Rating:
1.0/5
Star Cast: ‍ಅಜಯ್ ದೇವಗನ್, ರಿತೇಶ್ ದೇಶಮುಖ್, ಅರ್ಷದ್ ವಾರ್ಸಿ, ಜಾವೇದ್ ಜಾಫ್ರಿ, ರವಿಕಿಶನ್, ಸಂಜಯ್ ಮಿಶ್ರಾ, ಅಂಜಲಿ ಆನಂದ್, ಸಂಜಿದಾ ಶೇಖ್ ಮುಂತಾದವರು
Director: ಇಂದ್ರಕುಮಾರ್

ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮೊದಲು ಬಾಲಿವುಡ್‌ನವರ ಪಾರುಪಥ್ಯ ಇತ್ತು. ಒಂದು ವರದಿಯ ಪ್ರಕಾರ 2019ರಲ್ಲಿ ಬಾಲಿವುಡ್‌ನ ಒಂದು ವರ್ಷದ ಗಳಿಕೆ 16 ಸಾವಿರ ಕೋಟಿಯವರೆಗೆ ತಲುಪಿತ್ತು. ಆದರೆ ಕೊರೊನಾ ನಂತರ ಬಾಲಿವುಡ್‌ಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಪುಟಿದೇಳುವ ಯಾವ ಲಕ್ಷಣ ಕೂಡ ಹಿಂದಿ ಚಿತ್ರರಂಗದಲ್ಲಿ ಕಂಡು ಬರುತ್ತಿಲ್ಲ. ಬಾಲಿವುಡ್‌ನ ಈ ಅವನತಿಗೆ ಹಲವಾರು ಕಾರಣಗಳಿವೆ. ಆ ಪೈಕಿ ಕತೆಯ ಸಮಸ್ಯೆ ಕೂಡ ಒಂದು.

Advertisement

ಕೊರೊನಾ ನಂತರ ಜನ ಭಿನ್ನ ವಿಭಿನ್ನ ವಿಡಿಯೋಗಳನ್ನು ನೋಡಿದ್ದಾರೆ. ಹೊಸಬಗೆಯ ಪರಿಕಲ್ಪನೆಯ ಕಥೆಗಳನ್ನು ಕಣ್ತುಂಬಿಕೊಂಡಿದ್ದಾರೆ. ಆದರೆ ಪ್ರೇಕ್ಷಕರಿಗೆ ಬೇಕಾದ ರೀತಿಯಲ್ಲಿ ಬಾಲಿವುಡ್ ಬದಲಾಗುತ್ತಿಲ್ಲ. ಬದಲಿಗೆ ಏನು ಕೊಟ್ಟರು ಜನ ನೋಡುತ್ತಾರೆ ಎನ್ನುವ ಭಾವನೆ ಮುಂದುವರೆಸಿಕೊಂಡು ಹೋಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೇ ''ಧಮಾಲ್ 4''.

Advertisement

ಹೌದು, ಅಜಯ್ ದೇವಗನ್, ರಿತೇಶ್ ದೇಶಮುಖ್, ಅರ್ಷದ್ ವಾರ್ಸಿ ಮತ್ತು ಜಾವೇದ್ ಜಾಫ್ರಿ ಅಭಿನಯದ ''ಧಮಾಲ್ 4'' ಈ ವಾರ (ಜುಲೈ 10) ತೆರೆಗೆ ಬಂದಿದೆ. ಹಾಗಿದ್ದರೆ ಚಿತ್ರ ಹೇಗಿದೆ..? ಚಿತ್ರದ ಕಥಾಹಂದರವೇನು..? ಒಮ್ಮೆಯಾದರೂ ಈ ಚಿತ್ರ ನೋಡಬಹುದಾ..? ''ಧಮಾಲ್'' ಫ್ರಾಂಚೈಸಿಯ ಘನತೆಯನ್ನು ಈ ಚಿತ್ರ ಉಳಿಸುತ್ತಾ..? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಕಥಾಹಂದರ

ಯಾರಾದರೂ ಒಂದು ವಾಕ್ಯದಲ್ಲಿ ''ಧಮಾಲ್ 4'' ಹೇಗಿದೆ ಅಂದರೆ ಹೊಸ ಬಾಟಲಿಯಲ್ಲಿನ ಹಳೆಯ ವೈನ್ ಇದು ಎಂದು ಹೇಳಬಹುದು. ಆದರೆ, ವೈನ್ ಹಳೆಯದಾದಷ್ಟು ಅದ್ಭುತ ರುಚಿ ಕೊಡುತ್ತದೆ. ''ಧಮಾಲ್ 4'' ತಲೆ ನೋವನ್ನು ಹೆಚ್ಚಿಸುತ್ತೆ.

