ವರ್ಷದ ಬಹುನಿರೀಕ್ಷಿತ 'ಜನನಾಯಗನ್' ಸಿನಿಮಾ ಬಿಡುಗಡೆಗೆ ಎದುರಾಗಿದ್ದ ಸಮಸ್ಯೆ ಬಗೆಹರಿದಿದೆ. ತಮಿಳುನಾಡು ಸಿಎಂ ವಿಜಯ್ ನಟನೆಯ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ಒಂದಷ್ಟು ದೃಶ್ಯಗಳಿಗೆ CBFC ಕತ್ತರಿ ಹಾಕಿದ್ದು ಕೆಲ ದೃಶ್ಯ, ಡೈಲಾಗ್ ಬದಲಾವಣೆಗೆ ಸೂಚಿಸಿದೆ. ಅದನ್ನೆಲ್ಲಾ ಚಿತ್ರತಂಡ ಒಪ್ಪಿದ ಬಳಿಕ ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

Advertisement

ಜುಲೈ 24ರಂದು ಆಕ್ಷನ್ ಥ್ರಿಲ್ಲರ್ 'ಜನನಾಯಗನ್' ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡದಿಂದ ಮಾಹಿತಿ ಸಿಕ್ಕಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಬರೋಬ್ಬರಿ 6 ತಿಂಗಳು ಸಿನಿಮಾ ತಡವಾಗುವಂತಾಗಿತ್ತು. ಸದ್ಯ ಚಿತ್ರದ ಸೆನ್ಸಾರ್ ಕಾಪಿ ವೈರಲ್ ಆಗ್ತಿದೆ. ಸೆನ್ಸಾರ್ ಮಂಡಳಿ ಯಾವೆಲ್ಲಾ ಬದಲಾವಣೆಗೆ ಸೂಚಿಸಿದೆ ಎನ್ನುವ ಬಗ್ಗೆ ಚರ್ಚೆ ನಡೀತಿದೆ. ಅಷ್ಟಕ್ಕೂ ಸೆನ್ಸಾರ್ ವಿಚಾರ ವಿವಾದಕ್ಕೆ ಕಾರಣ ಆಗಿದ್ದೇಕೆ ಎನ್ನುವ ಬಗ್ಗೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Advertisement

ವಿನೋದ್ ನಿರ್ದೇಶನದ 'ಜನನಾಯಗನ್' ಚಿತ್ರದಲ್ಲಿ ವಿಜಯ್ ಜೋಡಿಯಾಗಿ ಪೂಜೆ ಹೆಗ್ಡೆ ನಟಿಸಿದ್ದಾರೆ. ಸಾಕು ಮಗಳಾಗಿ ಮಮಿತಾ ಬೈಜು ಮಿಂಚಿದ್ದಾರೆ. ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಇದು. ಬಾಲಕೃಷ್ಣ ಹಾಗೂ ಶ್ರೀಲೀಲಾ ಮಾಡಿದ್ದ ಪಾತ್ರಗಳಲ್ಲಿ ವಿಜಯ್ ಹಾಗೂ ಮಮಿತಾ ನಟಿಸಿದ್ದಾರೆ. ಸೆನ್ಸಾರ್ ಮಂಡಳಿ 12 ಬದಲಾವಣೆಗಳನ್ನು ಸೂಚಿಸಿ ಅಂತಿಮವಾಗಿ 'ಎ' ಸರ್ಟಿಫಿಕೇಟ್ ಕೊಟ್ಟಿದೆ. ಚಿತ್ರದ ರನ್‌ಟೈಲ್ 3 ಗಂಟೆ 3 ನಿಮಿಷ ಎನ್ನುವುದು ಗೊತ್ತಾಗಿದೆ.

ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆಗಳು

1. ಚಿತ್ರದ ದೃಶ್ಯವೊಂದರಲ್ಲಿ ಪುಸ್ತಕದ ಮುಖಪುಟದಲ್ಲಿ ಡಾ. ಅಂಬೇಡ್ಕರ್ ಅವರನ್ನು ತೋರಿಸುವ ದೃಶ್ಯಗಳನ್ನು ಮಾರ್ಪಡಿಸಲಾಗಿದೆ.

Advertisement

2. "ಅಂಬೇಡ್ಕರ್ ಕಾನೂನು" ಬದಲಿಗೆ "ಟಿವಿಕೆ ಕಾನೂನು" ಎಂದು ಸಂಭಾಷಣೆಯನ್ನು ಬದಲಾಯಿಸಲಾಗಿದೆ. ಆಡಿಯೋ ಮತ್ತು ವಿಡಿಯೋದಲ್ಲಿ 'ಟಿವಿಕೆ' ಎನ್ನುವ ಪದ ಬಳಸಿರುವ ಜಾಗದಲ್ಲಿ ಮ್ಯೂಟ್ ಮಾಡಲಾಗಿದೆ.

3. ತ್ರಿವರ್ಣ ಧ್ವಜ ನೆಲದ ಮೇಲೆ ಬೀಳುವ ದೃಶ್ಯ ಕಟ್ ಮಾಡಲಾಗಿದೆ.

