Rating:
1.5/5
Star Cast: ಆಲಿಯಾ ಭಟ್, ಶರ್ವರಿ, ಬಾಬಿ ಡಿಯೋಲ್, ಅನಿಲ್ ಕಪೂರ್, ಹೃತಿಕ್ ರೋಷನ್ (ವಿಶೇಷ ಪಾತ್ರ) ಮುಂತಾದವರು
Director: ಶಿವ ರವೈಲ್

ಹಿಂದಿ ಚಿತ್ರರಂಗದ ದೇಶಭಕ್ತಿ ಈ ಹಿಂದೆ ಬೆಳ್ಳಿಪರದೆಯ ಮೇಲೆ ಹಲವಾರು ಬಾರಿ ಅನಾವರಣವಾಗಿದೆ. ಆದರೆ, ಪ್ರತಿ ಬಾರಿ ಅಲ್ಲಿ ಕಾಣಿಸುವುದು ಅದೇ ಹಳೆಯ ಸವಕಲು ಕಥೆ. ಅದರಲ್ಲಿಯೂ ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಲ್ಲಿ ಒಂದಾದ ಯಶ್ ರಾಜ್ ಫಿಲ್ಮ್ಸ್ ಅವರ ಸಿನಿಮಾಗಳಲ್ಲಂತೂ ದೇಶಭಕ್ತಿ ಕಾಣಿಸುವುದೇ ಇಲ್ಲ.

Advertisement

ಮೇಲ್ನೋಟಕ್ಕೆ ತಮ್ಮ ಚಿತ್ರದ ದೇಶದ ಕುರಿತು ಇದೆ ಎಂದು ಆದಿತ್ಯ ಚೋಪ್ರಾ ಆಂಡ್ ಕಂಪನಿ ಮೊದಲಿಂದ ಹೇಳುತ್ತಲೇ ಬಂದಿದ್ದಾರಾದರೂ, ಅಲ್ಲಿ ದೇಶಭಕ್ತಿ ಕಡಿಮೆ ಬದಲಿಗೆ ಸಿನಿಮಾದೂದಕ್ಕೂ ರೊಮ್ಯಾನ್ಸ್ ಮತ್ತು ಬಿಕಿನಿ ದೃಶ್ಯಗಳೇ ಹೆಚ್ಚಿರುತ್ತವೆ.

Advertisement

ಸಿಕ್ಸ್ ಪ್ಯಾಕ್ ಹೀರೋ.. ಕಾರ್ಗೋ ಜಾಕೆಟ್.. ಟೈಮ್ ಬಾಂಬ್.. ಗಡಿಯಾಚೆ ಒಬ್ಬ ವಿಲನ್.. ಇದರ ನಡುವೆ ಯುರೋಪನ ಸುಂದರ ತಾಣದಲ್ಲಿ ನಾಯಕ-ನಾಯಕಿಯ ಪ್ರೇಮ ಗೀತೆ. ಈ ಸಿದ್ದ ಸೂತ್ರದ ಹೊರತಾಗಿ ಯಶ್‌ ರಾಜ್‌ನ ಒಡೆಯ ಆದಿತ್ಯ ಚೋಪ್ರಾ ಯಾವತ್ತು ಯೋಚನೆ ಮಾಡಲು ಹೋಗಿಯೇ ಇಲ್ಲ.

ಆದರೆ ಈ ಮಾತುಗಳಿಗೆ ಅಪವಾದ ಎಂಬಂತೆ ಅದ್ಯಾಕೋ ಈ ಬಾರಿ ಆದಿತ್ಯ ಚೋಪ್ರಾ ''ಅಲ್ಫಾ'' ಎಂಬ ಅಪರೂಪದ ಪ್ರಯತ್ನ ಮಾಡಿದ್ದಾರೆ. ಆದರೆ, ಕಾಲ ಬದಲಾಗಿದೆ. ''ಧುರಂಧರ್'' ನಂತರ ದೇಶಭಕ್ತಿ ಚಿತ್ರಗಳ ವ್ಯಾಖ್ಯಾನ ಮತ್ತು ಪ್ರೇಕ್ಷಕರು ನೋಡುವ ದೃಷ್ಟಿಕೋನ ಬದಲಾಗಿದೆ.