Advertisement

ಹೌದು, 2007ರಲ್ಲಿ ಬಂದ ''ಧಮಾಲ್'' ಕಥೆಯೇ ''ಧಮಾಲ್ 4''ರಲ್ಲಿಯೂ ಇದೆ. ಅದೇ ನಿಧಿ. ದುರಾಸೆ. ಗೊಂದಲ. ಆದರೆ.. ''ಧಮಾಲ್'' ಮತ್ತು ''ಧಮಾಲ್ 2'' ನೋಡುವಾಗ ಸಿಕ್ಕ ಮಜಾ ಇಲ್ಲಿ ಖಂಡಿತವಾಗಿಯೂ ಸಿಗುವುದಿಲ್ಲ.

ಶೈತಾನ್ ಸಿಂಗ್ ಬಚ್ಚಿಟ್ಟಿರುವ ನಿಧಿಯ ಕಥೆಯ ಮೂಲಕ ಚಿತ್ರದ ಕಥೆ ಶುರುವಾಗುತ್ತೆ. ಅಧೂರಾ (ರವಿಕಿಶನ್) ಎಂಬ ಸಮುದ್ರಗಳ್ಳ ನಿಧಿಯ ನಕ್ಷೆಗಾಗಿ ಪೃಥ್ವಿಗೆ (ಉಪೇಂದ್ರ ಲಿಮಾಯೆ) ಕಿರುಕುಳ ಕೊಡುತ್ತಿರುತ್ತಾನೆ.

ಅಧೂರಾನ ಕಪಿಮುಷ್ಠಿಯಿಂದ ಪೃಥ್ವಿಯನ್ನು ಪಾರು ಮಾಡಲು ಗುಡ್ಡು (ಅಜಯ್ ದೇವಗನ್ ) ಬರುತ್ತಾನೆ. ಮತ್ತೊಂದು ಕಡೆ ಲಲ್ಲನ್ ( ರಿತೇಶ್ ದೇಶಮುಖ್ ) ಶ್ರೀಮಂತ ಹುಡುಗಿಯನ್ನು ಮದುವೆಯಾಗಿ ಬದುಕಿನಲ್ಲಿ ನೆಲೆಯೂರಬೇಕೆಂದು ಕನಸು ಕಾಣುತ್ತಿರುತ್ತಾನೆ. ಆದರೆ ದಪ್ಪನೆಯ ಹುಡುಗಿ ಪಾರೋ (ಅಂಜಲಿ ಆನಂದ್) ಕೈಯಲ್ಲಿ ತಗಲಾಕಿಕೊಳ್ಳುತ್ತಾನೆ.

Advertisement

ಇನ್ನೊಂದು ಕಡೆ ಮಾನವ್‌(ಜಾವೇದ್ ಜಾಫ್ರಿ) ಕಿತಾಪತಿ ಮತ್ತು ಯಡವಟ್ಟುಗಳಿಂದ ಬೇಸತ್ತು ಆದಿಯ ( ಅರ್ಷದ್ ವಾರ್ಸಿ) ಹೆಂಡತಿ ರೋಜಿ (ಸಂಜಿದಾ ಶೇಖ್ ) ಮನೆ ಬಿಟ್ಟು ಹೋಗಿದ್ದಾಳೆ. ಈ ಹಿನ್ನೆಲೆ ರೋಜಿಯ ಮನ ಒಲಿಸಲು ಮಾನವ್ ಮತ್ತು ಆದಿ ಪ್ರಯತ್ನ ಮಾಡುತ್ತಿರುತ್ತಾರೆ. ಮಗದೊಂದು ಕಡೆ ತನ್ನ ಅಸಿಸ್ಟೆಂಟ್ ಜಾನಿ (ಸಂಜಯ್ ಮಿಶ್ರಾ) ಜೊತೆ ಸೇರಿ ಗುಡ್ಡು ತನ್ನ ಪ್ರಿಯತಮೆಯ (ಇಶಾ ಗುಪ್ತಾ) ಮಕ್ಕಳ ಹೃದಯ ಗೆಲ್ಲುವ ಪ್ರಯತ್ನದಲ್ಲಿರುತ್ತಾನೆ. ಇವರೆಲ್ಲ ನಿಧಿಯ ಹಿಂದೆ ಬಿದ್ದಾಗ ಏನಾಗುತ್ತೆ ಎನ್ನುವುದೇ ''ಧಮಾಲ್ 4''.