4. "ಭಾಗವತಂ" ಹಾಗೂ "ರಂಗನಾಥರ್" ಎಂಬ ಪದಗಳನ್ನು ಮ್ಯೂಟ್ ಮಾಡಲಾಗಿದೆ.

5. "ಥೇ*** ಪೈಯ" ಮತ್ತು "ಒ**" ಪದಗಳನ್ನು ಮ್ಯೂಟ್ ಮಾಡಲಾಗಿದೆ.

6. ಆಪರೇಷನ್ ಮೆಲುಹಾವನ್ನು ವಿವರಿಸುವಾಗ "ಓಂ" ಮತ್ತು "New India" ಪದಗಳನ್ನು ತೆಗೆದುಹಾಕಲಾಗಿದೆ. ಶ್ರೀ ಸದ್ದಾಂ ಅವರನ್ನು ಗಲ್ಲಿಗೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಡೈಲಾಗ್ ಅನ್ನು ಸಹ ಮ್ಯೂಟ್ ಮಾಡಲಾಗಿದೆ.

Advertisement

7. ಡಿಸಿ ಕಚೇರಿಯಲ್ಲಿ ಬ್ಯಾಡ್ಜ್/ಸಿಗಿಲ್ ಅನ್ನು ಅಗೌರವದಿಂದ ಉರುಳಿಸಿರುವ ದೃಶ್ಯವನ್ನು ತೆಗೆದುಹಾಕಿ ಬದಲಾಯಿಸಲಾಗಿದೆ.

8. ಮಗುವನ್ನು ಸುಡುವ ದೃಶ್ಯ ತೆಗೆದು ಹಾಕಲಾಗಿದೆ.

ಇನ್ನು ಒಂದೆರಡು ಸಣ್ಣ ಡೈಲಾಗ್ ಮ್ಯೂಟ್ ಮಾಡಲಾಗಿದ್ದು ಒಂದೆರಡು ಹೆಸರುಗಳನ್ನು ಬದಲಿಸಲಾಗಿದೆ. ಒಟ್ಟಾರೆ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಲೈನ್ ಕ್ಲಿಯರ್ ಆಗಿದೆ. ಜುಲೈ 24ಕ್ಕೆ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುವಂತೆ ವಿತರಕರಿಗೆ ಚಿತ್ರತಂಡ ಸುಳಿವು ನೀಡಿದೆ ಎಂದು ವರದಿಯಾಗಿದೆ. ಹಾಗಾಗಿ ಅದೇ ದಿನ ಸಿನಿಮಾ ತೆರೆಗೆ ಬರುವುದು ಖಚಿತ ಎನ್ನಲಾಗ್ತಿದೆ.

'ಜನನಾಯಗನ್' ಬಾಕ್ಸಾಫೀಸ್

ವಿಜಯ್ ಸಿನಿಮಾಗಳಿಗೆ ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ತಮಿಳುನಾಡಿನಲ್ಲೇ ಅವರ ಸಿನಿಮಾಗಳು 200-300 ಕೋಟಿ ರೂ. ಕಲೆಕ್ಷನ್ ಮಾಡಿರುವ ಉದಾಹರಣೆಯಿದೆ. ಸದ್ಯ ರಾಜಕೀಯರಂಗದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಹಾಗಾಗಿ 'ಜನನಾಯಗನ್' ಅವರ ಕೊನೆ ಸಿನಿಮಾ ಎನ್ನುವಂತಾಗಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುವ ಸಾಧ್ಯತೆಯಿದೆ.

Advertisement

ಪೈರಸಿ ಪೆಟ್ಟು

ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ 'ಜನನಾಯಗನ್' ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿತ್ತು. ತೆರೆಗೆ ಬರುವ ಮೊದ್ಲೆ ಸಂಪೂರ್ಣ ಸಿನಿಮಾ ಪೈರಸಿ ಆಗಿ ಚಿತ್ರತಂಡಕ್ಕೆ ಶಾಕ್ ಎದುರಾಗಿತ್ತು. ಈಗಾಗಲೇ ಕೋಟ್ಯಂತರ ಜನ ಪೈರಸಿ ಕಾಪಿಯಲ್ಲೇ ಸಿನಿಮಾ ನೋಡಿಬಿಟ್ಟಿದ್ದಾರೆ. ಹಾಗಾಗಿ ಚಿತ್ರಮಂದಿರಕ್ಕೆ ಬಂದು ಮತ್ತೆ ನೋಡ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಆದರೂ ಅಭಿಮಾನಿಗಳು ತೆರೆಮೇಲೆ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಪೈರಸಿಯಿಂದ ಭಾರೀ ನಷ್ಟವಾಗಿದ್ದು ಸಿನಿಮಾ ತೆರೆಗೆ ಬಂದ 3 ವಾರಕ್ಕೆ ಓಟಿಟಿ ಸ್ಟ್ರೀಮಿಂಗ್ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.