Advertisement

ಆದಿತ್ಯ ಚೋಪ್ರಾ ಅವರ ಈ ದೂರ ದೃಷ್ಟಿಯ ಕೊರತೆಯಿಂದ ''ಅಲ್ಪಾ'' ಸೊರಗಿದೆ. ಮತ್ತದೇ ಗೊತ್ತು ಗುರಿ ಇಲ್ಲದ ಕಥೆ ಕಣ್ತುಂಬಿಕೊಳ್ಳುವ ದೌರ್ಭಾಗ್ಯ ಪ್ರೇಕ್ಷಕರಿಗೆ ಸಿಕ್ಕಿದೆ. ಹಾಗಿದ್ದರೆ ಹೇಗಿದೆ ''ಅಲ್ಫಾ'' ಎಂದು ತಿಳಿಯಲು ಮುಂದೆ ಓದಿ.

ಕಥಾ ಹಂದರ

ಸೀತಾ (ಆಲಿಯಾ ಭಟ್) ಕರ್ನಲ್ ಲುತ್ರಾ (ಅನಿಲ್ ಕಪೂರ್) ಅವರ ಮಗಳು. ಆದರೆ, ಈಕೆಗೆ ತನ್ನ ತಂದೆಯ ಪ್ರೀತಿ ಸಿಗುವುದೇ ಇಲ್ಲ. ಯಾಕೆಂದರೆ ಸೀತಾ ಚಿಕ್ಕವಳಿದ್ದಾಗಲೇ ಕರ್ನಲ್ ಲುತ್ರಾದಿಂದ ಕರ್ನಲ್ ಫತೇಹ್ (ಬಾಬಿ ಡಿಯೋಲ್) ಕಿಡ್ನಾಪ್ ಮಾಡಿರುತ್ತಾನೆ. ''ಅಲ್ಪಾ ಸೀರಮ್ ಪ್ರೋಗ್ರಾಂ''ಗೆ ಆಕೆಗೆ ಬೇಕಾದ ತರಬೇತಿಯನ್ನೆಲ್ಲ ನೀಡಿರುತ್ತಾನೆ.

Advertisement

ತನ್ನ ನಿಜವಾದ ತಂದೆ ಕರ್ನಲ್ ಲುತ್ರಾ ಎಂದು ತಿಳಿಯದ ''ಅಲ್ಪಾ'' ಸಾಕು ತಂದೆ ಕರ್ನಲ್ ಫತೇಹ್‌ನನ್ನೇ ನಿಜವಾದ ತಂದೆ ಎಂದುಕೊಂಡಿರುತ್ತಾಳೆ. ಫತೇಹ್ ಗರಡಿಯಲ್ಲಿಯೇ ಪಳಗುತ್ತಾಳೆ. ಆದರೆ, ಮುಂದೆ ಅಂದರೆ 20 ವರ್ಷಗಳ ನಂತರ ಸೀತಾ ಎದುರು ಫತೇಹ್ ಮುಖವಾಡ ಕಳಚುತ್ತೆ.

ಇಲ್ಲಿಂದ ತನ್ನನ್ನು ಸಾಕಿ ಸಲುಹಿದ ಫತೇಹ್‌ನನ್ನೇ ಕೊಲ್ಲುವ ಸ್ಕೆಚ್ ಹಾಕುತ್ತಾಳೆ ಸೀತಾ. ಆದರೆ, ಇದೇ ಸಮಯದಲ್ಲಿ ಕಥೆ ಮತ್ತೊಂದು ಮಗ್ಗಲಿನತ್ತ ಹೊರಳುತ್ತೆ. ಅಲ್ಲಿಯವರೆಗೆ ತೆರೆಯ ಮೇಲೆ ಕಾಣಿಸಿದ ಸಾಹಸಗಾಥೆ ಕಣ್ಮರೆಯಾಗಿ ಏಕಾಏಕಿ ಭಾವನಾತ್ಮಕವಾದ ಮೆರವಣಿಗೆ ಶುರುವಾಗುತ್ತೆ.

