ನಮಗೆ ಅರಿವಿಲ್ಲದಂತೆ ಕೆಲವೊಮ್ಮೆ ದೇಹದ ತೂಕ ಹೆಚ್ಚಾಗಿಬಿಡುತ್ತದೆ. ಕೆಲವರು ಮನಸ್ಸು ಮಾಡಿದ್ರೆ, ಎರಡೇ ತಿಂಗಳಲ್ಲಿ ತೂಕ ಇಳಿಸಿಬಿಡುತ್ತಾರೆ. ಆದರೆ ಅದು ಎಲ್ಲರಿಗೂ ಸಾಧ್ಯವಿಲ್ಲ. ಒಮ್ಮೆ ತೂಕ ಅತಿಯಾಗಿಬಿಟ್ಟರೆ ಕರಗಿಸುವುದು ಕಷ್ಟದ ಕೆಲಸ. ಅಡ್ಡ ಪರಿಣಾಮಗಳು ಎದುರಾಗುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಬಹಳ ದಪ್ಪ ಇರುವವರು ತೂಕ ಇಳಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ.
ಸಿನಿಮಾ ತಾರೆಯರಿಗೆ ಫಿಟ್‌ನೆಸ್ ಬಹಳ ಮುಖ್ಯ. ಅದರಲ್ಲೂ ನಾಯಕಿಯರು ಬಳಕುವ ಬಳ್ಳಿಯಂತೆ ಇರಬೇಕು ಎನ್ನುವ ಅಲಿಖಿತ ನಿಮಯ ಇವತ್ತಿಗೂ ಇದೆ. ಗುಜರಾತ್ ಮೂಲದ ನಟಿ ನಮಿತಾ ದಕ್ಷಿಣದ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಸಾಧಿಸಿದ್ದು ಗೊತ್ತೇಯಿದೆ. ಬಿಂದಾಸ್ ಪಾತ್ರಗಳಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ಕನ್ನಡದಲ್ಲಿ ಕೂಡ ಕೆಲ ಚಿತ್ರಗಳಲ್ಲಿ ಆಕೆ ನಟಿಸಿದ್ದರು. ಸಪೂರ ಮೈಮಾಟದ ನಮಿತಾ ಬಳಿಕ ಬಹಳ ದಪ್ಪ ಆಗಿಬಿಟ್ಟಿದ್ದರು. 2017ರಲ್ಲಿ ಮದುವೆ ಆಗಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದರು.
2022ರಲ್ಲಿ ಅವಳಿ ಗಂಡು ಮಕ್ಕಳಿಗೆ ನಟಿ ನಮಿತಾ ಜನ್ಮ ನೀಡಿದ್ದರು. ಮದುವೆ ಬಳಿಕ ಮಕ್ಕಳ ಲಾಲನೆ ಪಾಲನೆಯಲ್ಲಿ ಹೆಚ್ಚು ತೊಡಗಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಆಗಾಗ್ಗೆ ಹೊಸ ಫೋಟೊ, ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ದೇಹದ ತೂಕ ಇಳಿಸಲು ಡಯೆಟ್, ವರ್ಕೌಟ್ ಆರಂಭಿಸಿದ್ದರು. ಜಿಮ್ ಕಸರತ್ತಿನ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇತ್ತೀಚೆಗೆ ಬಹಳ ತೂಹ ಇಳಿಸಿಕೊಂಡು ನಿಮಿತಾ ತೆಳ್ಳಗಾಗಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ನಮಿತಾ ಅಂದ್ರೆ ದಪ್ಪಗಿದ್ದಾರೆ ಎನ್ನುವ ಚಿತ್ರ ಕಣ್ಮುಂದೆ ಬರುತ್ತಿತ್ತು. ಆದರೆ ಅದಕ್ಕೆ ತದ್ವಿರುದ್ಧ ಎನ್ನುವಂತೆ ಸಣ್ಣಗಾಗಿ ಗಮನ ಸೆಳೆದಿದ್ದಾರೆ. ಶ್ರದ್ಧೆ ಇದ್ರೆ ಯಾವುದು ಅಸಾಧ್ಯ ಅಲ್ಲ ಎಂದು ನಮಿತಾ ಕಿವಿಮಾತು ಹೇಳಿದ್ದಾರೆ. "ಶಿಸ್ತು ಅಂದ್ರೆ, ನೆಪಗಳನ್ನು ಬಿಟ್ಟು ನಿಮ್ಮ ಭವಿಷ್ಯವನ್ನು ಆರಿಸಿಕೊಳ್ಳುವುದು. ಪ್ರತಿಯೊಂದು ವ್ಯಾಯಾಮವೂ ನಾನು ನನಗೆ ಮಾಡಿಕೊಳ್ಳುವ ಪ್ರಾಮಿಸ್.. ಪ್ರೇರಣೆ ಎನ್ನುವುದು ಬರುತ್ತೆ, ಹೋಗುತ್ತೆ. ಶಿಸ್ತು ಪ್ರತಿದಿನ ಇರುತ್ತೆ. ಮನಸ್ಸು ದೃಢನಿಶ್ಚಯದಿಂದ ಇದ್ದಾಗ ಮಾತ್ರ ದೇಹವು ಬದಲಾಗುತ್ತೆ. ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ಯಾವುದೇ ಮ್ಯಾಜಿಕ್ ಇಲ್ಲ. ಕೇವಲ ಪರಿಶ್ರಮ, ಬೆವರು ಮತ್ತು ತಾಳ್ಮೆ. ನಾನು ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ. ಆದ್ರೆ ನಿನ್ನೆಗಿಂತ ಬಲಶಾಲಿ ಆಗ್ತಿದ್ದೀನಿ. ಒಂದೇ ದಿನದಲ್ಲಿ ಎಲ್ಲವೂ ಸಾಧ್ಯವಿಲ್ಲ. ಸಮಯ ಬೇಕು. ಪ್ರಯತ್ನ ಬೇಕು" ಎಂದು ಬರೆದುಕೊಂಡಿದ್ದಾರೆ. "ನಿಮ್ಮ ಮನಸ್ಸಿನಲ್ಲಿ ಏನು ಅದುಕೊಳ್ಳುತ್ತಿರೋ ಅದನ್ನೇ ದೇಹ ಅನುಸರಿಸುತ್ತದೆ" ಎಂದು ನಮಿತಾ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ನಮಿತಾ ಈಸ್ ಬ್ಯಾಕ್, ಎಂತಹ ಬದಲಾವಣೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವುದು ಯಾವಾಗ ಮೇಡಂ ಎಂದು ಕೇಳುತ್ತಿದ್ದಾರೆ. 2002ರಲ್ಲಿ 'ಸ್ವಂತಂ' ಎಂಬ ತೆಲುಗು ಸಿನಿಮಾ ಮೂಲಕ ನಮಿತಾ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದರು. 2006ರಲ್ಲಿ 'ನೀಲಕಂಠ' ಚಿತ್ರದಲ್ಲಿ ರವಿಚಂದ್ರನ್ ಜೋಡಿಯಾಗಿ ನಟಿಸಿದ್ದರು. ಬಳಿಕ ದರ್ಶನ್ ಜೊತೆ 'ಇಂದ್ರ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. 'ಬೆಂಕಿ ಬಿರುಗಾಳಿ' ಕನ್ನಡದಲ್ಲಿ ನಮಿತಾ ನಟಿಸಿದ ಕೊನೆಯ ಸಿನಿಮಾ. ನಮಿತಾ ಅದ್ಭುತ ಪಾತ್ರಗಳಲ್ಲಿ ನಟಿಸಿದ್ದಕ್ಕಿಂತ ಗ್ಲಾಮರ್ ಡಾಲ್ ಆಗಿ ತೆರೆಮೇಲೆ ಮಿಂಚಿದ್ದೆ ಹೆಚ್ಚು. ಒಂದು ಹಂತದಲ್ಲಿ ಅಂತಹ ಪಾತ್ರಗಳಿಗೆ ಆಕೆಯನ್ನು ಬ್ರ್ಯಾಂಡ್ ಮಾಡಿಬಿಟ್ಟರು. 2020ರಲ್ಲಿ ಬಂದಿದ್ದ 'ಮಿಯಾ' ಆಕೆ ನಟಿಸಿದ ಕೊನೆಯ ಸಿನಿಮಾ.More Articles