನಲ್ಲಿ ದೊಡ್ಡಮಟ್ಟದ ಈವೆಂಟ್ ಮಾಡಿ ಟ್ರೈಲರ್ ರಿಲೀಸ್ ಮಾಡ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ.More Articles