ತನ್ನ ತಂದೆ ಮತ್ತು ತಂಗಿ ದುರ್ಗಾ (ಶರ್ವರಿ ವಾಘ್) ಜೊತೆ ಸಂಪರ್ಕ ಸಾಧಿಸುವ ಸೀತಾ ಬದುಕಿನಲ್ಲಿನ ಗತಕಾಲದ ಪುಟುಗಳು ಕಣ್ಣೆದುರು ಬರುತ್ತವೆ. ಸತ್ತು ಹೋದ ತಾಯಿ (ದಿಯಾ ಮಿರ್ಜಾ) ಕಳೆದು ಹೋದ ಬಾಲ್ಯ, ತಂದೆಯ ಅಪರಾಧ ಪ್ರಜ್ಞೆ, ಹೀಗೆ ಮೆಗಾ ಧಾರಾವಾಹಿಯ ಅನುಭವ ಚಿತ್ರ ನೀಡುತ್ತಾ ಹೋಗುತ್ತೆ. ಇದರ ಮೇಲೆಯೂ ಕುತೂಹಲ ನಿಮ್ಮಲ್ಲಿ ಇದ್ದರೆ ನೀವು ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಬಹುದು.

Advertisement

ಪ್ಲಸ್ & ಮೈನಸ್ ಪಾಯಿಂಟ್ಸ್

ಆಲಿಯಾ ಭಟ್ ಈ ಚಿತ್ರದ ಆಕರ್ಷಣೆಯೂ ಹೌದು. ವಿಕರ್ಷಣೆಯೂ ಹೌದು. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆಯುವ ಪ್ರಯತ್ನವನ್ನು ಆಲಿಯಾ ಮಾಡಿದ್ದಾರೆ. ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಕಷ್ಟು ಬೆವರು ಕೂಡ ಸುರಿಸಿದ್ದಾರೆ. ಇನ್ನು ಎಲ್ಲರಿಗೆ ಗೊತ್ತಿರುವಂತೆ ಈಗಾಗಲೇ ಸಾಬೀತು ಆದಂತೆ ಆಲಿಯಾ ಅತ್ಯುತ್ತಮವಾದ ನಟಿ. ಇಲ್ಲಿಯೂ ಇವರ ಅಭಿನಯದ ಕುರಿತು ಕೆಮ್ಮುವಂತೆ ಇಲ್ಲ. ಆದರೆ ಆದಾಗ್ಯೂ ಆಲಿಯಾಗೆ ಈ ಪಾತ್ರ ಹೊಂದುವುದಿಲ್ಲ. ನೋಡಲು ಚಿಕ್ಕ ಹುಡುಗಿಯಂತೆ ಕಾಣಿಸುವ ಆಲಿಯಾ ಘಟಾನುಘಟಿಗಳಿಗೆಲ್ಲ ಮಣ್ಣು ಮುಕ್ಕಿಸುವ ದೃಶ್ಯಗಳು ನಂಬಲರ್ಹ.

Advertisement

ಆಲಿಯಾ ಭಟ್ ಅವರನ್ನು ಹೊರತು ಪಡಿಸಿದರೆ ಬೇರೆ ಪಾತ್ರಗಳು ಕೂಡ ಅಷ್ಟೇ. ಪೇಲವ ಬರವಣಿಗೆ ಎಲ್ಲ ಪಾತ್ರಗಳನ್ನು ಇಲ್ಲಿ ಸಾಯಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಬಂದ ''ಮೇ ವಾಪಸ್ ಆವೂಂಗಾ'' ಚಿತ್ರದಲ್ಲಿನ ತಮ್ಮ ಅಭಿನಯದಿಂದ ಶರ್ವರಿ ಹಲವರ ಹೃದಯ ಗೆದ್ದಿದ್ದರು. ಆದರೆ, ಇಲ್ಲಿ ಇವರು ಕೇವಲ ಐ ಕ್ಯಾಂಡಿ.

ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎಂದು ಹೇಳಲು ತಯಾರಾದ ಈ ಚಿತ್ರದಲ್ಲಿ ಶರ್ವರಿ ಅವರನ್ನು ಕೇವಲ ಗ್ಲಾಮರಸ್ ಆಗಿ ತೋರಿಸಬೇಕೆಂದು ನಿರ್ದೇಶಕರು ಶಪಥ ಮಾಡಿದಂತೆ ಇದೆ ಇವರ ಪಾತ್ರ ಪೋಷಣೆ. ಬಿಕಿನಿ ದೃಶ್ಯದ ಅವಶ್ಯಕತೆಯ ಕುರಿತು ಖುದ್ದು ಆದಿತ್ಯ ಚೋಪ್ರಾ ಅಥವಾ ನಿರ್ದೇಶಕ ಶಿವ್ ರಾವೈಲ್ ಅವರೇ ಉತ್ತರ ಕೊಡಬೇಕು.

ಇನ್ನು ಬಾಬಿ ಡಿಯೋಲ್ ತಮ್ಮ ''ಅನಿಮಲ್'' ಚಿತ್ರವನ್ನು ನೆನಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಗಲೇ ಹೇಳಿದಂತೆ ಬರವಣಿಗೆ ಇವರಿಗೆ ಸಾಥ್ ನೀಡಿಲ್ಲ. ಅನಿಲ್ ಕಪೂರ್ ಪಾತ್ರ ಕೇವಲ ಡೈಲಾಗ್ ಹೊಡೆಯಲು ಮಾತ್ರ ಸೀಮಿತ.

ಈ ಸಲ ಸೀತಾ ಲಂಕೆನ ತಾನೇ ಸುಡ್ತಾಳೆ ಎನ್ನುವ ಡೈಲಾಗ್ ಹೊರತು ಪಡಿಸಿದರೆ ಬೇರೆ ಯಾವ ಸಂಭಾಷಣೆಯಲ್ಲಿಯೂ ಪಂಚ್ ಇಲ್ಲ. ಯಾವ ಸಂಭಾಷಣೆ ಕೂಡ ನೆನಪಿನಲ್ಲಿಯೂ ಉಳಿಯುವುದಿಲ್ಲ. ಬದಲಿಗೆ ಕಿರಿಕಿರಿಯನ್ನುಂಟು ಮಾಡುತ್ತವೆ.

ವಿಶೇಷ ಪಾತ್ರದಲ್ಲಿ ಹೃತಿಕ್ ರೋಷನ್

ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರನ್ನು ಎಳೆದು ತರುವ ಅವಶ್ಯಕತೆಯಾದರೂ ಏನಿತ್ತು..? ಎನ್ನುವ ಪ್ರಶ್ನೆ ಚಿತ್ರ ನೋಡುವಾಗ ಕಾಡದಿರದು. ಪ್ರೇಕ್ಷಕರು ವಿಷನ್ ಹೊಡೆಯಲಿ ಎಂದು ಇವರನ್ನು ಬಲವಂತವಾಗಿ ಇಲ್ಲಿ ಕರೆತಂದು ಕೂರಿಸಲಾಗಿದೆ. ಕಥೆಗೆ ನಯಾಪೈಸೆ ಉಪಯೋಗ ಆಗಿಲ್ಲ. ಆದಿತ್ಯ ಚೋಪ್ರಾಗೆ ಕೇವಲ ತಮ್ಮ ಸ್ಪೈ ಯೂನಿವರ್ಸ್ ಹೇಗಾದರು ಕಂಪ್ಲೀಟ್ ಮಾಡಬೇಕಷ್ಟೇ.