ಮೈನಸ್ ಪಾಯಿಂಟ್

ಚಿತ್ರದಲ್ಲಿ ಹೇಳಿಕೊಳ್ಳುವಂತಹ ಪ್ಲಸ್ ಪಾಯಿಂಟ್‌ಗಳು ಯಾವುದು ಇಲ್ಲ. ಇರುವುದು ಕೇವಲ ಮೈನಸ್ ಪಾಯಿಂಟ್ ಮಾತ್ರ. ಆ ಪೈಕಿ ಪರಿತೋಷ್ ಪೇಂಟರ್, ವೇದ್ ಪ್ರಕಾಶ್ ಮತ್ತು ಬಂಟಿ ರಾಥೋಡ್ ಬರೆದಿರುವ ಚಿತ್ರಕಥೆ ಕೂಡ ಒಂದು. ನಿಜ ಇಂತಹ ಚಿತ್ರಗಳಲ್ಲಿ ಲಾಜಿಕ್‌ ಇರಲ್ಲ. ಕೊನೆ ಪಕ್ಷ ಬರವಣಿಗೆಯಲ್ಲಿ ಮ್ಯಾಜಿಕ್ ಮಾಡುವಂತಹ ಅಂಶವಾದರು ಇರಬೇಕು. ಸೀನ್‌ಗಳ ನಡುವೆ ಕನೆಕ್ಷನ್ ಆದರೂ ಇರಬೇಕು. ಇಲ್ಲಿ ಯಾವುದು ಇಲ್ಲ.

Advertisement

ನಗು ಉಕ್ಕಿಸದ ಸಂಭಾಷಣೆ

ಕಾಮಿಡಿ ಚಿತ್ರಗಳು ಅಂದ್ಮೇಲೆ ಅಲ್ಲಿ ಬಿದ್ದು ಹೊರಳಾಡಿ ನಗುವ ಮಾತುಗಳಿರಬೇಕು. ಆದರೆ ಬಂಟಿ ರಾಥೋಡ್ ಬರೆದಿರುವ ಡೈಲಾಗ್‌ಗಳು ಇಲ್ಲಿ ನಗೆಬುಗ್ಗೆ ಉಕ್ಕಿಸುವುದೇ ಇಲ್ಲ. ಇಡೀ ಚಿತ್ರದಲ್ಲಿ ಒಂದೆರಡು ಮೂರು ಡೈಲಾಗ್‌ಗಳು ಮಾತ್ರ ಮೊಗದಲ್ಲಿ ಮಂದಹಾಸ ಮೂಡಿಸುತ್ತವೆ. ಅದು ಹೊರತು ಪಡಿಸಿದರೆ ಎಲ್ಲವೂ ಔಟ್ ಡೇಟೆಡ್ ಸರಕು.

