ಸಿನಿಮಾ ಅಂದ್ರೇನೇ ಮಾಯಾ ಲೋಕ. ಇದಕ್ಕೆ ಎಲ್ಲರೂ ಮಾರಿ ಹೋದವರೇ. ಇಲ್ಲಿ ಅನೇಕರು ಮುಖವಾಡದ ಬದುಕನ್ನು ಬದುಕುತ್ತಿರುತ್ತಾರೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುತ್ತಾರೆ. ಚೂರು ಯಾಮಾರಿದರೂ ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಈಗೀಗ ಚಿತ್ರರಂಗದವರ ಮೇಲೆ ವಂಚನೆ, ನಂಬಿಕೆ ದ್ರೋಹ, ಚೆಕ್ ಬೌನ್ಸ್, ಸೇರಿ ಹಲವರು ಆರೋಪಗಳು...

Advertisement

ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕೇಳಿ ಬರುತ್ತಲೇ ಇವೆ. ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸದ್ಯ ''ಯುವರತ್ನ'' ಚೆಲುವೆ ಸಾಯೇಶಾ ಸೈಗಲ್ ಅವರ ಗಂಡ ಮತ್ತು ತಮಿಳಿನ ಖ್ಯಾತ ನಟ ಆರ್ಯ ಹೈದರಾಬಾದ್​​ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಹೌದು, ತಮಿಳು ಮಾತ್ರವಲ್ಲದೇ ತೆಲುಗು ಭಾಷೆಗಳಲ್ಲಿ ಕೂಡ ಆಕ್ಟ್ ಮಾಡಿರುವ ಆರ್ಯ ವಿರುದ್ದ ಕ್ಯಾಮರಾ ಉಪಕರಣಗಳನ್ನು ಬಾಡಿಗೆಗೆ ನೀಡುವ ಕಂಪನಿಯೊಂದು ದೂರು ದಾಖಲಿಸಿದೆ. ಹಣಕಾಸು ವಂಚನೆ ಮಾಡಿದ್ದಾರೆಂದು ಆರೋಪಿಸಿದೆ.

ಆ ಪ್ರಕಾರ ಆರ್ಯ, ನಿರ್ಮಾಪಕ ವಿನೋದ್ ಮತ್ತು ಪ್ರೊಡಕ್ಷನ್ ಹೌಸ್‌ನ ಪ್ರತಿನಿಧಿಗಳು ''ಅನಂತನ್ ಕಾಡು'' ಎಂಬ ಚಿತ್ರದ ಚಿತ್ರೀಕರಣಕ್ಕಾಗಿ ಅತ್ಯುತ್ತಮ ಗುಣಮಟ್ಟದ, ಬಲು ದುಬಾರಿಯಾದ ಡಿಜಿಟಲ್ ಕ್ಯಾಮೆರಾಗಳು, ಲೈಟಿಂಗ್ ಯೂನಿಟ್‌ಗಳು ಮತ್ತು ಇತರೆ ಕೆಲವು ಶೂಟಿಂಗ್​ಗೆ ಅಗತ್ಯವಿರುವ ಉಪಕರಣಗಳನ್ನು ಮುಂಗಡ ಹಣ ನೀಡಿ ಬಾಡಿಗೆಗೆ ಪಡೆದಿದ್ದರು. ಎಲ್ಲಾ ಬಾಕಿ ಹಣವನ್ನು ಯಾವುದೇ ವಿಳಂಬವಿಲ್ಲದೆ ಪಾವತಿಸುವುದಾಗಿ ಅವರು ಕಂಪನಿಗೆ ಭರವಸೆ ನೀಡಿದ್ದರು.

Advertisement

ಆದರೆ, ಕಾದಿದ್ದು ಅಷ್ಟೇ ಬಂತು. ಹಣ ಮಾತ್ರ ಮರಳಿ ಬರಲೇ ಇಲ್ಲ. ಈ ಹಿನ್ನೆಲೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಕಂಪನಿ, ದುಬಾರಿ ಉಪಕರಣಗಳನ್ನು ಹೈದರಾಬಾದ್‌ನಿಂದ ಕೇರಳದ ಶೂಟಿಂಗ್ ಲೊಕೇಶನ್​​ಗೆ ತನ್ನ ಸ್ವಂತ ವೆಚ್ಚದಲ್ಲಿ ಸಾಗಿಸಲಾಗಿದ್ದು, ಚಿತ್ರೀಕರಣ ಮುಗಿದ ನಂತರ ನಿರ್ಮಾಪಕರು ಒಟ್ಟು 2.12 ಕೋಟಿ ರೂಪಾಯಿಗಳು ನೀಡಬೇಕಿತ್ತು. ಆದರೆ 1.80 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಪಾವತಿಸಿಲ್ಲ ಎಂದು ಆರೋಪ ಮಾಡಿದೆ.

ನಿರ್ಮಾಪಕರು ಬಾಕಿ ಹಣವನ್ನು ಪಾವತಿ ಮಾಡುವುದಾಗಿ ಲಿಖಿತ ರೂಪದಲ್ಲಿ ಒಪ್ಪಿಕೊಂಡಿದ್ದರು ಮತ್ತು ಚಿತ್ರ ಬಿಡುಗಡೆಗೂ ಮುನ್ನ ಬಾಕಿಯನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು ಎಂದು ಕೂಡ ದೂರಿನಲ್ಲಿ ಉಲ್ಲೇಖ ಮಾಡಿರುವ ಕಂಪನಿ, ಫೋನ್ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ಪದೇ ಪದೇ ನೆನಪಿಸಿದರೂ, ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿದೆ. ಇಷ್ಟೇ ಅಲ್ಲ ಹಣ ವಾಪಸ್ ಕೇಳಿದ್ದಕ್ಕೆ ನಟ ಆರ್ಯ, ನಿರ್ಮಾಪಕ ವಿನೋದ್ ಮತ್ತು ಅವರ ವೈಯಕ್ತಿಕ ಸಹಾಯಕ ಕಂಪನಿಯ ಮ್ಯಾನೇಜರ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಕೂಡ ದೂರಿನಲ್ಲಿ ತಿಳಿಸಲಾಗಿದೆ.