ಸಮಾಧಾನದ ವಿಷಯ

ಪ್ರೇಕ್ಷಕರ ಪುಣ್ಯ. ಈ ಚಿತ್ರದಲ್ಲಿ ತಮ್ಮ ಹಿಂದಿನ ಚಿತ್ರಗಳಂತೆ ದೇಶಭಕ್ತಿಯ ನಡುವೆ ಲವ್ ಸ್ಟೋರಿಯನ್ನು ತುರುಕುವ ಪ್ರಯತ್ನವನ್ನು ಇಲ್ಲಿ ವೈ.ಆರ್.ಎಫ್ ಸಂಸ್ಥೆ ಮಾಡಿಲ್ಲ. ಇನ್ನು ಈ ಹಿಂದೆ ಎಲ್ಲ ಪಾಕಿಸ್ತಾನವನ್ನು ಯಶ್ ರಾಜ್ ಫಿಲ್ಮ್ಸ್‌ನಲ್ಲಿ ಶತ್ರು ರಾಷ್ಟ್ರ ಎಂದೇ ಹೇಳಲಾಗುತ್ತಿತ್ತು. ಆದರೆ, ''ಧುರಂಧರ್'' ಪ್ರಭಾವ. ಇಲ್ಲಿ ಈ ಬಾರಿ ಶತ್ರುರಾಷ್ಟ್ರ ಎಂದು ಹೇಳದೇ ನೇರವಾಗಿ ಪಾಕಿಸ್ತಾನ್ ಎಂದು ಹೇಳಲಾಗಿದೆ. ಗಡಿಯಾಚೆಗಿನ ಆಪರೇಷನ್‌ಗಳ ಬಗ್ಗೆ ನೇರವಾಗಿ ಮಾತಾಡಿದ್ದಾರೆ. ಹಳೇ ಸಿನಿಮಾಗಳ ತರಹ ''ಅಮನ್ ಕಿ ಆಶಾ'' ಎಂದೆಲ್ಲಾ ಇಲ್ಲಿ ಅಡ್ಡ ಗೋಡೆ ಮೇಲೆ ದೀಪ ಇಡುವಂತಹ ಸನ್ನಿವೇಶಗಳಿಲ್ಲ. ಅಷ್ಟರ ಮಟ್ಟಿಗೆ ಆದಿತ್ಯ ಚೋಪ್ರಾ ಅಪ್‌ಡೇಟ್ ಆಗಿದ್ಧಾರೆ.

ಕೊನೆಯ ಮಾತು

ಒಟ್ನಲ್ಲಿ ''ಬ್ಲಾಕ್ ವಿಡೋ'' ತರಹ ಇಬ್ಬರು ಸೂಪರ್ ಹೀರೋ ರೇಂಜ್‌ನ ಕಿಲ್ಲರ್ ಲೇಡಿಗಳ ಜೊತೆ ತಮ್ಮ ಸ್ಪೈ ಯೂನಿವರ್ಸ್ ಸೃಷ್ಟಿಸಬೇಕೆಂಬ ಆಲೋಚನೆ ಚೆನ್ನಾಗಿದೆ. ಐಡಿಯಾ ಪೇಪರ್ ಮೇಲಂತೂ ಸಖತ್ ಎಕ್ಸೈಟಿಂಗ್ ಆಗಿ ಕಾಣಿಸುತ್ತೆ. ಆದರೆ, ಆ್ಯಕ್ಷನ್ ಥ್ರಿಲ್ಲರ್‌ಗೆ ಬೇಕಾದ ಕುತೂಹಲ, ಕಥೆಯಲ್ಲಿನ ಧಮ್ ಈ ಚಿತ್ರದಲ್ಲಿ ಇಲ್ಲ. ಚಿತ್ರಮಂದಿರದಲ್ಲಿ ನೋಡಬೇಕಾದ ಸಿನಿಮಾ ಇದಲ್ಲ. ಓಟಿಟಿಗೆ ಬಂದಾಗ ಆಲಿಯಾ ಆ್ಯಕ್ಷನ್‌ಗೋಸ್ಕರ ಒಂದು ಸಲ ನೋಡಬಹುದು.