ಬಾಡಿ ಶೇಮಿಂಗ್

ಒಬ್ಬರ ದೇಹಾಕೃತಿಯನ್ನು ಹಂಗಿಸುವುದೇ ಕಾಮಿಡಿ ಎಂದುಕೊಂಡಂತೆ ಇದೆ ಚಿತ್ರದ ಡೈಲಾಗ್ ರೈಟರ್ ಬಂಟಿ ರಾಥೋಡ್. ಪಾರೋ (ಅಂಜಲಿ ಆನಂದ್) ಅವರ ದೇಹದ ಆಕಾರದ ಮೇಲೆಯೇ ಇಲ್ಲಿ ಸಂಭಾಷಣೆಗಳನ್ನು ಬರೆಯಲಾಗಿದೆ. ಉದಾಹರಣೆಗೆ ನೀನು ಮನುಷ್ಯ ಅಲ್ಲ ಹರಿದು ಹೋಗಿರುವ ಪೈಜಾಮ ಎಂಬ ಸಂಭಾಷಣೆ. ಇನ್ನು ಬೈಕ್ ಹಿಂದೆ ಕುಳಿತ ತಕ್ಷಣ, ಬೈಕ್ ಒಂದು ಕಡೆ ವಾಲಿ ಬಿಡುವುದು, ಒಂದು ಹೆಜ್ಜೆ ಆಕೆ ಇಟ್ಟರೆ ಸಾಕು ಭೂಮಿಯೇ ನಡುಗಿ ಹೋದಂತೆ ತೋರಿಸುವುದು. ಹೀಗೆ ಅತಿರೇಕದ ಮಾತುಗಳು ಮತ್ತು ದೃಶ್ಯಗಳು ಚಿತ್ರದಲ್ಲಿವೆ.

Advertisement

ತಲೆ ನೋವು ಹೆಚ್ಚಿಸುವ ಸಂಗೀತ

ಮೊದಲ 20 ನಿಮಿಷದ ನಂತರ, ''ಧಮಾಲ್ 4'' ನೋಡಲು ಬಂದು ತಪ್ಪು ಮಾಡಿದೆವು ಎಂದು ಪ್ರೇಕ್ಷಕ ಅರಿಯುವಷ್ಟರಲ್ಲಿ, ಚಿತ್ರದ ಹಿನ್ನೆಲೆ ಸಂಗೀತ ತಲೆ ನೋವಿಗೆ ಆಗಲೇ ಕಾರಣವಾಗಿರುತ್ತೆ. ಸಂಗೀತ ಅಂದರೆ ಅಬ್ಬರ ಎಂದುಕೊಂಡಂತೆ ಅಮರ್ ಮೋಹಿಲೆ ಇಲ್ಲಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇನ್ನು ಇದು ರಿಮಿಕ್ಸ್ ಕಾಲ. ಇಲ್ಲಿಯೂ ಹಿಂದಿನ ಚಾರ್ಟ್‌ಬಸ್ಟರ್ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಒಂದು ಹಾಡು ಕೂಡ ನೆನಪಿನಲ್ಲಿ ಉಳಿಯುವುದಿಲ್ಲ.

ಹಳೆಯ ಸಿನಿಮಾಗಳೆ ಬೆಸ್ಟ್

ಇನ್ನು ಚಿತ್ರದಲ್ಲಿ ಹಿಂದಿನ ''ಧಮಾಲ್'' ನೆನಪಿಸುವ ದೃಶ್ಯಗಳಿವೆ. ಈ ಮೂಲಕ ನೆನಪುಗಳನ್ನು ತಾಜಾಗೊಳಿಸುವ ಪ್ರಯತ್ನ ಚಿತ್ರತಂಡ ಮಾಡಿದೆ. ಆದರೆ ಇದೇ ಸಮಯದಲ್ಲಿ ಈ ಚಿತ್ರಕ್ಕಿಂತ ಆ ಹಳೆಯ ಚಿತ್ರಗಳೇ ಎಷ್ಟೋ ವಾಸಿ ಎಂಬ ಭಾವನೆ ಪ್ರೇಕ್ಷಕರಲ್ಲಿ ಬಂದಿರುತ್ತೆ.

ಕಳಪೆ ವಿಎಫ್‌ಎಕ್ಸ್

ಸಿನಿಮಾದ ಅತಿ ದೊಡ್ಡ ವೀಕ್ ಪಾಯಿಂಟ್ ಅಂದ್ರೆ ಅದು ಇದ್ರಲ್ಲಿರೋ ವಿಶುವಲ್ ಎಫೆಕ್ಟ್ಸ್ . ಎಐ ಮೂಲಕ ಕ್ರಿಯೇಟ್ ಮಾಡಿರೋ ಪ್ರಾಣಿಗಳು ಮತ್ತು ಕಳಪೆ ಗ್ರಾಫಿಕ್ಸ್‌ನಿಂದಾಗಿ ಎಷ್ಟೋ ಸೀನ್‌ಗಳು ನೋಡೋಕೆ ಕೃತಕವಾಗಿ ಕಾಣ್ತವೆಯೇ ಹೊರತು ಎಲ್ಲೂ ಮಜಾ ಕೊಡಲ್ಲ.

ಅಭಿನಯ ಹೇಗಿದೆ ?

ರಿತೇಶ್ ದೇಶಮುಖ್ ಮಾತ್ರ ಇಲ್ಲಿ ಗಮನ ಸೆಳೆಯುತ್ತಾರೆ. ಅವರಲ್ಲಿನ ಉತ್ಸಾಹ ಕಂಡರೆ ಇಡೀ ಚಿತ್ರದಲ್ಲಿ ಅವರು ಒಬ್ಬರಿಗೆ ಆಸಕ್ತಿ ಇದ್ದಂತೆ ಕಾಣಿಸುತ್ತೆ. ಆಗಲೇ ಹೇಳಿದಂತೆ ಚಿತ್ರದಲ್ಲಿ ನಗು ಉಕ್ಕಿಸುವ ಒಂದೆರಡು ಮೂಉರ ದೃಶ್ಯಗಳು ಮಾತ್ರ ಇವೆ. ಆ ಪೈಕಿ ಎರಡು ಬಾರಿ ನಗುವಿಗೆ ರಿತೇಶ್ ದೇಶಮುಖ್ ಅವರೇ ಕಾರಣರಾಗುತ್ತಾರೆ.

ಅಜಯ್ ದೇವಗನ್ ಅವರದ್ದು ನೀರಸ ಅಭಿನಯ. ಇನ್ನು ಹಿಂದಿನ ''ಧಮಾಲ್‌''ನಲ್ಲಿ ಅರ್ಷದ್ ವಾರ್ಸಿ ಮತ್ತು ಜಾವೇದ್ ಜಾಫ್ರಿ ನಡುವಿನ ಕೆಮಸ್ಟ್ರೀ ತುಂಬಾನೇ ವರ್ಕ್ ಆಗಿತ್ತು. ಈ ಜೋಡಿ ಮ್ಯಾಜಿಕ್ ಮಾಡಿತ್ತು.
ಇಲ್ಲಿ ಅದು ಕೂಡ ಕಾಣೆಯಾಗಿದೆ. ಕಳಪೆ ಬರವಣಿಗೆ ಆ ಅವಕಾಶವನ್ನೇ ನೀಡಿಲ್ಲ.

ಸಂಜಯ್ ಮಿಶ್ರಾ ಅವರಂತಹ ಅತ್ಯದ್ಭುತ ಕಲಾವಿದ ಚಿತ್ರದಲ್ಲಿದ್ದರೂ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಬದಲಿಗೆ ಪದೇ ಪದೇ ಬ್ರೋ ಬ್ರೋ ಎಂದು ಹೇಳಿ ಕಿರಿಕಿರಿಗೆ ಕಾರಣರಾಗುತ್ತಾರೆ ಸಂಜಯ್ ಮಿಶ್ರಾ. ಅಂಜಲಿ ಆನಂದ್ ಮತ್ತು ಸಂಜೀದಾ ಶೇಖ್ ತಮಗೆ ಕೊಟ್ಟಿರುವ ಕೆಲಸವನ್ನು ಮಾಡಿದ್ದಾರೆ.

ಕೊನೆ ಮಾತು

ಒಟ್ನಲ್ಲಿ ''ಧಮಾಲ್ 4'' ಚಿತ್ರಮಂದಿರದಲ್ಲಿ ನೋಡಲೇಬೇಕಾದ ಸಿನಿಮಾ ಖಂಡಿತವಾಗಿಯೂ ಅಲ್ಲ. ಒಂದು ವೇಳೆ ''ಧಮಾಲ್'' ಫ್ರಾಂಚೈಸಿಯ ಅಭಿಮಾನಿ ನೀವು ಆಗಿದ್ದರೂ ಕೂಡ ಓಟಿಟಿಯಲ್ಲಿ ಈ ಚಿತ್ರವನ್ನು ನೋಡುವ ಪ್ರಯತ್ನ ಮಾಡಬಹುದು.